ADVERTISEMENT

ವಯಸ್ಸು ಮರೆಸಿದ ಬಾಲ್ಯ

​ಪ್ರಜಾವಾಣಿ ವಾರ್ತೆ
Published 20 ಮೇ 2016, 19:41 IST
Last Updated 20 ಮೇ 2016, 19:41 IST
ವಯಸ್ಸು ಮರೆಸಿದ ಬಾಲ್ಯ
ವಯಸ್ಸು ಮರೆಸಿದ ಬಾಲ್ಯ   

ಕಳೆದ ವರ್ಷ ನಡೆದ ಘಟನೆ. ಮಳೆಗಾಲದ ಒಂದು ದಿನ... ಜಿಟಿ ಜಿಟಿ ಮಳೆ ಪ್ರಾರಂಭವಾಗಿತ್ತು. ಅಂದು ಶನಿವಾರವಾದ್ದರಿಂದ ಸಂಜೆ ನಮ್ಮ ವಠಾರದ ಹೆಂಗಸರೆಲ್ಲ ಸೇರಿ ‘ಹನುಮಾನ್ ಮಂದಿರಕ್ಕೆ’ ಹೋಗಿದ್ದೇವು.

ದರ್ಶನ ಮಾಡಿಕೊಂಡು ತೀರ್ಥ, ಪ್ರಸಾದ ತೆಗೆದುಕೊಂಡು ದೇವಸ್ಥಾನದ ಬಯಲಲ್ಲಿರುವ ಕಲ್ಲು ಬೆಂಚಿನ ಮೇಲೆ ಕುಳಿತೆವು. ಮೈದಾನದ  ಮೂಲೆಯಲ್ಲಿರುವ ದೊಡ್ಡ ಅಲದ ಮರಕ್ಕೆ ಜೊಕಾಲಿ ಕಟ್ಟಿ ಮಕ್ಕಳೆಲ್ಲ ಸರದಿಯಂತೆ ಜೋಕಾಲಿ ಜೀಕುತ್ತ ಸಂತೋಷಪಡುತ್ತಿದ್ದರು. ಆ ದೃಶ್ಯವನ್ನು ನೋಡುತ್ತಿದ್ದಂತೆ ನನ್ನ ಮನಸ್ಸು 30-35 ವರ್ಷಗಳ ಹಿಂದಕ್ಕೆ ಓಡಿತು. ನನ್ನ ಬಾಲ್ಯದ ದಿನಗಳು ಕಣ್ಮುಂದೆ ಬಂದವು.

ನಾನು, ಪದ್ದಿ, ಲೀಲಾ, ಶಶಿ, ಮಂಜಿ, ಶೈಲೂ.... ಎಲ್ಲರೂ ಒಂದೇ ಶಾಲೆಯಲ್ಲಿ, ಒಂದೇ ತರಗತಿಯಲ್ಲಿ ಓದುತ್ತಿದ್ದೆವು. ಸುರಿವ ಮಳೆಯಲ್ಲಿ ನಾವೆಲ್ಲ ಓಡಾಡುತ್ತಿದ್ದುದು ನೆನಪಾಯಿತು. ಅದೊಂದು ದಿನ ಶಶಿ ಮನೆಗೆ ಹೋದಾಗ ಜೋರಾಗಿ ಮಳೆ ಪ್ರಾರಂಭವಾಯಿತು.

ರಾತ್ರಿಯಾದರೂ ಮಳೆ ನಿಲ್ಲದಿದ್ದಾಗ ಅವರ ಮನೆಯಲ್ಲಿಯೇ  ಊಟ ಮಾಡಿ ಬೆಚ್ಚಗೆ ಹೊದ್ದು ಮಳೆಯ ಸದ್ದು ಕೇಳುತ್ತ, ಶಾಲೆಯ ಬಗ್ಗೆ, ಗೆಳೆಯ ಗೆಳತಿಯರ ಬಗ್ಗೆ , ನೋಡಿದ ಸಿನಿಮಾ ಬಗ್ಗೆ ಮಾತನಾಡುತ್ತಾ ನಿದ್ರೆಗೆ ಜಾರಿದ್ದೆವು. ಅಂದು ನಾವಾಡುತ್ತಿದ್ದ ಆಟಗಳ ಹೆಸರನ್ನು ಇಂದಿನ ಮಕ್ಕಳು ಕೇಳಿಯೂ ಇರಲಿಕ್ಕಿಲ್ಲ.

ಆಗ ನಾವಾಡುತ್ತಿದ್ದ ಕುಂಟಬಿಲ್ಲೆ, ಲಗೋರಿ, ಕಣ್ಣಾಮುಚ್ಚಾಲೆ, ಮರಕೋತಿ ಆಟ, ಪಗಡೆ, ಚೌಕಬಾರಾ, ಗೋಲಿ, ಚಿನ್ನಿದಾಂಡು... ಎಲ್ಲವೂ ನೆಪಾದವು. ಬಾಲ್ಯದ ನೆನಪೇ  ಸವಿಯಾದುದು. ಆ ದಿನಗಳು ಎಷ್ಟು ಚೆನ್ನಾಗಿದ್ದವು! ಭವಿಷ್ಯದ ಚಿಂತೆಯಿಲ್ಲದೇ, ಯಾವ ಜವಾಬ್ದಾರಿ ಇಲ್ಲದೇ  ಕಾಲ ಕಳೆಯುತ್ತಿದ್ದ ದಿನಗಳವು!

ಜೀವನಯಾನದಲ್ಲಿ ಬಹುದೂರ ಸಾಗಿ ಬಂದರೂ ಬಾಲ್ಯದಲ್ಲಿನ ಒಂದು ನೆನಪು ಮಾತ್ರ ಇನ್ನೂ ಹಸಿರಾಗಿಯೆ ಇದೆ. ಅಂದು ನಾಗರ ಪಂಚಮಿ ಹಬ್ಬ. ಗೆಳತಿಯರೆಲ್ಲ ಹೊಸ ಲಂಗ, ರವಿಕೆ ಧರಿಸಿ ಮೊದಲೇ ಮಾತಡಿಕೊಂಡಂತೆ ಶೈಲೂ ಮನೆಯ ಅಂಗಳದಲ್ಲಿರುವ ದೊಡ್ಡ ಬೇವಿನ ಮರಕ್ಕೆ ಕಟ್ಟಿದ್ದ ಜೊಕಾಲಿ ಜೀಕಲು ಹೋಗಿದ್ದೇವು.

ನನ್ನ ಸರದಿ ಬಂದಾಗ ಗೆಳತಿಯರೆಲ್ಲ ಎಷ್ಟೇ ಜೋರಾಗಿ ಜೋಕಾಲಿ ಜೀಕಿದರೂ ಇನ್ನು ಜೋರಾಗಿ ಬೇಕೆಂದಾಗ ಅವರೆಲ್ಲ ಒಟ್ಟಿಗೆ ಸೇರಿ ನೂಕಿದಾಗ ನಾನು ಮುಗ್ಗರಿಸಿ ಬಿದ್ದಿದ್ದು, ಮೊಣಕೈಗೆ ಪೆಟ್ಟಾಗಿ ರಕ್ತ ಸುರಿದು ಅಳುತ್ತ ಮನೆಗೆ ಹೋಗಿದ್ದು ನೆನಪಾಯಿತು. 

ಆ ನೆನಪು ಮರಕಳಿಸುತ್ತಿದ್ದಂತೆ.... ನನ್ನ ವಯಸ್ಸನ್ನೂ ಮರೆತು, ನಾನೊಬ್ಬ ಗೃಹಿಣಿ ಎನ್ನುವುದನ್ನೂ ಮರೆತು ಮಕ್ಕಳು ಆಡುತ್ತಿರುವಲ್ಲಿಗೆ ಜಿಂಕೆಯಂತೆ  ಓಡಿ ಹೋಗಿ ಮಕ್ಕಳನ್ನೆಲ್ಲ ದೂರ ಸರಿಸಿ ಜೋಕಾಲಿಯಲ್ಲಿ ಜೀಕಿದ್ದೆ. ಆ ಕ್ಷಣ ನಾನೂ ಚಿಕ್ಕ ಹುಡುಗಿಯಾಗಿದ್ದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.