ADVERTISEMENT

ವಿಧಿಗೆ ಸವಾಲೊಡ್ಡಿದ ಏಂಜಲಿನಾ

ಪ್ರಜಾವಾಣಿ ವಿಶೇಷ
Published 17 ಮೇ 2013, 19:59 IST
Last Updated 17 ಮೇ 2013, 19:59 IST

ಇನ್ನು ಕೆಲವೇ ದಿನಗಳಲ್ಲಿ ತಮಗೆ ಕ್ಯಾನ್ಸರ್ ಬರಲಿದೆ ಎಂದು ತಿಳಿದರೆ ಯಾರಿಗೇ ಆಗಲಿ ಹೇಗಾಗುತ್ತದೆ? ಹೌಹಾರುತ್ತಾರೆ, ಇನ್ನು ತಮ್ಮ ಬದುಕು ಮುಗಿದೇ ಹೋಯಿತು ಎಂದು ಹತಾಶರಾಗಿ ಬಿಡುತ್ತಾರೆ. ಕೆಲವರಂತೂ ರೋಗ ಬರುತ್ತಿದೆ ಎಂಬ ಕೊರಗಿನಲ್ಲೇ ಅರೆ ಜೀವ ಆಗಿಬಿಡುತ್ತಾರೆ. ಆದರೆ ಪ್ರಖ್ಯಾತ ಹಾಲಿವುಡ್ ತಾರೆ ಏಂಜಲಿನಾ ಜೋಲಿ ತಮ್ಮಲ್ಲಿ ಸ್ತನ ಹಾಗೂ ಅಂಡಾಶಯ ಕ್ಯಾನ್ಸರ್ ತರಬಲ್ಲ ಜೀನ್‌ಗಳು ಪತ್ತೆಯಾದರೂ ಎದೆಗುಂದದೆ, ನೋವನ್ನೆಲ್ಲ ಮೆಟ್ಟಿನಿಂತು ಮುಂಜಾಗ್ರತಾ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡಿದ್ದಾರೆ. ಇತರ ಮಹಿಳೆಯರಿಗೆ ಮಾದರಿ ಆಗುವಂತೆ ಇದೀಗ ತಮ್ಮ ಆ ಅನುಭವವನ್ನೆಲ್ಲ ಜಗತ್ತಿನೆದುರು ತೆರೆದಿಟ್ಟಿದ್ದಾರೆ. ಆ ಸಂದರ್ಭದಲ್ಲಿ ತಮಗಾದ ಮಾನಸಿಕ ಆಘಾತ, ತೀವ್ರ ಆತಂಕ, ಬಳಿಕ ಅದನ್ನು ದಿಟ್ಟವಾಗಿ ಎದುರಿಸಿ ನಿಲ್ಲಲು ಮಾಡಿದ ಶತ ಪ್ರಯತ್ನ, ಕುಟುಂಬದ ತುಂಬು ಸಹಕಾರ ಎಲ್ಲವನ್ನೂ ಖುದ್ದು ಅವರೇ ಇಲ್ಲಿ ಎಳೆಎಳೆಯಾಗಿ ಬಿಡಿಸಿಟ್ಟಿದ್ದಾರೆ.

ದಶಕಗಳ ಕಾಲ ಕ್ಯಾನ್ಸರ್ ಜೊತೆ ಸೆಣಸಿ ಕಣ್ಮುಚ್ಚಿದ ನನ್ನ ಅಮ್ಮನ ಸಾವು ಇನ್ನೂ ನನ್ನನ್ನು ಅತಿಯಾಗಿ ಬಾಧಿಸುತ್ತಿದೆ. ಕೊನೆಯ ಕ್ಷಣದವರೆಗೂ ಅವಳು ಅನುಭವಿಸಿದ ಯಾತನೆ ನನ್ನ ಕಣ್ಮುಂದೆ ಇದೆ. ಅದನ್ನು ನೆನೆದಾಗ ಕಣ್ಣುಗಳು ತೇವಗೊಳ್ಳುತ್ತವೆ. ಹೃದಯ ಭಾರವಾಗುತ್ತದೆ. ಸುಮಾರು ಹತ್ತು ವರ್ಷಗಳ ಕಾಲ ಅಂಡಾಶಯ ಕ್ಯಾನ್ಸರ್ ಜೊತೆಗೆ ಹೋರಾಟ ನಡೆಸಿದ ಅವಳು, ಆರು ವರ್ಷಗಳ ಹಿಂದೆ (2007ರಲ್ಲಿ) ತನ್ನ 56ನೇ ವಯಸ್ಸಿನಲ್ಲಿ ಸಾವಿಗೆ ಶರಣಾದಳು.

ತನ್ನ ಮೊಮ್ಮಕ್ಕಳನ್ನು ನೋಡಿ ಕಣ್ತುಂಬಿಕೊಳ್ಳಬೇಕು, ತೋಳುಗಳಲ್ಲಿ ಎತ್ತಿ ಆಡಿಸಿ, ಪ್ರೀತಿಯ ಮಳೆಗರೆಯಬೇಕು ಎಂಬ ಒಂದೇ ಮಹದಾಸೆಯಿಂದ ಅಮ್ಮ ಬದುಕಿದ್ದಳು. ಪ್ರೀತಿ, ಸಹನೆ ಮೈದಳೆದು ಬಂದಂತಿದ್ದ ಅವಳು ಕ್ಯಾನ್ಸರ್ ಎಂಬ ಪೀಡೆ ನೀಡುತ್ತಿದ್ದ ಯಾತನೆ, ಹಿಂಸೆಯ ನಡುವೆಯೂ ಬದುಕುವ ನಿರ್ಧಾರ ಮಾಡಿದ್ದಳು. ಆದರೆ, ನನ್ನ ಆರು ಮಕ್ಕಳಲ್ಲಿ ಐವರಿಗೆ ತಮ್ಮ ಅಜ್ಜಿಯನ್ನು ನೋಡುವ ಸೌಭಾಗ್ಯ ಸಿಗಲೇ ಇಲ್ಲ. ಅವಳ ಅಪಾರ ಪ್ರೀತಿ, ಕಾರುಣ್ಯ, ಅಂತಃಕರಣದಲ್ಲಿ ಮಿಂದೇಳುವ ಭಾಗ್ಯವನ್ನು ಅವರು ಪಡೆಯಲಿಲ್ಲ.

ಈಗಲೂ ನಾನು ನನ್ನ ಮಕ್ಕಳೊಂದಿಗೆ ಅವರ ಅಜ್ಜಿಯ ಕುರಿತು ಸಾಕಷ್ಟು ಬಾರಿ ಮಾತನಾಡುತ್ತೇನೆ. ಮಮತಾಮಯಿಯಾಗಿದ್ದ ಅವಳನ್ನು ಕ್ಯಾನ್ಸರ್ ಎಂಬ ಮಾರಿ ನಿರ್ದಾಕ್ಷಿಣ್ಯವಾಗಿ ನಮ್ಮಿಂದ ಹೇಗೆ ಕಸಿದುಕೊಂಡು ಹೋಯಿತು ಎಂಬುದನ್ನು ಹೇಳಿದ್ದೇನೆ. ನನ್ನ ಅಮ್ಮನನ್ನು ಕಸಿದುಕೊಂಡ ಕ್ಯಾನ್ಸರ್ ತಮ್ಮ ಅಮ್ಮನನ್ನೂ ಕಸಿದುಕೊಂಡುಬಿಡಬಹುದು ಎಂಬ ಆತಂಕ ನನ್ನ ಮಕ್ಕಳನ್ನು ಕಾಡಲು ಆರಂಭಿಸಿತು. ಅದನ್ನು ಅವರು ಅಷ್ಟೇ ಆತಂಕ ಮತ್ತು ಮುಗ್ಧತೆಯಿಂದ ನನ್ನ ಬಳಿ ತೋಡಿಕೊಂಡರು ಕೂಡ. ಆ ಬಗ್ಗೆ ಚಿಂತಿಸಬೇಡಿ ಎಂದು ಮಕ್ಕಳನ್ನು ಸಮಾಧಾನಗೊಳಿಸುತ್ತಿದ್ದ ನನಗೆ ಎಲ್ಲೋ ಒಂದು ಕಡೆ ಒಳಗೊಳಗೇ ಅಳುಕು ಕಾಡಲು ಶುರುವಾಗಿತ್ತು. ಹೌದಲ್ಲ! ಮಕ್ಕಳು ಕೇಳುತ್ತಿರುವ ಪ್ರಶ್ನೆ ಯಾಕೆ ನಿಜವಾಗಿರಬಾರದು ಎಂಬ ಸಂಶಯದ ಹುಳ ಅದಾಗಲೇ ತಲೆಯನ್ನು ಹೊಕ್ಕಿತ್ತು.

ಎಣಿಕೆ ಸುಳ್ಳಾಗಲಿಲ್ಲ
ಅದೇ ಸಂಶಯ ಹೊತ್ತುಕೊಂಡು ವೈದ್ಯಕೀಯ ತಪಾಸಣೆಗೆ ಒಳಗಾದಾಗ ನನ್ನ ಆತಂಕ, ಎಣಿಕೆ ಸುಳ್ಳಾಗಲಿಲ್ಲ. ನನ್ನ ಅಮ್ಮನಿಂದ ಆ ರೋಗವನ್ನು ನಾನು ಬಳುವಳಿಯಾಗಿ ಪಡೆದಿದ್ದೆ. ಸ್ತನ ಮತ್ತು ಅಂಡಾಶಯ ಕ್ಯಾನ್ಸರ್ ತರಬಲ್ಲ `ಬಿಆರ್‌ಸಿಎ 1' ರೋಗಪೀಡಿತ ಜೀನ್ ನನ್ನಲ್ಲಿ ಪತ್ತೆಯಾಗಿತ್ತು. ಅದನ್ನು ಕೇಳಿ ಒಂದು ಕ್ಷಣ ತಬ್ಬಿಬ್ಬಾದ ನನಗೆ ಅದನ್ನು ಅರಗಿಸಿಕೊಳ್ಳಲಾಗಲಿಲ್ಲ. ಆದರೆ, ಅದು ನಿಜವಾಗಿತ್ತು. ವಾಸ್ತವವನ್ನು ಒಪ್ಪಿಕೊಳ್ಳುವ ಧೈರ್ಯ ಮಾಡಿದೆ. ಅನ್ಯ ಮಾರ್ಗವೇ ಇರಲಿಲ್ಲ.

37 ವರ್ಷದ ನನ್ನಲ್ಲಿ ಶೇ 87ರಷ್ಟು ಪ್ರಮಾಣದಲ್ಲಿ ಸ್ತನ ಕ್ಯಾನ್ಸರ್‌ಗೆ ಕಾರಣವಾಗಬಲ್ಲ ಜೀನ್ ಮತ್ತು ಶೇ 50ರಷ್ಟು ಅಂಡಾಶಯ ಕ್ಯಾನ್ಸರ್‌ಗೆ ಕಾರಣವಾಗಬಲ್ಲ ಜೀನ್ ಇರುವುದು ವೈದ್ಯಕೀಯ ಪರೀಕ್ಷೆಗಳಿಂದ ದೃಢಪಟ್ಟಿತ್ತು. ಈ ಪ್ರಮಾಣ ಪ್ರತಿಯೊಬ್ಬರಲ್ಲೂ ವಿಭಿನ್ನವಾಗಿರುತ್ತದೆ ಎಂದು ನನ್ನನ್ನು ತಪಾಸಣೆ ನಡೆಸಿದ ವೈದ್ಯರು ತಿಳಿಸಿದರು. ಕೆಲವೇ ಕೆಲವರಲ್ಲಿ ಮಾತ್ರ ಆನುವಂಶಿಕವಾಗಿ ಈ ರೋಗ ಕಾಣಿಸಿಕೊಳ್ಳುತ್ತದೆ. ಬಹುತೇಕ (ಶೇ 65ರಷ್ಟು) ಸ್ತನ ಮತ್ತು ಅಂಡಾಶಯ ಕ್ಯಾನ್ಸರ್ `ಬಿಆರ್‌ಸಿಎ1' ಜೀನ್ ನ್ಯೂನತೆಯಿಂದಲೇ ಕಾಣಿಸಿಕೊಳ್ಳುತ್ತವೆ.

ವೈದ್ಯಕೀಯ ತಪಾಸಣೆಗಳು ಮುಗಿದ ಬಳಿಕ ಎಲ್ಲ ವಾಸ್ತವ ಸಂಗತಿಗಳೂ ನನಗೆ ಅರಿವಾದವು. ಅರಗಿಸಿಕೊಳ್ಳುವುದು ಕಷ್ಟವಾದರೂ ವಾಸ್ತವವನ್ನು ಎದುರಿಸಿ ಹೋರಾಟ ನಡೆಸಲು ಮಾನಸಿಕವಾಗಿ ನಾನು ಸಿದ್ಧಗೊಳ್ಳಬೇಕಿತ್ತು. ಜೀವನದಲ್ಲಿ ಅನಿರೀಕ್ಷಿತವಾಗಿ ಬೀಸಿ ಬಂದ ಚಂಡುಮಾರುತದ ಹೊಡೆತಕ್ಕೆ ಸಿಕ್ಕಿದ್ದೆ. ನನ್ನಂತೆ ನನ್ನ ಮಕ್ಕಳು ತಮ್ಮ ಅಮ್ಮನನ್ನು ಕಳೆದುಕೊಳ್ಳಬಾರದು ಎಂದು ದೃಢ ನಿರ್ಧಾರ ಮಾಡಿದೆ. ಮನಸ್ಸನ್ನು ಕಲ್ಲಿನಂತೆ ಗಟ್ಟಿ ಮಾಡಿಕೊಂಡು ಹೊಸ ಸವಾಲನ್ನು ಎದುರಿಸಲು ಸಿದ್ಧಳಾದೆ. ಆದಷ್ಟೂ ರೋಗವನ್ನು ಆರಂಭದಲ್ಲೇ ಹತ್ತಿಕ್ಕುವುದು ನನ್ನ ಮತ್ತು ವೈದ್ಯರ ಆದ್ಯತೆಯಾಗಿತ್ತು.

ಗುಟ್ಟಾಗಿ ಇಟ್ಟಿದ್ದೆ
ನನಗೆ ಅಂಡಾಶಯ ಕ್ಯಾನ್ಸರ್‌ಗಿಂತ ಸ್ತನ ಕ್ಯಾನ್ಸರ್ ಹೆಚ್ಚು ಅಪಾಯಕಾರಿಯಾಗುವ ಸಾಧ್ಯತೆ ಇತ್ತು. ಹೀಗಾಗಿ ಎರಡು ಬಾರಿ ಸ್ತನ ಶಸ್ತ್ರಚಿಕಿತ್ಸೆ (ಮಾಸ್ಟೆಕ್ಟೊಮಿ) ಮಾಡಿಸಿಕೊಂಡೆ. ಅಂಡಾಶಯ ತೆಗೆದು ಹಾಕುವ ಶಸ್ತ್ರಚಿಕಿತ್ಸೆಗಿಂತ ಸ್ತನ ಕ್ಯಾನ್ಸರ್ ಶಸ್ತ್ರಚಿಕಿತ್ಸೆ ಬಹಳ ಸಂಕೀರ್ಣವಾದದ್ದು. ಈ  ಶಸ್ತ್ರಚಿಕಿತ್ಸೆಗೆ ಸಂಬಂಧಿಸಿದ ಎಲ್ಲ ಪ್ರಕ್ರಿಯೆಗಳನ್ನೂ ಏಪ್ರಿಲ್ 27ರಂದು ಮುಗಿಸಿದೆ. ಮೂರು ತಿಂಗಳ ಕಾಲ ತಪಾಸಣೆ, ಚಿಕಿತ್ಸೆಯನ್ನು ಅತ್ಯಂತ ಗುಟ್ಟಾಗಿ ಇಟ್ಟಿದ್ದೆ. ಅದರ ಜತೆಯಲ್ಲಿ ನನ್ನ ಕೆಲಸ, ಕಾರ್ಯಗಳನ್ನು ಮಾಡಿ ಮುಗಿಸುವ ಅಗತ್ಯವಿತ್ತು. ಆದರೆ, ಈಗ ಆ ವಿಷಯವನ್ನು ನಾನೇ ಬಹಿರಂಗ ಪಡಿಸಿದ್ದೇನೆ. ಆ ಬಗ್ಗೆ ಮನಬಿಚ್ಚಿ ಮಾತನಾಡುತ್ತಿದ್ದೇನೆ. ಸ್ತನ ಕ್ಯಾನ್ಸರ್‌ಗೆ ಸಂಬಂಧಿಸಿದ ಈ ಲೇಖನವನ್ನೂ ಬರೆಯುತ್ತಿದ್ದೇನೆ. ನನ್ನ ಅನುಭವ ಉಳಿದ ಮಹಿಳೆಯರಿಗೆ ಪಾಠವಾಗಬೇಕು ಮತ್ತು ಮುನ್ನೆಚ್ಚರಿಕೆಯ ಸಂದೇಶವಾಗಬೇಕು ಎಂಬುದು ಈ ಲೇಖನದ ಹಿಂದಿನ ಉದ್ದೇಶ.

ಕ್ಯಾನ್ಸರ್ ಎಂದರೆ ಸಾವು ಎಂದು ಜನ ಭಯದಿಂದಲೇ ಅಧೀರರಾಗುತ್ತಾರೆ. ಆದರೆ, ಈಗ ವೈದ್ಯಕೀಯ ಕ್ಷೇತ್ರದಲ್ಲಿ ಸಾಕಷ್ಟು ಬದಲಾವಣೆಗಳಾಗಿವೆ. ಸರಳ ರಕ್ತ ಪರೀಕ್ಷೆ ಮೂಲಕ ಕ್ಯಾನ್ಸರ್ ಪತ್ತೆ ಹಚ್ಚಬಹುದಾಗಿದೆ. ಹೀಗಾಗಿ ಸಾಕಷ್ಟು ಮುಂಜಾಗ್ರತೆ ವಹಿಸಬಹುದು. ನನಗಿನ್ನೂ ಚೆನ್ನಾಗಿ ನೆನಪಿದೆ. ಅಂದು ಫೆಬ್ರುವರಿ 2. ಮೊದಲ ಬಾರಿಗೆ ಸ್ತನ ಕ್ಯಾನ್ಸರ್ ಪರೀಕ್ಷೆಗೆ ಒಳಪಟ್ಟಿದ್ದೆ. ಸ್ತನ ತೊಟ್ಟು (ನಿಪ್ಪಲ್) ಪರೀಕ್ಷೆ ನಡೆಯಿತು. ಇದು ಸ್ತನ ಕ್ಯಾನ್ಸರ್ ಪರೀಕ್ಷೆಯ ಪ್ರಾಥಮಿಕ ಹಂತ. ತೊಟ್ಟಿನ ಹಿಂದಿರುವ ರಕ್ತನಾಳಗಳು ಕ್ಯಾನ್ಸರ್‌ಕಾರಕ ಜೀವಕೋಶ, ಅಂಗಾಂಶಗಳಿಗೆ ಹೆಚ್ಚಿನ ಪ್ರಮಾಣದ ರಕ್ತವನ್ನು ಪೂರೈಸುತ್ತವೆ. ಇದರಿಂದಾಗಿ ರೋಗಪೀಡಿತ ಸ್ತನ, ಆರೋಗ್ಯಯುತ ಸ್ತನ ಮತ್ತು ತೊಟ್ಟುಗಳಲ್ಲಿ ಸಾಕಷ್ಟು ವ್ಯತ್ಯಾಸಗಳಿರುತ್ತವೆ. ಈ ಪರೀಕ್ಷೆಯಿಂದ ಸ್ವಲ್ಪ ನೋವಿನ ಅನುಭವವಾಗಿತ್ತು.

ಫಲಿತಾಂಶವೂ ಸುಂದರವಾಗಿತ್ತು...
ಎರಡು ವಾರಗಳ ನಂತರ ಸ್ತನಗಳ ಶಸ್ತ್ರಚಿಕಿತ್ಸೆ ನಡೆಯಿತು. ಸರಿಸುಮಾರು ಎಂಟು ಗಂಟೆಗಳ ಕಾಲ ನಡೆದ ಅದು ದೊಡ್ಡ ಹಾಗೂ ಸಂಕೀರ್ಣ ಶಸ್ತ್ರಚಿಕಿತ್ಸೆ ಆಗಿತ್ತು. ಸ್ತನದ ಒಳಗಿನ ಕ್ಯಾನ್ಸರ್ ರೋಗಕಾರಕ ಜೀವಕೋಶ ಮತ್ತು ಅಂಗಾಂಶಗಳನ್ನು ಕತ್ತರಿಸಿ ಹಾಕಲಾಯಿತು. ಸ್ತನಗಳ ಗಾತ್ರ ಮತ್ತು ಆಕಾರ ಅಂದಗೆಡದಂತೆ ಆ ಜಾಗದಲ್ಲಿ ಕೃತಕ ವಸ್ತುವನ್ನು ಅಳವಡಿಸಲಾಗಿತ್ತು.

ಬಳಿಕ ಅಶುದ್ಧ ರಕ್ತ ಹೊರಗೆಳೆಯುವ ಅನೇಕ ಪ್ಲಾಸ್ಟಿಕ್ ಪೈಪುಗಳನ್ನು ಸ್ತನಗಳಲ್ಲಿ ಇಡಲಾಗಿತ್ತು. ಆಸ್ಪತ್ರೆಯ ಹಾಸಿಗೆಯಲ್ಲಿದ್ದ ನನ್ನ ಆ ಪರಿಸ್ಥಿತಿ ವೈಜ್ಞಾನಿಕ ಕಾಲ್ಪನಿಕ ಚಿತ್ರದ ಪಾತ್ರದಂತಿತ್ತು.

ಶಸ್ತ್ರಚಿಕಿತ್ಸೆ ಬಳಿಕ ಬೇಗನೇ ಚೇತರಿಸಿಕೊಂಡೆ. ಗಾಯಗಳೂ ಮಾಯವಾದವು. ಮತ್ತೆ ಒಂಬತ್ತು ವಾರಗಳ ಬಳಿಕ ಮತ್ತೊಂದು ದೊಡ್ಡ ಶಸ್ತ್ರಚಿಕಿತ್ಸೆಗೆ ಒಳಗಾದೆ. ಅಂಗಾಂಶಗಳನ್ನು ತೆಗೆದು ಹಾಕಿದ ಕಾರಣ ಸ್ವಲ್ಪ ಆಕಾರ, ಅಂದ ಕಳೆದುಕೊಂಡಿದ್ದ ಸ್ತನಗಳಿಗೆ ಮರಳಿ ಮೊದಲಿನ ಸುಂದರ ರೂಪ ನೀಡಬೇಕಾಗಿತ್ತು. ಸ್ತನಗಳು ಹೆಣ್ಣಿನ ಸೌಂದರ್ಯದ ಪ್ರತೀಕ. ಹೀಗಾಗಿ ಕೃತಕ ವಸ್ತುವನ್ನು ಅಳವಡಿಸಿ ಸ್ತನಗಳಿಗೆ ನಿರ್ದಿಷ್ಟ ಮರು ಆಕಾರ ನೀಡಲಾಯಿತು. ಫಲಿತಾಂಶವೂ ಅಷ್ಟೇ ಸುಂದರವಾಗಿತ್ತು!

ಅಮ್ಮ ನಿಮ್ಮಂದಿಗೆ ಇರುತ್ತಾಳೆ
ಶಸ್ತ್ರಚಿಕಿತ್ಸೆ ಬಳಿಕ ಸ್ತನ ಕ್ಯಾನ್ಸರ್ ಹರಡುವ ಅಪಾಯ ಶೇ 87ರಿಂದ ಶೇ 5ಕ್ಕೆ ಕುಸಿದಿದೆ. ಕ್ಯಾನ್ಸರ್‌ನಿಂದ ಅಮ್ಮನನ್ನು ಕಳೆದುಕೊಳ್ಳುವ ಭೀತಿ ಬೇಡ ಎಂದು ಮಕ್ಕಳಿಗೆ ಧೈರ್ಯ ತುಂಬಿದ್ದೇನೆ. ಅಷ್ಟು ಆತ್ಮವಿಶ್ವಾಸ ನನ್ನಲ್ಲಿ ಇಮ್ಮಡಿಸಿದೆ. ಮಾಸ್ಟೆಕ್ಟೊಮಿ ಶಸ್ತ್ರಚಿಕಿತ್ಸೆಗೆ ಒಳಗಾಗುವುದು ಸುಲಭದ ಮಾತಲ್ಲ. ಮುಖ್ಯವಾಗಿ ಧೈರ್ಯ ಬೇಕು. ನನಗೀಗ ನನ್ನ ನಿರ್ಧಾರದ ಬಗ್ಗೆ ಹೆಮ್ಮೆ ಎನಿಸುತ್ತಿದೆ. ಸಂಕಷ್ಟದ ಸಮಯದಲ್ಲಿ ಧೃತಿಗೆಡದೆ ಸಮಯೋಚಿತ ನಿರ್ಧಾರ ತೆಗೆದುಕೊಳ್ಳುವುದು ಜೀವನದ ಗತಿಯನ್ನು ಬದಲಿಸುತ್ತದೆ.

ಸ್ತನಗಳ ಮೇಲೆ ಶಸ್ತ್ರಚಿಕಿತ್ಸೆಯ ಸಣ್ಣಪುಟ್ಟ ಕಲೆಗಳನ್ನು ಹೊರತು ಪಡಿಸಿದರೆ ಅವುಗಳ ಸೌಂದರ್ಯಕ್ಕೆ ಯಾವುದೇ ಕುಂದು ಉಂಟಾಗಿಲ್ಲ. ನಾನಿನ್ನೂ ಮೊದಲಿನ ಏಂಜಲಿನಾ ಜೋಲಿ ರೀತಿಯಲ್ಲೇ ನನ್ನ ಸೌಂದರ್ಯವನ್ನು ಕಾಪಾಡಿ ಕೊಂಡಿದ್ದೇನೆ. ಆಸ್ಪತ್ರೆಯಿಂದ ಹಿಂದಿರುಗಿದ ಬಳಿಕ ಮಕ್ಕಳು ನನ್ನನ್ನು ಹೇಗೆ ಸ್ವೀಕರಿಸುತ್ತಾರೋ ಎಂದು ನಾನು ಅಳುಕಿದ್ದೆ. ಅವರಿಗೆ ಇರುಸುಮುರುಸಾಗಬಹುದು ಎಂದು ಎಣಿಸಿದ್ದೆ. ಆದರೆ, ಮಕ್ಕಳು ನನ್ನ ಸೌಂದರ್ಯದಲ್ಲಿ ಯಾವುದೇ ಬದಲಾವಣೆ ಕಂಡಿಲ್ಲ. ಹೀಗಾಗಿ ನನ್ನ ಅಳುಕು ದೂರಾಗಿದೆ.

ನೆರಳಾಗಿ ಇರಿ...
ಹಾಲಿವುಡ್‌ನ ಪ್ರಖ್ಯಾತ ನಟ ಬ್ರಾಡ್ ಪಿಟ್‌ನಂಥ ಸಂಗಾತಿಯನ್ನು ಪಡೆದಿರುವುದು ನನ್ನ ಭಾಗ್ಯ. ನನ್ನನ್ನು ಅತಿಯಾಗಿ ಪ್ರೀತಿಸುವ ಆತ ಈ ಸಂಕಷ್ಟದ ಸಮಯದಲ್ಲಿ ಬೆನ್ನೆಲುಬಾಗಿ ನಿಂತಿದ್ದ. ಅವನ ಪ್ರೀತಿಯಲ್ಲಿ ಯಾವುದೇ ಬದಲಾವಣೆಯಾಗಿಲ್ಲ. ಎಲ್ಲ ಪುರುಷರಿಗೆ ನನ್ನ ಮನವಿ ಇಷ್ಟೇ, ಇಂಥ ಕಷ್ಟ ನಿಮ್ಮ ಪತ್ನಿ, ಸಂಗಾತಿ ಅಥವಾ ಗೆಳತಿಗೆ ಬಂದಲ್ಲಿ, ನೀವು ಅವಳೊಂದಿಗೆ ನೆರಳಾಗಿ ಇರಿ. ಮಾನಸಿಕ ಬೆಂಬಲ ನೀಡಿ. ಅದರಿಂದಲೇ ಅವಳು ಅರ್ಧದಷ್ಟು ಚೇತರಿಸಿಕೊಳ್ಳುತ್ತಾಳೆ. ಪ್ರೀತಿಯಲ್ಲಿ ಆ ಶಕ್ತಿ ಇದೆ. ಪಿಟ್ ಕೂಡ `ಪಿಂಕ್ ಲೋಟಸ್ ಸ್ತನ ಕ್ಯಾನ್ಸರ್ ಆಸ್ಪತ್ರೆ'ಯಲ್ಲಿ ನನ್ನೊಂದಿಗಿದ್ದ. ಪ್ರತಿ ಗಳಿಗೆಯೂ ಅವನು ನನ್ನನ್ನು ನಗಿಸುವ ಮೂಲಕ ಜೀವನದಲ್ಲಿ ಹೊಸ ಚೈತನ್ಯ ತುಂಬುತ್ತಿದ್ದ. ಕಷ್ಟಕರ ಸಮಯದಲ್ಲೂ ಇಬ್ಬರೂ ಜೋರಾಗಿ ನಗುತ್ತಿದ್ದೆವು. ಈ ಘಟನೆ ನಮ್ಮಿಬ್ಬರನ್ನೂ ಮತ್ತಷ್ಟು ಹತ್ತಿರಕ್ಕೆ ತಂದಿತು. ಪರಸ್ಪರ ಹೆಚ್ಚು ಅರ್ಥ ಮಾಡಿಕೊಳ್ಳಲು ನೆರವಾಯಿತು. ಜೀವನ ಮತ್ತು ಪ್ರೀತಿಯನ್ನು ಗಟ್ಟಿಗೊಳಿಸಿತು.

ಜೀವನ ಎಂದರೆ ಸವಾಲು. ತಾಯಿ ಗರ್ಭದಿಂದ ಈ ಜಗತ್ತಿಗೆ ಕಾಲಿಡುವಾಗಲೇ ಸವಾಲುಗಳೂ ಬರುತ್ತವೆ. ಅವನ್ನು ಮೆಟ್ಟಿ ನಿಲ್ಲುವ ಛಾತಿ, ಆತ್ಮವಿಶ್ವಾಸ ನಮ್ಮಲ್ಲಿ ಇರಬೇಕು. ಈ ಲೇಖನ ಆ ಕೆಲಸ ಮಾಡಲಿ. ನೊಂದ ಮಹಿಳೆಯರ ಬಾಳಲ್ಲಿ ಆಶಾಕಿರಣ ತರಲಿ ಎಂಬುದಷ್ಟೇ ನನ್ನ ಉದ್ದೇಶ.  

ಪರೀಕ್ಷೆ ಕೈಗೆಟುಕಲಿ...
ವಿಶ್ವ ಆರೋಗ್ಯ ಸಂಸ್ಥೆಯ ಅಂಕಿ, ಅಂಶಗಳ ಪ್ರಕಾರ, ವಿಶ್ವದಾದ್ಯಂತ ಪ್ರತಿ ವರ್ಷ ಸ್ತನ ಕ್ಯಾನ್ಸರ್‌ನಿಂದ ಕನಿಷ್ಠ 4.85 ಲಕ್ಷ ಮಹಿಳೆಯರು ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಈ ಪೈಕಿ ಬಹುತೇಕ ಬಡ ಹಾಗೂ ಅಭಿವೃದ್ಧಿಶೀಲ ರಾಷ್ಟ್ರಗಳ ಮಧ್ಯಮ ವರ್ಗದ ಕುಟುಂಬಗಳ ಮಹಿಳೆಯರು ಹೆಚ್ಚಿದ್ದಾರೆ.

ಬಿಆರ್‌ಸಿಎ1 ಮತ್ತು ಬಿಆರ್‌ಸಿಎ2 ಜೀನ್ ಪರೀಕ್ಷೆ ಶುಲ್ಕ ಅಮೆರಿಕದಲ್ಲಿ 3,000 ಡಾಲರ್ (1.71 ಲಕ್ಷ ರೂಪಾಯಿ) ದಾಟುತ್ತದೆ. ಈ ಪರೀಕ್ಷೆ ಮತ್ತು ಚಿಕಿತ್ಸೆ ದುಬಾರಿಯಾದ ಕಾರಣ ಬಡವರು ಮತ್ತು ಮಧ್ಯಮ ವರ್ಗದ ಮಹಿಳೆಯರ ಕೈಗೆಟಕುತ್ತಿಲ್ಲ. ಅಂಥವರಿಗೆ ಸುಲಭವಾಗಿ ಮತ್ತು ಕೈಗೆಟಕುವ ಅಗ್ಗದ ಬೆಲೆಯಲ್ಲಿ ಜೀನ್ ಪರೀಕ್ಷೆ ಸೌಲಭ್ಯ ಒದಗಿಸಬೇಕು.

ಗುಟ್ಟು ರಟ್ಟಾಯಿತು
ನಟಿಯಾದ ಕಾರಣ ನನ್ನ ಈ ರೋಗವನ್ನು ಗುಟ್ಟಾಗಿಡಬಹುದಿತ್ತು. ಈ ಬಗ್ಗೆ ಅರಿವಿರದ ಜಗತ್ತಿನ ಅನೇಕ ಮಹಿಳೆಯರಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ಈ ವಿಷಯವನ್ನು ಬಹಿರಂಗ ಪಡಿಸಲು ಬಯಸಿದೆ. ಕ್ಯಾನ್ಸರ್ ಎಂದರೆ ಸಾವಲ್ಲ. ಭಯಭೀತರಾಗಬೇಕಿಲ್ಲ. ನಮ್ಮ ಮುಂದೆ ಅನೇಕ ಆಯ್ಕೆಗಳಿವೆ. ತಜ್ಞ ವೈದ್ಯರು ಮತ್ತು ಹೈಟೆಕ್ ಆಸ್ಪತ್ರೆಗಳಿವೆ.  ಅದೆಲ್ಲಕ್ಕೂ ಮಿಗಿಲಾಗಿ ಸುಂದರ ಬದುಕು, ಉಜ್ವಲ ಭವಿಷ್ಯ, ಸುದೀರ್ಘ ಜೀವನ, ನಮ್ಮನ್ನು ಪ್ರೀತಿಸುವ ಕುಟುಂಬವಿದೆ.

ಏಂಜಲಿನಾ ಜೋಲಿ

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.