ADVERTISEMENT

ಸಬಲೆ

ಪ್ರಭಾ ಮೂರ್ತಿ
Published 17 ಜನವರಿ 2014, 19:30 IST
Last Updated 17 ಜನವರಿ 2014, 19:30 IST

ಗಂಗಮ್ಮ, ದಾವಣಗೆರೆ.
ನಾಲ್ಕು ವರ್ಷದ ಹಿಂದೆ ನಮ್ಮ ಸಂಬಂಧಿಕರೊಬ್ಬರು ಅವರ ಮಗಳ ಮದುವೆ ಕಾರಣಕ್ಕೆ ನಮ್ಮಿಂದ ಐದು ಲಕ್ಷ ರೂಪಾಯಿ ಸಾಲ ಪಡೆದಿದ್ದರು. ನಾಲ್ಕು ವರ್ಷವಾದರೂಹಣ ಕೊಡದೆ ಸತಾಯಿಸುತ್ತಿದ್ದಾರೆ. ನಾವು ಕೊಟ್ಟ ಹಣಕ್ಕೆ ಯಾವುದೇ ದಾಖಲೆ ಇಲ್ಲ. ಆದರೆ ನಾವು ನಮ್ಮ ಖಾತೆಯಿಂದ ಅವರ ಖಾತೆಗೆ ಹಣ ವರ್ಗಾವಣೆ ಮಾಡಿದ್ದೆವು. ಆ ದಾಖಲೆ ಬ್ಯಾಂಕಿನ ಪಾಸ್‌ ಪುಸ್ತಕ ಮತ್ತು ಅಕೌಂಟ್ ಸ್ಟೇಟ್ ಮೆಂಟಿನಲ್ಲಿದೆ. ಇಷ್ಟರಿಂದಲೇ ನಾವು ನ್ಯಾಯಾಲಯದಲ್ಲಿ ದಾವೆ ಹಾಕಿ ಹಣ ವಸೂಲಿ ಮಾಡಬಹುದೇ, ಅಥವಾ ಬೇರೆ ಕರಾರು ಪತ್ರಗಳ ಅವಶ್ಯವಿದೆಯೇ? ಯಾವ ರೀತಿ ಕರಾರು ಮಾಡಿಕೊಳ್ಳಬೇಕು. ಅವರಿಂದ ಅಂಥ ಕರಾರು ಪತ್ರ ಬರೆಸಿಕೊಳ್ಳುತ್ತೇವೆ. ಒಂದು ವೇಳೆ ಅವರು ಕರಾರು ಪತ್ರಕ್ಕೆ ಸಹಿ ಹಾಕದಿದ್ದರೆ ಮುಂದೆ ಏನಯ ಮಾಡಬೇಕು. ನಮ್ಮ ಯಜಮಾನರ ಮನವೊಲಿಸಿ ನಾನೇ ಹಣ ಕೊಡಿಸಿದ್ದೆ. ಈಗ ಅವರು  ನನ್ನ ಮೇಲೆ ಸಿಟ್ಟಾಗಿದ್ದಾರೆ. ದಯವಿಟ್ಟು ಸಲಹೆ ನೀಡಿ.

ನ್ಯಾಯಾಲಯದಲ್ಲಿ ಸಾಲ ವಸೂಲಾತಿಗೆ ದಾವೆ ಸಲ್ಲಿಸಲು ನಿಮ್ಮ ಬಳಿಯಿರುವ ದಾಖಲೆಗಳು ಸಹಾಯಕ್ಕೆ ಬರುತ್ತದೆ. ಆದರೆ ಅಂತಹ ದಾವೆ ಸಲ್ಲಿಸಲು ಕಾಲ ಪರಿಮಿತಿ ಅಧಿನಿಯಮದ ಪ್ರಕಾರ ಮೂರು ವರ್ಷಗಳ ಕಾಲ ಪರಿಮಿತಿ ಇರುತ್ತದೆ.  ನೀವು ಈಗಾಗಲೇ ನಾಲ್ಕು ವರ್ಷಗಳ ಹಿಂದೆ  ಹಣ ನೀಡಿರುವುದರಿಂದ, ಈಗ ಅದನ್ನು ವಸೂಲು ಮಾಡಬೇಕಾದಲ್ಲಿ ಹಣ ಪಡೆದವರ ವತಿಯಿಂದ ಅವರು ಸಾಲ ಪಡೆದ ಬಗ್ಗೆ ಮತ್ತು ನಿಮಗೆ ಅವರಿಂದ ಇಂತಿಷ್ಟು ಸಾಲದ ಹಣ ಹಿಂತಿರುಗಿಸಲು ಬಾಕಿಯಿದೆ ಎಂದು ಲಿಖಿತದಲ್ಲಿ ಹಿಂಬರಹ ಪಡೆಯಬೇಕಾಗುವುದು. ಇಲ್ಲವೆ ಸಾಲದ ಭಾಗಶ: ಮೊತ್ತಕ್ಕೆ ಚೆಕ್ ಯಾ ಡಿಡಿ ಪಡೆಯಬಹುದು ಅಥವಾ ಹಣ ಹಿಂದಿರುಗಿಸಲು ಆಗದಿರುವುದಕ್ಕೆ ಸಮಯಾವಕಾಶಕ್ಕೆ ಒಂದು ಪತ್ರವನ್ನಾದರೂ ಅವರಿಂದ ಸಹಿಯೊಂದಿಗೆ  ಇಂದಿನ ದಿನಾಂಕದಲ್ಲಿ ಪಡೆಯಿರಿ. ಕೂಡಲೇ ವಕೀಲರ ಸಹಾಯ ಪಡೆಯಿರಿ.

ಸಾವಿತ್ರಿ ಟಿ.ಎಸ್. ತುಮಕೂರು.
ನನಗೆ 53 ವರ್ಷಗಳು, ಮದುವೆಯಾಗಿ 25 ವರ್ಷ ಆಗಿದೆ. ನನ್ನ ಪತಿ ನಿವೃತ್ತಿಯಾಗಿದ್ದು, ಮಕ್ಕಳ ವಿದ್ಯಾಭ್ಯಾಸ ಇನ್ನೂ ಮುಗಿದಿಲ್ಲ. ಪತಿಗೆ ಬರುವ ಪಿಂಚಣಿಯಲ್ಲಿ ಜೀವನ ನಡೆಸುವುದು ದುಸ್ತರವಾಗಿದೆ.

ನಮ್ಮ ತಂದೆಗೆ ಎಂಟು ಹೆಣ್ಣು ಮಕ್ಕಳ ಪೈಕಿ ನಾವು ಈಗ ಐವರು ಇದ್ದೇವೆ. ಗಂಡು ಮಕ್ಕಳು ಇಲ್ಲದ ಕಾರಣ ತಂದೆಯ ಹತ್ತಿರದ ಸಂಬಂಧಿಕರ ಮಗನನ್ನು ದತ್ತು ತೆಗೆದುಕೊಂಡಿದ್ದರು. ಈಗ ನಮ್ಮ ತಂದೆ ತಾಯಿ ಇಬ್ಬರು ಬದುಕಿಲ್ಲ. ನಮ್ಮ ತಾತನಿಂದ ಸುಮಾರು 50 ಎಕರೆ ಜಮೀನು, 5–6 ನಿವೇಶನಗಳು, 3–4 ಕಟ್ಟಡಗಳು ಹಾಗೂ ಇನ್ನು ಕೆಲವು ಆಸ್ತಿಯೊಂದಿಗೆ ಬ್ಯಾಂಕ್‌ ಡಿಪಾಸಿಟ್‌ ಸಹ ಒಬ್ಬನೇ ಮಗನಾದ ನಮ್ಮ ತಂದೆಗೆ ಬಂದಿರುತ್ತದೆ. ತಂದೆ ಮರಣ ಹೊಂದಿದ ನಂತರ ಅವರ ಈ ಎಲ್ಲ ಆಸ್ತಿಯನ್ನು ಹಾಗೂ ತಂದೆ ಸಂಪಾದಿಸಿದ ಸ್ವಯಾರ್ಜಿತ ಆಸ್ತಿಯನ್ನು ದತ್ತು ಸಹೋದರ ನೋಡಿಕೊಳ್ಳುತ್ತಿದ್ದಾನೆ. ನಮ್ಮ ತಂದೆ ಈ ಆಸ್ತಿಯನ್ನು ವಿಭಾಗ ಮಾಡದೆ ಕಾಲವಾಗಿರುತ್ತಾರೆ (ತಾತನ ಕಾಲದಿಂದಲು ಆಸ್ತಿ ವಿಭಾಗವಾಗಿಲ್ಲ). ಈ ದತ್ತು ಸಹೋದರ ಕೆಲವು ಆಸ್ತಿಗಳನ್ನು ನಮಗೆ ತಿಳಿಸದೆ ಮಾರಾಟ ಮಾಡಿದ್ದಾನೆ. ಈಗ ಇದು ನನಗೆ ಮತ್ತು ನನ್ನ ಸಹೋದರಿಯರಿಗೆ ತಿಳಿದುಬಂದಿದೆ. ನಮ್ಮ ಸಮ್ಮತಿ ಪಡೆಯದೆ ಆಸ್ತಿ ಪರಭಾರೆ ಮಾಡಿರುವುದು ವಂಚನೆ ಮತ್ತು ಕಾನೂನು ಬಾಹಿರವಲ್ಲವೆ? ನಾವು ಉತ್ತರಾಧಿಕಾರತ್ವ ಹೊಂದಿರುವ ಈ ಆಸ್ತಿಯ ಮಾರಾಟವನ್ನು ಕಾನೂನು ಸಹಾಯದಿಂದ ರದ್ದುಗೊಳಿಸಬಹುದೆ? ಅಥವಾ ಆಸ್ತಿ ಮಾರಾಟದಿಂದ ಪಡೆದಿರುವ ಹಣದಲ್ಲಿ ನಮ್ಮ  ಸಮಪಾಲನ್ನು ಪಡೆಯಲು ಕಾನೂನು ಸಹಾಯ ಮಾಡುವುದೇ? ಮತ್ತು ಇನ್ನು ಮುಂದೆ ಈ ದತ್ತು ಸಹೋದರ ಅಕ್ರಮವಾಗಿ ಆಸ್ತಿ ಪರಭಾರೆ ಮಾಡದಂತೆ ಕೋರ್ಟಿನಿಂದ ಆದೇಶ ಕೊಡಿಸಲು ಸಾಧ್ಯವೆ? ನಮ್ಮ ಸೋದರತ್ತೆಯ (ತಂದೆಯ ತಂಗಿ) ಮಕ್ಕಳು ಸಹ ಈಗ ಆಸ್ತಿಯಲ್ಲಿ ಪಾಲು ಇದೆ ಅನ್ನುತ್ತಿದ್ದಾರೆ. ಅವರಿಗೂ ಪಾಲು ಇದೆಯಾ?

ಹಿಂದೂ ದತ್ತಕ ಮತ್ತು ಜೀವನಾಂಶ ಕಾಯಿದೆಯ ೧೧ನೇ ಕಲಂ ಪ್ರಕಾರ ದತ್ತುಪುತ್ರನೆಂದು ಸಾಬೀತಾಗಲು ದತ್ತು ಹೋಮ ಅವಶ್ಯಕತೆ ಇಲ್ಲದಿದ್ದರೂ, ಮಗುವಿನ ಜೈವಿಕ ಪೋಷಕರು ಹಾಗೂ ದತ್ತು ಪೋಷಕರ ನಡುವೆ ಮಗುವಿನ ಕೊಡುವಿಕೆ ತೆಗೆದುಕೊಳ್ಳುವಿಕೆಯೆಂಬ ಕ್ರಿಯೆಯು ವಾಸ್ತವವಾಗಿ ನಡೆದಿರಬೇಕಾದ್ದು ಮುಖ್ಯವಾಗಿದೆ. ಇದಕ್ಕೆ ಸಾಕ್ಷಿ, ಪುರಾವೆಗಳು ಅಗತ್ಯ. ಅದಿಲ್ಲದಿದ್ದರೆ ನೋಂದಾಯಿತ ದತ್ತು ಪತ್ರವಾದರೂ ಇರಬೇಕು. ಯಾವುದೇ ಸಾಕ್ಷ್ಯಗಳಿಲ್ಲದೆ ದತ್ತಕವನ್ನು ಒಪ್ಪಲು ಸಾಧ್ಯವಾಗದು ಎಂಬುದು ತೀರ್ಪುಜನ್ಯ ಕಾನೂನಿನ ಅಭಿಪ್ರಾಯವೂ ಆಗಿದೆ.

ದತ್ತು ಪುತ್ರನು ದತ್ತು ಪೋಷಕರ ಸ್ವಂತಪುತ್ರನ ಸ್ಥಾನವನ್ನು ಪಡೆದು, ಅವರ ಆಸ್ತಿಗೂ ಸ್ವಂತ ಪುತ್ರನಂತೆಯೇ ಹಕ್ಕು ಹೊಂದಿರುತ್ತಾನೆ. ನಿಮ್ಮ ತಂದೆಯ ಆಸ್ತಿ ವಿತರಣೆ ಆಗದೆ ಅವರು ಕಾಲವಾಗಿದ್ದು, ಅವರ ಮಕ್ಕಳಾದ ನಿಮಗೆಲ್ಲರಿಗೂ, ಸಮಭಾಗ ಪಡೆಯಲು ಹಕ್ಕಿರುತ್ತದೆ. ಹಿಂದೂ ದತ್ತಕ ಮತ್ತು ಜೀವನಾಂಶ ಕಾಯಿದೆಯ ೧೨ನೇ ಕಲಂ ಪ್ರಕಾರ ದತ್ತು ತೆಗೆದುಕೊಳ್ಳುವ ಮೊದಲೇ ಆಸ್ತಿಯಲ್ಲಿ ಯಾರಿಗಾದರೂ ನೆಲೆಗೊಂಡಿರುವ ಹಕ್ಕನ್ನು ದತ್ತುಪುತ್ರ   ಕಸಿದುಕೊಳ್ಳಲು ಸಾಧ್ಯವಿಲ್ಲ.  ನಿಮ್ಮ ತಾತನವರ ಕಾಲದಿಂದಲೂ ಆಸ್ತಿ ವಿಭಾಗವಾಗಿಲ್ಲ ಎಂದಿದ್ದೀರಿ. ನಿಮ್ಮ ದತ್ತು ಸಹೋದರ ಸಂಧಾನದ ಮೂಲಕ ವಿಭಾಗಕ್ಕೆ ಒಪ್ಪದಿದ್ದಲ್ಲಿ ಆಸ್ತಿ ವಿಭಾಗ ಕೋರಿ ಸಿವಿಲ್ ದಾವಾ ಹೂಡಬಹುದು. ಆಸ್ತಿ ಪರಭಾರೆ ಮಾಡಿರುವುದನ್ನು ರದ್ದು ಗೊಳಿಸಲು, ಹಾಗೂ ಮಾರಾಟದಿಂದ ಬಂದಿರುವ ಹಣದಲ್ಲಿ ನಿಮ್ಮ ಪಾಲನ್ನು ಪಡೆಯಲು ಮತ್ತು ಇನ್ನು ಮುಂದೆ ಪರಭಾರೆ ಮಾಡದಂತೆ ನಿರ್ಭಂಧಕಾಜ್ಞೆಯನ್ನು ಕೋರಿ ನ್ಯಾಯಾಲಯದಲ್ಲಿ ದಾವಾ ಸಲ್ಲಿಸಬಹುದು. ಕಾನೂನು ಸಹಾಯ ಪಡೆಯಬಹುದು. ಕೂಡಲೇ  ವಕೀಲರನ್ನು ಸಂಪರ್ಕಿಸಿರಿ.

ADVERTISEMENT

ಶಶಾಂಕ್‌, ಮಂಡ್ಯ.
ನಮ್ಮ ತಂದೆಗೆ ಇಬ್ಬರು ಗಂಡು ಮತ್ತು ಇಬ್ಬರು ಹೆಣ್ಣು ಮಕ್ಕಳು ಎಲ್ಲರಿಗೂ ವಿವಾಹವಾಗಿದೆ. ನಮ್ಮ ತಂದೆ 1996 ರಲ್ಲಿ ಪಿತ್ರಾರ್ಜಿತ, ಸ್ವಯಾರ್ಜಿತ, ದೇವಸ್ಥಾನದ ಕೊಡುಗೆ ಜಮೀನು ಮತ್ತು ಗೇಣಿ ಹಕ್ಕಿನ (Land reform act) ಪ್ರಕಾರ ಅವರ ಹೆಸರಿಗೆ ಜಮೀನುಗಳನ್ನು ತಮ್ಮ ಸ್ವಂತ ಕೈಬರಹದಲ್ಲಿ ವಿಭಾಗ ಮಾಡಿ ಇಬ್ಬರು ಸಾಕ್ಷಿಗಳ ಸಹಿ ಮಾಡಿಸಿ ನಮಗೆ ಕೊಟ್ಟಿದ್ದರು. ಅದೇ ವರ್ಷದ ಕೊನೆಯಲ್ಲಿ ನಿಧನರಾದರು. ಆಮೇಲೆ ನಾವು ಖಾತೆ ಪಹಣಿ ಮಾಡಿಸಿಕೊಂಡು ಅನುಭವದಲ್ಲಿದ್ದೆವು. ನಮ್ಮ ತಂದೆ  ಪಿತ್ರಾರ್ಜಿತ ಆಸ್ತಿಯಲ್ಲಿ ಹೆಣ್ಣು ಮಕ್ಕಳಿಗೆ ಒಂದೊಂದು ನಿವೇಶನ ಮತ್ತು ಗಂಡುಮಕ್ಕಳಿಗೆ ಐದೈದು ನಿವೇಶನಗಳನ್ನು ಬರೆದಿದ್ದರು. ಹೆಣ್ಣು ಮಕ್ಕಳು ನಿವೇಶನಗಳನ್ನು 2004 ರಲ್ಲಿ ಮಾರಾಟ ಮಾಡಿದರು. ನಾವೂ  ಮಾರಾಟ ಮಾಡಿ ಸ್ವಲ್ಪ ನಿವೇಶನ ಉಳಿಸಿಕೊಂಡಿದ್ದೇವೆ. ಈಗ ಹೆಣ್ಣು ಮಕ್ಕಳು ತಮಗೆ ಸಮಾನ ಹಕ್ಕು ಇದೆ ಎಂದು ಆಸ್ತಿಯಲ್ಲಿ ಸಮಪಾಲು ಬೇಕೆಂದು ಕೋರ್ಟಿನಲ್ಲಿ 15 ವರ್ಷಗಳ ನಂತರ ಕೇಸ್‌ ಹಾಕಿದ್ದಾರೆ. ಈಗ ನಾವು ಉಳಿಸಿಕೊಂಡಿರುವ ನಿವೇಶನ, ದೇವಸ್ಥಾನದ ಕೊಡುಗೆ ಜಮೀನು, ಗೇಣಿ ಹಕ್ಕಿನ ಜಮೀನು ಕೊಡಬೇಕೆ ತಿಳಿಸಿ.

ಈಗಾಗಲೇ ಆಸ್ತಿ ವಿಭಾಗವಾಗಿದೆ ಎಂದಿದ್ದೀರ. ವಿಭಾಗ ಪತ್ರ ನೋಂದಾಯಿತವಾಗಿದೆಯೇ ಎಂದು ಮಾಹಿತಿಯಿಲ್ಲ. ನೋಂದಾಯಿತ ವಿಭಾಗವಾಗಿದ್ದಲ್ಲಿ ಸಹೋದರಿಯರೂ ಅವರಿಗೆ ನೀಡಿದ ಪಾಲನ್ನು ಪಡೆದಿರುವುದರಿಂದ, ಈಗ ಮತ್ತೆ ಸಮಪಾಲು ಕೇಳಲು ಬರುವುದಿಲ್ಲ ಎನ್ನಬಹುದು. ಆದರೂ, ನಿಮ್ಮ ಸಹೋದರಿಯರು ತಮ್ಮ ಹಕ್ಕೊತ್ತಾಯವನ್ನು ನ್ಯಾಯಾಲಯದ ಮುಂದೆ ಈಗಾಗಲೇ ಮಾಡಿರುವುದರಿಂದ, ಆ ಬಗ್ಗೆ ಯಾವುದೇ ಅಭಿಪ್ರಾಯ ವ್ಯಕ್ತಪಡಿಸುವುದು ಸರಿಯಲ್ಲ. ಅಲ್ಲದೆ ಉಭಯಪಕ್ಷಗಳ ದಾವಾ ಕಾಗದಪತ್ರಗಳು, ದಾಖಲೆಗಳು ಮೊದಲಾದುವನ್ನು ಪರಿಶೀಲಿಸದೆ ಏನನ್ನೂ ಹೇಳಲಾಗದು. ನೀವು ನಿಮ್ಮ ವಕೀಲರ ಮೂಲಕ ದಾವೆಯನ್ನು ಸೂಕ್ತವಾಗಿ ನಡೆಸಿ ನ್ಯಾಯಾಲಯದ ತೀರ್ಪಿಗಾಗಿ ಕಾಯಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.