ADVERTISEMENT

ಹಚ್ಚೆಯ ಹಕ್ಕಿಗೆ ಮಾತಿನ ಚುಚ್ಚು

ಲಲಿತಾ ಕೆ ಹೊಸಪ್ಯಾಟಿ.
Published 30 ಜೂನ್ 2017, 19:30 IST
Last Updated 30 ಜೂನ್ 2017, 19:30 IST
ಹಚ್ಚೆಯ ಹಕ್ಕಿಗೆ ಮಾತಿನ ಚುಚ್ಚು
ಹಚ್ಚೆಯ ಹಕ್ಕಿಗೆ ಮಾತಿನ ಚುಚ್ಚು   

ಕಣ್ಣೆದುರಿಗಿಲ್ಲದ ತಾಯಿಯ ಪ್ರೀತಿಯನ್ನು ಹಚ್ಚೆಯಾಗಿ ಕೆತ್ತಿಸಿಕೊಂಡು ನಿತ್ಯ ಅವಳ ಹೆಸರನ್ನು ಜಪಿಸುವ ಮಗ ನನಗೆ ಆಧುನಿಕ ಶ್ರವಣನಂತೆ ಕಂಡ. ಇಂತಹ ಮಗನಿದ್ದ ತಾಯಿ ವೃದ್ಧಾಶ್ರಮವನ್ನು ಸೇರುತ್ತಿರಲಿಲ್ಲ. ಅಂದು ಹಚ್ಚೆ, ಹಣಚಿ ಬೊಟ್ಟು; ಇಂದು ಟ್ಯಾಟೂ. ಅರ್ಥ ಒಂದೇ. ಅಂದಾಗಲೀ, ಇಂದಾಗಲೀ – ಮನಸ್ಸಿನ ಅಂದಕ್ಕೆ ಧಕ್ಕೆ ಬಾರದಂತೆ ಹಾರುವ ಬಲೂನಾದರೆ, ಅದರ ಹಾರಾಟದ ಸಂತೋಷಕ್ಕೆ ಸೂಜಿ ಚುಚ್ಚಬೇಕೆ?

ಅನಾದಿಯೋ? ಈ ಯುಗಾದಿಯೋ? ಕಾಲ ಕಾಲವೇ; ಬಯಕೆಗಳು ಮಾತ್ರ ಅದಲು ಬದಲು. ಅಂದು ಹಚ್ಚೆ, ಹಣಚಿ ಬೊಟ್ಟು; ಇಂದು ಟ್ಯಾಟೂ. ಅರ್ಥ ಒಂದೇ. ವಿನ್ಯಾಸದಲ್ಲಿ ನೂರು ವ್ಯತ್ಯಾಸ. ಇಂದು ಟ್ಯಾಟೂ ಹಾಕಿಕೊಂಡ ಹುಡುಗಿ ಬೋಲ್ಡ್‌; ಅಂದು ಹಚ್ಚೆಗೆ ಮೈಯೊಡ್ಡದ ಹುಡುಗಿ ಗಂಡುಬೀರಿ. ಕಾಲ ಚಕ್ರ ಸುಮ್ಮನೆ ಸುತ್ತುವುದಿಲ್ಲ. ಸರಿ–ತಪ್ಪು ಲೋಲಾಟ. ಅಂದಿನ ಸರಿ, ಇಂದು ತಪ್ಪು. ಇಂದಿನ ತಪ್ಪಿಗೆ ಅಂದು ಒಪ್ಪು. ಈ ಸರಿ–ತಪ್ಪುಗಳ ಲೆಕ್ಕಚಾರದಲ್ಲಿ ಗಾಯಕ್ಕೆ ಮೈಯೊಡ್ಡಿ ಸೂಜಿ ಚುಚ್ಚಿಸಿಕೊಂಡದ್ದು ಮಾತ್ರ ಹೆಣ್ಣುಮಕ್ಕಳು.

ಪಂಚಪಾಂಡವರನ್ನು ಪತಿಯಾಗಿ ಪಡೆದ ಆ ದ್ರೌಪತಿ ಕೈ ಮೇಲೆ ಒಂದಾದರೂ ಹಚ್ಚೆ ಹಾಕಿಸಿಕೊಳ್ಳದಿದ್ದರೂ ಗಂಡಂದಿರು ಅವಳಿಗೆ ಕೈ ಕೊಡಲಿಲ್ಲ – ಸ್ವರ್ಗದ ದಾರಿಗೂ ಕೈ ಹಿಡಿದೇ ನಡೆಸಿದರು. ಕಲಿಯುಗದ ಗಂಡನಿವ. ಮೂರು ಹೊತ್ತು ಕುಡಿದು ಇನ್ನೊಬ್ಬಳ ಮನೆ ಕದ ತಟ್ಟುವುದು ಬಿಡಲೆಂದೇ ಮೊಣಕೈವರೆಗೆ ಐದು ಬಾರಿ ಗಂಡನ ಹೆಸರು ಕೆತ್ತಿಸಿಕೊಂಡು ಬಂದಳು ಶಿವಬಾಯಕ್ಕ. ರಾತ್ರಿ ಎದ್ದ ಉರಿ ತಂಪಾಗಲೆಂದು ಗಂಡನ ಜಡ ಹೆಸರಿನ ಮೇಲೆ ಕೈಯಾಡಿಸಿದ್ದಳು. ಆ ಸ್ಪರ್ಶದಲ್ಲೂ ಕಾಣದ ಸುಖ ಕಂಡು ಇರುಳೆಲ್ಲಾ ಹೊರಳಾಡಿದ್ದಳು. ಬೆಳಗಿಗೆ ಈ ಉರಿ ಮಾರಿ ಸೂರ್ಯಪನ ದರ್ಶನ.

ADVERTISEMENT

ಕಾದು ಕುಳಿತವಳಿಗೆ ಸಿಕ್ಕಿದ್ದು ಹಸಿ ವೇದನೆ. ಐದು ಬಾರಿ ಅವನ ಹೆಸರಿನ ಹಚ್ಚೆ ಹಾಕಿಸಿಕೊಂಡರೆ ಎಲ್ಲಿದ್ದರೂ ಓಡಿ ಬರುತ್ತಾನೆ ಎಂದು ಹಚ್ಚೆ ಹಾಕಿಸಿಕೊಂಡಿದ್ದು ಮೂಢನಂಬಿಕೆಯಿಂದಲ್ಲ; ಗಂಡ ಮಗ್ಗಲು ಬರುವನೆಂಬ ಹಿಗ್ಗಿನ ಆಸೆಯಿಂದ. ಮರ್ಕಟದಂತೆ ಗಿಡ ಗಿಡ ಹಾರುವವನಿಗೆ ಹೃದಯವೆಲ್ಲಿರುತ್ತದೆ ಹೇಳಿ? ಗಂಡನ ದಾರಿ ಕಾಯುತ್ತಲೇ ಸಾಯುವ ಅಂಚಿನಲ್ಲೂ ಹನಿಗಣ್ಣಾಗಿ ತೀಡಿದ್ದು ಅದೇ ಹಚ್ಚೆಯನ್ನು. ಅವನು ಸಿಗದೇ ಹೋದರೂ ಅವಳೊಂದಿಗೆ ಕುಣಿಯೊಳಗೆ ಸಂಗತಕ್ಕೆ ಸಿಕ್ಕಿದ್ದು ಈ ಹಚ್ಚೆಯೇ ಎಂಬ ಸತ್ಯ ಈಗಲೂ ನನ್ನ ಕಣ್ಣಂಚಲಿ ನೀರಾಡಿಸುತ್ತದೆ.

ಅಮ್ಮನ ನಡುಬೆರಳಿನಲ್ಲಿ ಹಚ್ಚ ಹಸುರಿನ ಹಣಚಿಬೊಟ್ಟು. ಅವು ಬರೇ ಹಚ್ಚೆಗಳಲ್ಲ. ಉಪ್ಪಿನಕಾಯಿಗೆ ಹುಳು ಬಾರದಂತೆ ತಡೆವ ಅಂಟಿವೈರಸ್‌ಗಳೆಂದರೆ ನಂಬಲೇಬೇಕು. ಏಕೆಂದರೆ ಆಚೀ ಓಣಿ ಚಿಗವ್ವ ದೊಡ್ಡವ್ವ ದ್ಯಾಮವಮ್ಮ – ಇವರಿಗೆಲ್ಲ ಅಮ್ಮನೇ ಉಪ್ಪಿನಕಾಯಿ ಹಾಕಿ ಕೊಡಬೇಕು. ಅವಳು ಹಾಕಿದರೆ ಹುಳು ಬೀಳುವುದಿಲ್ಲವಂತೆ! ಅದೂ ಸತ್ಯ. ಆದರೆ ರುಚಿಗೆ ತಕ್ಕಂತೆ ಹುಳಿಗೆ ಹೆಚ್ಚು ಉಪ್ಪು ಖಾರಾ ಮೆಂತ್ಯ ಹಾಕಿದರೆ ಎಂತಹ ಹುಚ್ಚಿನೂ ಉಪ್ಪಿನಕಾಯಿ ಹಾಕತಾಳ. ಅಮ್ಮನ ಬಿಳಿ ಮೈಬಣ್ಣಕ್ಕೆ ಹಚ್ಚೆ ಹೆಚ್ಚು ಹಸಿರಾಗಿ ಒಪ್ಪಗೊಂಡಿತ್ತೆಂದು ಮುಗ್ಧ ಹೆಣ್ಣುಮಕ್ಕಳನ್ನು ಯಾರು ಒಪ್ಪಿಸಬೇಕು ಹೇಳಿ?

ನಾನಾಗ ಎಂಟನೇ ತರಗತಿಯಲ್ಲಿದ್ದೆ. ಅಲ್ಲಿಯವರೆಗೂ ನನಗೂ ಹಚ್ಚೆಗೂ ದೂರ ದೂರ. ನಮ್ಮಜ್ಜಿಯ ತಂಗಿ ಗಂಗಮ್ಮಜ್ಜಿ ‘ನಿನ್ನ ಮೊಮ್ಮಗಳಿಗೆ ಒಂದು ಹಣಚಿಬೊಟ್ಟಿ ಹಾಕಿಸಿಲ್ಲ, ಅದ ಹೆಂಗ ಗಂಡನ್ನ ಮಾಡಿಕೊಡತೀ..! ಖೊಡಿ ಹಣಚಿಬೊಟ್ಟ ಹಾಕಿಸು..!’ ಎಂದಾಗ ‘ಆಕೀ ಈಗಿನ ಕಾಲದ ಹುಡುಗಿ ಇಂಗ್ಲೀಷ ಸಾಲಿಗೆ ( ಹೈಸ್ಕೂಲ್) ಹೋಗತಾಳ; ಹಣಚಿ ಬೊಟ್ಟ ಹಾಕಿಸಿ ಮುಖ ಕೆಡಿಸೋದು ಬೈಡ..!’ ಎಂದು ನನ್ನ ಹಣೆಬರಹದ ದಾಖಲೆಗೆ ಫುಲ್–ಸ್ಟಾಪ್ ಕೊಡಿಸದೇ ಬಿಟ್ಟಿದ್ದು ನನ್ನಜ್ಜಿ. ನನಗವಳು ಆಗಿನ ಕಾಲದ ಆದರ್ಶ ಸ್ತ್ರೀವಾದಿ. ಅದೇ ಗಂಗಮ್ಮಜ್ಜಿ ಅವರ ಮನೆಗೆ ಹೋದಾಗ ‘ಸಿಕ್ಕಿ ಬಾ..’ ಎಂದು ಕೊಸರಿದರೂ ಬಿಡದೇ ಹಾಕಿಸಿದ ಹಚ್ಚೆ ವಾಲಿದ್ದಕ್ಕೆ, ಕನ್ನಡಿ ಮುಂದೆ ನಿಂತು ಬೊಟ್ಟು ಇಡುವಾಗ ವಾಲಿಕೊಂಡೇ ಕೂಡುವ ಬಿಂದಿ ಹಚ್ಚೆಯಂತೆ ಹಚ್ಚಗೇ ಅಣಕಿಸುತ್ತದೆ.

ಬಸ್ಸಿನಲ್ಲಿ ಕಿವಿಯಲ್ಲಿ ಇಯರ್ ಫೋನ್ ಹಿಡಿದು ಹಾಡು ಕೇಳುವ ಕಾಲೇಜ ತರುಣನ ಪಕ್ಕ ಹೋಗಿ ಕುಳಿತು ಮೆಲ್ಲಗೆ ಅವನ ಕಡೆ ಕಳ್ಳದೃಷ್ಟಿ ನೆಟ್ಟಾಗ, ಮನ ಸೆಳೆದದ್ದು ಅವನ ಶ್ವೇತ ರಿಸ್ಟ್ ಮೇಲಿನ ಟ್ಯಾಟು. ಒಳಗೆ ‘ಜಯಸ್ರೀ’. ಕೂತೂಹಲದಿಂದ ಕೇಳಿದಾಗ ಅದು ಈ ಭೂಮಿಗೆ ಕಣ್ಣು ಬಿಡುವಂತೆ ಮಾಡಿ ತಾನು ಕಣ್ಣು ಮುಚ್ಚಿದ ಅವನ ಹೆತ್ತವಳ ಹೆಸರು. ಕಣ್ಣೆದುರಿಗಿಲ್ಲದ ತಾಯಿಯ ಪ್ರೀತಿಯನ್ನು ಹಚ್ಚೆಯಾಗಿ ಕೆತ್ತಿಸಿಕೊಂಡು ನಿತ್ಯ ಅವಳ ಹೆಸರು ಜಪಿಸುವ ಮಗ ನನಗೆ ಆಧುನಿಕ ಶ್ರವಣನಂತೆ ಕಂಡ. ಯಾಕೋ ಬಿ. ಆರ್. ಲಕ್ಷ್ಮಣರಾವ್‌ ಅವರ ‘ಅಮ್ಮಾ..ನಿನ್ನ ಎದೆಯಾಳದಿಂದ ಗಾಳಕ್ಕೆ ಸಿಕ್ಕ ಮೀನು...’ ನೆನಪಾಗಿ ಕಿಟಕಿಗೆ ಮುಖ ಹೊರಳಿಸಿ ಕಣ್ಣೀರು ಒರಿಸಿಕೊಂಡೆ. ಇಂತಹ ಮಗನಿದ್ದ ತಾಯಿ ವೃದ್ಧಾಶ್ರಮವನ್ನು ಸೇರುತ್ತಿರಲಿಲ್ಲ. ಆ ಭಾಗ್ಯ ಅವಳಿಗಿಲ್ಲ ಅನಿಸಿತು.

ಒಂದೊಂದು ಹಚ್ಚೆಯ ಹಿಂದೆ ಒಂದೊಂದು ಕಥೆ. ಸ್ನೇಹಿತೆಯ ಜೊತೆ ಮಾತಿಗಿಳಿದಾಗ ಹೇಳಿದ್ದು: ‘ಸ್ನೇಹಿತೆಯ ಪುಟ್ಟ ಮಗಳು ಟ್ಯಾಟೂ ಹಾಕಿಸಿಕೊಳ್ಳುವೆನೆಂದರೆ ಅವಳ ಫ್ರೈಂಡ್ಸ್‌ ಆಶ್ಚರ್ಯದಿಂದ ಗರ್ಲ್ಸ್‌ ಹಾಕ್ಕೋಬೋದೇನೇ?’ ಎಂದು ಮುಖದ ಭಾವವೇ ಬದಲಾಯಿಸಿದ್ದಕ್ಕೆ ಅವಳಿಗೆ ಕಸಿವಿಸಿ. ಅದಕ್ಕೆ ‘ತಾಯಿ ಹಾಕ್ಕೋಬೋದು ಮಗಾ..! ನಾನೂ ಬರ‍್ತೀನಿ; ಇಬ್ಬರೂ ಜೊತೆಯಾಗಿ ಟ್ಯಾಟೂ ತೀಡಿಕೊಳ್ಳೋಣ’ ಎಂಬ ಭರವಸೆ ಮಾತು ಆಡಿದಾಗ ಮಗಳಲ್ಲಿ ಮುದ್ದಾದ ನಗು. ಅದನ್ನು ಕಂಡ ತಾಯಿಯ ಕಣ್ಣಲ್ಲಿ ಹೊಳಪಿನ ಹಚ್ಚೆ. ಅಂದಾಗಲೀ, ಇಂದಾಗಲೀ –  ಮನಸ್ಸಿನ ಅಂದಕ್ಕೆ ಧಕ್ಕೆ ಬಾರದಂತೆ ಹಾರುವ ಬಲೂನಾದರೆ, ಅದರ ಹಾರಾಟದ ಸಂತೋಷಕ್ಕೆ ಸೂಜಿ ಚುಚ್ಚುವುದು ಬೇಕಾಗಿಲ್ಲ, ಅಲ್ಲವೆ?
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.