ADVERTISEMENT

ಲೋಕಸಭಾ ಚುನಾವಣೆ: ಮಂಡ್ಯದಲ್ಲಿ ಸ್ಪರ್ಧಿಸುವಂತೆ ಎಚ್‌ಡಿಕೆಗೆ ಆಗ್ರಹ

​ಪ್ರಜಾವಾಣಿ ವಾರ್ತೆ
Published 24 ಮಾರ್ಚ್ 2024, 15:23 IST
Last Updated 24 ಮಾರ್ಚ್ 2024, 15:23 IST
ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ಸ್ಪರ್ಧಿಸುವಂತೆ ಆಗ್ರಹಿಸಿ ಬೆಂಗಳೂರಿನ ತಮ್ಮ ಮನೆಯ ಎದುರು ಭಾನುವಾರ ಸೇರಿದ್ದ ಮಂಡ್ಯದ ಜೆಡಿಎಸ್‌ ಕಾರ್ಯಕರ್ತರನ್ನುದ್ದೇಶಿಸಿ ಜೆಡಿಎಸ್‌ ಶಾಸಕಾಂಗ ಪಕ್ಷದ ನಾಯಕ ಎಚ್‌.ಡಿ. ಕುಮಾರಸ್ವಾಮಿ ಮಾತನಾಡಿದರು
ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ಸ್ಪರ್ಧಿಸುವಂತೆ ಆಗ್ರಹಿಸಿ ಬೆಂಗಳೂರಿನ ತಮ್ಮ ಮನೆಯ ಎದುರು ಭಾನುವಾರ ಸೇರಿದ್ದ ಮಂಡ್ಯದ ಜೆಡಿಎಸ್‌ ಕಾರ್ಯಕರ್ತರನ್ನುದ್ದೇಶಿಸಿ ಜೆಡಿಎಸ್‌ ಶಾಸಕಾಂಗ ಪಕ್ಷದ ನಾಯಕ ಎಚ್‌.ಡಿ. ಕುಮಾರಸ್ವಾಮಿ ಮಾತನಾಡಿದರು   

ಬೆಂಗಳೂರು: ಮಂಡ್ಯ ಲೋಕಸಭಾ ಕ್ಷೇತ್ರದ ಅಭ್ಯರ್ಥಿಯಾಗಿ ಕಣಕ್ಕಿಳಿಯುವಂತೆ ಜೆಡಿಎಸ್‌ನ ಸ್ಥಳೀಯ ಕಾರ್ಯಕರ್ತರು ಜೆಡಿಎಸ್‌ ಶಾಸಕಾಂಗ ಪಕ್ಷದ ನಾಯಕ ಎಚ್‌.ಡಿ. ಕುಮಾರಸ್ವಾಮಿ ಅವರನ್ನು ಭಾನುವಾರ ಒತ್ತಾಯಿಸಿದರು. ಜೆ.ಪಿ. ನಗರದಲ್ಲಿರುವ ಅವರ ಮನೆ ಎದುರಿನ ರಸ್ತೆಯಲ್ಲೇ ಕುಳಿತು ಘೋಷಣೆಗಳನ್ನೂ ಕೂಗಿದರು.

ಹೃದಯ ಶಸ್ತ್ರಚಿಕಿತ್ಸೆಗಾಗಿ ಚೆನ್ನೈಗೆ ತೆರಳಿದ್ದ ಕುಮಾರಸ್ವಾಮಿ, ಭಾನುವಾರ ಬೆಂಗಳೂರಿಗೆ ವಾಪಸಾದರು. ಈ ವಿಷಯ ತಿಳಿದಿದ್ದ ಮಂಡ್ಯದ ಜೆಡಿಎಸ್‌ ಕಾರ್ಯಕರ್ತರು ನೂರಾರು ಸಂಖ್ಯೆಯಲ್ಲಿ ರಾಜಧಾನಿಯತ್ತ ದೌಡಾಯಿಸಿದ್ದರು.

ಜೆಡಿಎಸ್‌ ರಾಜ್ಯ ಯುವ ಘಟಕದ ಅಧ್ಯಕ್ಷ ನಿಖಿಲ್‌ ಕುಮಾರಸ್ವಾಮಿ ಕಾರ್ಯಕರ್ತರನ್ನು ಸಮಾಧಾನಪಡಿಸಲು ಪ್ರಯತ್ನಿಸಿದರು. ಸೋಮವಾರ ಸಂಜೆಯೊಳಗೆ ಮಂಡ್ಯ ಕ್ಷೇತ್ರದ ಅಭ್ಯರ್ಥಿ ಹೆಸರನ್ನು ಪ್ರಕಟಿಸುವ ಭರವಸೆ ನೀಡಿದರು. ಆದರೆ, ಕಾರ್ಯಕರ್ತರು ಸಮಾಧಾನಗೊಳ್ಳಲಿಲ್ಲ.

ADVERTISEMENT

ಮನೆಯ ಮಹಡಿಯಿಂದಲೇ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಕುಮಾರಸ್ವಾಮಿ, ‘ಮಂಡ್ಯದಲ್ಲಿ ನನಗೆ ವಿಶೇಷ ಪ್ರೀತಿ ಸಿಕ್ಕಿದೆ. ಪಕ್ಷವು ಬೆಳೆಸಿದ ನಾಯಕರು ನಮ್ಮನ್ನು ಬೀದಿಯಲ್ಲಿ ನಿಲ್ಲಿಸಿ ಹೋಗಿದ್ದಾರೆ. ನಿಮಗೆ ನಿರಾಸೆ ಮಾಡುವುದಿಲ್ಲ ಎಂಬ ಮಾತಿಗೆ ಬದ್ಧನಾಗಿದ್ದೇನೆ’ ಎಂದರು.

‘ನಾನು ಹುಟ್ಟಿದ್ದು ಹಾಸನ ಜಿಲ್ಲೆಯಲ್ಲಿ. ನನಗೆ ರಾಜಕೀಯ ಜನ್ಮ ಕೊಟ್ಟಿರುವುದು ರಾಮನಗರ ಜಿಲ್ಲೆ. ಜೀವಕ್ಕೆ ಜೀವವಾಗಿ ನನ್ನನ್ನು ಪೊರೆದು ಸಲಹುತ್ತಿರುವುದು ಮಂಡ್ಯ ಜಿಲ್ಲೆ. ಚನ್ನಪಟ್ಟಣ ಕ್ಷೇತ್ರದ ಮುಖಂಡರನ್ನು ಸೋಮವಾರ ಕರೆಸಿ ಮಾತನಾಡುತ್ತೇನೆ. ನಂತರದಲ್ಲಿ ತೀರ್ಮಾನ ಪ್ರಕಟಿಸುತ್ತೇನೆ’ ಎಂದು ಭರವಸೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.