ADVERTISEMENT

ಬಿಜೆಪಿ ಜಾಹೀರಾತು ವಿರುದ್ಧ ಚುನಾವಣಾ ಆಯೋಗಕ್ಕೆ ದೂರು: ಸಿದ್ದರಾಮಯ್ಯ ಎಚ್ಚರಿಕೆ

​ಪ್ರಜಾವಾಣಿ ವಾರ್ತೆ
Published 27 ಏಪ್ರಿಲ್ 2024, 8:17 IST
Last Updated 27 ಏಪ್ರಿಲ್ 2024, 8:17 IST
<div class="paragraphs"><p>ಸುದ್ದಿಗೋಷ್ಠಿಯಲ್ಲಿ&nbsp;ಮುಖ್ಯಮಂತ್ರಿ ಸಿದ್ದರಾಮಯ್ಯ ಮಾತನಾಡಿದರು</p></div>

ಸುದ್ದಿಗೋಷ್ಠಿಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮಾತನಾಡಿದರು

   

ಕಲಬುರಗಿ: ‘ಹಿಂದುಳಿದ ವರ್ಗಗಳ ಮೀಸಲಾತಿ ಪಟ್ಟಿಗೆ ಮುಸ್ಲಿಮರ ಸೇರ್ಪಡೆಯು ಮಂಡಲ್ ವರದಿಯನ್ನು ಆಧರಿಸಿ 30 ವರ್ಷಗಳ ಹಿಂದೆಯೇ ಆಗಿದೆ. ಇದನ್ನು ಸುಪ್ರೀಂಕೋರ್ಟ್‌ನ ಸಂವಿಧಾನ ಪೀಠವೂ ಒಪ್ಪಿದೆ. ಈ ಸತ್ಯ ಮರೆಮಾಚಿ ನಮ್ಮ ಸರ್ಕಾರದ ವಿರುದ್ಧ ಪತ್ರಿಕೆಗಳಲ್ಲಿ ಸುಳ್ಳು ಜಾಹೀರಾತು ನೀಡಿರುವ ಬಿಜೆಪಿ ವಿರುದ್ಧ ಚುನಾವಣಾ ಆಯೋಗಕ್ಕೆ ದೂರು ನೀಡಲಾಗುವುದು’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಎಚ್ಚರಿಸಿದರು.

ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಬಿಜೆಪಿಯು ಯಾವತ್ತಿಗೂ ಮೀಸಲಾತಿಯ ವಿರೋಧಿಯಾಗಿತ್ತು. ಮಂಡಲ್ ಆಯೋಗವು ಹಿಂದುಳಿದವರು, ದಲಿತರಿಗೆ ಮೀಸಲಾತಿಯ ಶಿಫಾರಸು ಮಾಡಿದಾಗ ಬಿಜೆಪಿ ಮುಖಂಡ ಎಲ್.ಕೆ. ಅಡ್ವಾಣಿ ರಥಯಾತ್ರೆ ಮಾಡಿದರು. ಶಾಲಾ, ಕಾಲೇಜು ಹುಡುಗರನ್ನು ಈ ವರದಿಯ ವಿರುದ್ಧ ಎತ್ತಿಕಟ್ಟಿದರು. ಯುವಕರನ್ನು ಆತ್ಮಹತ್ಯೆ ಮಾಡಿಕೊಳ್ಳಲು ಪ್ರಚೋದಿಸಿದರು. ಆದರೆ, ರಾಜೀವ್ ಗಾಂಧಿ ಸರ್ಕಾರವು ಶೇ 50 ಮೀರದಂತೆ ಹಿಂದುಳಿದವರು, ದಲಿತರು, ಅಲ್ಪಸಂಖ್ಯಾತರಿಗೆ ಮೀಸಲಾತಿಯನ್ನು ನೀಡುವ ಆದೇಶವನ್ನು ಹೊರಡಿಸಿತು. ನಂತರ ಅಧಿಕಾರಕ್ಕೆ ಬಂದ ಪಿ.ವಿ. ನರಸಿಂಹರಾಯರು ಆದೇಶವನ್ನು ಜಾರಿಗೊಳಿಸಿದರು‘ ಎಂದರು.

ADVERTISEMENT

‘ರಾಜ್ಯದಲ್ಲಿ ಎಚ್‌.ಡಿ.ದೇವೇಗೌಡರು ಮುಖ್ಯಮಂತ್ರಿಯಾಗಿದ್ದಾಗ ಮೀಸಲಾತಿ ಜಾರಿಗೊಳಿಸುವ ನಿರ್ಣಯ ತೆಗೆದುಕೊಳ್ಳಲಾಯಿತು. ನಂತರ ಮುಖ್ಯಮಂತ್ರಿಯಾದ ವೀರಪ್ಪ ಮೊಯಿಲಿ ಅವರು ಇದನ್ನು ಜಾರಿಗೊಳಿಸಿದರು. ಪಂಚಾಯಿತಿ ಚುನಾವಣೆಗಳಲ್ಲಿ ಮಹಿಳೆಯರು, ಹಿಂದುಳಿದವರಿಗೆ ಮೀಸಲಾತಿ ನೀಡಿದ್ದನ್ನು ಪ್ರಶ್ನಿಸಿ ಅಂದು ಬಿಜೆಪಿ ಉಪಾಧ್ಯಕ್ಷರು ಹಾಗೂ ರಾಜ್ಯಸಭೆ ಸದಸ್ಯರಾಗಿದ್ದ ರಾಮಾ ಜೋಯಿಸ್ ಅವರು ಸುಪ್ರೀಂಕೋರ್ಟ್‌ನಲ್ಲಿ ದಾವೆ ಹೂಡಿದರು. ಅದೃಷ್ಟವಶಾತ್ ಸುಪ್ರೀಂಕೋರ್ಟ್ ದಾವೆಯನ್ನು ವಜಾ ಮಾಡಿತು. ಹೀಗಾಗಿ, ಬಿಜೆಪಿಯು ಯಾವತ್ತಿಗೂ ಹಿಂದುಳಿದವರು, ದಲಿತರು, ಅಲ್ಪಸಂಖ್ಯಾತರಿಗೆ ಸವಲತ್ತು ಸಿಗುವುದನ್ನು ಒಪ್ಪುವುದಿಲ್ಲ’ ಎಂದು ಟೀಕಿಸಿದರು.

‘ಹಿಂದುಳಿದವರಿಗೆ ಸಿಗಬೇಕಿರುವ ಮೀಸಲಾತಿಯನ್ನು ಕಿತ್ತು ಮುಸ್ಲಿಮರಿಗೆ ನಮ್ಮ ಸರ್ಕಾರವೇ ನೀಡಿದೆ ಎಂಬಂತೆ ಇಂದಿನ ದಿನಪತ್ರಿಕೆಗಳ ಜಾಹೀರಾತಿನಲ್ಲಿ ಬಿಜೆಪಿ ಆರೋಪಿಸಿದೆ. ಇದು ಅಪ್ಪಟ ಸುಳ್ಳು. ಬಸವರಾಜ ಬೊಮ್ಮಾಯಿ ಅವರು ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಲಿಂಗಾಯತರು, ಒಕ್ಕಲಿಗರು ತಮಗೆ ಹೆಚ್ಚಿನ ಮೀಸಲಾತಿ ನೀಡುವಂತೆ ಒತ್ತಾಯಿಸಿ ಪ್ರತಿಭಟನೆ ನಡೆಸಿದಾಗ ಬೊಮ್ಮಾಯಿ ಅವರು ಒಂದು ಫಾರ್ಮುಲಾ ಮಾಡಿ ಮುಸ್ಲಿಮರ ಮೀಸಲಾತಿಯನ್ನು ಕಿತ್ತುಕೊಂಡು ಇವರಿಗೆ ಹಂಚಿದರು. ಇದನ್ನು ಪ್ರಶ್ನಿಸಿ ಕೆಲವರು ನ್ಯಾಯಾಲಯದ ಮೆಟ್ಟಿಲೇರಿದರು. ಈ ಸಂದರ್ಭದಲ್ಲಿ ನ್ಯಾಯಾಲಯಕ್ಕೆ ಅಫಿಡವಿಟ್ ನೀಡಿದ ಬೊಮ್ಮಾಯಿ ಸರ್ಕಾರ ಮುಸ್ಲಿಮರಿಗೆ ಮೀಸಲಾತಿ ಮುಂದುವರೆಸುವುದಾಗಿ ಹೇಳಿತ್ತು. ಈಗ ನಮ್ಮ ಸರ್ಕಾರ ಟೀಕಿಸುವುದು ಎಷ್ಟು ಸರಿ’ ಎಂದು ಸಿದ್ದರಾಮಯ್ಯ ಹರಿಹಾಯ್ದರು.

‘ಹಾದಿ ತಪ್ಪಿಸುವ ಜಾಹೀರಾತು ನೀಡಿದ ಬಿಜೆಪಿ ವಿರುದ್ಧ ಚುನಾವಣಾ ಆಯೋಗಕ್ಕೆ ದೂರು ನೀಡುವಂತೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರಿಗೆ ಸೂಚಿಸಿದ್ದೇನೆ’ ಎಂದರು.

ಸಚಿವರಾದ ಪ್ರಿಯಾಂಕ್ ಖರ್ಗೆ, ಡಾ. ಶರಣಪ್ರಕಾಶ್ ಪಾಟೀಲ, ಮುಖ್ಯಮಂತ್ರಿಗಳ ಸಲಹೆಗಾರ ಬಿ.ಆರ್. ಪಾಟೀಲ, ಕೆಕೆಆರ್‌ಡಿಬಿ ಅಧ್ಯಕ್ಷ ಡಾ. ಅಜಯ್ ಸಿಂಗ್, ಶಾಸಕ ಅಲ್ಲಮಪ್ರಭು ಪಾಟೀಲ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಜಗದೇವ ಗುತ್ತೇದಾರ ಭಾಗವಹಿಸಿದ್ದರು.

'ಕೇಳಿದ್ದು 18 ಸಾವಿರ ಕೋಟಿ, ಕೊಟ್ಟಿದ್ದು ₹ 3,400 ಕೋಟಿ’

‘ಕಳೆದ ಡಿಸೆಂಬರ್ 19ರಂದು ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿ ಬೆಳೆ ನಷ್ಟದ ಪರಿಹಾರವಾಗಿ ₹ 18,172 ಕೋಟಿ ಬರ ಪರಿಹಾರ ನೀಡುವಂತೆ ಮನವಿ ಮಾಡಿದ್ದೆ. ಆದರೆ, ಕೇವಲ ₹ 3454 ಕೋಟಿ ಬಿಡುಗಡೆ ಮಾಡಿದ್ದಾರೆ. ಇದು ಯಾವುದಕ್ಕೂ ಸಾಕಾಗದು’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಬೇಸರ ವ್ಯಕ್ತಪಡಿಸಿದರು.

‘ಡಿ 20ರಂದು ಕೇಂದ್ರದ ಬರ ಪರಿಹಾರ ಸಮಿತಿ ಅಧ್ಯಕ್ಷರಾದ ಗೃಹಸಚಿವ ಅಮಿತ್ ಶಾ ಅವರನ್ನು ಭೇಟಿ ಮಾಡಿ ಮನವಿ ಮಾಡಿದ್ದೆವು. ಡಿ 23ರಂದು ಉನ್ನತಾಧಿಕಾರ ಸಮಿತಿಯ ಸಭೆಯಲ್ಲಿ ಈ ಬಗ್ಗೆ ಚರ್ಚಿಸಿ ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದರು. ಅದಾದ ಬಳಿಕ ಅಮಿತ್ ಶಾ ಮತ್ತು ಹಣಕಾಸು ಮಂತ್ರಿ ನಿರ್ಮಲಾ ಸೀತಾರಾಮನ್ ಸುಳ್ಳು ಹೇಳಲು ಶುರು ಮಾಡಿದರು. ಪರಿಹಾರ ಬಾರದಿರುವುದನ್ನು ಪ್ರಶ್ನಿಸಿ ಸುಪ್ರೀಂಕೋರ್ಟ್ ಮೆಟ್ಟಿಲೇರಿದೆವು. ಕೇಂದ್ರ, ರಾಜ್ಯಗಳು ಜಗಳಾಡುವುದು ಸರಿ ಕಾಣದು. ಬೇಗ ಇತ್ಯರ್ಥ ಮಾಡಿಕೊಳ್ಳಿ ಎಂದು ಸುಪ್ರೀಂಕೋರ್ಟ್ ಹೇಳಿತ್ತು. ಈಗ ರಾಜ್ಯಕ್ಕೆ ₹3,454 ಕೋಟಿ ಪರಿಹಾರ ನೀಡಿದ್ದಾರೆ. ನಾವು ಕೇಳಿದ ಪರಿಹಾರ ಮೊತ್ತದ ಶೇ 25ರಷ್ಟು ಪರಿಹಾರವೂ ಸಿಕ್ಕಿಲ್ಲ. ಈ ಬಗ್ಗೆ ಅಧಿಕಾರಿಗಳೊಂದಿಗೆ ಚರ್ಚಿಸಿ ನಿರ್ಧಾರ ಕೈಗೊಳ್ಳುತ್ತೇನೆ’ ಎಂದರು.

ರಾಜ್ಯದಲ್ಲಿ ಮೊದಲ ಹಂತದಲ್ಲಿ 14 ಕ್ಷೇತ್ರಗಳ ಪೈಕಿ 10 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ಗೆಲ್ಲಲಿದ್ದಾರೆ. ಈ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವರು, ಅಭ್ಯರ್ಥಿಗಳಿಗೆ ಕರೆ ಮಾಡಿ ಮಾಹಿತಿ ಪಡೆದಿದ್ದೇನೆ. ರಾಜ್ಯದಲ್ಲಿ ನಮ್ಮ ಪರವಾದ ಅಲೆ .ಇದೆ.
–ಸಿದ್ದರಾಮಯ್ಯ, ಮುಖ್ಯಮಂತ್ರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.