ADVERTISEMENT

ಕ್ಷೇತ್ರ ಸಮೀಕ್ಷೆ: ರಾಯಚೂರಿಗೆ ಯಾರಾಗಲಿದ್ದಾರೆ ‘ನಾಯಕ’

ರಾಯಚೂರು ಲೋಕಸಭಾ (ಪರಿಶಿಷ್ಟ ಪಂಗಡದ ಮೀಸಲು) ಕ್ಷೇತ್ರ

ಚಂದ್ರಕಾಂತ ಮಸಾನಿ
Published 26 ಏಪ್ರಿಲ್ 2024, 22:52 IST
Last Updated 26 ಏಪ್ರಿಲ್ 2024, 22:52 IST
ರಾಯಚೂರು ಲೋಕಸಭಾ ಕ್ಷೇತ್ರದ ನಕ್ಷೆ
ರಾಯಚೂರು ಲೋಕಸಭಾ ಕ್ಷೇತ್ರದ ನಕ್ಷೆ   

ರಾಯಚೂರು: ಯಾದಗಿರಿ ಜಿಲ್ಲೆಯ ಮೂರು ವಿಧಾನಸಭಾ ಕ್ಷೇತ್ರಗಳನ್ನು ತನ್ನ ಒಡಲಿಗೆ ಸೇರಿಸಿಕೊಂಡಿರುವ ರಾಯಚೂರು ಲೋಕಸಭಾ (ಪರಿಶಿಷ್ಟ ಪಂಗಡದ ಮೀಸಲು) ಕ್ಷೇತ್ರದಲ್ಲಿ ಎರಡನೇ ಅವಧಿಗೂ ಜಯ ಸಾಧಿಸುವ ತವಕದಲ್ಲಿ ಬಿಜೆಪಿ ಇದ್ದರೆ, ಕ್ಷೇತ್ರವನ್ನು ‘ಕೈ’ವಶ ಮಾಡಿಕೊಳ್ಳಲು ಕಾಂಗ್ರೆಸ್‌ ಸೆಣಸುತ್ತಿದೆ.

ಬಿಜೆಪಿಯ ಹಾಲಿ ಸಂಸದ, ರಾಜ ಮನೆತನದ ರಾಜಾ ಅಮರೇಶ್ವರ ನಾಯಕ ಮತ್ತೊಮ್ಮೆ ವಿಜಯ ಪತಾಕೆ ಹಾರಿಸುವ ತವಕದಲ್ಲಿ ಇದ್ದಾರೆ. ಕಾಂಗ್ರೆಸ್‌ ಅಭ್ಯರ್ಥಿಯನ್ನು ‘ವಲಸಿಗ’ ಎಂದು ಬಿಂಬಿಸಲು ಯತ್ನಿಸುತ್ತಿದ್ದಾರೆ. ಕಾಂಗ್ರೆಸ್‌ನಿಂದ ಕಣಕ್ಕೆ ಇಳಿದಿರುವ ನಿವೃತ್ತ ಐಎಎಸ್‌ ಅಧಿಕಾರಿ ಜಿ.ಕುಮಾರ ನಾಯಕ ಕಾರ್ಯಕರ್ತರ ಬೆಂಬಲದಿಂದಾಗಿ ಗೆಲುವು ಸಾಧಿಸುವ ಹುಮ್ಮಸ್ಸಿನಲ್ಲಿದ್ದಾರೆ.

ಅಧಿಕಾರಾವಧಿಯಲ್ಲಿ ರಾಜಾ ಅಮರೇಶ್ವರ ನಾಯಕ ಕಾರ್ಯಕರ್ತರೊಂದಿಗೆ ಸರಿಯಾಗಿ ನಡೆದುಕೊಂಡಿಲ್ಲ ಎನ್ನುವ ಆರೋಪ ಇದೆ; ಟಿಕೆಟ್‌ ಸಿಗದೆ ಬೇಸರಗೊಂಡ ಮುಖಂಡರ ಮುನಿಸು ಚುನಾವಣೆಯಲ್ಲಿ ‘ಒಳಏಟು’ ಕೊಟ್ಟರೆ ಕಷ್ಟ ಎನ್ನುವ ಆತಂಕ ಬಿಜೆಪಿ ‘ನಾಯಕ’ರನ್ನು ಕಾಡುತ್ತಿದೆ. ಬಿಜೆಪಿ ರಾಜ್ಯ ಉಸ್ತುವಾರಿ ರಾಧಾ ಮೋಹನದಾಸ ಅಗರವಾಲ್ ಜಿಲ್ಲೆಗೆ ಬಂದು ಮುಖಂಡರ ಸಭೆ ಕರೆದು ತೇಪೆ ಹಚ್ಚಿ ಹೋಗಿದ್ದಾರೆ.

ADVERTISEMENT

2008ರ ಕ್ಷೇತ್ರ ಪುನರ್ವಿಂಗಡಣೆ ಬಳಿಕ ಕ್ಷೇತ್ರದ ಭೌಗೋಳಿಕ, ರಾಜಕೀಯ ಮತ್ತು ಸಾಮಾಜಿಕ ನಕ್ಷೆ ಬದಲಾಗಿದೆ. ರಾಯಚೂರು ಲೋಕಸಭೆ ಕ್ಷೇತ್ರ ವ್ಯಾಪ್ತಿಯ ಎಂಟು ವಿಧಾನಸಭಾ ಕ್ಷೇತ್ರಗಳಲ್ಲಿ ನಾಲ್ಕು ಕ್ಷೇತ್ರ ಪರಿಶಿಷ್ಟ ಪಂಗಡ, ಒಂದು ಪರಿಶಿಷ್ಟ ಜಾತಿ, ಉಳಿದ ಮೂರು ಸಾಮಾನ್ಯ ಕ್ಷೇತ್ರಗಳಾಗಿವೆ.

ಈ ಕ್ಷೇತ್ರದಲ್ಲಿ ಈವರೆಗೆ 13 ಬಾರಿ ಕಾಂಗ್ರೆಸ್‌ ಗೆದ್ದಿದೆ. ಎರಡು ಬಾರಿ ಬಿಜೆಪಿ, ಒಂದು ಬಾರಿ ಜನತಾ ದಳ ಗೆಲುವು ಸಾಧಿಸಿವೆ. 1967ರಲ್ಲಿ ರಾಜಾ ವೆಂಕಟಪ್ಪ ನಾಯಕ ಪಕ್ಷೇತರ ಅಭ್ಯರ್ಥಿಯಾಗಿ ಹಾಗೂ 1996ರಲ್ಲಿ ಜನತಾ ದಳದಿಂದ ರಾಜಾ ರಂಗಪ್ಪ ನಾಯಕ ಒಂದೊಂದು ಬಾರಿ ಗೆಲುವು ಸಾಧಿಸಿದ್ದಾರೆ. ಈ ಬಾರಿ ಕಾಂಗ್ರೆಸ್‌ ಅಭ್ಯರ್ಥಿಯನ್ನು ಗೆಲ್ಲಿಸುವ ಹೊಣೆಯನ್ನು ಸಣ್ಣ ನೀರಾವರಿ ಸಚಿವ ಎನ್‌.ಎಸ್‌.ಬೋಸರಾಜು ವಹಿಸಿಕೊಂಡು ಕ್ಷೇತ್ರದಲ್ಲಿ ಪ್ರಚಾರ ಕಾರ್ಯದಲ್ಲಿ ತೊಡಗಿದ್ದಾರೆ.

ಬಿಎಸ್‌ಪಿಯ ಎಸ್.ನರಸಣ್ಣ ಗೌಡ ನಾಯಕ, ಕರ್ನಾಟಕ ರಾಷ್ಟ್ರ ಸಮಿತಿಯ ಬಸವಪ್ರಭು ಮೇದಾ, ಸೋಷಿಯಲ್ ಯುನಿಟಿ ಸೆಂಟರ್ ಆಫ್ ಇಂಡಿಯಾ ಪಕ್ಷದ ರಾಮಲಿಂಗಪ್ಪ, ಭಾರತೀಯ ಜನ ಸಾಮ್ರಾಟ ಪಕ್ಷದ ಮೇದಾರ ಶಾಮರಾವ್, ಪಕ್ಷೇತರ ಅಭ್ಯರ್ಥಿಗಳಾಗಿ ಅಮರೇಶ ಹಾಗೂ ರೈತ ಮಹಿಳೆ ಯಲ್ಲಮ್ಮ ದಳಪತಿ ಸೇರಿ ಒಟ್ಟು ಎಂಟು ಅಭ್ಯರ್ಥಿಗಳು ಚುನಾವಣಾ ಕಣದಲ್ಲಿ ಉಳಿದಿದ್ದಾರೆ.

ಮೋದಿ ಅಲೆ, ಜೆಡಿಎಸ್‌–ಬಿಜೆಪಿ ಮೈತ್ರಿ ಬಲ ಹಾಗೂ ರಾಜವಂಶಸ್ಥರ ಬಗ್ಗೆ ಕ್ಷೇತ್ರದ ಜನತೆ ಇಟ್ಟುಕೊಂಡಿರುವ ಗೌರವವನ್ನು ಬಿಜೆಪಿ ಅತಿಯಾಗಿ ನಂಬಿದೆ. ಕಾಂಗ್ರೆಸ್‌ ಮಾತ್ರ ‘ಗ್ಯಾರಂಟಿ’ ಯೋಜನೆಗಳನ್ನೇ ನೆಚ್ಚಿಕೊಂಡಿದೆ. ಜಿಲ್ಲೆಯ ಜನರಿಗೆ ಪರಿಚಿತರೇ ಇರುವ ನಿವೃತ್ತ ಐಎಎಸ್‌ ಅಧಿಕಾರಿಯನ್ನೇ ಕಣಕ್ಕಿಳಿಸಿರುವ ಕಾರಣ ಗೆಲುವು ಕಷ್ಟವಾಗಲಾರದು ಎನ್ನುವ ವಿಶ್ವಾಸದಲ್ಲಿ ಕಾಂಗ್ರೆಸ್‌ ಇದೆ.

ವಲಸಿಗರಿಗೆ ಮತ ನೀಡಿದರೆ ಜಿಲ್ಲೆಯ ಅಭಿವೃದ್ಧಿ ಕುಂಠಿತವಾಗುತ್ತದೆ. ಐದು ವರ್ಷಗಳಲ್ಲಿ ಹಲವು ಅಭಿವೃದ್ಧಿ ಕಾರ್ಯಗಳನ್ನು ಮಾಡಿರುವ ತೃಪ್ತಿ ನನಗಿದೆ.
–ರಾಜಾ ಅಮರೇಶ್ವರ ನಾಯಕ, ಬಿಜೆಪಿ ಅಭ್ಯರ್ಥಿ
ಕ್ಷೇತ್ರದಲ್ಲಿ ಮೋದಿ ಅಲೆ ಇಲ್ಲ. ಐಎಎಸ್‌ ಅಧಿಕಾರಿಯಾಗಿ ಕಾರ್ಯನಿರ್ವಹಿಸಿರುವ ನನಗೆ ಜಿಲ್ಲೆಯ ಅಭಿವೃದ್ಧಿಗೆ ಕೇಂದ್ರದಿಂದ ಗರಿಷ್ಠ ಅನುದಾನ ತರುವುದು ಹೇಗೆ ಎನ್ನುವುದು ಗೊತ್ತಿದೆ.
–ಜಿ.ಕುಮಾರ ನಾಯಕ, ಕಾಂಗ್ರೆಸ್ ಅಭ್ಯರ್ಥಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.