ADVERTISEMENT

ಒಳನೋಟ | ಮಲೆನಾಡ ಬೆಚ್ಚಿಬೀಳಿಸಿದೆ ಕೆಎಫ್‌ಡಿ

ಕಳಂಕ ಹೊತ್ತ ಮಂಗನೇ ಇಲ್ಲಿ ಸಂತ್ರಸ್ತ ! * ಹೊಸ ಲಸಿಕೆ ಅಭಿವೃದ್ಧಿಯಾಗಿಲ್ಲ

ವೆಂಕಟೇಶ ಜಿ.ಎಚ್.
Published 9 ಮಾರ್ಚ್ 2024, 22:15 IST
Last Updated 9 ಮಾರ್ಚ್ 2024, 22:15 IST
ಸಾಗರ–ಸಿದ್ದಾಪುರ ನಡುವಿನ ಅರಣ್ಯ ಪ್ರದೇಶ
ಸಾಗರ–ಸಿದ್ದಾಪುರ ನಡುವಿನ ಅರಣ್ಯ ಪ್ರದೇಶ   

ಶಿವಮೊಗ್ಗ: ಕಾಡಿನ ಏರು ಹಾದಿಯಲ್ಲಿ ಏದುಸಿರು ಬಿಡುತ್ತಿದ್ದ ಕಾರಿಗೆ ಎದುರಿನ ಜನವಸತಿ ಕಡೆಯಿಂದ ಬರುತ್ತಿದ್ದವರಿಬ್ಬರು ಕೈ ಅಡ್ಡಹಾಕಿದರು. ಎಲ್ಲಿಂದ ಬಂದಿದ್ದೀರಿ, ಮುಂದೆ ಎಲ್ಲಿಗೆ? ಎಂಬ ಪ್ರಶ್ನೆಗಳು ಅವರ ಮುಖಭಾವದಲ್ಲಿತ್ತು. ಪರಿಚಯ ಹೇಳಿಕೊಳ್ಳುತ್ತಿದ್ದಂತೆಯೇ ಅಸಹನೆ, ಆತಂಕ ಅವರ ಮುಖದಲ್ಲಿ ಒಡಮೂಡಿತು.

‘ನೀವು ಬಂದು ನಮ್ಮೂರು, ನಮ್ಮವರ ಹೆಸರು ಪೇಪರ್‌ನಲ್ಲಿ ಬರೀತಿರಿ. ಮಂಗನ ಕಾಯಿಲೆ ಬಂದಿದೆ ಎಂದರೆ, ಯಾರೂ ನಮ್ಮನ್ನು ತೋಟದ ಕೆಲಸಕ್ಕೆ ಕರೆಯೊಲ್ಲ. ನಮ್ಮೂರಿಗೆ ಯಾರೂ ಬರಲ್ಲ. ಹೆಣ್ಣು ಕೊಟ್ಟು, ತಗೊಳಲ್ಲ. ತೋಟಕ್ಕೆ ದರಗು (ಸೊಪ್ಪು) ತರಲು ಫಾರೆಸ್ಟ್‌ನವರು ಕಾಡಿಗೆ ಬಿಡುತ್ತಿಲ್ಲ. ಪೇಪರ್‌ನಲ್ಲಿ ನಮ್ಮಳ್ಳಿ ಹೆಸರು ಹಾಕಿ, ಹಾಳು ಮಾಡೋದು ಬ್ಯಾಡ. ನೀವು ಇಲ್ಲಿಂದ ಹೊರಡಿ’ ಎಂದು ಕಾರಿಗೆ ಅಡ್ಡನಿಂತರು.

ಸಾಗರ–ಸಿದ್ದಾಪುರ ಗಡಿ ಭಾಗದ ಆ ಕುಗ್ರಾಮದಲ್ಲಿ ಇದೇ ಮೊದಲ ಬಾರಿಗೆ ಮಂಗನ ಕಾಯಿಲೆ ಕಾಣಿಸಿಕೊಂಡಿದೆ. ವ್ಯಕ್ತಿಯೊಬ್ಬರು ಸತ್ತಿದ್ದಾರೆ. ಅ ಬಗ್ಗೆ ಮಾಹಿತಿ ಪಡೆಯಲು ಹೋಗುವಾಗ ನಡೆದ ಘಟನೆಯಿದು.

ADVERTISEMENT

ಕಾಯಿಲೆ ಕಾರಣಕ್ಕೆ ಗ್ರಾಮಕ್ಕೆ ಆರೋಗ್ಯಾಧಿಕಾರಿಗಳು ನಿರಂತರವಾಗಿ ಭೇಟಿ ಕೊಡುತ್ತಿದ್ದಾರೆ. ಹಿಂದೆಯೇ ಮಾಧ್ಯಮದವರೂ ಹೋಗುತ್ತಿದ್ದಾರೆ. ಅದೆಲ್ಲವೂ ವರದಿ ಆಗುತ್ತಿದೆ. ಇದು ಊರಿನವರ ಚಿಂತೆ ಹೆಚ್ಚಿಸಿದೆ. ಊರಲ್ಲಿ ಜೀಪು, ಕಾರಿನ ಸದ್ದು ಕೇಳಿದರೆ ಅವರಲ್ಲಿ ಅಸಹನೆ ಮೈಗೂಡುತ್ತದೆ. ಹೀಗಾಗಿ ಎದುರಿಗೆ ಸಿಕ್ಕ ಊರವರಿಂದಲೇ ಮಾಹಿತಿ ಪಡೆದು ಕಾರು ಹಿಂದಕ್ಕೆ ತಿರುಗಿಸಿದೆವು.

ಏನಿದು ಮಂಗನ ಕಾಯಿಲೆ?

ಮಂಗನ ಕಾಯಿಲೆ (ಕೆಎಫ್‌ಡಿ) ರಷ್ಯನ್ ಎನ್‌ಸಫಲೈಟಿಸ್ ಹೆಸರಿನ ವೈರಸ್‌ ಜನ್ಯ ಕಾಯಿಲೆ. ಯಾವುದೋ ಕಾಲದಲ್ಲಿ ಸೈಬೀರಿಯಾ ಭಾಗದಿಂದ ಇಲ್ಲಿಗೆ ವಲಸೆ ಬಂದ ಪಕ್ಷಿಯ ಮೈಯಲ್ಲಿ ಈ ವೈರಸ್ ಹೊತ್ತ ಉಣ್ಣೆ ಈ ಭಾಗಕ್ಕೆ ಬಂದಿರಬಹುದು ಎಂದು ಅರ್ಥೈಸಿಕೊಳ್ಳಲಾಗಿದೆ ಎನ್ನುತ್ತಾರೆ ಕೆಎಫ್‌ಡಿ ಬಗ್ಗೆ ದಶಕಗಳಿಂದ ಸಂಶೋಧನೆಯಲ್ಲಿ ನಿರತ ವಿಜ್ಞಾನಿ ಶಿವಮೊಗ್ಗದ ಡಾ.ದರ್ಶನ್ ನಾರಾಯಣ.

ಕಾಡಿನಲ್ಲಿ ಉಣುಗು (ಉಣ್ಣೆ) ಕಡಿದಾಗ ಮನುಷ್ಯನ ದೇಹ ಸೇರುವ ಈ ವೈರಸ್‌ ಕಾಯಿಲೆ ತರುತ್ತದೆ. ವೈದ್ಯಕೀಯ ಪರಿಭಾಷೆಯಲ್ಲಿ ಇದು ಕ್ಯಾಸನೂರು ಕಾಡಿನ ಕಾಯಿಲೆ (ಕೆಎಫ್‌ಡಿ–1957ರಲ್ಲಿ ಸೊರಬ ತಾಲ್ಲೂಕಿನ ಕ್ಯಾಸನೂರಿನಲ್ಲಿ ಮೊದಲ ಬಾರಿಗೆ ಪತ್ತೆಯಾಗಿತ್ತು). ಆದರೆ ಆಡು ಭಾಷೆಯಲ್ಲಿ ಮಂಗನ ಕಾಯಿಲೆ.

ಮಂಗನಿಗೂ–ಕಾಯಿಲೆಗೂ ಸಂಬಂಧವಿಲ್ಲ..

‘ವಾಸ್ತವವಾಗಿ ಮಂಗನಿಗೂ ಈ ಕಾಯಿಲೆಗೂ ಸಂಬಂಧವಿಲ್ಲ. ಉಣುಗು ಕಡಿತದಿಂದಲೇ ವೈರಸ್‌ ಮನುಷ್ಯನ ರೀತಿಯಲ್ಲೇ ಮಂಗನ ದೇಹಕ್ಕೂ ಸೇರುತ್ತದೆ. ಆದರೆ, ಮಂಗನ ಹೆಸರೇ ಬಾಧಿತರಲ್ಲಿ ಸಾಮಾಜಿಕ ಕಳಂಕದ ಭಾವ ಮೂಡಿಸಿದೆ. ಬಹುತೇಕ ಸಂದರ್ಭಗಳಲ್ಲಿ ಮನುಷ್ಯರು ಚಿಕಿತ್ಸೆ ಪಡೆದು ಬದುಕಿದರೆ ಮಂಗಗಳು ಸಾಯುತ್ತವೆ. ಕಾಡಿನಲ್ಲಿ ಮಂಗಗಳ ಕಳೇಬರ ದೊರೆತರೆ ಅಲ್ಲಿ ಕೆಎಫ್‌ಡಿಯ ಸುಳಿವು ಹುಡುಕಬಹುದು. ಹೀಗೆ ತಾವು ಸತ್ತರೂ ಮನುಷ್ಯನಿಗೆ ಮಂಗಗಳು ಸಹಾಯ ಮಾಡುತ್ತವೆ’ ಎಂದು ದರ್ಶನ್ ಹೇಳುತ್ತಾರೆ.

‘ಕಾಯಿಲೆ ಬಾಧಿತರು ಆರೋಗ್ಯದಲ್ಲಿ ದಿಢೀರನೆ ಏರುಪೇರಾಗಿ ಸಾವಿಗೆ ತುತ್ತಾಗಬಹುದು. ಮೊದಲ ಹಂತದಲ್ಲಿ 3ರಿಂದ 7 ದಿನ ಜ್ವರ, ಕತ್ತಿನ ಹಿಂಭಾಗದಲ್ಲಿ ನೋವು, ತಲೆನೋವು ಕಾಣಿಸಿಕೊಳ್ಳುತ್ತದೆ. ಎಲ್ಲರಿಗೂ ರೋಗಲಕ್ಷಣ ಆಧರಿಸಿ ಔಷಧಿ ಕೊಡಲಾಗುತ್ತದೆ. ರೋಗಿ ಗುಣಮುಖರಾದರೂ ವಾರದ ಅಂತರದಲ್ಲಿಯೇ ಎರಡನೇ ಹಂತದ ಲಕ್ಷಣಗಳು ಬಾಧಿಸುತ್ತವೆ. ಸಾವಿಗೀಡಾದ ಬಹುತೇಕರು ಎರಡನೇ ಹಂತದಲ್ಲಿ ರೋಗ ಲಕ್ಷಣ ಕಾಣಿಸಿಕೊಂಡವರು‘ ಎಂದು ಮಾಹಿತಿ ನೀಡುತ್ತಾರೆ.

ಉಣುಗು (ಉಣ್ಣೆ) ತನ್ನ ಜೀವಿತಾವಧಿಯಲ್ಲಿ ತಾನಾಗಿಯೇ ನಡೆದು ಹೋದರೆ 100 ಮೀಟರ್ ಮಾತ್ರ ಕ್ರಮಿಸಲು ಸಾಧ್ಯ. ಆದರೆ ಅದು ಇಲಿ, ಹೆಗ್ಗಣ, ಬೆಕ್ಕು, ನಾಯಿ, ಕಾಡಿಗೆ ಮೇಯಲು ಹೋಗುವ ದನ–ಕರುಗಳ ಮೂಲಕ ಮನುಷ್ಯರ ಸಂಪರ್ಕಕ್ಕೆ ಬರುತ್ತದೆ. ಕಾಡಿಗೆ ಸೊಪ್ಪು ತರಲು, ದನ ಮೇಯಿಸಲು ಹೋದವರಿಗೆ ಉಣುಗು ಕಡಿದರೂ ರೋಗ ಬಾಧಿಸುತ್ತದೆ.

ನಿರ್ದಿಷ್ಟ ಔಷಧಿ ಇಲ್ಲ..

ಕೆಎಫ್‌ಡಿಗೆ ನಿರ್ದಿಷ್ಟ ಔಷಧಿ ಇಲ್ಲ. ರೋಗದ ಲಕ್ಷಣ ಆಧರಿಸಿ ಚಿಕಿತ್ಸೆ ನೀಡಲಾಗುತ್ತಿದೆ. 1983–84ರ ಎರಡು ವರ್ಷಗಳ ಅವಧಿಯಲ್ಲಿ ಕಾಯಿಲೆಯಿಂದ ಮಲೆನಾಡಿನಲ್ಲಿ 281 ಮಂದಿ ಸಾವಿಗೀಡಾಗಿದ್ದರು. 1986ರಲ್ಲಿ ಬೆಳ್ತಂಗಡಿ ತಾಲ್ಲೂಕಿನಲ್ಲಿ 1,300 ಪ್ರಕರಣ ದೃಢಪಟ್ಟವು. ಆಗ ಲಸಿಕೆ ಸಂಶೋಧನೆಯತ್ತ ಸರ್ಕಾರ ಗಂಭೀರ ಪ್ರಯತ್ನ ಆರಂಭಿಸಿತ್ತು. 2ನೇ ಮಹಾಯುದ್ಧದ ವೇಳೆ ಕಂಡುಹಿಡಿದ ಪ್ರತಿಕಾಯದ ತಾಂತ್ರಿಕತೆ ಆಧರಿಸಿ 1992ರಲ್ಲಿ ಮಹಾರಾಷ್ಟ್ರದ ವಿಜ್ಞಾನಿ ಡಾ.ದಂಡಾವತೆ ಲಸಿಕೆ ಅಭಿವೃದ್ಧಿಪಡಿಸಿದ್ದರು. ಆದರೆ ಅದೀಗ ವೈರಸ್‌ನ ರೂಪಾಂತರದಿಂದ (ಮ್ಯುಟೇಶನ್) ತನ್ನ ಪರಿಣಾಮ ಕಳೆದುಕೊಂಡಿದೆ. ಕಾಡಂಚಿನ ಜನರ ನೆಮ್ಮದಿ ಕಸಿದುಕೊಂಡಿದೆ.

ಬೇಸಿಗೆಯ ಬಿಸಿಲು ಹೆಚ್ಚುತ್ತಿದ್ದಂತೆಯೇ ಮಂಗನ ಕಾಯಿಲೆ ವ್ಯಾಪಕಗೊಳ್ಳುತ್ತಿದೆ. ಕಳೆದ ಮೂರು ತಿಂಗಳಲ್ಲಿ ಶಿವಮೊಗ್ಗ, ಚಿಕ್ಕಮಗಳೂರು, ಉತ್ತರಕನ್ನಡ ಹಾಗೂ ಉಡುಪಿ ಜಿಲ್ಲೆಗಳಲ್ಲಿ 160 ಕೆಎಫ್‌ಡಿ ಪ್ರಕರಣ ದೃಢಪಟ್ಟಿವೆ. 9 ಮಂದಿ ಸತ್ತಿದ್ದಾರೆ.

ಕೆಎಫ್‌ಡಿಗೆ ಶೇ 50ರಿಂದ 60ರಷ್ಟು ಕಾಡಂಚಿನ ತೋಟಗಳಲ್ಲಿ ಕೆಲಸ ಮಾಡುವ ಕಾರ್ಮಿಕರೇ ತುತ್ತಾಗುತ್ತಿದ್ದಾರೆ. ಇವರಲ್ಲಿ ಅತಿಯಾಗಿ ಮದ್ಯಪಾನ–ತಂಬಾಕು ಸೇವನೆ ಚಟ, ಪೌಷ್ಟಿಕಾಂಶದ ಕೊರತೆ ಇದ್ದವರಲ್ಲಿ ರೋಗ ನಿರೋಧಕ ಶಕ್ತಿ ಕುಂಠಿತವಾಗಿ ಸಾವಿಗೀಡಾಗುತ್ತಿದ್ದಾರೆ. ‘ಮಹಿಳೆಯರ ಸಾವಿನ ಪ್ರಮಾಣ ಹೆಚ್ಚಿದೆ. ಮುಟ್ಟಿನ ದಿನಗಳಲ್ಲಿ ಕಾಯಿಲೆ ಬಾಧಿಸಿದರೆ ಅತಿಹೆಚ್ಚು ರಕ್ತಸ್ರಾವ ಆಗುತ್ತದೆ. ಋತುಚಕ್ರದ ಸ್ರಾವ ನಿಲ್ಲಿಸುವುದು ಕಷ್ಟ. ಕೊನೆಗೆ ರಕ್ತಹೀನತೆಗೆ (ಅನೀಮಿಕ್) ತುತ್ತಾಗಿ ಸಾವಿಗೀಡಾಗುತ್ತಾರೆ. ಹೆಣ್ಣುಮಕ್ಕಳು ಮುಟ್ಟಿನ ದಿನಗಳಲ್ಲಿ ಜ್ವರ ಬಂದರೆ ಕಡೆಗಣಿಸಬಾರದು. ಕೈ ಮೀರಿದ ಮೇಲೆ ಏನೂ ಮಾಡಲಾಗದು‘ ಎಂದು ಡಾ.ದರ್ಶನ್ ನಾರಾಯಣ ಕೋರುತ್ತಾರೆ.

ಕ್ಯಾಸನೂರಿನಲ್ಲಿ ಮತ್ತೆ ಕಾಣಿಸಿಲ್ಲ!

1957ರಿಂದ 2020ರವರೆಗೆ ಕೆಎಫ್‌ಡಿಗೆ ತುತ್ತಾಗಿ ರಾಜ್ಯದಲ್ಲಿ 575 ಜನ ಸಾವಿಗೀಡಾಗಿದ್ದಾರೆ. 12 ಜಿಲ್ಲೆಗಳಲ್ಲಿ ಕಾಯಿಲೆ ಕಾಣಿಸಿಕೊಂಡಿದೆ. ಕ್ಯಾಸನೂರಿನಲ್ಲಿ ಮೊದಲ ಬಾರಿಗೆ ಕಾಣಿಸಿಕೊಂಡರೂ ಮತ್ತೆ ಅಲ್ಲಿ ಕಂಡುಬಂದಿಲ್ಲ. ಮಹಾರಾಷ್ಟ್ರದ ಸಿಂಧುದುರ್ಗ, ಕೇರಳದ ಮಲಪ್ಪುರಂ, ತಮಿಳುನಾಡಿನ ನೀಲಗಿರಿ ಹಾಗೂ ಈರೋಡ್ ಭಾಗದಲ್ಲೂ ಕೆಎಫ್‌ಡಿ ಕಾಣಿಸಿಕೊಂಡಿದೆ.

ಕಾಡಿನ ಮೂಲನಿವಾಸಿಗಳಿಗೆ ಅಷ್ಟಾಗಿ ಬಾಧಿಸಿಲ್ಲ

ಹಸಲರು, ಸೋಲಿಗರು, ಹಾಲಕ್ಕಿ, ಸಿದ್ಧಿಗಳು, ಕಾಡು–ಜೇನು ಕುರುಬರು ಹೀಗೆ ಕಾಡಿಗೆ ಹೊಂದಿಕೊಂಡು ಬೆಳೆದ ಜನರಲ್ಲಿ ಕೆಎಫ್‌ಡಿಗೆ ತುತ್ತಾಗುವುದು ಕಡಿಮೆ. ಕಾಯಿಲೆ ಬಂದರೂ ಅಷ್ಟೊಂದು ತೀವ್ರಗತಿಯಲ್ಲಿ ಬಾಧಿಸುವುದಿಲ್ಲ. ಕಾಡನ್ನೇ ಮನೆಯಂತೆ ಅವರು ನೋಡುತ್ತಾರೆ. ಕಾಡಿನಲ್ಲಿ ಬದಲಾವಣೆಗಳು ಕಂಡುಬಂದರೆ ಅದಕ್ಕೆ ರೋಗ ಬಂದಿದೆ, ಕಾಡಿಗೆ ಹುಷಾರು ಇಲ್ಲ ಎಂದೆಲ್ಲ ಮಾತಾಡುತ್ತಾರೆ. ಯಾವ ಉಣುಗು ಕಚ್ಚಿದರೆ ರೋಗ ಬರುತ್ತದೆ ಎಂಬ ಜ್ಞಾನವೂ ಅವರಿಗೆ ಇರುತ್ತದೆ. ಈ ಬಗ್ಗೆಯೂ ಹೆಚ್ಚಿನ ಸಂಶೋಧನೆಗಳು ಆಗಬೇಕಿದೆ ಎಂದು ದರ್ಶನ್ ಹೇಳುತ್ತಾರೆ.

ಉಣುಗಿಗೆ ಯಾವುದೇ ಗಡಿ ಇಲ್ಲ. ಚಿಕ್ಕಮಗಳೂರು, ಸಕಲೇಶಪುರ, ತೀರ್ಥಹಳ್ಳಿ ಭಾಗಕ್ಕೆ ಟ್ರಕ್ಕಿಂಗ್ ಬರುವವರಲ್ಲಿ ಪ್ರವಾಸೋದ್ಯಮ ಇಲಾಖೆ ಕೆಎಫ್‌ಡಿ ಬಗ್ಗೆ ಜಾಗೃತಿ ಮೂಡಿಸಲಿ. ಇಲ್ಲವಾದರೆ ಟ್ರಕರ್ಸ್‌ಗೂ ರೋಗ ಹರಡುವ ಸಾಧ್ಯತೆಯಿದೆ ಎಂದು ಆತಂಕ ವ್ಯಕ್ತಪಡಿಸುವರು.

ಇನ್ನೂ ರೋಧಿಸುತ್ತಿದೆ ಅರಳಗೋಡು..

ಕೆಎಫ್‌ಡಿಯಿಂದ ಸಾಗರ ತಾಲ್ಲೂಕಿನ ಅರಳಗೋಡಿನಲ್ಲಿ 2019ರ ಮಾರ್ಚ್‌ನಲ್ಲಿ 23 ಜನರು ಸಾವಿಗೀಡಾಗಿದ್ದರು. ಕಾಯಿಲೆಗೆ ಬಲಿಯಾದ ಕೃಷ್ಣಾ–ಸೀತಾ ದಂಪತಿಯ ಇಬ್ಬರು ಮಕ್ಕಳು, ಹೆಂಡತಿ–ಮಗನ ಕಳೆದುಕೊಂಡ ವಯೋವೃದ್ಧ ಜೆಟ್ಟಪ್ಪ, ತಿಮ್ಮನಾಯ್ಕನ ಕುಟುಂಬದ ಮೂವರು ಹೆಣ್ಣುಮಕ್ಕಳು, ದಲಿತ ಸಮುದಾಯದ ಚಂದ್ರಪ್ಪ ಅವರ ಇಬ್ಬರು ಹೆಣ್ಣುಮಕ್ಕಳು ಈಗ ಅನಾಥರಾಗಿದ್ದಾರೆ. ಇಂತಹ ಹತ್ತಾರು ಸಂಗತಿ ಊರಿನಲ್ಲಿ ಅಡ್ಡಾಡಿದರೆ ಕಾಣಸಿಗುತ್ತವೆ. ಎಲ್ಲರದ್ದೂ ಕಣ್ಣೀರ ಕಥನವೇ!

‘ಅರಣ್ಯವಾಸಿಗಳಾದ ನಾವು ಇಲ್ಲಿ ಬದುಕಿದ್ದು ತಪ್ಪಾ. ಕಾಯಿಲೆ ಬಂದು 67 ವರ್ಷ ಆಗಿದೆ. ಅದಕ್ಕೊಂದು ಸರಿಯಾದ ಲಸಿಕೆ ಕೊಡದೇ ಕಾಡಿನಂಚಿನ ಜನರ ಜೀವದ ಜೊತೆ ಸರ್ಕಾರ ಚೆಲ್ಲಾಟವಾಡುತ್ತಿದೆ. ಆಗ ಸತ್ತವರ ಕುಟುಂಬಕ್ಕೆ ಘೋಷಣೆ ಮಾಡಿದ್ದು ₹ 5 ಲಕ್ಷ. ಕೊಟ್ಟಿದ್ದು ಮಾತ್ರ ₹ 2 ಲಕ್ಷ. ಇದೆಲ್ಲ ಯಾವ ಪುರುಷಾರ್ಥಕ್ಕೆ?’ ಎಂದು ಅರಳಗೋಡಿನ ಆಟೊ ಚಾಲಕ ಶಿವರಾಜ್ ಆಕ್ರೋಶ ವ್ಯಕ್ತಪಡಿಸುತ್ತಾರೆ. ಕೆಎಫ್‌ಡಿಯಿಂದ ಸಾವಿಗೀಡಾದವರ ಅವಲಂಬಿತರಿಗೆ ತಲಾ ₹ 10 ಲಕ್ಷವಾದರೂ ಪರಿಹಾರ ನಿಗದಿಪಡಿಸುವ ಅಗತ್ಯವಿದೆ ಎಂದು ಶಿವಮೊಗ್ಗದ ಕೆಎಫ್‌ಡಿ ಜನಜಾಗೃತಿ ಒಕ್ಕೂಟದ ಸಂಚಾಲಕ ಕೆ.ಪಿ.ಶ್ರೀಪಾಲ್ ಒತ್ತಾಯಿಸುತ್ತಾರೆ.

ಮಂಗ ಸತ್ತರೆ ಅರಣ್ಯ ಇಲಾಖೆಗೆ ಹೇಳುವೆ..

‘ನಾ ಆಗಿನ್ನೂ ಹರೆಯದವ. ನಮ್ಮೂರಿನ ಕಾಡಂಚಿನಲ್ಲಿ ಸತ್ತು ಬಿದ್ದಿದ್ದ ಮಂಗನ ಕಳೇಬರ ಕೈಯಲ್ಲಿ ಎತ್ತಿಕೊಂಡು ಬಂದು ವಿಧಿವತ್ತಾಗಿ ಅಂತ್ಯಕ್ರಿಯೆ ಮಾಡಿದ್ದೆ. ಅದರ ಮೈಮೇಲಿದ್ದ ಉಣುಗು (ಉಣ್ಣೆ) ನನಗೆ ಕಚ್ಚಿ ಕಾಯಿಲೆ ಬಂದು ಹಾಸಿಗೆ ಹಿಡಿದು ಬದುಕುತ್ತೇನೋ, ಇಲ್ಲವೋ ಎಂಬಂತಾಗಿತ್ತು. ಈಗ ಮಂಗ ಸತ್ತರೆ ಅರಣ್ಯ ಇಲಾಖೆಯವರಿಗೆ ಮಾಹಿತಿ ನೀಡುತ್ತೇನೆ‘ ಎಂದು ತೀರ್ಥಹಳ್ಳಿ ತಾಲ್ಲೂಕಿನ ಕೂಡ್ಲು ಬಳಿ ಮಾತಿಗೆ ಸಿಕ್ಕ ಹಿರಿಯರಾದ ರತ್ನಾಕರ ಹೇಳಿದರು.

‘ಶಿರಸಿ ಬಳಿಯ ಗ್ರಾಮವೊಂದರಲ್ಲಿ ಎರಡು ದಿನಗಳ ಹಿಂದೆ ಅಂತಹದ್ದೇ ಘಟನೆ ನಡೆದಿದೆ. ಯುವಕರ ಗುಂಪು ಸತ್ತ ಮಂಗನ ಅಂತ್ಯಕ್ರಿಯೆ ನಡೆಸಿದೆ. ಎಲ್ಲರನ್ನೂ ಪರೀಕ್ಷೆಗೆ ಕರೆದೊಯ್ದಿದ್ದಾರೆ’ ಎಂದು ಅಲ್ಲಿಯೇ ಇದ್ದ ಆರೋಗ್ಯ ಇಲಾಖೆ ಸಿಬ್ಬಂದಿ ಮಾಹಿತಿ ನೀಡಿದರು.

‘ತೀರ್ಥಹಳ್ಳಿ ಸಮೀಪದ ಹಳ್ಳಿಯೊಂದರಲ್ಲಿ ಕೆಎಫ್‌ಡಿ ಬಾಧಿತರನ್ನು ಆಸ್ಪತ್ರೆಗೆ ಚಿಕಿತ್ಸೆಗೆ ಕರೆತರಲು ಗೋಗರೆಯಬೇಕಾಯಿತು. ವಾರಗಟ್ಟಲೇ ಆಸ್ಪತ್ರೆಯಲ್ಲಿದ್ದರೆ ಇಲ್ಲಿ ತೋಟ, ನೀರಿನ ಮೋಟರ್, ದನಗಳನ್ನ  ನೋಡಿಕೊಳ್ಳುವವರು ಯಾರು? ನಾವು ಬರೊಲ್ಲ ಎಂದು ಕುಳಿತಿದ್ದರು. ದಮ್ಮಯ್ಯ ಹಾಕಿ ಕರೆತಂದೆವು’ ಎಂದು ಅವರು ತಮ್ಮ ಕಷ್ಟ ತೋಡಿಕೊಂಡರು.

ಮರ ಕಡಿದು ಕಾಯಿಲೆ ಬಂತೇ?

ಚಿಕ್ಕಮಗಳೂರು ಜಿಲ್ಲೆ ಕೊಪ್ಪ ತಾಲ್ಲೂಕಿನ ನುಗ್ಗಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಎರಡು ಹಳ್ಳಿಗಳ ಜನರಲ್ಲಿ ಅರಣ್ಯ ಇಲಾಖೆ ಜಾಗದಲ್ಲಿದ್ದ ಮರಗಳನ್ನು ಕಡಿದಿದ್ದೇ ರೋಗ ಹರಡಲು ಕಾರಣ ಎನ್ನುವ ಅನುಮಾನವಿದೆ. ಆ ಗ್ರಾಮಗಳಲ್ಲಿ ಅರಣ್ಯ ಇಲಾಖೆ ಜಾಗದಲ್ಲಿನ ಅಕೇಶಿಯಾ ಮರಗಳನ್ನು ಕಡಿದು ಸಾಗಿಸುವ ಕೆಲಸ ನಡೆಯುತ್ತಿದೆ. ಮರದ ಎಲೆಗಳಲ್ಲಿದ್ದ ಉಣ್ಣೆಗಳು ಕೆಲಸ ಮಾಡುತ್ತಿದ್ದವರಿಗೆ ಕಚ್ಚಿ ಕಾಯಿಲೆ ಹರಡಿದೆ ಎಂಬುದು ಆರೋಗ್ಯ ಇಲಾಖೆ ಅಧಿಕಾರಿಗಳ ಅಭಿಪ್ರಾಯ.

ಮಲೆನಾಡಿನಲ್ಲಿ ಯಾರಾದರೂ ಸತ್ತರೆ ದುಃಖ ಹಂಚಿಕೊಳ್ಳುವ ವಿಚಾರದಲ್ಲಿ ಆ ಮನೆಯವರ ತೋಟಕ್ಕೆ ಊರಿನವರು ಹೋಗಿ ಕೆಲಸ ಮಾಡುವುದು ವಾಡಿಕೆ. ಹೀಗೆ ಸಿದ್ದಾಪುರ ತಾಲ್ಲೂಕಿನ ಮತ್ತೊಂದು ಗ್ರಾಮದಲ್ಲಿ ಹೀಗೆ ತೋಟದಲ್ಲಿ ಕೆಲಸ ಮಾಡಿದ್ದ 10ಕ್ಕೂ ಹೆಚ್ಚು ಜನರಿಗೆ ಮಂಗನಕಾಯಿಲೆ ಬಾಧಿಸಿದೆ.

ಈ ಗ್ರಾಮಗಳಲ್ಲದೇ ಸಿದ್ದಾಪುರ, ಶಿರಸಿ, ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲ್ಲೂಕಿನ ಅರಮನೆಕೊಪ್ಪ, ಚಿಕ್ಕಮಗಳೂರು ಜಿಲ್ಲೆ ಕೊಪ್ಪ ಭಾಗದ ಹಲವು ಗ್ರಾಮಗಳಲ್ಲಿ ಮಂಗನಕಾಯಿಲೆ ಮೊದಲ ಬಾರಿಗೆ ಕಾಣಿಸಿಕೊಂಡಿದೆ. ಸ್ಥಳೀಯರಲ್ಲಿ ಆತಂಕ ಮನೆಮಾಡಿದೆ.

ಚಿಂತೆಗೆ ದೂಡಿದ ‘ಬಿಗು ಕ್ರಮ’

ಮಲೆನಾಡಿನ ಭಾಗದ ರೈತರು, ಅದರಲ್ಲೂ ವಿಶೇಷವಾಗಿ ಅಡಿಕೆ ಬೆಳೆಗಾರರು ಡಿಸೆಂಬರ್ ಬಳಿಕ ತೋಟಕ್ಕೆ ಸೊಪ್ಪು ಹಾಸುತ್ತಾರೆ. ಇದಕ್ಕಾಗಿಯೇ ಸಮೀಪದ ಬೆಟ್ಟದಿಂದ ಸೊಪ್ಪು ಕಲೆಹಾಕಿ ತರುತ್ತಾರೆ. ಮಾರ್ಚ್ ಅಂತ್ಯದವರೆಗೂ ಈ ಕೆಲಸ ನಡೆಯುತ್ತಲೇ ಇರುತ್ತದೆ. ಆದರೆ ಮಂಗನ ಕಾಯಿಲೆ ಹರಡಿರುವ ಗ್ರಾಮಗಳಲ್ಲಿ ಆರೋಗ್ಯ ಇಲಾಖೆ ಬೆಟ್ಟ ಪ್ರದೇಶಕ್ಕೆ ಪ್ರವೇಶ ನಿಷೇಧಿಸಿ ‘ಬಿಗಿ ಕ್ರಮ’ ಅನುಸರಿಸಿದೆ. ಇದು ರೈತರನ್ನು ಚಿಂತೆಗೆ ದೂಡಿದೆ. 

‘ಪ್ರತಿ ಬಾರಿ ಬೇಸಿಗೆ ಆರಂಭದಲ್ಲೇ ನಮಗೆ ಸೊಪ್ಪಿನ ಬೆಟ್ಟಕ್ಕೆ ಹೋಗಲು ಬಿಡದೆ ಅಡ್ಡಿಪಡಿಸಲಾಗುತ್ತಿತ್ತು. ಈ ವರ್ಷ ಮಂಗನ ಕಾಯಿಲೆ ನಿಯಂತ್ರಣ ಇದಕ್ಕೆ ನೆಪವಾಗುತ್ತಿದೆ’ ಎಂದು ಸಿದ್ದಾಪುರ ತಾಲ್ಲೂಕಿನ ಗ್ರಾಮವೊಂದರ ನಿವಾಸಿ ಗಣಪತಿ ಮಡಿವಾಳ ದೂರುತ್ತಾರೆ.

ಶಿವಮೊಗ್ಗ ಸೇರಿದಂತೆ ಅಕ್ಕಪಕ್ಕದ ಜಿಲ್ಲೆಗಳಲ್ಲಿ ಸಾಮಾನ್ಯವಾಗಿ ಜನವಸತಿ ಕಾಡಿನ ಮಧ್ಯದಲ್ಲಿಯೇ ಇದೆ. ಹೊಲ, ಗದ್ದೆ, ತೋಟಗಳು ಕಾಡನ್ನೇ ಬೆಸೆದುಕೊಂಡಿವೆ. ಜೊತೆಗೆ ವೈರಸ್‌ ಪತ್ತೆ ಪ್ರಯೋಗಾಲಯ (ವಿಡಿಎಲ್) ಇರುವುದರಿಂದ ಕಾಡಂಚಿನ ಜ್ವರಪೀಡಿತರ ಪರೀಕ್ಷೆ ನಿರಂತರವಾಗಿ ನಡೆಯುತ್ತಿದೆ.

ಚಾಮರಾಜನಗರ, ಮೈಸೂರು ಭಾಗದಲ್ಲಿ 2012ರಲ್ಲಿ ಕೆಎಫ್‌ಡಿ ದೃಢಪಟ್ಟರೂ ನಂತರ ಅಲ್ಲಿ ಕಡಿಮೆ ಆಗಿರುವುದಕ್ಕೆ ಪರೀಕ್ಷೆ ಪ್ರಮಾಣದಲ್ಲಿ ಇಳಿಕೆಯೇ ಕಾರಣ ಎಂದು ಆರೋಗ್ಯ ಇಲಾಖೆ ಅಧಿಕಾರಿಯೊಬ್ಬರು ಹೇಳುತ್ತಾರೆ. ಅವರು ಜ್ವರ ಪ್ರಕರಣಗಳನ್ನು ಶಿವಮೊಗ್ಗದ ಲ್ಯಾಬ್‌ಗೆ ಕಳುಹಿಸಿ ಪರೀಕ್ಷೆ ಮಾಡಿಸಬೇಕಿದೆ. ಅದು ನಿರಂತರವಾಗಿ ಆಗುತ್ತಿಲ್ಲ. ಆ ಭಾಗದಲ್ಲಿ ಅರಣ್ಯ ಸಂರಕ್ಷಣಾ ಕಾಯ್ದೆ ಬಿಗಿಯಾಗಿದೆ. ಹುಲಿ ಸಂರಕ್ಷಿತ ಪ್ರದೇಶದ ಕಾರಣ ಹೆಚ್ಚಿನ ಜನವಸತಿಯನ್ನು ಕಾಡಿನಿಂದ ಹೊರಗೆ ಇಡಲಾಗಿದೆ. ಹೀಗಾಗಿ ಅಲ್ಲಿ ಕೆಎಫ್‌ಡಿ ಪ್ರಕರಣ ಕಡಿಮೆ ಇರಬಹುದು ಎಂದು ಹೇಳುತ್ತಾರೆ.

ಕೆಎಫ್‌ಡಿ ಚಿಕಿತ್ಸೆಗೆ ಔಷಧಿ, ಲಸಿಕೆ ಇಲ್ಲ. ಹೀಗಾಗಿ ಅದು ಬಾರದಂತೆ ಮುನ್ನೆಚ್ಚರಿಕೆಗೆ ಆರೋಗ್ಯ ಇಲಾಖೆ ಒತ್ತು ನೀಡುತ್ತಿದೆ. ಅದಕ್ಕೆ ಮಲೆನಾಡಿನಲ್ಲಿ ಅರಣ್ಯ ಹಾಗೂ ಪಶು ಸಂಗೋಪನಾ ಇಲಾಖೆ ಕೂಡ ಕೈ ಜೋಡಿಸಿವೆ. ಉಣಗುಗಳ ನಿಯಂತ್ರಿಸಲು ರಾಸುಗಳಿಗೆ ‘ಡೊರಾಮೆಕ್ಷನ್' ಲಸಿಕೆ ಹಾಕಲಾಗುತ್ತಿದೆ. ಕಾಡಂಚಿನಲ್ಲಿ ಸತ್ತ ಮಂಗಗಳ ಕಳೇಬರ ಹುಡುಕಿ ಸುಡುವ ಜೊತೆಗೆ ಅರಣ್ಯ ರಸ್ತೆಗಳ ಆಸುಪಾಸಿನಲ್ಲಿ ಫೈರ್‌ಲೈನ್ ಮಾಡಿ ಉಣಗು ವ್ಯಾಪಿಸದಂತೆ ತಡೆಯಲಾಗುತ್ತಿದೆ. ವನವಾಸಿಗಳಿಗೆ ಆರೋಗ್ಯ ಇಲಾಖೆಯ ಜಾಗೃತಿ ಕಾರ್ಯಕ್ರಮ ತಲುಪಿಸುವಲ್ಲೂ ಈ ಸಮನ್ವಯದ ಹಾದಿ ತೆರೆದುಕೊಂಡಿದೆ. ಆದರೆ ಕಾಯಿಲೆಗೆ ಶಾಶ್ವತ ಮದ್ದು ಕಂಡು ಹಿಡಿಯುವುದು ಯಾವಾಗ ಎಂಬ ಪ್ರಶ್ನೆ ಸಂತ್ರಸ್ತರದ್ದು. ಬೆಕ್ಕಿಗೆ ಗಂಟೆ ಕಟ್ಟುವ ಸವಾಲು ಸರ್ಕಾರದ ಮುಂದಿದೆ.

ಪೂರಕ ಮಾಹಿತಿ: ಚಂದ್ರಹಾಸ ಹಿರೇಮಳಲಿ, ಗಣಪತಿ ಹೆಗಡೆ, ವಿಜಯಕುಮಾರ್‌ ಎಸ್‌.ಕೆ., ಬಾಲಚಂದ್ರ ಎಚ್‌.

ಮಲೆನಾಡಿನಲ್ಲಿ ಕಾಡಿಗೆ ಮೇಯಲು ಹೋಗುವ ದನಗಳ ದೇಹ ಸೇರುವ ಮೂಲಕವೂ ಕೆಎಫ್‌ಡಿ ವಾಹಕ ಉಣುಗು ಮನುಷ್ಯರ ಸಂಪರ್ಕಕ್ಕೆ ಬರುತ್ತವೆ.
ಕೆಎಫ್‌ಡಿ ಹರಡುವ ಉಣುಗು (ಉಣ್ಣೆ)
ಕೆಎಫ್‌ಸಿಗೆ ತುತ್ತಾಗುವ ಹನುಮಾನ್‌ ಲಂಗೂರ್‌ ಮಂಗಗಳು
ಉತ್ತರ ಕನ್ನಡ ಜಿಲ್ಲೆ ಸಿದ್ದಾಪುರ ತಾಲ್ಲೂಕಿನ ಕೊರ್ಲಕೈ ಗ್ರಾಮದ ತಿರುವಿನ ಬಳಿ ಮಂಗನ ಕಾಯಿಲೆ ಕುರಿತು ಆರೋಗ್ಯ ಇಲಾಖೆಯಿಂದ ಎಚ್ಚರಿಕೆ ಬ್ಯಾನರ್ ಅಳವಡಿಸಲಾಗಿದೆ.
ಸಿದ್ದಾಪುರ ಬಳಿಯ ಕಾಡಿನಲ್ಲಿ ಸತ್ತು ಬಿದ್ದ ಮಂಗನ ಕಳೇಬರ (ಪ್ರಜಾವಾಣಿ ಸಂಗ್ರಹ ಚಿತ್ರ)

ಕೆಎಫ್‌ಡಿ ಬಗ್ಗೆ ಮಾಹಿತಿ

  • ಭಾರತದಲ್ಲಿ 150ಕ್ಕೂ ಹೆಚ್ಚು ಬೇರೆ ಬೇರೆ ಪ್ರಕಾರದ ಉಣುಗು ಕಾಣಸಿಕ್ಕಿವೆ. ಅದರಲ್ಲಿ ಅಂದಾಜು 32 ಮಾತ್ರ ಪಶ್ಚಿಮಘಟ್ಟ ಶ್ರೇಣಿಯಲ್ಲಿ ಕಂಡು ಬರುತ್ತವೆ. 15ರಿಂದ 16 ಮಾತ್ರ ವೈರಸ್‌ ಹೊತ್ತೊಯ್ಯವ ಸಾಮರ್ಥ್ಯ ಹೊಂದಿವೆ. 

  • ಕೆಎಫ್‌ಡಿ ಪತ್ತೆಯಾಗಿ 68 ವರ್ಷಗಳಾದರೂ ಸಂಶೋಧನೆಗೆ ನಿರ್ದಿಷ್ಟ ಸಂಸ್ಥೆ ಇಲ್ಲ. 2019ರಲ್ಲಿ ರಾಜ್ಯ ಸರ್ಕಾರ ಸಂಶೋಧನೆ ಉದ್ದೇಶಕ್ಕೆ ಬಜೆಟ್‌ನಲ್ಲಿ ₹15 ಕೋಟಿ ಮೀಸಲಿಟ್ಟು ಅದರಲ್ಲಿ ₹5 ಕೋಟಿ ಬಿಡುಗಡೆ ಮಾಡಿದರೂ ಅದು ಬಳಕೆಯಾಗದೇ ವಾಪಸ್ ಹೋಗಿದೆ.

  • ಉಣುಗಿಗೆ ನೀರು ಮೊದಲ ಶತ್ರು. ಮಳೆ ಬಂದರೆ ಸಹಜವಾಗಿಯೇ ಅದು ನಿಯಂತ್ರಣಕ್ಕೆ ಬರುತ್ತದೆ. ಈ ವರ್ಷ ಮಳೆ ಕಡಿಮೆ ಆಗಿರುವುದರಿಂದ ರೋಗ ಬಾಧೆ ಹೆಚ್ಚಾಗಿದೆ.

  • 4ಕೆಎಫ್‌ಡಿ ಮರಣ ಪ್ರಮಾಣ ರಾಜ್ಯದಲ್ಲಿ ಈ ವರ್ಷ ಶೇ 4 ದಾಟಿದೆ.

ಮಂಗನ ಕಾಯಿಲೆ ತಡೆಗೆ ನೀಡುತ್ತಿದ್ದ ಲಸಿಕೆ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತಿರಲಿಲ್ಲ. ಹೀಗಾಗಿ ಲಸಿಕೆ ವಿತರಣೆ ಸ್ಥಗಿತಗೊಳಿಸಲಾಗಿದೆ. ಅತೀ ಕಡಿಮೆ ಜನರಿಗೆ ಬಾಧಿಸುತ್ತಿರುವ ಕಾರಣ ಕಂಪನಿಗಳು ಲಸಿಕೆ ಕಂಡುಹಿಡಿಯಲು ಮುಂದಾಗುತ್ತಿಲ್ಲ. ಸರ್ಕಾರ ಸಂಶೋಧನೆಗೆ ಧನ ಸಹಾಯ ನೀಡಿದ್ದು ಖಾಸಗಿ ಕಂಪನಿಯ ಸಹಯೋಗದೊಂದಿಗೆ ಹೊಸ ಲಸಿಕೆ ಸಂಶೋಧನೆ ನಡೆಸಲಾಗುತ್ತಿದೆ
ದಿನೇಶ್‌ ಗುಂಡೂರಾವ್ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಚಿವ
ಕೆಎಫ್‌ಡಿ ನಿಯಂತ್ರಣದ ಸಲುವಾಗಿ ಮಂಗಗಳು ಹೆಚ್ಚಿರುವ ಬೆಟ್ಟ ಪ್ರದೇಶಗಳಿಗೆ ಹೋಗದಂತೆ ನಿರ್ಬಂಧ ವಿಧಿಸಲಾಗುತ್ತಿದೆಯೇ ವಿನಃ ರೈತರಿಗೆ ವಿನಾಕಾರಣ ತೊಂದರೆಕೊಡುವ ಉದ್ದೇಶವಲ್ಲ
ಡಾ. ಬಿ.ವಿ.ನೀರಜ್ ಜಿಲ್ಲಾ ಆರೋಗ್ಯಾಧಿಕಾರಿ ಉತ್ತರ ಕನ್ನಡ
ಶಿವಮೊಗ್ಗದಿಂದ ಕೆ.ಎಫ್.ಡಿ ಪರೀಕ್ಷೆ ವರದಿ ಬರಲು ಕನಿಷ್ಠ ಎರಡು ದಿನ ತಗಲುತ್ತದೆ. ಅಷ್ಟರೊಳಗೆ ಸೋಂಕಿತರ ಆರೋಗ್ಯದಲ್ಲಿ ಏರುಪೇರಾಗುತ್ತದೆ. ಕೆಎಫ್‌ಡಿ ಪರೀಕ್ಷೆ ನಡೆಸಲು ಪ್ರಯೋಗಾಲಯವಾಗಲಿ ಚಿಕಿತ್ಸೆಗೆ ಸುಸಜ್ಜಿತ ಆಸ್ಪತ್ರೆಯನ್ನಾಗಲಿ ಈ ಭಾಗದಲ್ಲಿ ಸ್ಥಾಪಿಸಲಿ.
ಹಲಗೇರಿ ಭಾಗದ ಗ್ರಾಮಸ್ಥರು. ಉತ್ತರ ಕನ್ನಡ ಜಿಲ್ಲೆ
ಕೆಎಫ್‌ಡಿ ವೈರಸ್ ಯಾವುದೇ ಕಾರಣಕ್ಕೂ ಮನುಷ್ಯರಿಂದ ಮನುಷ್ಯರಿಗೆ ಮಂಗನಿಂದ ಮನುಷ್ಯರಿಗೆ ನೇರವಾಗಿ ಹರಡುವುದಿಲ್ಲ. ಹೀಗಾಗಿ ರೋಗ ಬಾಧಿತರಿಗೆ ಸಾಮಾಜಿಕ ಬಹಿಷ್ಕಾರ ಸಲ್ಲ. ಹೊಸದಾಗಿ ಕಾಯಿಲೆ ಕಂಡುಬಂದ ಸ್ಥಳಗಳಲ್ಲಿ ಜಾಗೃತಿ ಮೂಡಿಸಬೇಕಿದೆ.
ಡಾ.ದರ್ಶನ್ ನಾರಾಯಣ ಕೆಎಫ್‌ಡಿ ಸಂಶೋಧನಾ ವಿಜ್ಞಾನಿ
ಕೆಎಫ್‌ಡಿ ವಿಚಾರದಲ್ಲಿ ಹೈಕೋರ್ಟ್‌ ನಿರ್ದೇಶನ ಪಾಲಿಸುವುದಾಗಿ ಪ್ರಮಾಣಪತ್ರ ಸಲ್ಲಿಸಿದ್ದ ಸರ್ಕಾರ ಇಲ್ಲಿಯವರೆಗೂ ಹಾಗೆ ನಡೆದುಕೊಂಡಿಲ್ಲ. ಸರ್ಕಾರದ ಬೇಜವಾಬ್ದಾರಿ ಮಲೆನಾಡಿನ ಜನರಲ್ಲಿ ಅತಂಕ ಸೃಷ್ಟಿಸಿದೆ.
ಕೆ.ಪಿ.ಶ್ರೀಪಾಲ್ ಕೆಎಫ್‌ಡಿ ಜನಜಾಗೃತಿ ಒಕ್ಕೂಟದ ಸಂಚಾಲಕ ಶಿವಮೊಗ್ಗ

ಲಸಿಕೆ ಉತ್ಪಾದನೆ; ಡಬ್ಲ್ಯುಎಚ್‌ಒ ಮಾರ್ಗಸೂಚಿ ಅಡ್ಡಿ?

‘ಕೆಎಫ್‌ಡಿ ಬಾಧಿತರಿಗೆ ಈ ಹಿಂದೆ ಕೊಡುತ್ತಿದ್ದ ಲಸಿಕೆಯಲ್ಲಿ ಪ್ರತಿರೋಧಕ ಶಕ್ತಿ ಕಂಡುಬಾರದ ಕಾರಣ 2022ರ ಜನವರಿಯಿಂದ ಅದರ ಉತ್ಪಾದನೆ ಸಂಪೂರ್ಣ ನಿಲ್ಲಿಸಲಾಗಿದೆ’ ಎಂದು ಆರೋಗ್ಯ ಇಲಾಖೆ ಅಧಿಕಾರಿಯೊಬ್ಬರು ತಿಳಿಸಿದರು. ಹೊಸದಾಗಿ ಸಂಶೋಧನೆ ಹಾಗೂ ಉತ್ಪಾದನೆಗೆ ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್) ಮೂರು ಬಾರಿ ಜಾಹೀರಾತು ಕೊಟ್ಟರೂ ಯಾರೂ ಮುಂದೆ ಬಂದಿಲ್ಲ. ’ಲಸಿಕೆ ಬೇಕಿರುವುದು ಐದು ಲಕ್ಷ ಡೋಸ್. ಖಾಸಗಿಯವರು ಅಷ್ಟು ಸಂಖ್ಯೆಯನ್ನು ಬರೀ ಟ್ರಯಲ್ ರನ್‌ನಲ್ಲಿ (ಪ್ರಯೋಗಾರ್ಥ ಪರೀಕ್ಷೆ) ಸಿದ್ಧಪಡಿಸಿ ಚೆಲ್ಲುತ್ತಾರೆ. ವಿಶ್ವ ಆರೋಗ್ಯ ಸಂಸ್ಥೆ ಮಾರ್ಗಸೂಚಿ ಅನ್ವಯ ಕೆಎಫ್‌ಡಿ ಅಪರೂಪದ ಕಾಯಿಲೆ. ಅದರ ಔಷಧಿಯನ್ನು ವಾಣಿಜ್ಯ ಉದ್ದೇಶಕ್ಕೆ ಬಳಸದೇ ಉಚಿತವಾಗಿ ಕೊಡಬೇಕಿದೆ. ಹೀಗಾಗಿ ಲಸಿಕೆ ಉತ್ಪಾದನೆಗೆ ಯಾರೂ ಮುಂದೆ ಬರುತ್ತಿಲ್ಲ. ಖರ್ಚು–ವೆಚ್ಚ ಸಂಪೂರ್ಣ ಸರ್ಕಾರ ಭರಿಸಿದರೆ ಯಾರಾದರೂ ಮುಂದೆ ಬರಬಹುದು‘ ಎಂದು ಹೇಳುತ್ತಾರೆ.

ಕೆಎಫ್‌ಡಿ ಪರೀಕ್ಷೆಯಲ್ಲಿ ಲೋಪ; ತನಿಖೆಗೆ ಆದೇಶ

ಶಿವಮೊಗ್ಗದಲ್ಲಿ ಕೆಎಫ್‌ಡಿ ಪರೀಕ್ಷೆ ವೇಳೆ ಆರೋಗ್ಯ ಇಲಾಖೆ ಕೊಟ್ಟ ತಪ್ಪು ಮಾಹಿತಿ ಹೊಸನಗರ ತಾಲ್ಲೂಕಿನ ಯುವತಿಯ ಸಾವಿಗೆ ಕಾರಣವಾಗಿದೆ ಎಂಬ ಅರೋಪ ಕೇಳಿಬಂದಿದೆ. ‘ಪ್ರಯೋಗದ ವೇಳೆ ನೆಗೆಟಿವ್ ಎಂದು ವರದಿ ಕೊಟ್ಟಿದ್ದು ನಂತರ ಸತತ 4 ಬಾರಿ ಪರೀಕ್ಷೆ ನಡೆಸಿದಾಗ 3 ಬಾರಿ ಪಾಸಿಟಿವ್ ಬಂದಿದೆ. ಅಷ್ಟು ಹೊತ್ತಿಗೆ ಎರಡು ದಿನ ಕಳೆದಿದ್ದು ಯುವತಿಗೆ ಕೆಎಫ್‌ಡಿ ಚಿಕಿತ್ಸೆ ನೀಡಿಕೆ ವಿಳಂಬವಾಗಿ ಆಕೆ ಸಾವಿಗೀಡಾಗಿದ್ದಾಳೆ’ ಎಂದು ಜನಜಾಗೃತಿ ಒಕ್ಕೂಟ ಸಲ್ಲಿಸಿದ ದೂರು ಆಧರಿಸಿ ಆರೋಗ್ಯ ಇಲಾಖೆ ಆಯುಕ್ತ ಡಿ.ರಣದೀಪ್ ತನಿಖೆಗೆ ಆದೇಶಿಸಿದ್ದಾರೆ. ತೈಲ ವಿತರಣೆಯಲ್ಲೂ ಅವ್ಯವಹಾರ? ‘ಉಣುಗು ದೇಹಕ್ಕೆ ಅಂಟಿಕೊಳ್ಳದಂತೆ ತಡೆಯಲು ಕಾಡಂಚಿನ ಜನರಿಗೆ ಆರೋಗ್ಯ ಇಲಾಖೆಯಿಂದ  ಉಚಿತವಾಗಿ ಗುಣಮಟ್ಟದ ತೈಲ ನೀಡಬೇಕು. ಆದರೆ ಕಳಪೆ ತೈಲ ಪೂರೈಸಲಾಗುತ್ತಿದೆ. ಅದರಿಂದ ಹುಳು ಸಾಯುತ್ತಿಲ್ಲ’ ಎಂದು ಅಸ್ಸಾಂ ಮೂಲದ ವಿಜ್ಞಾನಿ ಆರೋಪಿಸಿದ್ದರು. ಅಗ್ಗದ ದರದ ತೈಲವನ್ನು ಮಿನರಲ್ ಆಯಿಲ್ ಬಾಟಲಿಗೆ ತುಂಬಿ ವಿತರಿಸಲಾಗುತ್ತಿದೆ ಎಂಬ ಆರೋಪಗಳು ಕೇಳಿಬಂದಿದ್ದವು. ಹೀಗಾಗಿ ಜಿಲ್ಲಾ ಮಟ್ಟದಲ್ಲಿ ತೈಲ ಖರೀದಿ ಬದಲು ರಾಜ್ಯಮಟ್ಟದಲ್ಲಿಯೇ ಖರೀದಿಗೆ ಆರೋಗ್ಯ ಇಲಾಖೆ ವ್ಯವಸ್ಥೆ ಮಾಡಿದೆ. ಸೇನೆಗೆ ಪೂರೈಸುವ ಸಂಸ್ಥೆಯಿಂದ ತೈಲ ಖರೀದಿಸಲಾಗುತ್ತಿದೆ.

‘ಈಗಿರುವ ಲಸಿಕೆಯನ್ನೇ ಸರ್ಕಾರ ನೀಡಲಿ‘

ಚಿಕ್ಕಮಗಳೂರು ಶಿವಮೊಗ್ಗ ಹಾಗೂ ಉತ್ತರ ಕನ್ನಡದಲ್ಲಿ ಇದೀಗ ಎಲ್ಲೆಡೆ ಮಂಗನ ಕಾಯಿಲೆ ತೀವ್ರವಾಗಿ ಹರಡುತ್ತಿದ್ದು ಅನೇಕ ಸಾವುಗಳು ಸಂಭವಿಸಿದೆ. ಬೇಸಿಗೆ ಇನ್ನೂ ದೀರ್ಘವಾಗಿದ್ದು ಈ ರೋಗದ ಸಮಸ್ಯೆ ಮತ್ತಷ್ಟು ಗಂಭೀರವಾಗುವ ಲಕ್ಷಣ ಕಂಡುಬರುತ್ತದೆ. ಹೀಗಾಗಿ ಸರ್ಕಾರ ಇದನ್ನು ಒಂದು ಆರೋಗ್ಯ ತುರ್ತು ಪರಿಸ್ಥಿತಿ ಎಂದು ಪರಿಗಣಿಸಿ ಸೂಕ್ತ ಚಿಕಿತ್ಸೆ ಹಾಗೂ ಪರಿಹಾರ ಕ್ರಮಗಳನ್ನು ಕೈಗೊಳ್ಳಬೇಕಿದೆ. ಪ್ರತಿ ವರ್ಷದಂತೆ ಈ ವರ್ಷವೂ ಈ ರೋಗಪೀಡಿತ ಪ್ರದೇಶಗಳಲ್ಲಿ 2 ರಿಂದ3 ಸುತ್ತು ಲಸಿಕೆ ನೀಡಬೇಕಿತ್ತು. ಆದರೆ ಈ ಕಾರ್ಯವನ್ನು ಸರ್ಕಾರ ಮಾಡಲೇ ಇಲ್ಲ. ಇದರ ಬದಲಾಗಿ ಹೊಸ ಲಸಿಕೆಯ ಸಂಶೋಧನೆ ಮತ್ತು ಅಭಿವೃದ್ಧಿಗೆ ಸರ್ಕಾರ ಪ್ರಯತ್ನಿಸುತ್ತಿದೆ ಎಂಬ ಮಾಹಿತಿ ಮಾಧ್ಯಮಗಳಲ್ಲಿ ಪ್ರಕಟವಾಗಿದೆ! ಆದರೆ ಹೊಸ ಲಸಿಕೆಯ ಅಭಿವೃದ್ಧಿಯಾಗಿ ಜನರ ಬಳಿಗೆ ತಲುಪುವವರೆಗೆ ಇನ್ನೂ ಒಂದೆರಡು ವರ್ಷಗಳಾಗಬಹುದು. ಅಲ್ಲಿಯವರೆಗಾದರೂ ಈಗ ಲಭ್ಯ ಇರುವ ಲಸಿಕೆಯನ್ನೇ ಪೂರೈಸುವುದು ಸರ್ಕಾರದ ಕರ್ತವ್ಯವಾಗಬೇಕು. ಇದನ್ನು ನಿಲ್ಲಿಸಿರುವುದು ತುಂಬಾ ಖಂಡನೀಯ. ಹೀಗಾಗಿ ಸರ್ಕಾರ ಈ ಕುರಿತು ತಕ್ಷಣದಲ್ಲಿ ಕಾರ್ಯ ಪ್ರವರ್ತವಾಗಬೇಕು. ಅನಂತ ಅಶೀಸರ ಅಧ್ಯಕ್ಷರು ಹಾಗೂ ಸಂಸ್ಥೆಯ ಸರ್ವ ಸದಸ್ಯರು ವೃಕ್ಷ ಲಕ್ಷ ಆಂದೋಲನ- ಕರ್ನಾಟಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.