ADVERTISEMENT

‘ಯೋಧ ತೇಜ್‌ ಬಹದ್ದೂರ್‌ ಯಾದವ್‌ ಹೇಳಿದ್ದು ನಿಜ’

​ಪ್ರಜಾವಾಣಿ ವಾರ್ತೆ
Published 13 ಜನವರಿ 2017, 19:30 IST
Last Updated 13 ಜನವರಿ 2017, 19:30 IST

ಬೆಂಗಳೂರು: ‘ಗಡಿ ಭದ್ರತಾ ಪಡೆಯ ಸೈನಿಕರಿಗೆ ಸರಿಯಾಗಿ ಊಟ ನೀಡುತ್ತಿಲ್ಲ ಎಂದು ಯೋಧ ತೇಜ್‌ ಬಹದ್ದೂರ್‌ ಯಾದವ್‌ ಅವರ ಹೇಳಿಕೆಯಲ್ಲಿ ಸತ್ಯಾಂಶವಿದೆ’ ಎಂದು ಭಾರತೀಯ ಸೇನೆಯ ನಿವೃತ್ತ ಕರ್ನಲ್‌ ಅನಬು ರಾಜ್‌ ಹೇಳಿದರು.

ಕರ್ನಾಟಕ ಜನಸೇನೆ ಸಂಘಟನೆ ಶುಕ್ರವಾರ ಇಲ್ಲಿ ಏರ್ಪಡಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು,‘1984ರಿಂದ 1991ರವರೆಗೆ ಸೇನೆಯಲ್ಲಿ ಸೇವೆ ಸಲ್ಲಿಸಿದ್ದೇನೆ. ಶ್ರೀನಗರದ ಮೀಡಿಯಂ ರೆಜಿಮೆಂಟಿನಲ್ಲಿ ಸೇವೆ ಸಲ್ಲಿಸುವಾಗ ಸರಿಯಾದ ಆಹಾರ ನೀಡುತ್ತಿರಲಿಲ್ಲ. ಅಂದಿನ ಪರಿಸ್ಥಿತಿ ಇಂದಿಗೂ ಮುಂದುವರೆದಿದೆ ಎಂಬುದು ತೀರಾ ನಾಚಿಕೆಗೇಡಿನ ಸಂಗತಿ’ ಎಂದರು.

‘ಸಂಸದರು, ಶಾಸಕರ ಮಕ್ಕಳು ಸೈನಿಕರಾಗಿ ಸೇರುವುದಿಲ್ಲ.  ಸೇನೆಯಲ್ಲಿರುವ ಬಹುತೇಕ ಯೋಧರು ಬಡವರ ಮಕ್ಕಳು. ಅವರು ಜೀವನೋಪಾಯಕ್ಕಾಗಿ ಸೇನೆ ಸೇರಿದ್ದಾರೆ’ ಎಂದು ಹೇಳಿದರು.

ADVERTISEMENT

‘ಸೇನೆಯಲ್ಲಿನ  ಶೇ60 ರಷ್ಟು ಸೈನಿಕರು ಹಿರಿಯ ಅಧಿಕಾರಿಗಳ ಸೇವೆ ಮಾಡುತ್ತಿದ್ದಾರೆ. ಹಿರಿಯ ಅಧಿಕಾರಿಗಳ ಚಾಕರಿ ಮಾಡಲು ನಿರಾಕರಿಸಿದರೆ ಕಠಿಣ ಕ್ರಮ ಎದುರಿಸಬೇಕಾಗುತ್ತದೆ. ಹೀಗಾಗಿ ಯಾವ ಯೋಧನೂ  ಬಹಿರಂಗವಾಗಿ ಕಷ್ಟ ಹೇಳಿಕೊಳ್ಳುವುದಿಲ್ಲ’ ಎಂದರು.

‘ವೈದ್ಯಕೀಯ ಕಾರಣದಿಂದಾಗಿ ಕರ್ನಲ್‌ ಹುದ್ದೆಯಿಂದ ನಿವೃತ್ತಿ ಹೊಂದಿದ್ದೇನೆ. ಇಂದಿಗೂ ಪಿಂಚಣಿ ದೊರೆಯುತ್ತಿಲ್ಲ. ಈ ಹೇಳಿಕೆಗಳಿಗೆ ಯಾರು ಏನೇ ಕ್ರಮ ಜರುಗಿಸಿದರೂ ಎದುರಿಸಲು ಸಿದ್ಧನಾಗಿದ್ದೇನೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.