ADVERTISEMENT

ಅಯೋಧ್ಯೆಯ ರಾಮಲಲ್ಲಾ ಮೂರ್ತಿಯ ವಿಶೇಷ ಉಡುಗೆ ಬಗ್ಗೆ ಗೊತ್ತಿದೆಯೇ? ಇಲ್ಲಿದೆ ಮಾಹಿತಿ

ಟೈಲರ್‌ ಕುಟುಂಬವೊಂದರ ದಶಕಗಳ ವಿಶಿಷ್ಟ ಸೇವೆ

ಪಿಟಿಐ
Published 3 ಆಗಸ್ಟ್ 2020, 11:42 IST
Last Updated 3 ಆಗಸ್ಟ್ 2020, 11:42 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಆಗಸ್ಟ್‌ 5ರಂದು ಅಯೋಧ್ಯೆಯಲ್ಲಿ ರಾಮಮಂದಿರಕ್ಕೆ ಭೂಮಿ ಪೂಜೆ ನೆರವೇರುತ್ತಿದ್ದು, ಅಂದು ರಾಮದೇಗುಲದ ರಾಮಲಲ್ಲಾ ಮೂರ್ತಿಗೆ ಹಸಿರು ಮತ್ತು ಕಿತ್ತಳೆ ಬಣ್ಣದ ಎರಡು ಸೆಟ್‌ ವಿಶಿಷ್ಟ ಉಡುಪುಗಳನ್ನು ಇಲ್ಲಿನ ಟೈಲರ್‌ ಕುಟುಂಬವೊಂದು ತಯಾರಿಸಿಕೊಟ್ಟಿದೆ.

ಮೂರೂವರೆ ದಶಕಗಳಿಂದ ರಾಮಲಲ್ಲಾ ಮೂರ್ತಿಗೆ ಉಡುಗೆಗಳನ್ನು ಹೊಲಿದುಕೊಡುತ್ತಿರುವ ಶಂಕರ್‌ಲಾಲ್‌ ಮತ್ತು ಭಗತ್‌ಲಾಲ್‌ ಕುಟುಂಬ, ಶಿಲಾನ್ಯಾಸದ ದಿನ ರಾಮನವಿಗ್ರಹಕ್ಕೆ ತೊಡಿಸಲು, ನವರತ್ನಗಳ ಹರಳುಗಳನ್ನು ಚಿನ್ನದ ದಾರದಿಂದ ಪೋಣಿಸಿ ಹೊಲಿದಿರುವ ಉಡುಪುಗಳನ್ನು ತಯಾರಿಸಿಕೊಟ್ಟಿದೆ.ಈ ವಿಶಿಷ್ಟ ಉಡುಗೆಗಳನ್ನು ಭಾನುವಾರ ಮುಖ್ಯ ಅರ್ಚಕ ಸತ್ಯೇಂದ್ರದಾಸ್‌ ಅವರಿಗೆ ನೀಡಿದ್ದಾರಂತೆ.

ವಿಶಿಷ್ಟ ಟೈಲರ್‌ ಕುಟುಂಬ

ADVERTISEMENT

ಅಯೋಧ್ಯಾ ನಗರದ ಬಡಿ ಕುಟಿಯಾ ಪ್ರದೇಶದಲ್ಲಿರುವ ಈ ಕುಟುಂಬ ಒಂಥರಾ ವಿಶಿಷ್ಟವಾಗಿದೆ. ಏಕೆಂದರೆ, ಈ ಕುಟುಂಬದ ಸದಸ್ಯರು ದೇವರಿಗೆ ಮತ್ತು ಸಾಧು–ಸಂತರಿಗೆ ಮಾತ್ರ ಉಡುಪುಗಳನ್ನು ಹೊಲಿದುಕೊಡುತ್ತಾರೆ. ಬೇರೆ ಯಾರ ಬಟ್ಟೆಗಳನ್ನೂ ಹೊಲಿಯಲು ಆರ್ಡರ್‌ ತೆಗೆದುಕೊಳ್ಳುವುದಿಲ್ಲ. ಅಷ್ಟೇ ಅಲ್ಲ, ತಾವು ತೊಡುವ ಬಟ್ಟೆಗಳನ್ನೂ ಬೇರೆ ಟೈಲರ್‌ಗಳಿಂದ ಹೊಲಿಸಿಕೊಳ್ಳುತ್ತಾರಂತೆ !

‘ನಮ್ಮ ತಂದೆ ದಿವಂಗತ ಬಾಬುಲಾಲ್ ಅವರು 1985ರಿಂದ ರಾಮಲಲ್ಲಾ ಮೂರ್ತಿಗೆ ಉಡುಪುಗಳನ್ನು ಹೊಲಿದುಕೊಡುತ್ತಿದ್ದರು. ದೇವಾಲಯಕ್ಕೆ ಹೊಲಿಗೆ ಯಂತ್ರ ಕೊಂಡೊಯ್ದು ರಾಮದೇವರ ಎದುರು ಇಟ್ಟುಕೊಂಡು ಮೂರ್ತಿಗೆ ಬೇಕಾದ ಬಟ್ಟೆಗಳನ್ನು ಹೊಲಿದುಕೊಡುತ್ತಿದ್ದರು. ನನ್ನ ಹಿರಿಯಣ್ಣ, ನಾನೂ ತಂದೆಯ ಕಾರ್ಯದಲ್ಲಿ ನೆರವಾಗುತ್ತಿದ್ದೆವು. ಅಲ್ಲಿಂದ ನಮ್ಮ ಹೊಲಿಗೆ ವೃತ್ತಿ ಮುಂದುವರಿದಿದೆ‘ ಎಂದು ನೆನಪಿಸಿಕೊಳ್ಳುತ್ತಾರೆ ಶಂಕರ್‌ಲಾಲ್‌.

ಮಕ್ಮಲ್ ಬಟ್ಟೆಯ ಉಡುಗೆ

ರಾಮದೇವರ ವಿಗ್ರಹಕ್ಕೆ ತೊಡಿಸುವ ಉಡುಪುಗಳನ್ನು ಮೃದುವಾದ ಮಕ್ಮಲ್‌ ಬಟ್ಟೆ (ವೆಲ್ವೆಟ್‌)ಯಿಂದ ಹೊಲಿಯುತ್ತಾರೆ. ‘ಏಕೆಂದರೆ, ನಾವು ಬಾಲರಾಮನಿಗಾಗಿ ಬಟ್ಟೆ ಹೊಲಿಯುತ್ತೇವಲ್ಲಾ. ಹಾಗಾಗಿ ಮೃದುಬಟ್ಟೆಯನ್ನೇ ಬಳಸುತ್ತೇವೆ‘ ಎನ್ನುತ್ತಾರೆ ಸಹೋದರರು.

ಅಂದ ಹಾಗೆ, ಈ ರಾಮಲಲ್ಲ ಮೂರ್ತಿಗೆ, ಪ್ರತಿ ದಿನ ಒಂದೊಂದು ಬಣ್ಣದ ಉಡುಪನ್ನು ತೊಡಿಸುತ್ತಾರೆ. ಸೋಮವಾರ –ಶ್ವೇತವರ್ಣ, ಮಂಗಳವಾರ –ಕೆಂಪು, ಬುಧವಾರ –ಹಸಿರು, ಗುರುವಾರ–ಹಳದಿ(ಕಿತ್ತಳೆ), ಶುಕ್ರವಾರ– ಕೆನೆ ಬಣ್ಣ, ಶನಿವಾರ – ನೀಲಿ ಮತ್ತು ಭಾನುವಾರ ಗುಲಾಬಿ ಬಣ್ಣದ ಬಟ್ಟೆಗಳಿಂದ ಅಲಂಕರಿಸುತ್ತಾರೆ. ರಾಮಲಲ್ಲ ಮೂರ್ತಿಯೊಂದಿಗಿರುವ ಲಕ್ಷ್ಮಣ ಭರತ, ಶತ್ರುಜ್ಞ, ಹನುಮಾನ್‌ಗೂ, ರಾಮಲಲ್ಲಾ ಮೂರ್ತಿಗೆ ಬಳಸಿದ ಬಣ್ಣದ ಬಟ್ಟೆಗಳ ಉಡುಪನ್ನೇ ಹಾಕುತ್ತಾರೆ.ಈ ಸರದಿಯ ಅನುಸಾರ ಆ.5 ಬುಧವಾರ ಬರುವುದರಿಂದ, ಹಸಿರು ಮತ್ತು ಕಿತ್ತಳೆ ಬಣ್ಣದ ಉಡುಪನ್ನು ಹೊಲಿದುಕೊಟ್ಟಿದ್ದಾರಂತೆ.

‘ಈ ದೇವರ ಮೂರ್ತಿಗೆ ಉಡುಪು ಹೊಲಿಯಲು 11 ಮೀಟರ್‌ ಉದ್ದದ ಬಟ್ಟೆ ಅಗತ್ಯವಿತ್ತು. ಆದರೆ, ಈಗ 17 ಮೀಟರ್ ಬೇಕಾಗಿದೆ. ಇನ್ನು ಭವ್ಯವಾದ ದೇವಾಲಯ ನಿರ್ಮಾಣವಾದ ಮೇಲೆ ಇನ್ನಷ್ಟು ಬಟ್ಟೆ ಬೇಕಾಗುತ್ತದೋ, ನನಗೆ ಅಂದಾಜಿಲ್ಲ‘ ಎನ್ನುತ್ತಾರೆ ಶಂಕರಲಾಲ್‌.

ಕುಟುಂಬ ಸದಸ್ಯರ ಸಾಥ್

ಸದ್ಯ ಶಂಕರ್‌ಲಾಲ್‌ಗೆ ಅವರ ಸೋದರನ ಮಕ್ಕಳಾದ ಪವನ್‌ ಕುಮಾರ್, ಸಂಜಯ್‌ಕುಮಾರ್ ಮತ್ತು ಶ್ರವಣ್‌ಕುಮಾರ್‌ ದೇವರ ಉಡುಪುಗಳ ತಯಾರಿಕೆಯಲ್ಲಿ ನೆರವಾಗುತ್ತಿದ್ದಾರೆ. ‘ನನ್ನ ಮಗ ರಾಜ್‌ವೀರ್‌ 7ನೇ ತರಗತಿಯಲ್ಲಿದ್ದಾನೆ. ಅವರು 8ನೇ ತರಗತಿ ಮುಗಿಸಿ, ನನ್ನ ಕೆಲಸದಲ್ಲಿ ನೆರವಾಗುತ್ತಾನೆ ಎಂಬ ಭರವಸೆ ಶಂಕರ್‌ಲಾಲ್ ಅವರದ್ದು.

ಶಂಕರಲಾಲ್‌ ಹಿರಿಯ ಸಹೋದರ ಭಗವತ್‌ಲಾಲ್‌ಗೆ ಹೊಲಿಗೆಯಲ್ಲಿ ಪರಿಣತಿ ಪಡೆಯಲು ದೇವರೇ ಕಾರಣ ಎಂದು ಹೇಳುತ್ತಾರೆ.‘ಭಗವಂತ ಯಾವ ಗುಣಮಟ್ಟದ ಬಟ್ಟೆಯನ್ನು ಕರುಣಿಸುತ್ತಾನೋ, ಅದೇ ಬಟ್ಟೆಯನ್ನು ಸ್ವೀಕರಿಸಿ, ಹೊಲಿದುಕೊಡುತ್ತೇವೆ. ನಮ್ಮ ಎಲ್ಲ ಕೆಲಸವೂ ಭಗವಂತನ ಇಚ್ಛೆಯಂತೆ ನಡೆಯುತ್ತಿದೆ‘ ಎನ್ನುತ್ತಾರೆ ಅವರು. ಹೀಗೆ ಇಡೀ ಕುಟುಂಬವು, ದೇವರ ಮೂರ್ತಿಗಳಿಗೆ ಉಡುಗೆ ತಯಾರಿಸಿಕೊಡುವ ಕಾಯಕದಲ್ಲಿ ಭಾಗಿಯಾಗಿದೆ.

ಈ ಕುಟುಂಬದ ಸಮರ್ಪಣಾ ಮನೋಭಾವ, ಭೂಮಿ ಪೂಜೆ ಸಮಾರಂಭದಲ್ಲಿ ದೇವರಿಗೆ ತೊಡಿಸಲು ಅವರು ತಯಾರಿಸಿಕೊಟ್ಟಿರುವ ಭವ್ಯವಾದ ಉಡುಪಿನಲ್ಲಿ ಸ್ಪಷ್ಟವಾಗಿ ಗೋಚರಿಸುತ್ತದೆ.

ರಾಮಲಲ್ಲಾ ಮೂರ್ತಿಗೆ ಉಡುಗೆಗಳನ್ನು ಸಿದ್ಧಪಡಿಸುವ ಈ ಕುಟುಂಬ ಅಯೋಧ್ಯೆಯಲ್ಲಿ ಈಗ ಆಕರ್ಷಣೆಯ ಕೇಂದ್ರವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.