ADVERTISEMENT

ಕುಟುಂಬದೊಳಗಿನ ಜಗಳದಿಂದ ಪ್ರಜ್ವಲ್‌ ಪ್ರಕರಣ ಹೊರಬಂದಿದೆ: ಡಿ.ಕೆ. ಶಿವಕುಮಾರ್‌

​ಪ್ರಜಾವಾಣಿ ವಾರ್ತೆ
Published 4 ಮೇ 2024, 6:34 IST
Last Updated 4 ಮೇ 2024, 6:34 IST
<div class="paragraphs"><p>ಡಿ.ಕೆ. ಶಿವಕುಮಾರ್‌</p></div>

ಡಿ.ಕೆ. ಶಿವಕುಮಾರ್‌

   

ಬೆಂಗಳೂರು: ಜೆಡಿಎಸ್‌ ನಾಯಕರ ಕುಟುಂಬದ ಒಳಗಿನ ಜಗಳದಿಂದಾಗಿಯೇ ಹಾಸನ ಸಂಸದ ಪ್ರಜ್ವಲ್‌ ರೇವಣ್ಣ ಪ್ರಕರಣ ಹೊರಬಂದಿದೆ ಎಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಹೇಳಿದರು.

ಸುದ್ದಿಗಾರರ ಜತೆ ಶನಿವಾರ ಮಾತನಾಡಿದ ಅವರು, ʼವಿಡಿಯೊಗಳು ಬಹಿರಂಗವಾದ ಬಳಿಕ ಉಪ್ಪು ತಿಂದವರು ನೀರು ಕುಡಿಯಬೇಕು ಎಂದು ಹೇಳಿದವರು ಯಾರು? ರಾಜ್ಯದ ಜನರ ಕ್ಷಮೆ ಕೇಳಿದ್ದು ಯಾರು? ಅವರ ಕುಟುಂಬ ಮತ್ತು ನಮ್ಮ ಕುಟುಂಬ ಬೇರೆ ಬೇರೆ ಎಂದು ಹೇಳಿದವರು ಯಾರುʼ ಎಂದು ಪ್ರಶ್ನಿಸಿದರು.

ADVERTISEMENT

ಮೇ 7ರ ಬಳಿಕ ಪ್ರಕರಣ ಎಲ್ಲಿಗೆ ಹೋಗುತ್ತದೆ ಕಾದು ನೋಡಿ ಎಂಬ ಜೆಡಿಎಸ್‌ ರಾಜ್ಯ ಘಟಕದ ಅಧ್ಯಕ್ಷ ಎಚ್‌.ಡಿ. ಕುಮಾರಸ್ವಾಮಿ ಅವರ ಆರೋಪದ ಕುರಿತು ಪ್ರತಿಕ್ರಿಯಿಸಿದ ಅವರು, ʼಮೇ 7 ಅಲ್ಲ. ಅಲ್ಲಿವರೆಗೂ ಏಕೆ ಕಾಯಬೇಕು. ಇದರ ಮೂಲ, ಹಿನ್ನೆಲೆ ಏನು ಎಂಬುದನ್ನು ಬಿಚ್ಚಬೇಕಾ? ಇದು ಅವರ ಕುಟುಂಬದ ಆಂತರಿಕ ವಿಷಯʼ ಎಂದರು.

ಜೆಡಿಎಸ್‌ ಶಾಸಕರನ್ನು ಕಾಂಗ್ರೆಸ್‌ ನಾಯಕರು ಸಂಪರ್ಕಿಸುತ್ತಿದ್ದಾರೆ ಎಂಬ ಆರೋಪದ ಬಗ್ಗೆ ಕೇಳಿದಾಗ, ʼಜೆಡಿಎಸ್‌ ಪಕ್ಷದ ಯಾರ ಜತೆಗೂ ನಾನು ಸಂಪರ್ಕದಲ್ಲಿಲ್ಲ. ಅವರ ಪಕ್ಷದ ವಿಚಾರಕ್ಕೆ ನಾನು ತಲೆ ಹಾಕುವುದಿಲ್ಲ. ಅವರ ಶಾಸಕರು, ಕುಟುಂಬದವರು ಹತಾಶರಾಗಿದ್ದಾರೆ. ಹೀಗಾಗಿ ಏನೇನೋ ಮಾತನಾಡುತ್ತಿದ್ದಾರೆ. ಅದಕ್ಕೆ ನಾನು ಪ್ರತಿಕ್ರಿಯಿಸುವುದಿಲ್ಲʼ ಎಂದು ಉತ್ತರಿಸಿದರು.

ಒಕ್ಕಲಿಗ ನಾಯಕತ್ವ ಪಡೆಯಲು ಪ್ರಜ್ವಲ್‌ ಪ್ರಕರಣ ಹೊರ ಹಾಕಲಾಗಿದೆ ಎಂಬ ಕುಮಾರಸ್ವಾಮಿ ಹೇಳಿಕೆಗೆ ಪ್ರತಿಕ್ರಿಯಿಸಿದ ಶಿವಕುಮಾರ್‌, ʼನನಗೆ ಕಾಂಗ್ರೆಸ್‌ ನಾಯಕ ಎಂಬುದೇ ಸಾಕು. ಒಕ್ಕಲಿಗ ನಾಯಕನ ಪಟ್ಟ ಬೇಕಿಲ್ಲ. ಬಿಜೆಪಿಯವರು ಗಂಟೆಗೊಂದು ಗಳಿಗೆಗೊಂದು ಮಾತನಾಡುತ್ತಿದ್ದಾರೆ. ಜೆಡಿಎಸ್‌ನವರೂ ಅದೇ ರೀತಿ ಮಾತನಾಡುತ್ತಿದ್ದಾರೆʼ ಎಂದರು.

ʼಒಕ್ಕಲಿಗನಾಗಿ ಹುಟ್ಟಿದ್ದೇನೆ. ಆ ಸಮಾಜಕ್ಕೆ ಗೌರವ ಕೊಡುವುದು, ಸಹಾಯ ಮಾಡುವುದು ನನ್ನ ಕರ್ತವ್ಯ ಅದನ್ನು ಮಾಡುತ್ತೇನೆ. ಆದರೆ, ಒಕ್ಕಲಿಗ ನಾಯಕ ಎಂದು ಕರೆಸಿಕೊಳ್ಳಲು ನನಗೆ ಇಷ್ಟವಿಲ್ಲʼ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.