ADVERTISEMENT

ಹಿಂಗೂ ಬಿಡಿಸಿ ಹೊಂಗೆ ಹುಣಸೆ

​ಪ್ರಜಾವಾಣಿ ವಾರ್ತೆ
Published 28 ಜನವರಿ 2019, 19:30 IST
Last Updated 28 ಜನವರಿ 2019, 19:30 IST
ಹೊಂಗೆಕಾಯಿ ಬೀಜ ಬಿಡಿಸುವ ಯಂತ್ರ
ಹೊಂಗೆಕಾಯಿ ಬೀಜ ಬಿಡಿಸುವ ಯಂತ್ರ   

ಕೂಲಿ ಆಳುಗಳ ಕೊರತೆ ಎದುರಿಸುತ್ತಿರುವ ಕೃಷಿ ಕ್ಷೇತ್ರದಲ್ಲಿ, ಕಾರ್ಮಿಕರ ಜಾಗದಲ್ಲಿ ಯಂತ್ರಗಳನ್ನು ಬಳಸುವುದು ಅನಿವಾರ್ಯವಾಗಿದೆ. ಸದ್ಯದ ಮಟ್ಟಿಗೆ ಧಾನ್ಯಗಳ ಸಂಸ್ಕರಣೆಗೇನೋ ಯಂತ್ರಗಳು ಲಭ್ಯವಿವೆ. ಆದರೆ, ತೋಟಗಾರಿಕಾ ಬೆಳೆಗಳು, ಎಣ್ಣೆ ಉತ್ಪಾದಿಸುವ ಕಾಯಿಗಳನ್ನು ಸಂಸ್ಕರಿಸುವ ಯಂತ್ರಗಳ ತಯಾರಾಗಬೇಕಾದ ಅಗತ್ಯವಿದೆ.

ಇದನ್ನು ಮನಗಂಡ ಬೆಂಗಳೂರು ಗಾಂಧಿ ಕೃಷಿ ವಿಶ್ವವಿದ್ಯಾಲಯ ಹೊಂಗೆಕಾಯಿ ಹಾಗೂ ಹುಣಸೆಹಣ್ಣಿನ ಸಿಪ್ಪೆ ಸುಲಿಯುವ ಯಂತ್ರಗಳನ್ನು ಅಭಿವೃದ್ಧಿಪಡಿಸಿದೆ. ಈ ಎರಡೂ ಯಂತ್ರಗಳು, ಆಳುಗಳ ಕೊರತೆಯನ್ನು ನಿವಾರಿಸುವ ಜತೆಗೆ, ಕೆಲಸದ ವೇಗವನ್ನು ಹೆಚ್ಚಿಸಲಿವೆ. ಸಮಯದ ಉಳಿತಾಯದ ಜತೆಗೆ ಹಣವೂ ಉಳಿಯಲಿದೆ.

ಹೊಂಗೆಕಾಯಿ ಬೀಜ ಬಿಡಿಸುವ ಯಂತ್ರ
ಹೊಂಗೆ ಮರದಿಂದ ಕೊಯ್ಲಾದ ಕಾಯಿಯನ್ನು ಚೆನ್ನಾಗಿ ಒಣಗಿಸಿದ ನಂತರ ಸಿಪ್ಪೆ ಸುಲಿಯುತ್ತಾರೆ. ಹಾಗೆ ಒಣಗಿದ ಕಾಯಿಗಳನ್ನು ಯಂತ್ರಕ್ಕೆ ಸುರಿಯಬೇಕು. ಯಂತ್ರ ಚಾಲನೆ ಮಾಡಿದ ನಂತರ, ಒಂದೊಂದೇ ಬೀಜದ ಸಿಪ್ಪೆ ಪುಡಿಯಾಗುತ್ತಾ, ಬೀಜಗಳು ಉದುರಲಾರಂಭಿಸುತ್ತವೆ.

ADVERTISEMENT

ಕಾರ್ಮಿಕರು ಒಂದು ಗಂಟೆಗೆ ಅಂದಾಜು 6 ಕೆ.ಜಿ ಬೀಜ ಸುಲಿಯುತ್ತಾರೆ. ದಿನಕ್ಕೆ ಗರಿಷ್ಠ 40 ಕೆ.ಜಿಯಷ್ಟು ಬೀಜ ಸುಲಿಯುತ್ತಾರೆ. ಆದರೆ, ಈ ಯಂತ್ರ, ಗಂಟೆಗೆ ಅಂದಾಜು 35 ಕೆ.ಜಿಗೂ ಹೆಚ್ಚು ಬೀಜಗಳ ಸಿಪ್ಪೆ ಬಿಡಿಸುತ್ತದೆ. ದಿನಕ್ಕೆ ಕನಿಷ್ಠ 250 ಕೆ.ಜಿಯಷ್ಟು ಬೀಜ ಸುಲಿಯಬಹುದು. ಆಳುಗಳು ಸುಲಿಯುವ ಬೀಜದ ಕೂಲಿ ಲೆಕ್ಕ ಹಾಕಿದರೆ, ಒಂದು ಗಂಟೆಗೆ ₹30 ಖರ್ಚಾಗುತ್ತದೆ. ಆದರೆ, ಈ ಯಂತ್ರದಲ್ಲಿ 38 ಪೈಸೆಯಲ್ಲಿ ಒಂದು ಕೆ.ಜಿಯಷ್ಟು ಬೀಜದ ಸಿಪ್ಪೆ ಸುಲಿಯಬಹುದು.

ಹುಣಸೆ ಹಣ್ಣಿನ ಸಿಪ್ಪೆ ಸುಲಿವ ಯಂತ್ರ
ಮರದಿಂದ ಹುಣಸೆ ಹಣ್ಣನ್ನು ಕೊಯ್ಲು ಮಾಡಿಕೊಂಡು ತಂದು, ಬಿಸಿಲಲ್ಲಿ ಒಂದು ಹದಕ್ಕೆ ಒಣಗಿಸಬೇಕು. ನಂತರ ಈ ಯಂತ್ರಕ್ಕೆ ಅಳತೆಗೆ ಅನುಸಾರವಾಗಿ ಸುರಿಯಬೇಕು. ಪಕ್ಕದಲ್ಲಿರುವ ಚಕ್ರವನ್ನು ತಿರಿವಿದಾಗ ಸಿಪ್ಪೆ ಸುಲಿದು, ಹಣ್ಣನ್ನು ಬೇರ್ಪಡಿಸುತ್ತದೆ. ಈ ಸಮಯದಲ್ಲಿ ಒಂದೂ ಹಣ್ಣಿಗೂ ತೊಂದರೆ ಆಗುವುದಿಲ್ಲ.

ಒಬ್ಬ ಕಾರ್ಮಿಕ ಒಂದು ಗಂಟೆಗೆ ಅಂದಾಜು 40 ಕೆ.ಜಿ (ಒಂದು ಕೆ.ಜಿಗೆ ತಗಲುವ ವೆಚ್ಚ ₹1.25) ಹಾಗೂ ದಿನಕ್ಕೆ ಅಂದಾಜು 300 ಕೆ.ಜಿ ಸಿಪ್ಪೆ ಸುಲಿಯಬಹುದು. ಆದರೆ, ಈ ಯಂತ್ರದಲ್ಲಿ ಒಂದು ಗಂಟೆಗೆ 1ಸಾವಿರ ಕೆ.ಜಿ (ಕೆ.ಜಿಗೆ ತಗಲುವ ವೆಚ್ಚ 0.11 ಪೈಸೆ) ಹಾಗೂ ದಿನಕ್ಕೆ 8ಸಾವಿರ ಕೆ.ಜಿಯಷ್ಟು ಹುಣಸೆ ಹಣ್ಣಿನ ಸಿಪ್ಪೆಯನ್ನು ಸುಲಿಯಬಹುದು.

ಎಲ್ಲ ರೀತಿಯ ರೈತರಿಗೂ ಅನುಕೂಲ
ಹೊಂಗೆ ಕಾಯಿ ಮತ್ತು ಹುಣಸೆ ಹಣ್ಣು ಬೇಸಿಗೆಯಲ್ಲಿ ಕಟಾವಿಗೆ ಬರುತ್ತವೆ. ಈ ಕೊಯ್ಲು ಆದ ಬಳಿಕ ಅವುಗಳ ಬೀಜ ಬಿಡಿಸುವುದು ಮತ್ತು ಸಿಪ್ಪೆ ಸುಲಿಯುವುದಕ್ಕೆ ಕೂಲಿ ಕಾರ್ಮಿಕರ ಸಮಸ್ಯೆ ಬಹುವಾಗಿ ಕಾಡುತ್ತದೆ. ದೊಡ್ಡ ದೊಡ್ಡ ಹುಣಸೆ ತೋಪುಗಳನ್ನು ಹೊಂದಿರುವ ಬಯಲು ಸೀಮೆಯ ರೈತರು ಹಾಗೂ ಗದ್ದೆಯ ಬದುಗಳ ಮೇಲೆ, ತೋಟದ ಬೇಲಿಯಲ್ಲಿ ಸಾಲು ಸಾಲು ಹೊಂಗೆ ಮರಗಳನ್ನು ಬೆಳೆಸಿರುವವರಿಗೆ, ಬೀಜದ ಸಿಪ್ಪೆ ಸುಲಿಯಲು ಸಾಧ್ಯವಾಗದೇ, ಹಾಗೇ ಹೊರ ಗುತ್ತಿಗೆ ನೀಡುತ್ತಿದ್ದಾರೆ. ಇಂಥ ವರ್ಗದ ರೈತರಿಗೆ, ಈ ಯಂತ್ರ ಅನುಕೂಲವಾಗುತ್ತದೆ ಎನ್ನುತ್ತಾರೆ ಯಂತ್ರಗಳನ್ನು ಅಭಿವೃದ್ಧಿಪಡಿಸಿರುವ ಕೃಷಿ ವಿಶ್ವವಿದ್ಯಾಲಯದ ಕೊಯ್ಲೋತ್ತರ ವಿಭಾಗದ ಎಂಜಿನಿಯರ್‌ ಮತ್ತು ತಂತ್ರಜ್ಞಾನ ವಿಭಾಗದ ಸಹಾಯಕ ಸಂಶೋಧನಾ ಎಂಜಿನಿಯರ್‌ ಎಂ. ಬಿ.ದರ್ಶನ್‌.‌

ಈ ಯಂತ್ರಗಳು ಕಾರ್ಮಿಕರ ಸಮಸ್ಯೆಯನ್ನು ನೀಗಿಸುವುದಲ್ಲದೆ ಕೆಲಸವನ್ನು ಹಗುರಾಗಿಸಲಿದೆ. ನಿಗದಿತ ಅವಧಿಯಲ್ಲಿ ಕೆಲಸ ಮುಗಿಸಬಹುದು. ಒಬ್ಬವ್ಯಕ್ತಿ ಸುಲಭವಾಗಿ ನಿರ್ವಹಿಸುವ ಹಾಗೆ ಯಂತ್ರಗಳನ್ನು ವಿನ್ಯಾಸಗೊಳಿಸಲಾಗಿದೆ. ಅಲ್ಲದೆ ಸರಳ ಮತ್ತು ಸುಲಭವಾಗಿ ಕಾರ್ಯ ನಿರ್ವಹಿಸಲಿದೆ.

ಈ ಯಂತ್ರಗಳ ಕುರಿತ ಹೆಚ್ಚಿನ ಮಾಹಿತಿಗಾಗಿ ಮೊ.ಸಂ. 8095814153 ಅನ್ನು ಸಂಪರ್ಕಿಸಬಹುದು.

**

ಕಳೆದ ವರ್ಷ ಅಭಿವೃದ್ಧಿಪಡಿಸಿದ್ದು

ಮಾರ್ಚ್‌ 2018ರಲ್ಲಿ ಈ ಯಂತ್ರಗಳನ್ನು ಅಭಿವೃದ್ಧಿಪಡಿಸಲಾಗಿದೆ. ಹೊಂಗೆಕಾಯಿ ಬೀಜ ಬಿಡಿಸುವ ಯಂತ್ರಕ್ಕೆ ₹ 70 ಸಾವಿರ ಮತ್ತುಹುಣಸೆ ಹಣ್ಣಿನ ಸಿಪ್ಪೆ ಸುಲಿಯುವ ಯಂತ್ರಕ್ಕೆ ₹ 1 ಲಕ್ಷ ನಿಗದಿಪಡಿಸಲಾಗಿದೆ. ರೈತರಿಗೆ ಕೈಗಟಕುವ ದರದಲ್ಲಿ ಯಂತ್ರಗಳು ಸಿಗುವಂತಾಗಬೇಕು ಎಂಬ ದೃಷ್ಟಿಯಿಂದ ದರ ನಿಗದಿಪಡಿಸಲಾಗಿದೆ. ‘ರೈತರು ತೋಟಗಾರಿಕೆ ಮತ್ತು ಕೃಷಿ ಇಲಾಖೆಯ ಮೂಲಕ ನಮ್ಮನ್ನು ಸಂಪರ್ಕಿಸಿದರೆ ಈ ಯಂತ್ರಗಳಿಗೆ ಶೇ 50 ಸಬ್ಸಿಡಿ ನೀಡಲು ನಿರ್ಧರಿಸಿದ್ದೇವೆ’ ಎನ್ನುತ್ತಾರೆ ದರ್ಶನ್‌.‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.