ADVERTISEMENT

PV Web Exclusive: ಕೋರೆ ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷರಾಗಿದ್ದು ಏಕೆ?

ಎಂ.ಮಹೇಶ
Published 28 ಜನವರಿ 2021, 12:26 IST
Last Updated 28 ಜನವರಿ 2021, 12:26 IST
ಪ್ರಭಾಕರ ಕೋರೆ
ಪ್ರಭಾಕರ ಕೋರೆ   

ಬೆಳಗಾವಿ: ನಾನು ಸಾಹಿತಿಯಲ್ಲ. ಹೀಗಾಗಿ, ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಸ್ಥಾನ ಅಲಂಕರಿಸುವ ಅವಕಾಶವನ್ನು ಹಲವು ಬಾರಿ ನಿರಾಕರಿಸಿದ್ದೆ. ಆದರೆ, ಈ ಸಲ ನನ್ನೂರಿನ ಸಮೀಪದ ಕಾಗವಾಡದಲ್ಲೇ ನಡೆಯುತ್ತಿರುವುದರಿಂದ ಒಪ್ಪಿಕೊಂಡೆ. ಕನ್ನಡ ಸಾಹಿತ್ಯ ಪರಿಷತ್ತು ಜಿಲ್ಲಾ ಘಟಕದ ಅಧ್ಯಕ್ಷೆ ಮಂಗಲಾ ಮೆಟಗುಡ್ಡ ಹಾಗೂ ಪದಾಧಿಕಾರಿಗಳ ಪ್ರೀತಿಗೆ ಕಟ್ಟು ಬಿದ್ದು ಗೌರವದಿಂದ ಸ್ವೀಕರಿಸಿದ್ದೇನೆ.

– ಜಿಲ್ಲೆಯ ಗಡಿ ಭಾಗವಾದ ಕಾಗವಾಡದಲ್ಲಿ ಜ. 30 ಹಾಗೂ 31ರಂದು ನಡೆಯಲಿರುವ 14ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಕೆಎಲ್‌ಇ ಸಂಸ್ಥೆಯ ಕಾರ್ಯಾಧ್ಯಕ್ಷರೂ ಆಗಿರುವ ರಾಜ್ಯಸಭಾ ಮಾಜಿ ಸದಸ್ಯ ಪ್ರಭಾಕರ ಕೋರೆ ಅವರು ಪ್ರತಿಕ್ರಿಯಿಸಿದ್ದು ಹೀಗೆ.

‘ಪ್ರಜಾವಾಣಿ’ಗೆ ಗುರುವಾರ ಮುಖಾಮುಖಿಯಾದ ಅವರು ಹಲವು ವಿಚಾರಗಳನ್ನು ಹಂಚಿಕೊಂಡರು.

ADVERTISEMENT

ಗಡಿ ನಾಡಿನಲ್ಲಿ ಕನ್ನಡದ ಕೆಲಸಗಳನ್ನು ಬಹಳಷ್ಟು ಮಾಡಿದ್ದೇನೆ. ಕಾಲೇಜು ವಿದ್ಯಾರ್ಥಿಯಾಗಿದ್ದಾಗ ಕನ್ನಡ ಚಳವಳಿಯಲ್ಲಿ ಪಾಲ್ಗೊಳ್ಳುತ್ತಿದ್ದೆ. ಪೊಲೀಸರಿಂದ ಲಾಠಿ ಏಟು ತಿಂದಿದ್ದೇನೆ. ಜಿಲ್ಲೆಯಲ್ಲಿ ಮರಾಠಿ ಪ್ರಾಬಲ್ಯ ಎಲ್ಲಿದೆಯೋ ಅಲ್ಲೆಲ್ಲಾ ಕೆಎಲ್‌ಇ ಸಂಸ್ಥೆಯಿಂದ ಶಾಲಾ–ಕಾಲೇಜುಗಳನ್ನು ಆರಂಭಿಸಿ ಕನ್ನಡದ ವಾತಾವರಣ ನಿರ್ಮಿಸಲಾಯಿತು.

ಪರಿಣಾಮ ಈಗ, ಗಡಿಯಲ್ಲಿ ಕನ್ನಡ ಕನ್ನಡ ಬೆಳೆಯುತ್ತಿದೆ. ಹಿಂದೆ ಕನ್ನಡ ಮಾತನಾಡಲು ಭಯ ಪಡುವಂಥ ಸ್ಥಿತಿ ಇತ್ತು. ಈಗ, ಕನ್ನಡ ಸಿನಿಮಾಗಳು ಹೌಸ್‌ಫುಲ್‌ ಪ್ರದರ್ಶನ ಕಾಣುತ್ತಿವೆ. ಮರಾಠಿ ಭಾಷಿಗರೂ ನೋಡುತ್ತಿದ್ದಾರೆ. ಸರ್ಕಾರ ರಚನಾತ್ಮಕ ಕ್ರಮಗಳನ್ನು ಕೈಗೊಂಡಿದ್ದರೆ ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ಕನ್ನಡದ ವಾತಾವರಣ ನಿರ್ಮಿಸಬಹುದಿತ್ತು.

ಸರ್ಕಾರವು ಗಡಿಯಲ್ಲಿ ಕನ್ನಡ ಸರ್ಕಾರಿ ಶಾಲೆಗಳನ್ನು ತೆರೆದರೆ ಸಾಲದು. ಅಲ್ಲಿಗೆ ಬೇಕಾಗುವ ಕಟ್ಟಡ, ಕುಡಿಯುವ ನೀರು, ಶೌಚಾಲಯ, ಮೈದಾನ ಮೊದಲಾದ ಮೂಲಸೌಲಭ್ಯಗಳನ್ನು ಒದಗಿಸಬೇಕು. ಗುಣಮಟ್ಟದ ಶಿಕ್ಷಕರನ್ನು ಒದಗಿಸಬೇಕು. ಶಿಕ್ಷಕರ ಕೊರತೆ ಇಲ್ಲದಂತೆ ನೋಡಿಕೊಳ್ಳಬೇಕು. ಶಿಕ್ಷಕರು, ಬಿಇಒ ಮೊದಲಾದವರಿಗೆ ಹೊಣೆಗಾರಿಕೆ ನಿಗದಿಪಡಿಸಬೇಕು. ಕನ್ನಡ ಶಾಲೆಗಳು ಸೌಲಭ್ಯಗಳಿಲ್ಲದೆ ಬಳಲುತ್ತಿದ್ದು, ಭಾಷಾ ಬೆಳವಣಿಗೆಗೂ ತೊಡಕಾಗುತ್ತಿದೆ.

ಮಕ್ಕಳ ಕಲಿಕಾ ಮಾಧ್ಯಮ ಮಾತೃ ಭಾಷೆಯಲ್ಲೇ ಇರಬೇಕು. ಅದರಲ್ಲಿ ಹೆಚ್ಚು ಪರಿಣಾಮಕಾರಿಯಾಗಿ ಕಲಿಯಬಹುದು. ಅದು ದೃಢಪಟ್ಟಿದೆ ಕೂಡ. ಮಕ್ಕಳಿಗೆ ಇಂಗ್ಲಿಷ್ ಮಾಧ್ಯಮದಲ್ಲೇ ಕಲಿಸಬೇಕು ಎಂಬ ಮೋಹವನ್ನು ಪೋಷಕರು ಬಿಡಬೇಕು. ಇಂಗ್ಲಿಷ್ ಮಾಧ್ಯಮದಲ್ಲಿ ಕಲಿತವರು ಪಾಸಾಗುತ್ತಾರೆ; ಆದರೆ, ಮೆರಿಟ್ ಇರುವುದಿಲ್ಲ.

ಮರಾಠಿ ಪ್ರಾಬಲ್ಯವಿರುವ ಕಡೆಗಳಲ್ಲಿ ಕನ್ನಡ ಶಾಲಾ–ಕಾಲೇಜುಗಳನ್ನು ಸ್ಥಾಪಿಪಸಿ ಭಾಷೆ ಬೆಳವಣಿಗೆಗೆ ಶ್ರಮಿಸುತ್ತಿದ್ದೇವೆ. ನಿಪ್ಪಾಣಿಯಲ್ಲಿ ₹ 4 ಕೋಟಿ ವೆಚ್ಚದಲ್ಲಿ ನಿರ್ಮಿಸುತ್ತಿದ್ದೇವೆ. ಈಗಾಗಲೇ ಅಲ್ಲಿ ಶಾಲೆ ನಡೆಯುತ್ತಿದೆ. ಸುಸಜ್ಜಿತ ಕಟ್ಟಡ ನಿರ್ಮಿಸುತ್ತಿದ್ದು ಪೂರ್ಣಗೊಳ್ಳುವ ಹಂತದಲ್ಲಿದೆ. ರಾಯಬಾಗದಲ್ಲೂ ಕಟ್ಟುತ್ತಿದ್ದೇವೆ. ಅಂಕಲಿ, ಚಂದೂರ, ಕೆರೂರ, ಗಳತಗಾ ಹೀಗೆ... ಹಲವು ಕಡೆಗಳಲ್ಲಿ ಸ್ಥಾಪಿಸಿದ್ದೇವೆ. ನಿಪ್ಪಾಣಿಯಲ್ಲಿ ಪ್ರಥಮ ಬಾರಿಗೆ ಸೇರಿದಂತೆ ವಿವಿಧೆಡೆ ಕನ್ನಡ ಸಾಹಿತ್ಯ ಸಮ್ಮೇಳನ ನಡೆಯಲು ಕಾರಣವಾಗಿದ್ದೇನೆ. 2003ರಲ್ಲಿ ಬೆಳಗಾವಿಯಲ್ಲಿ ನಡೆದ ಅಖಿಲ ಭಾರತ ಕನ್ನಡ ಸಮ್ಮೇಳನ ಮತ್ತು 2011ರಲ್ಲಿ ನಡೆದ ವಿಶ್ವ ಕನ್ನಡ ಸಮ್ಮೇಳನದ ಸ್ವಾಗತ ಸಮಿತಿ ಅಧ್ಯಕ್ಷನಾಗಿ ಕನ್ನಡ ಉತ್ಸವ ಯಶಸ್ವಿಗೆ ಶ್ರಮಿಸಿದ್ದೇನೆ.

ಮಹಾರಾಷ್ಟ್ರ ಸರ್ಕಾರದವರು, ಶಿವಸೇನಾದವರು ಆಗಾಗ ಗಡಿ ತಗಾದೆ ತೆಗೆಯುತ್ತಿರುವುದು ಪೂರ್ಣ ರಾಜಕೀಯ ಕಾರಣಕ್ಕಾಗಿಯೇ ಹೊರತು ಬೇರೇನಿಲ್ಲ. ಎಲ್ಲ ಆಯೋಗಗಳೂ ಬೆಳಗಾವಿ ಕರ್ನಾಟಕದ್ದು ಎಂದು ವರದಿ ನೀಡಿವೆ. ಬೆಳಗಾವಿ ಮಹಾರಾಷ್ಟ್ರದ್ದಾಗಲು ಸಾಧ್ಯವೇ ಇಲ್ಲ. ಗಡಿಯಲ್ಲಿ ಕನ್ನಡ–ಮರಾಠಿ ಭಾಷಿಗರು ಸೌಹಾರ್ದದಿಂದ ಇದ್ದೇವೆ. ಮರಾಠಿಗರನ್ನು ಅಪ್ಪಿಕೊಂಡಿದ್ದೇವೆ. ನಾವು ಭಾಷಾ ದ್ವೇಷ ಮಾಡುತ್ತಿಲ್ಲ. ಸರ್ಕಾರವು ಮರಾಠಿ ಭಾಷಿಗರಿಗೆ ಬೇಕಾದ ಎಲ್ಲ ರೀತಿಯ ಸೌಲಭ್ಯಗಳನ್ನೂ ಕೊಡುತ್ತಿದೆ. ಶಿವಸೇನಾ ಅಸ್ತಿತ್ವ ಉಳಿಸಿಕೊಳ್ಳಲು ಗಡಿ ವಿಷಯವನ್ನು ಜೀವಂತವಾಗಿ ಇಟ್ಟುಕೊಳ್ಳಲು ಹವಣಿಸುತ್ತಿದೆ. ಬೆಳಗಾವಿ ಮಹಾನಗರಪಾಲಿಕೆ ಚುನಾವಣೆ ಬರಲಿರುವುದರಿಂದ ವಿವಾದವನ್ನು ಆಗಾಗ ಪ್ರಸ್ತಾಪಿಸುತ್ತಿದೆ.

ಗಡಿ ಭಾಗಕ್ಕೆ ಸರ್ಕಾರ ಹೆಚ್ಚಿನ ಗಮನ ಕೊಡಬೇಕು. ತಮಿಳುನಾಡು ಮಾದರಿಯಲ್ಲಿ ಎಂಜಿನಿಯರಿಂಗ್ ಹಾಗೂ ವೈದ್ಯಕೀಯ ಕೋರ್ಸ್‌ನಲ್ಲಿ ಕನ್ನಡ ಮಾಧ್ಯಮದವರಿಗೆ ಮೀಸಲಾತಿ ನೀಡಬೇಕು. ಆಗ ಕನ್ನಡ ತಾನಾಗಿಯೇ ಬೆಳೆಯುತ್ತದೆ. ಕನ್ನಡ ವಾತಾವರಣ ನಿರ್ಮಿಸುವಲ್ಲಿ ಕನ್ನಡ ಸಾಹಿತ್ಯ ಸಮ್ಮೇಳನಗಳು ಪೂರಕವಾಗಿವೆ. ಯಾವುದೇ ಭಾಷೆ ಕಲಿತರೂ ಕನ್ನಡ ಕಡೆಗಣಿಸಬಾರದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.