ADVERTISEMENT

ಪುಸ್ತಕ ವಿಮರ್ಶೆ: ವಾಮನ ಕತೆಗಳ ತ್ರಿವಿಕ್ರಮ ರೂಪ

ಎಚ್.ದಂಡಪ್ಪ
Published 13 ಫೆಬ್ರುವರಿ 2021, 19:30 IST
Last Updated 13 ಫೆಬ್ರುವರಿ 2021, 19:30 IST
ಅತಿ ಸಣ್ಣಕತೆ
ಅತಿ ಸಣ್ಣಕತೆ   

ಅತಿ ಸಣ್ಣಕತೆ
ಲೇ:
ಟಿ.ಪಿ.ಅಶೋಕ
ಪ್ರ: ಮಣಿಪಾಲ್‌ ಯೂನಿವರ್ಸಲ್‌ ಪ್ರೆಸ್‌
ಸಂಪರ್ಕ: 820 2922954

***

ಟಿ. ಪಿ. ಅಶೋಕ ಅವರು ‘ಅತಿ ಸಣ್ಣಕತೆ’ಯ ಸ್ವರೂಪ, ಸಿದ್ಧಿ ಸಾಧ್ಯತೆಗಳನ್ನು ಹತ್ತೊಂಬತ್ತು ಭಾಗಗಳಲ್ಲಿ ವಿವರಿಸಿದ್ದಾರೆ. ಇತ್ತೀಚಿನ ವರ್ಷಗಳಲ್ಲಿ ಅತಿ ಸಣ್ಣಕತೆಗೆ ವಿಶೇಷವಾದ ಪ್ರಾಮುಖ್ಯತೆ ಬಂದಿದೆ. ಮುದ್ರಣ ಮಾಧ್ಯಮಗಳು, ನಿಯತಕಾಲಿಕೆಗಳು, ತಾಂತ್ರಿಕ ಸಾಮಾಜಿಕ ಜಾಲತಾಣಗಳು ಜೊತೆಗೆ ಮನುಷ್ಯನ ಅವಸರದ ಜೀವನ ವಿಧಾನ, ಚಿಕ್ಕಪುಟ್ಟದ್ದನ್ನು ಓದುವ ಅವನ ಬಯಕೆ ಇತ್ಯಾದಿಗಳು ಅತಿ ಸಣ್ಣಕತೆಗೆ ಪ್ರಾಮುಖ್ಯತೆಯನ್ನು ತಂದುಕೊಟ್ಟಿವೆ.

ADVERTISEMENT

ಅತಿ ಸಣ್ಣ ಕತೆಯ ಮೀಮಾಂಸೆಯು ನಮ್ಮಲ್ಲಿ ಅಷ್ಟಾಗಿ ಬೆಳೆದಿಲ್ಲ. ಎಸ್. ದಿವಾಕರ್ ಅವರು ಅನುವಾದಿಸಿ ಪ್ರಕಟಿಸಿರುವ ‘ಜಗತ್ತಿನ ಅತಿ ಸಣ್ಣಕತೆಗಳು’, ‘ಹಾರಿಕೊಂಡು ಹೋದವನು’, ‘ಕ್ರಿಯಾಪದಗಳಿವೆ ಕೊಲ್ಲುವುದಕ್ಕೆ’ ಎಂಬ ಮೂರು ಕೃತಿಗಳಲ್ಲಿ ಜಗತ್ತಿನ ಬೇರೆ ಬೇರೆ ಪ್ರಸಿದ್ಧ ಕತೆಗಾರರ ಅತಿ ಸಣ್ಣಕತೆಗಳಿವೆ. ಜೊತೆಗೆ ದಿವಾಕರ್ ಅವರೇ ಸಂಪಾದಿಸಿರುವ ‘ಕನ್ನಡದ ಅತಿ ಸಣ್ಣಕತೆಗಳು’ ಎಂಬ ಕೃತಿಯೂ ಅತಿ ಸಣ್ಣಕತೆಗಳ ಸಂಗ್ರಹ. ಈ ನಾಲ್ಕು ಕೃತಿಗಳಲ್ಲಿನ ದಿವಾಕರ್ ಅವರ ವಿಶ್ಲೇಷಣೆ, ಚಿಂತನೆಗಳು ಅಶೋಕ ಅವರು ಈ ಕೃತಿಯನ್ನು ಬರೆಯಲು ಪ್ರೇರಣೆ ನೀಡಿವೆ.

ಅತಿ ಸಣ್ಣಕತೆಯ ಸ್ವರೂಪವನ್ನು ಚರ್ಚಿಸುವುದಕ್ಕೆ ಹಿನ್ನೆಲೆಯಾಗಿ ಅಶೋಕ ಅವರು ಆಧುನಿಕ ಪೂರ್ವಕತೆಗಳು ಮತ್ತು ಆಧುನಿಕ ಕತೆಗಳು ಎಂದು ಎರಡು ಭಾಗ ಮಾಡಿ ಅದಕ್ಕೊಂದು ತಾತ್ವಿಕ ಹಿನ್ನೆಲೆಯನ್ನು ರೂಪಿಸಿಕೊಂಡಿದ್ದಾರೆ. ಜಾಗತಿಕ, ಭಾರತೀಯ ಕನ್ನಡದ ಕತೆಗಳನ್ನು ಚರ್ಚೆಯಲ್ಲಿ ಬಳಸಿಕೊಂಡಿರುವುದರಿಂದ ಈ ಅಧ್ಯಯನಕ್ಕೆ ವಿಸ್ತಾರವಾದ ವ್ಯಾಪ್ತಿ ಬಂದಿದೆ.

ಅತಿಸಣ್ಣ ಕತೆಯಲ್ಲಿ ಭಾಷೆ ಅಲಂಕಾರಯುಕ್ತವಾಗಿರುತ್ತದೆ. ಪಾಂಡಿತ್ಯ ಪೂರ್ಣವೂ ಆಗಿರುತ್ತದೆ. ಪ್ರತಿಮೆ, ಸಂಕೇತ, ನುಡಿಗಟ್ಟುಗಳು ಬಳಕೆಯಾಗಿ ಭಾಷೆಗೆ ಸಂಕೀರ್ಣತೆ ಪ್ರಾಪ್ತವಾಗಿರುತ್ತದೆ. ಕತೆಗಾರ ತನ್ನ ಅನುಭವಗಳನ್ನು ಹೇಳುವಾಗ ವಿವರಣೆ, ವರ್ಣನೆಗಳನ್ನು ಬಿಟ್ಟು ಸಂಕ್ಷಿಪ್ತತೆ ಮತ್ತು ಸಾಂದ್ರತೆಗಳನ್ನು ಬಳಸಿಕೊಳ್ಳುತ್ತಾನೆ. ಪದಗಳು, ವಾಕ್ಯಗಳು ಕಡಿಮೆಯೆನಿಸಿದರೂ ವಸ್ತು ಮತ್ತು ಘಟನೆಯು ವಿಸ್ತಾರವಾಗಿ ತೀಕ್ಷ್ಣವಾದ ಕಲಾ ಪರಿಣಾಮವನ್ನುಂಟು ಮಾಡುವ ರಚನಾ ವಿನ್ಯಾಸವನ್ನೊಳಗೊಂಡ ಕೃತಿಗಳಾಗಿರುತ್ತವೆ.

ಕತೆ ಚಿಕ್ಕದಾದರೂ ಪಾತ್ರಗಳು ಕಡಿಮೆಯಾದರೂ ಕ್ರಿಯೆ, ಉದ್ದೇಶ ಕಲಾ ಪರಿಣಾಮಗಳು ಐಕ್ಯಗೊಂಡಿರುತ್ತವೆ. ಒಂದು ಪಾತ್ರ, ಒಂದು ಘಟನೆ, ಒಂದೇ ಭಾವನೆ, ಒಂದೇ ಪ್ರಸಂಗ, ಒಂದೈದು ಪದಗಳು, ಒಂದೆರಡು ವಾಕ್ಯಗಳು, ಇದ್ದರೂ ಸಾಕು, ಅದು ಅನೇಕ ತಾತ್ವಿಕ ವಿಚಾರಗಳನ್ನು ಒಳಗೊಂಡ ಅತಿ ಸಣ್ಣಕತೆಯಾಗಲು ಸಾಧ್ಯವಾಗುತ್ತದೆ. ನಿದರ್ಶನಕ್ಕಾಗಿ ಮಾಂಟೊನ ‘ದೂಷಣೆ’ ಕತೆ ನೋಡಬಹುದು. ‘ಇದು ನ್ಯಾಯಾನಾ ಹೇಳು? ನೀನು ಮಾರಿದ್ದು ಕಲಬೆರಕೆ ಪೆಟ್ರೋಲು. ಅದೂ ಕಾಳಸಂತೆ ದರದಲ್ಲಿ. ಅದರಿಂದ ಒಂದಾದರೂ ಅಂಗಡಿ ಸುಟ್ಟು ಹೋಯಿತಾ?’

ಈ ಕತೆಯನ್ನು ಅಶೋಕ ಅವರು ವಿಶ್ಲೇಷಿಸಿರುವ ಕ್ರಮದಲ್ಲಿ ಅನೇಕ ಒಳನೋಟಗಳಿವೆ. ನ್ಯಾಯಾನ್ಯಾಯಗಳ ಪರಿಕಲ್ಪನೆ, ವ್ಯಾಖ್ಯಾನಗಳು ತಲುಪಿರುವ ಅಸಂಬದ್ಧತೆ, ಅಸಂಗತತೆ ಅವುಗಳ ಮೂಲಕ ವ್ಯಕ್ತವಾಗುವ ಮನುಷ್ಯನ ಕ್ರೌರ್ಯ – ಮುಂತಾದ ವಿಚಾರಗಳು ಅಂತರ್ಗತವಾಗಿರುವುದನ್ನು ವಿಶ್ಲೇಷಿಸುತ್ತಾ ಅತಿ ಸಣ್ಣಕತೆಯ ಸ್ವರೂಪವನ್ನು ಕಟ್ಟಿಕೊಡಲಾಗಿದೆ.

ಅತಿ ಸಣ್ಣಕತೆಯ ಸ್ವರೂಪ ಅದರ ಮೀಮಾಂಸೆಯನ್ನು ಕಟ್ಟಿಕೊಡುವಾಗ ಕನ್ನಡದ ಇಲ್ಲಿಯವರೆಗಿನ ಚಿಂತನೆಗಳನ್ನು ಬಳಸಿಕೊಂಡಿರುವುದರಿಂದ ಅಶೋಕರ ಆಲೋಚನೆಗಳಿಗೆ ಅಧಿಕೃತತೆ ಬರುವುದಕ್ಕೆ ನೆರವಾಗಿದೆ. ಶ್ರೀನಿವಾಸ ಹಾವನೂರ, ಜಿ.ಪಿ. ರಾಜರತ್ನಂ, ಎಂ.ಎಸ್. ಶ್ರೀರಾಮ್, ಕೆ.ವಿ. ಅಕ್ಷರ ಇವರ ಚರ್ಚೆಗಳನ್ನು ಹಿನ್ನೆಲೆಯಾಗಿಟ್ಟುಕೊಂಡು ಅಧ್ಯಯನ ಮಾಡಲಾಗಿದೆ. ಓದುಗರ ಕೆಲವು ಸಾಂಸ್ಕೃತಿಕ ಉದ್ದೇಶಗಳನ್ನು ಪೂರೈಸುವುದಕ್ಕಾಗಿ ಈ ಬಗೆಯ ಕತೆಗಳು ಸೃಷ್ಟಿಯಾಗಿವೆ. ಇವು ಬದುಕಿನ ಬಹು ದೊಡ್ಡ ಪ್ರಶ್ನೆಗಳನ್ನು, ಸತ್ಯಗಳನ್ನು ಹಿಡಿದಿಡುತ್ತವೆ. ಇವು ಜೀವಂತ ಸಮಾಜದ ಸೃಜನಾತ್ಮಕ ರಚನೆಗಳು. ಆದ್ದರಿಂದಲೇ ಹಿಂದಿನಿಂದಲೂ ಈ ಬಗೆಯ ಕತೆಗಳಿಗೆ ಮನುಷ್ಯನ ನಾಗರಿಕತೆಯ ಇತಿಹಾಸದಲ್ಲಿ ಒಂದು ಮಹತ್ವವಿದೆ.

ಕಾಲದಿಂದ ಕಾಲಕ್ಕೆ ಮನುಷ್ಯನ ಸಂಸ್ಕೃತಿ ಮತ್ತು ನಾಗರಿಕತೆಗಳ ಸಂರಚನೆಯನ್ನು ತಿಳಿಯಬೇಕಾದರೆ ಕಾಲದಿಂದ ಕಾಲಕ್ಕೆ ಸೃಷ್ಟಿಯಾಗಿರುವ ಕತೆಗಳೂ ಆಕರಗಳಾಗುತ್ತವೆ. ಆದ್ದರಿಂದಲೇ ಈಸೋಪನ ನೀತಿಕತೆಗಳು, ಪಂಚತಂತ್ರ, ಜಾತಕ ಕತೆಗಳು, ಕಥಾಸರಿತ್ಸಾಗರದ ಕತೆಗಳು, ಝೆನ್ ಸೂಫಿಕತೆಗಳು ಇತ್ಯಾದಿ ಕಥಾಕೋಶಗಳಿಗೆ ಹಾಗೂ ಈಗ ರಚನೆಯಾಗುತ್ತಿರುವ ಅತಿ ಸಣ್ಣಕತೆಗಳಿಗೆ ಸಾಂಸ್ಕೃತಿಕ ಮಹತ್ವ ಪ್ರಾಪ್ತವಾಗಿದೆ.

ಈ ಅತಿ ಸಣ್ಣಕತೆಗಳ ರಚನಾ ವಿನ್ಯಾಸವೂ ವಿನೂತನವಾಗಿರುತ್ತದೆ. ಕ್ರಿಯೆ, ಪಾತ್ರ, ಘಟನೆ ಇರುತ್ತವೆ. ಒಂದು ಕ್ರಿಯೆ ಮತ್ತೊಂದು ಕ್ರಿಯೆಯನ್ನು ಹಿಂಬಾಲಿಸಿ ಬರುವಂತೆ ರಚನಾ ವಿನ್ಯಾಸವಿದ್ದು, ಓದುಗನ ಮನಸ್ಸಿನಲ್ಲಿ ಅದು ವಿಸ್ತಾರವಾಗುತ್ತಾ ಹೋಗುತ್ತದೆ. ಅನುಭವವನ್ನು ಭಾಷೆಯ ಮೂಲಕ ಹೇಳುವಾಗ ಅದರಲ್ಲಿ ಹಲವಾರು ಬಗೆಯ ತಾತ್ವಿಕ ವಿಚಾರಗಳು ಅಂತರ್ಗತವಾಗಿರುವಂತೆ ಹೇಳುವ ಪ್ರತಿಭಾಶಕ್ತಿ ಕತೆಗಾರನಿಗಿರಬೇಕಾಗುತ್ತದೆ.

ಕತೆಗಾರನು ಸಂಜ್ಞೆ, ಸೂಚನೆ, ಕೊಂಡಿಗಳ ಮೂಲಕ ಕತೆಯನ್ನು ಬರೆಯಬೇಕಾಗುತ್ತದೆ. ಇದಕ್ಕೆ ನಿದರ್ಶನವಾಗಿ ನಾವು ಮಾಂಟೊನ ಮತ್ತೊಂದು ಕತೆ ‘ಮಿಷ್ಟೀಕು’ ನೋಡಬಹುದು. ‘ಹೊಟ್ಟೆಯನ್ನು ಬಗೆದು ಸೀಳಿದ ಚೂರಿ ಅದೇ ನೇರ ರೇಖೆಯಲ್ಲಿ ಕೆಳಗಿಳಿದು ಆ ಮನುಷ್ಯನ ಪೈಜಾಮದ ಲಾಡಿಯನ್ನು ಕತ್ತರಿಸಿ ಹಾಕಿ, ಚೂರಿ ಹಾಕಿದವನು ಒಂದು ಸಲ ಆ ಕಡೆ ನೋಡಿ ‘ಛೆ, ಛೆ ಎಂಥಾ ಮಿಸ್ಟೀಕಾಗಿ ಹೋಯಿತು’ ಎಂದ ವಿಷಾದದಿಂದ’ - ಈ ಕತೆಯನ್ನು ಇಂದಿನ ಸಾಂಸ್ಕೃತಿಕ ಸಂದರ್ಭದಲ್ಲಿ ಬೇರೆ ಬೇರೆ ಹಿನ್ನೆಲೆಗಳಲ್ಲಿ ಅರ್ಥೈಸಿಕೊಳ್ಳಲು ಸಾಧ್ಯವಿದೆ.

ಅತಿ ಸಣ್ಣಕತೆ ಅತ್ಯಂತ ಚೈತನ್ಯಶೀಲವಾದ ಸಾಹಿತ್ಯಪ್ರಕಾರ. ಇಂತಹ ಸಾಹಿತ್ಯ ಪ್ರಕಾರವನ್ನು ಜಾಗತಿಕ ಸಂದರ್ಭದಲ್ಲಿಟ್ಟು ವಿಶ್ಲೇಷಿಸಿ ವ್ಯಾಖ್ಯಾನಿಸಿ ಅದರ ಸಾಧ್ಯತೆಗಳನ್ನು ಕನ್ನಡಕ್ಕೆ ದಿವಾಕರ್ ಪರಿಚಯಿಸಿದರು. ಅಶೋಕ ಅವರು ಅದನ್ನು ಮುಂದುವರಿಸಿ ಜಗತ್ತಿನ ಪ್ರಸಿದ್ಧ ಸಣ್ಣಕತೆಗಳನ್ನು ಮತ್ತು ಕನ್ನಡದ ದೇವುಡು, ಬೇಂದ್ರೆ, ಅನಕೃ, ಚದುರಂಗ, ಚಿತ್ತಾಲ, ಸದಾಶಿವ, ಲಂಕೇಶ್, ವೈದೇಹಿ, ಚ.ಹ. ರಘುನಾಥ ಅವರ ಅತಿ ಸಣ್ಣಕತೆಗಳನ್ನು ವ್ಯಾಖ್ಯಾನಿಸಿ, ವಿಶ್ಲೇಷಿಸಿ ಅತಿ ಸಣ್ಣಕತೆಗೆ ಒಂದು ಮೀಮಾಂಸೆಯನ್ನು ಕಟ್ಟಿಕೊಡಲು ಪ್ರಯತ್ನಿಸಿದ್ದಾರೆ. ಎಲ್ಲ ಬಗೆಯ ಓದುಗರಿಗೆ, ಅದರಲ್ಲೂ ಕಥನ ಪ್ರಕಾರದಲ್ಲಿ ಅಧ್ಯಯನ ನಡೆಸುವವರಿಗೆ ಇದು ಉಪಯುಕ್ತ ಕೃತಿಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.