ADVERTISEMENT

ಒಳನೋಟ: ಮತ್ತಷ್ಟು ಹಿಗ್ಗಿದ ಕನ್ನಡ ಜಗದ್ವಲಯ

ಎನ್.ಎಸ್.ಗುಂಡೂರ
Published 16 ಅಕ್ಟೋಬರ್ 2021, 19:30 IST
Last Updated 16 ಅಕ್ಟೋಬರ್ 2021, 19:30 IST
ಕನ್ನಡ ಲಿಟರೇಚರ್‌– ಎ ರೀಡರ್‌
ಕನ್ನಡ ಲಿಟರೇಚರ್‌– ಎ ರೀಡರ್‌   

ಕನ್ನಡ ಜಗದ್ವಲಯವು ರೂಪುಗೊಳ್ಳುವಲ್ಲಿ ಅನುವಾದವೆಂಬ ವಿದ್ಯಮಾನ ವಿಶಾಲ ಅರ್ಥದಲ್ಲಿ, ಮಹತ್ವದ ಪಾತ್ರ ವಹಿಸಿದೆ. ಹೊರ ಜಗತ್ತಿನಿಂದ ಪಡೆದುಕೊಳ್ಳುವ, ಹೊರ ಜಗತ್ತಿಗೆ ತನ್ನನ್ನು ತಾನು ಪರಿಚಯಿಸಿಕೊಳ್ಳುವ, ಈ ಸಾಂಸ್ಕೃತಿಕ ಕೊಡು-ಕೊಳ್ಳುವಿಕೆ ಕವಿರಾಜಮಾರ್ಗಕಾರನ ಕಾಲದಿಂದಲೂ ಕನ್ನಡದಲ್ಲಿ ನಡೆದುಕೊಂಡು ಬಂದಿದೆ. ಆಧುನಿಕ ಯುಗದಲ್ಲಿ ಪಶ್ಚಿಮದ ಪಠ್ಯಗಳನ್ನು, ಸಾಹಿತ್ಯ ಪ್ರಕಾರಗಳನ್ನು ನಾವು ಕನ್ನಡೀಕರಿಸಿದ್ದಕ್ಕೆ ಚಾರಿತ್ರಿಕ ಹಾಗೂ ರಾಜಕೀಯ ಒತ್ತಾಸೆಗಳಿದ್ದವು. ಪಶ್ಚಿಮದ ವಿದ್ವಾಂಸರು ಭಾರತೀಯ ಪಠ್ಯಗಳನ್ನು ಅನುವಾದಿಸಿದ್ದು ಸಾಂಸ್ಕೃತಿಕ ಯಾಜಮಾನ್ಯವನ್ನು ಸಾಧಿಸಲು ಎಂಬುದು ಈಗ ಸಾಮಾನ್ಯ ತಿಳಿವಳಿಕೆ ಆಗಿಬಿಟ್ಟಿದೆ. ಪ್ರಸ್ತುತ ವಸಾಹತೋತ್ತರ ಕಾಲಘಟ್ಟದಲ್ಲಿ ಭಾರತೀಯ ಪಠ್ಯಗಳನ್ನು, ವಿಶೇಷವಾಗಿ ಅಭಿಜಾತ ಪಠ್ಯಗಳನ್ನು ನಾವು ಇಂಗ್ಲಿಷ್‌ಗೆ ಅನುವಾದಿಸುತ್ತಿರುವುದು ನಮ್ಮ ಆತ್ಮವಿಶ್ವಾಸವನ್ನು ಹೆಚ್ಚಿಸುತ್ತಿದೆ.

ಆಧುನಿಕಪೂರ್ವ ಸಾಹಿತ್ಯಕ್ಕೆ ಸಂಬಂಧಪಟ್ಟಂತೆ, ಹೇರಳವಾಗಿ ಅನುವಾದಗೊಂಡ ಪ್ರಕಾರವೆಂದರೆ ವಚನ ಸಾಹಿತ್ಯ. ಎಸ್.ಸಿ. ನಂದಿಮಠ, ಮನೇಜಿಸ್ ಮುಂತಾದವರು ಸಂಗ್ರಹಿಸಿ, ಅನುವಾದಿಸಿದ ಶೂನ್ಯ ಸಂಪಾದನೆ ಮತ್ತು ಎ.ಕೆ. ರಾಮಾನುಜನ್, ಎಚ್.ಎಸ್. ಶಿವಪ್ರಕಾಶ ಹಾಗೂ ಓ.ಎಲ್. ನಾಗಭೂಷಣಸ್ವಾಮಿಯವರು ಮಾಡಿದ ವಚನಗಳ ಅನುವಾದಗಳು ವಿಶಿಷ್ಟವಾದ ಮಾರ್ಗವನ್ನೇ ಸೃಷ್ಟಿಸಿವೆ. ನಂತರ ಆರ್.ವಿ.ಎಸ್ ಸುಂದರಮ್ ಹಾಗೂ ದೇವೇನ್ ಎಂ. ಪಟೇಲ್ ಅವರುಗಳ ಕವಿರಾಜಮಾರ್ಗದ ಅನುವಾದ, ವನಮಾಲಾ ವಿಶ್ವನಾಥ ಅವರ ಹರಿಶ್ಚಂದ್ರ ಕಾವ್ಯದ ಅನುವಾದ ನಮಗೆ ಸ್ಫೂರ್ತಿ ನೀಡುವ ಪ್ರಯತ್ನಗಳಾಗಿವೆ. ವನಮಾಲಾ ಅವರಂತೂ ಭಾಷಾಂತರದ ಪ್ರಮಾಣಗಳ ಮಟ್ಟವನ್ನು ಮೇಲಕ್ಕೇರಿಸಿದ್ದಾರೆ.

ಎಚ್.ಎಸ್. ಶಿವಪ್ರಕಾಶ ಮತ್ತು ಕೆ.ಎಸ್. ರಾಧಾಕೃಷ್ಣ ಅವರ ‘ಎ ಸ್ಟ್ರಿಂಗ್‌ ಆಫ್ ಪರ್ಲ್ಸ್’ (1990) ಪಂಪನಿಂದ ಹಿಡಿದು 20ನೇ ಶತಮಾನದವರೆಗಿನ ಆಯ್ದ ಕನ್ನಡ ಕಾವ್ಯದ ಅನುವಾದ ಸಂಗ್ರಹವಾಗಿದೆ. ಟಿ.ಆರ್.ಎಸ್.ಶರ್ಮಾ ಅವರು ಸಂಪಾದಿಸಿದ ‘ಎನ್ಷಿಯಂಟ್‌ ಇಂಡಿಯನ್ ಲಿಟರೇಚರ್ಸ್‌’ನ (2000) ಮೂರನೇ ಸಂಪುಟವನ್ನೊಳಗೊಂಡಂತೆ, ಸಿ.ಎನ್.ರಾಮಚಂದ್ರನ್ ಸಂಪಾದಿಸಿದ ಕನ್ನಡ ಮಹಾಕಾವ್ಯಗಳ ಆಯ್ದ ಭಾಗಗಳ ಅನುವಾದವಾದ ‘ಸ್ಟ್ರಿಂಗ್ಸ್‌ ಆ್ಯಂಡ್‌ ಸಿಂಬಲ್ಸ್’ (2007) ಮತ್ತು ರಾಮಚಂದ್ರನ್ ಅವರು ವಿವೇಕ ರೈ ಅವರ ಜೊತೆಗೂಡಿ ಅನುವಾದಿಸಿ, ಸಂಪಾದಿಸಿದ ‘ಕ್ಲಾಸಿಕಲ್ ಕನ್ನಡ ಪೊಯಿಟ್ರಿ ಆ್ಯಂಡ್‌ ಪ್ರೋಸ್‌: ಎ ರೀಡರ್‌’ (2015) ಕೃತಿಗಳು ಹಳಗನ್ನಡ ಸಾಹಿತ್ಯದ ವಿವಿಧ ಘಟ್ಟಗಳನ್ನು ಪರಿಚಯಿಸುವ ಪ್ರಾತಿನಿಧಿಕ ಪಠ್ಯಗಳ ಅನುವಾದಗಳನ್ನು ಒಳಗೊಂಡಿವೆ. ಇದೇ ಜಾಯಮಾನಕ್ಕೆ ಸೇರುವ ರವಿಚಂದ್ರ ಪಿ. ಚಿಟ್ಟಂಪಳ್ಳಿ ಹಾಗೂ ಎಂ.ಜಿ. ಹೆಗಡೆ ಅವರು ಅನುವಾದಿಸಿ, ಸಂಪಾದಿಸಿದ ಪ್ರಸ್ತುತ ಸಂಕಲನವು ರಾಮಚಂದ್ರನ್ ಮತ್ತು ರೈ ಅವರ ಕೆಲಸದ ಮುಂದುವರೆದ ಭಾಗವಾಗಿದೆ.

ADVERTISEMENT

ಮಧ್ಯಯುಗದ ಕನ್ನಡ ಸಾಹಿತ್ಯವೆಂದು ವಿಂಗಡಿಸಬಹುದಾದ, 11ನೆಯ ಶತಮಾನದಿಂದ 19ನೆಯ ಶತಮಾನದವರೆಗಿನ ಕೆಲವು ಪ್ರಾತಿನಿಧಿಕ ಪಠ್ಯಗಳನ್ನು ರವಿಚಂದ್ರ ಮತ್ತು ಹೆಗಡೆಯವರು ಜಾಗರೂಕತೆಯಿಂದ ಅನುವಾದಕ್ಕೆ ಆಯ್ಕೆ ಮಾಡಿಕೊಂಡಿದ್ದಾರೆ. ತಮ್ಮ ಅನುವಾದ ಯೋಜನೆಯನ್ನು ನಾಲ್ಕು ಸಂಪ್ರದಾಯಗಳಲ್ಲಿ ವಿಂಗಡಿಸುತ್ತ -ವಚನ ಪರಂಪರೆ (ವಚನ ಟ್ರೆಡಿಶನ್), ನಿರೂಪಣಾ ಪರಂಪರೆ (ನರೇಟಿವ್ ಟ್ರೆಡಿಶನ್), ಭಾವಗೀತೆಯ ಪರಂಪರೆ (ಲಿರಿಕಲ್ ಟ್ರೆಡಿಶನ್) ಹಾಗೂ ಪ್ರದರ್ಶನಕಲೆಗಳ ಪರಂಪರೆ (ಟ್ರೆಡಿಶನ್ ಆಫ್ ಪರ್ಫಾಮನ್ಸ್‌)- ಪ್ರತೀ ಪರಂಪರೆಗೆ ಪರಿಚಯಾತ್ಮಕ ಟಿಪ್ಪಣಿಯನ್ನು ಒದಗಿಸಿದ್ದಾರೆ. ಸಂಕ್ಷಿಪ್ತವಾದ ಪೀಠಿಕೆ ಹಾಗೂ ಪರಾಮರ್ಶನ ಗ್ರಂಥಗಳ ಪಟ್ಟಿಯನ್ನೊಳಗೊಂಡು, ಇಲ್ಲಿ ಮೂರು ಅನುಬಂಧಗಳಿವೆ: ಎರಡನೆಯ ಸಹಸ್ರಮಾನದ ಕನ್ನಡ ಜಗದ್ವಲಯದ ಪರಿಚಯ, ನಡುಗನ್ನಡ ಕುರಿತು ಟಿಪ್ಪಣಿ ಹಾಗೂ ಆಕರ ಗ್ರಂಥಗಳ ಮಾಹಿತಿ.

ಕನ್ನಡ ಸಾಹಿತ್ಯ ಪರಂಪರೆಯಲ್ಲಿ ಅಂಗೀಕೃತಗೊಂಡ ಕೃತಿಗಳನ್ನು ಗಮನದಲ್ಲಿ ಇಟ್ಟುಕೊಂಡ ಅನುವಾದಕರು ಅಂಚಿನಲ್ಲಿರುವ ಕೆಲವು ಪಠ್ಯಗಳನ್ನೂ ತಮ್ಮ ಯೋಜನೆಗೆ ಆಯ್ಕೆ ಮಾಡಿಕೊಂಡಿದ್ದಾರೆ. ಈ ದೆಸೆಯಿಂದ ಅವರು ಯಕ್ಷಗಾನ-ತಾಳಮದ್ದಲೆ, ಮಲೆಮಹದೇಶ್ವರ ಕಾವ್ಯ, ಮಿತ್ರಾವಿಂದ ಗೋವಿಂದ, ಶ್ರೀಕೃಷ್ಣ ಪಾರಿಜಾತ ಹಾಗೂ ಸಂಗ್ಯಾ-ಬಾಳ್ಯಾದಂತಹ ಪ್ರದರ್ಶನ ಕಲೆಗಳ ಪಠ್ಯಗಳನ್ನು ಇಲ್ಲಿ ಅನುವಾದಿಸಿದ್ದಾರೆ. ಆಯ್ದ ವಚನಗಳಿಂದ ಪ್ರಾರಂಭವಾಗಿ, ಗಿರಿಜಾ ಕಲ್ಯಾಣ, ಹರಿಶ್ಚಂದ್ರ ಕಾವ್ಯ, ಕುಮಾರವ್ಯಾಸ ಭಾರತ, ಬತ್ತಲೇಶ್ವರ ರಾಮಾಯಣ ಇತ್ಯಾದಿ ಪಠ್ಯಗಳ ತುಣುಕುಗಳು ಸೇರಿದಂತೆ, ದಾಸ ಸಾಹಿತ್ಯ, ನಾಥ ಪರಂಪರೆ ಹಾಗೂ ಶಿಶುನಾಳ ಶರೀಫರ ಆಯ್ದ ಪಠ್ಯಗಳೆಲ್ಲವೂ ನಡುಗನ್ನಡ ಸಾಹಿತ್ಯದ ಚರಿತ್ರೆಯನ್ನು ಕಟ್ಟಿಕೊಡುತ್ತವೆ.

ಸ್ವತಃ ಇಂಗ್ಲಿಷ್‌ ಭಾಷೆಯಲ್ಲಿ ಕವಿತೆಗಳನ್ನು ರಚಿಸುವ ರವಿಚಂದ್ರ ಮತ್ತು ಇಂಗ್ಲಿಷ್, ಕನ್ನಡ ಸಾಹಿತ್ಯದ ಪರಿಚಯವಿರುವ ಎಂ.ಜಿ. ಹೆಗಡೆ, ಇವರಿಬ್ಬರ ಮೇಳದಿಂದ ಅನುವಾದಗಳು ಸೃಜನಾತ್ಮಕವಾಗಿ ಮೂಡಿಬಂದಿವೆ. ಹೆಚ್ಚಿನ ಅನುವಾದಗಳಲ್ಲಿ ಕನ್ನಡತನವು ಇಂಗ್ಲಿಷ್‌ ನುಡಿಯಲ್ಲಿ ಸಹಜವಾಗಿ ಮೂಡಿಬಂದು, ಅವು ಓದುಗರಿಗೆ ನಾವೀನ್ಯ, ವೈವಿಧ್ಯ ಹಾಗೂ ಜೀವಂತಿಕೆಯ ಅನುಭವವನ್ನು ಕೊಡುತ್ತವೆ. ಕನ್ನಡೇತರ ಓದುಗರಿಗೆ ಮಧ್ಯಗನ್ನಡ ಸಾಹಿತ್ಯದ ಹೊಳಹುಗಳನ್ನು ಇವು ಸಮರ್ಥವಾಗಿಯೇ ತೆರೆದಿಡುತ್ತವೆ. ಆದರೆ ಒಂದಲ್ಲಾ ಒಂದು ರೀತಿಯಲ್ಲಿ ಕಳೆದುಕೊಳ್ಳುವುದು, ಪಡೆದುಕೊಳ್ಳುವುದು ಅನುವಾದದ ಪ್ರಕ್ರಿಯೆಯಲ್ಲಿ ಇದ್ದೇ ಇದೆ. ಇಲ್ಲಿ ಕೆಲವು ಕಡೆ ಇಂಗ್ಲಿಷ್‌ ನುಡಿಗಟ್ಟುಗಳು ಸೋತಿರಬಹುದು, ಓದುಗರಿಗೆ ಅಸ್ಪಷ್ಟತೆ ಕಾಡಬಹುದು. ಅದೆಲ್ಲವೂ ಅನಿವಾರ್ಯ.

ಇಂತಹ ಯೋಜನೆಗಳಲ್ಲಿ ಆಧುನಿಕಪೂರ್ವ ಭಾಷೆ ಮತ್ತು ಸಂವೇದನೆಗಳನ್ನು ಆಧುನಿಕ ಮನಸ್ಸುಗಳಿಗೆ ಉಣಬಡಿಸುವುದು ಸವಾಲಿನ ಕೆಲಸವೇ ಸರಿ. ಕೇವಲ ಭಾಷಾ ಸಾಮರ್ಥ್ಯ ಮತ್ತು ಸಾಹಿತ್ಯ ಪಠ್ಯಗಳ ಪರಿಚಯದಿಂದ ನಡೆಯಬಹುದಾದ ವ್ಯಾಪಾರ ಇದಲ್ಲ. ಹೆಚ್ಚಿನ ಬೌದ್ಧಿಕ ಪರಿಶ್ರಮ ಬೇಡುವ ಇಂತಹ ಸಂಕಲನ ಮಾಡುವ ಕೆಲಸ, ಆ ಪರಂಪರೆಯೊಂದಿಗೆ ನಿರಂತರವಾಗಿ ತೊಡಗುವಿಕೆಯನ್ನು ಬಯಸುತ್ತದೆ. ಈ ನಿಟ್ಟಿನಲ್ಲಿ ವೆಲಚೇರು ನಾರಾಯಣ ರಾವ್ ಹಾಗೂ ಡೇವಿಡ್ ಶುಲ್‌ಮನ್ ಅವರು ಅನುವಾದಿಸಿ, ಸಂಪಾದಿಸಿದ ಕ್ಲಾಸಿಕಲ್ ತೆಲುಗು ಪೊಯೆಟ್ರಿ (2002) ನೆನಪಾಗುತ್ತದೆ. ಓದುಗರನ್ನೇ ರೂಪಾಂತರಿಸುವ ಶಕ್ತಿ ಹೊಂದಿರುವ ಈ ಅನುವಾದ ಎಲ್ಲ ದೃಷ್ಟಿಕೋನದಿಂದ ಅನುಕರಣೀಯ.

ಆಧುನಿಕ ಪೂರ್ವ ಭಾರತೀಯ ಸಾಹಿತ್ಯ, ಸಂಸ್ಕೃತಿ ಕುರಿತು ವಿದ್ವಾಂಸರ ಕುತೂಹಲ ಹೆಚ್ಚಾಗುತ್ತಿರುವ ಈ ಕಾಲದಲ್ಲಿ, ಪ್ರಸ್ತುತ ಸಂಕಲನವು ಸಂಶೋಧಕರಿಗೆ ಆಕರ ಗ್ರಂಥವಾಗಲಿದೆ. ಮಾನವಿಕ ಜ್ಞಾನಶಿಸ್ತುಗಳ ಪಠ್ಯಕ್ರಮಗಳಲ್ಲಿ ಇದನ್ನು ಅಳವಡಿಸಿಕೊಳ್ಳಲು ಯೋಗ್ಯವಾಗಿದೆ. ಅನುವಾದ ಕ್ಷೇತ್ರದಲ್ಲಿ ಪರಿಶ್ರಮ ಪಡುವವರು ಈ ಸಂಕಲನದಿಂದ ಹೆಚ್ಚಿನದನ್ನು ಕಲಿಯಬಹುದು. ಕನ್ನಡ ಓದುಗರು ಸಹ ತಮ್ಮ ಭಾಷೆಯ ಪಠ್ಯಗಳು ಇಂಗ್ಲಿಷ್‌ ಭಾಷೆಯಲ್ಲಿ ಯಾವ ಅನುಭವ ಕೊಡುತ್ತವೆ ಎಂಬ ಕುತೂಹಲದಿಂದ ಈ ಪುಸ್ತಕವನ್ನು ಓದಬಹುದು.

ಮುಖ್ಯವಾದ ಮಾತೆಂದರೆ, ಭಾರತೀಯ ಭಾಷೆಗಳಿಂದ ಇಂಗ್ಲಿಷ್‌ಗೆ ಆಗುವ ಅನುವಾದಗಳು ವಿರಳವಾಗಿರುವಾಗ ಕೇಂದ್ರ ಸಾಹಿತ್ಯ ಅಕಾಡೆಮಿಯ ಬೆಂಗಳೂರು ಕೇಂದ್ರ ಇಂತಹ ಕಾರ್ಯಗಳಿಗೆ ಸಾಂಸ್ಥಿಕ ಪ್ರೋತ್ಸಾಹ ನೀಡುತ್ತಿರುವುದು ಅಭಿನಂದನೀಯ. ಹೀಗೆಯೇ ರವಿಚಂದ್ರ ಹಾಗೂ ಹೆಗಡೆಯವರ ಈ ಪ್ರಯತ್ನ ಕನ್ನಡದಲ್ಲಿ ಮುಂದುವರೆಯಲಿ, ಕನ್ನಡ ಇನ್ನಷ್ಟು ವಿಶ್ವಾತ್ಮಕಗೊಳ್ಳಲಿ ಎಂಬುದಷ್ಟೆ ಹಾರೈಕೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.