ADVERTISEMENT

ಇಂದೋರ್‌ನಲ್ಲಿ ಚಾಂಪಿಯನ್ ಮುಂಬೈಗೆ ಕಠಿಣ ಸವಾಲು

ರೋಹಿತ್ ಶರ್ಮಾ– ರವಿಚಂದ್ರನ್‌ ಅಶ್ವಿನ್ ತಂಡಗಳ ಮುಖಾಮುಖಿ

ಪಿಟಿಐ
Published 3 ಮೇ 2018, 19:30 IST
Last Updated 3 ಮೇ 2018, 19:30 IST
ಇಂದೋರ್‌ನಲ್ಲಿ ಕಿಂಗ್ಸ್‌ ಇಲೆವನ್ ಪಂಜಾಬ್ ತಂಡದ ಕ್ರೀಸ್‌ ಗೇಲ್ ಅವರ ಹೊಸ ಪ್ರಯೋಗ ಇದು. ಸದಾ ಒಂದಿಲ್ಲೊಂದು ತಮಾಷೆಯಲ್ಲಿ ತೊಡಗುವ ಅವರೊಂದಿಗೆ ಕೆ.ಎಲ್. ರಾಹುಲ್, ಆರ್. ಅಶ್ವಿನ್ ಮತ್ತು ಯುವರಾಜ್ ಸಿಂಗ್ ಇದ್ದಾರೆ ಟ್ವಿಟರ್ ಚಿತ್ರ
ಇಂದೋರ್‌ನಲ್ಲಿ ಕಿಂಗ್ಸ್‌ ಇಲೆವನ್ ಪಂಜಾಬ್ ತಂಡದ ಕ್ರೀಸ್‌ ಗೇಲ್ ಅವರ ಹೊಸ ಪ್ರಯೋಗ ಇದು. ಸದಾ ಒಂದಿಲ್ಲೊಂದು ತಮಾಷೆಯಲ್ಲಿ ತೊಡಗುವ ಅವರೊಂದಿಗೆ ಕೆ.ಎಲ್. ರಾಹುಲ್, ಆರ್. ಅಶ್ವಿನ್ ಮತ್ತು ಯುವರಾಜ್ ಸಿಂಗ್ ಇದ್ದಾರೆ ಟ್ವಿಟರ್ ಚಿತ್ರ   

ಇಂದೋರ್: ಇಂಡಿಯನ್ ಪ್ರೀಮಿಯರ್ ಲೀಗ್‌ (ಐಪಿಎಲ್) ಟೂರ್ನಿಯ ಇತಿಹಾಸದಲ್ಲಿ ಮೂರು ಸಲ ಪ್ರಶಸ್ತಿ ಗೆದ್ದಿರುವ ಮುಂಬೈ ಇಂಡಿಯನ್ಸ್ ತಂಡವು ಈ ಸಲದ ಟೂರ್ನಿಯಲ್ಲಿ ಪ್ಲೇ ಆಫ್‌ ಹಂತ ಪ್ರವೇಶಿಸುವುದೇ ಅನುಮಾನವಾಗಿದೆ.

ಹಾಲಿ ಚಾಂಪಿಯನ್ ಕೂಡ ಆಗಿ ರುವ ರೋಹಿತ್ ಶರ್ಮಾ ಅವರ ಬಳಗ ಈಗ ‘ಮಾಡು ಇಲ್ಲವೆ ಮಡಿ’ ಪರಿಸ್ಥಿತಿಯಲ್ಲಿದೆ.

ಶುಕ್ರವಾರ ಇಲ್ಲಿ ಬಲಿಷ್ಠ ಕಿಂಗ್ಸ್‌ ಇಲೆವನ್ ಪಂಜಾಬ್ ತಂಡದ ಎದುರು ಮುಂಬೈ ಕಣಕ್ಕಿಳಿಯಲಿದೆ. ಈ ಪಂದ್ಯದಲ್ಲಿ ಸೋತರೆ ರೋಹಿತ್ ಬಳಗದ ಹೋರಾಟ ಮುಗಿದಂತೆಯೇ ಲೆಕ್ಕ. ಎಂಟು ಪಂದ್ಯಗಳನ್ನು ಆಡಿರುವ ಮುಂಬೈ ತಂಡವು ಎರಡರಲ್ಲಿ ಮಾತ್ರ ಗೆದ್ದಿದೆ. ಈಚೆಗೆ ಬೆಂಗಳೂರಿನಲ್ಲಿ ನಡೆ ದಿದ್ದ ಪಂದ್ಯದಲ್ಲಿ ಆರ್‌ಸಿಬಿ ವಿರುದ್ಧವೂ ಸೋತಿತ್ತು. ಈಗ ಉಳಿದಿ ರುವ ಆರು ಪಂದ್ಯಗಳಲ್ಲಿಯೂ ಮುಂಬೈ ಗೆಲ್ಲುವ ಒತ್ತಡದಲ್ಲಿದೆ. ಆದರೆ ಕಿಂಗ್ಸ್ ತಂಡದ ಸವಾಲು ಎದುರಿಸುವುದು ಸುಲಭವಲ್ಲ.

ADVERTISEMENT

ನಾಲ್ಕು ದಿನಗಳ ವಿಶ್ರಾಂತಿಯ ನಂತರ ಕಿಂಗ್ಸ್‌ ತಂಡವು ಕಣಕ್ಕೆ ಮರಳಿದೆ. ಏಳು ಪಂದ್ಯಗಳನ್ನು ಆಡಿರುವ ತಂಡವು ಐದರಲ್ಲಿ ಗೆದ್ದು ಎರಡರಲ್ಲಿ ಸೋತಿದೆ. ಕನ್ನಡಿಗರಾದ ಕೆ.ಎಲ್. ರಾಹುಲ್, ಕರುಣ್ ನಾಯರ್ ಮತ್ತು ಮಯಂಕ್ ಅಗರವಾಲ್ ಉತ್ತಮ ಫಾರ್ಮ್‌ನಲ್ಲಿದ್ದಾರೆ. ಅವರಲ್ಲದೇ ಬ್ಯಾಟಿಂಗ್ ದಿಗ್ಗಜ ಕ್ರಿಸ್‌ ಗೇಲ್ ಬಲವೂ ತಂಡಕ್ಕೆ ಇದೆ. 4 ಪಂದ್ಯಗಳನ್ನು ಆಡಿರುವ ಅವರು 252 ರನ್‌ ಗಳಿಸಿದ್ದಾರೆ. ಅದರಲ್ಲಿ ಒಂದು ಶತಕವೂ ಇದೆ.

ಕೇರಳದ ಮನಮೋಹಕ ಪರಿ ಸರದಲ್ಲಿ ಕುಟುಂಬದೊಂದಿಗೆ ರಜೆ ಕಳೆದು ಮರಳಿರುವ ಗೇಲ್ ಮತ್ತೆ ಮುಂಬೈ ಎದುರು ಅಬ್ಬರಿಸುವ ತವಕದಲ್ಲಿದ್ದಾರೆ. ಅವರನ್ನು ಕಟ್ಟಿಹಾಕುವುದು ರೋಹಿತ್ ಬಳಗದ ಬೌಲರ್‌ಗಳಾದ ಜಸ್‌ಪ್ರೀತ್ ಬೂಮ್ರಾ, ಮಯಂಕ್ ಮಾರ್ಕಂಡೆ, ಕೃಣಾಲ್ ಪಾಂಡ್ಯ, ಹಾರ್ದಿಕ್ ಪಾಂಡ್ಯ, ಮಿಚೆಲ್ ಮೆಕ್‌ ಲೆಂಗಾನ್ ಅವರ ಮುಂದಿರುವ ಸವಾಲು, ಕಿಂಗ್ಸ್‌ ತಂಡದ ಬೌಲರ್‌ ಗಳಾದ ಅಕ್ಷರ್ ಪಟೇಲ್, ಮುಜೀಬ್ ಉರ್ ರೆಹಮಾನ್, ಮೋಹಿರ್ ಶರ್ಮಾ ಕೂಡ ಉತ್ತಮ ಲಯದಲ್ಲಿದ್ದಾರೆ. ಅವರನ್ನು ಎದುರಿಸಲು ರೋಹಿತ್ ಶರ್ಮಾ, ಸೂರ್ಯಕುಮಾರ್ ಯಾದವ್, ಎವಿನ್ ಲೂಯಿಸ್ ಮತ್ತು ಪಾಂಡ್ಯ ಸಹೋದರರು ಬ್ಯಾಟಿಂಗ್ ಲಯ ಕಂಡುಕೊಳ್ಳಬೇಕು. ಆರ್‌ಸಿಬಿ ಎದುರಿನ ಪಂದ್ಯದಲ್ಲಿ ಬ್ಯಾಟಿಂಗ್ ಮಾಡುವಾಗ ಹಾರ್ದಿಕ್ ಪಾಂಡ್ಯ ಅವರ ತೋಳಿಗೆ ಚೆಂಡು ಬಡಿದು ಗಾಯವಾಗಿತ್ತು. ಆವರು ಅದರಿಂದ ಚೇತರಿಸಿಕೊಂಡು ಕಣಕ್ಕಿಳಿಯುವ ನಿರೀಕ್ಷೆ ಇದೆ.

ಪಂದ್ಯ ಆರಂಭ: ರಾತ್ರಿ 8

ನೇರಪ್ರಸಾರ: ಸ್ಟಾರ್ ನೆಟ್‌ವರ್ಕ್

**

ಕಿಂಗ್ಸ್‌ಗೆ ಎರಡನೇ ತವರು ಇಂದೋರ್‌: ಕಿಂಗ್ಸ್‌ ಇಲೆವನ್ ತಂಡಕ್ಕೆ ಇಂದೋರ್‌ನ ಮಧ್ಯಪ್ರದೇಶಕ್ಕೆ ಕ್ರಿಕೆಟ್ ಸಂಸ್ಥೆ (ಎಂಪಿಸಿಎ) ಕ್ರೀಡಾಂಗಣವು ಎರಡನೇ ತವರು.

ಪಂಜಾಬ್ ತಂಡದ ತವರು ಕ್ರೀಡಾಂಗಣವಿರುದ ಮೊಹಾಲಿಯಲ್ಲಿ ಹೆಚ್ಚು ಪ್ರೇಕ್ಷಕರು ಬರುವುದಿಲ್ಲ ಎನ್ನುವ ಕಾರಣಕ್ಕೆ ಪಂಜಾಬ್ ಫ್ರ್ಯಾಂಚೈಸ್‌ನ ಸಹಮಾಲೀಕರಾದ ಪ್ರೀತಿ ಜಿಂಟಾ ಅವರು ಇಂದೋರ್‌ಗೆ ನಾಲ್ಕು ಪಂದ್ಯಗಳನ್ನು ಸ್ಥಳಾಂತರಿಸಲು ನಿರ್ಧರಿಸಿದ್ದರು. ಆದ್ದರಿಂದ ಇಲ್ಲಿ ಕಿಂಗ್ಸ್‌ ತಂಡದ ನಾಲ್ಕು ಪಂದ್ಯಗಳು ನಡೆಯಲಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.