ADVERTISEMENT

ಕವಿತೆ| ಶಿಸ್ತಿನ ಶಾಂತಿ

ಮಮತಾ ಸಾಗರ್
Published 23 ಮೇ 2020, 19:30 IST
Last Updated 23 ಮೇ 2020, 19:30 IST
ಕಲೆ: ಮಹಾಂತೇಶ ದೊಡ್ಡಮನಿ
ಕಲೆ: ಮಹಾಂತೇಶ ದೊಡ್ಡಮನಿ   

ಪುಳಕ್ ಅಂತ ಒಂದು ಹನಿ ನೀರಿಗೆ ಬಿದ್ದರೆ
ಅಷ್ಟೆತ್ತರದಿಂದ ಪ್ರಪಾತಕ್ಕೆ ಧುಮುಕಿದ ಹಾಗೆ ಕೇಳುತ್ತದೆ.
ತಲೆಯೊಳಗೆ ತರಂಗಗಳೇಳುತ್ತವೆ
ಬಿಂಬ ಒಡೆದು ಬಿಡಿ ಬಿಡಿಯಾಗಿ ಹಿಂಜರಿದು
ತುಣುಕು ಬಣ್ಣಗಳೆಲ್ಲ ಪಾರದರ್ಶಕವಾಗಿ ಕಳೆದು ಹೋಗುತ್ತವೆ

ಗಿರಕಿ ಹೊಡೆಯುತ್ತ ಬೆನ್ನಟ್ಟುವ ಎಲೆಗಳ ಬೀಸಿಗೆ ಹೆದರಿ
ವಲಸೆ ಹೊರಟ ಹಳದಿ ಹೂಗಳ ಹಿಂಡು,
ಹಾದಿಯುದ್ದಕೂ ಉದುರಿ, ಒಣಗಿ
ಬಿದ್ದಿವೆ ನೀರು ನೆಲೆ ಇಲ್ಲದೆ

ಗೋಡೆ ಮೇಲೆ ಒಣಗುತ್ತಿದೆ ಬಿಸಿಲ ತುಣುಕು
ಮನೆಯಲ್ಲಿದ್ದವರು ನೆನಪುಗಳನ್ನೆಲ್ಲಾ ಬಾಚಿಕೊಂಡು
ನೆರಳ ಬಿಟ್ಟು ನಡೆದಿರಬೇಕು

ADVERTISEMENT

ನೆಮ್ಮದಿಯ ನೆಪದಲ್ಲಿ ನಝರು ದೇಖರೇಕು?
ಶಿಸ್ತಿನ ಈ ಶಾಂತಿ ಸಾಕಾಗಿದೆ
ವರ್ಚುವಲ್ ಆಗಿ ತಾರಾಡುವ ನಮಗೆ
ಕದ ತೆರೆದದ್ದೇ ಕಿಟಕಿ ಬಾಗಿಲುಗಳೆಲ್ಲ ಮುಚ್ಚಿಹೋಗಿ
ಝುಮಿಕೊಳ್ಳುತ್ತದೆ, ಬದುಕು
ನೆತ್ತಿಯ ಮೇಲೆ ಸುತ್ತುವ ನಿಗಾ ಖಾಯಮ್ಮಾಗಿ
ಡ್ರೋನುಗಳೊಳಗಿಂದ ಒಳಹೊರಗಿನೋಡಾಟ ಶುರುವಾಗಿ
ಎಲ್ಲಿಲ್ಲದ ಹೊಸ ಹೊಸ ಕಾಳಜಿಗಳು ಮೊಳಕೆಯೊಡೆಯುತ್ತವೆ
ಸರ್ವೆಲೆನ್ಸಿನ ಮಾಸ್ಕ್ ತೊಟ್ಟು.

ಸದ್ದೇಯಿಲ್ಲದೀ ಮೌನದ ಮಾತಿಗೆ ಬೆಚ್ಚಿಬಿದ್ದಿದ್ದೇನೆ
ಕಾಣದ್ದೆಲ್ಲ ಕಾಣುತ್ತಿದೆ, ಕೇಳದ್ದೆಲ್ಲ ಕೇಳುತ್ತಿದೆ.

***

ಮಮತಾ ಸಾಗರ ಅವರಕವಿತೆ ವಾಚನದ ವಿಡಿಯೊ ಇಲ್ಲಿ ವೀಕ್ಷಿಸಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.