ADVERTISEMENT

ಸ್ವ-ಗತ: ಟಿ. ದೇವಿದಾಸ್‌ ಬರೆದ ಕವಿತೆ

​ಪ್ರಜಾವಾಣಿ ವಾರ್ತೆ
Published 24 ಜುಲೈ 2021, 19:30 IST
Last Updated 24 ಜುಲೈ 2021, 19:30 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಕಾಡುತ್ತಿವೆ ಕಳೆದ ದಿನಗಳು ಮಾಡಿದ ಅ-ಕೃತ್ಯಗಳೊಂದಿಗೆ

ಒಮ್ಮೆಲೇ ಧುತ್ತೆಂದು ಬಂದೆರಗುವ ಅಗ್ನಿದಿವ್ಯಗಳಂತೆ

ಏನು ಸಾಧನೆ ಮಾಡಿದೆ ನಾನು ಇಷ್ಟು ದೀರ್ಘ ದಿನಗಳಲ್ಲಿ

ADVERTISEMENT

ಗಳಿಸಿದ ಮಾನ ಸಂಮಾನ ಸಿರಿ ಸಂಪತ್ತು ತೃಣವೆನಿಸುತ್ತಿದೆಯಲ್ಲ

ಕಳೆದುಕೊಂಡ ಸಂ-ಮಾನಹೀನತೆಯಲ್ಲಿ ಅ-ನೈತಿಕತೆಯಲ್ಲಿ

ಈ ಬದುಕಿಗೆ ಏನು ‘ಅರ್ಥ’? ‘ಅರ್ಥ’ವಿದೆಯೇ ಈ ಬದುಕಿಗೇನಾದರೂ?

ಅಥವಾ ನಾವು ‘ಅರ್ಥ’ವನ್ನು ತುಂಬುವುದೇ? ಅಥವಾ ‘ಅರ್ಥ’ವೇ ಬದುಕೆ?

ವಸಂತದ ಉನ್ಮಾದ ಕೆಲವೇ ದಿನಗಳ ಹಿಂದೆ ಕನ್ನಡಿಯ ಮುಂದೆ

ಆಗಲೇ ಶರದೃತುವಿನ ಆಕ್ರಮಣವಾಗಿಬಿಟ್ಟಿತು ಈ ತನುವಿಗೆ, ಮನಸಿಗೆ

ನಿಸ್ತೇಜವಾಗಿದೆ ಮುಖ... ಕುಸಿದಿದೆ ತೋಳುಗಳಲ್ಲಿಯ ಉನ್ಮಾದ

ಕುಂದಿದೆ ಉತ್ಸಾಹ, ಚೈತನ್ಯ... ಆದರೂ ಚಪಲದೊರತೆ ಬತ್ತಿಲ್ಲ

ಸ್ಥಿಮಿತವಿಲ್ಲದ ಬುದ್ಧಿಯ ಮನ ಹಂಬಲಿಸುತ್ತಿದೆ ಲಂಚದಾಸೆಗೆ

ಕೇಳಿಸದು ಬಡಿವಾರದ ಡಂಗುರ ಜಾಗಟೆಯ ದನಿ

ತಾರಕಕ್ಕೇರದ ತುತ್ತೂರಿಯ ಮೊಳಗು

ಎಲ್ಲಿ ಹೋದರು ಅಕ್ಕಪಕ್ಕದ ಪರಿಚಾರಕರು...?

ಯಾರಲ್ಲಿ ಎನಲು

ಜೀ ಹುಜೂರೆಂದು ಸೇವಕರು

ಕೈಗೊಂದು ಕಾಲ್ಗೊಂದು ಅಡಿಯೊತ್ತಲು

ಅದೇನು ಒಡ್ಡೋಲಗದ ಓಟ!

ಮುಗಿಯಿತೆ ಮಂತ್ರಿಮಂಡಲದ ಆಟ

ಕಳೆಯಿತೆ ರಾಜ ದರ್ಬಾರಿನ ದರ್ಪ, ಅಟ್ಟಹಾಸ, ಕೇಕೆ

ಈಗ, ಯಾರಲ್ಲಿ ಎನಲು,

ಯಾರೂ ಇಲ್ಲ ಅಲ್ಲಿ ಎನ್ನಲೂ ಯಾರೂ ಇಲ್ಲ!

ಸ್ವಗತವೊಂದೇ ಆತ್ಮಸಾಕ್ಷಿಗೆ ಸಾಕ್ಷಿ

ದೈನ್ಯತೆಗೂ ಇಲ್ಲ ಅವಕಾಶದ ಬಾಗಿಲು

ಇದೆಂಥಾ ವಿಧಿ... ಕೊಟ್ಟ ಹಾಗೆ ಮಾಡಿ ಎಲ್ಲವನ್ನೂ ಕಸಿದುಕೊಂಡನೆ?!

ಒಬ್ಬಂಟಿಯಾಗಿ ಹೊರಡುವುದಕ್ಕೆ ದಾರಿತೋರಿದನೆ?

ಅಹುದು...

ಅವನೆಂದಂತೆ ನಡೆದುಬಿಟ್ಟರೊಳಿತು...

ಕಾರಣ, ಸವೆಸಿದಷ್ಟೂ ದಾರಿಯಿದೆ, ಮುಂದಕ್ಕೆ... ದೂರ ದೂರ

ಅನ್ನಿಸಲು,

ಹೋಗುವುದಾದರೂ ಎಲ್ಲಿಗೆ?

ಬಂದಲ್ಲಿಗೆ?

ಉಹುಂ... ಯಾರಿದ್ದಾರೆ ಅಲ್ಲಿ ಸ್ವಾಗತಗೈದು ಬರಮಾಡಿಕೊಳ್ಳಲು?

ಅದೇ ಮುರುಕು ಮನಸುಗಳ ಒಡೆದುಹೋದ ಸಂಬಂಧಗಳ ನಡುವೆ

ಹೆತ್ತವರಿಲ್ಲದ ಬರೀ ಹೊತ್ತವರೇ ತುಂಬಿದ

ಎಲ್ಲಾ ಇದ್ದು ಯಾರೂ ಇಲ್ಲದಂತಿರುವ

ಮಣ್ಣು, ನೀರು, ಗಾಳಿ, ಬೆಳಕುಗಳ ಸ್ಪರ್ಶವಿಲ್ಲದ

ಕರಿಕರಿ ಮಸಿಯಾದ ಗೋಡೆಗಳ

ನನ್ನ ಮನೆಗೆ... ಮನಕೆ... ಶಾಶ್ವತವಾಗಿ… ಏಕಾಂಕಿಯಾಗಿ...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.