ADVERTISEMENT

ಡೈರಿ ಮಿಲ್ಕ್ ಚಾಕ್ಲೇಟು

​ಪ್ರಜಾವಾಣಿ ವಾರ್ತೆ
Published 23 ನವೆಂಬರ್ 2019, 19:30 IST
Last Updated 23 ನವೆಂಬರ್ 2019, 19:30 IST
ಕಲೆ: ಮದನ್‌ ಸಿ.ಪಿ
ಕಲೆ: ಮದನ್‌ ಸಿ.ಪಿ   

‘ಇನ್ನೆಷ್ಟೊತ್ತಿಗೆ ಬರ್ತಾಳೋ? ಅವ್ರಪ್ಪ ಜೊತೀಗಿದ್ರೆ ಹೆಂಗ್ ಹೇಳಾದು?’ ಎಂದುಕೊಂಡು ಬೆಳಿಗ್ಗೆ ಹನ್ನೊಂದು ಗಂಟೆಯ ಸಮಯದಲ್ಲಿ ಸ್ವಲ್ಪ ಭಯದಲ್ಲೇ ಮೆಟ್ಟಿಲೊಂದರ ಮೇಲೆ ಕೂತಿದ್ದೆ. ಬಹಳ ಹೊತ್ತಾದ ಮೇಲೂ ನನ್ನ ಪೇಚಾಟ ಹಾಗೆಯೇ ಇತ್ತು. ನಾನು ಕೂತಿದ್ದ ಜಾಗದಲ್ಲಿ ಹಲವರು ತಮ್ಮ ಸೈಕಲ್ಲು, ಗಾಡಿಗಳನ್ನು ನಿಲ್ಲಿಸಿದ್ದರು.

ಇಡೀ ಜಿಲ್ಲೆಯಲ್ಲೇ ದೊಡ್ಡ ಪೊಲೀಸ್ ಕ್ವಾಟ್ರಸ್ಸು. ಇದರ ಹೆಸರು ಡಿ.ಎ.ಆರ್ ಪೊಲೀಸ್ ಕ್ವಾಟ್ರಸ್. ಏಳು ನೂರರಿಂದ ಎಂಟು ನೂರು ಜನ ಪೊಲೀಸರ, ವಿವಿಧ ಗಾತ್ರ ಮತ್ತು ಆಕಾರದ ಮನೆಗಳಿರುವ ಪ್ರದೇಶವಿದು. ಇದರಲ್ಲಿರುವ ಎರಡು ಅಂತಸ್ತಿನ ಚೌಕಾಕಾರದ ಒಂದು ಬಿಲ್ಡಿಂಗಿನಲ್ಲಿ, ಒಂದು ಬೆಡ್‍ರೂಮಿನ ಹನ್ನೆರಡು ಮನೆಗಳಿವೆ. ಮೇಲೆ ಹೋಗಲಿಕ್ಕೆ ಬಿಲ್ಡಿಂಗಿನೊಳಗೇ ಮೆಟ್ಟಿಲುಗಳನ್ನು ಮಾಡಿದ್ದಾರೆ. ಬಹಳ ಹೊತ್ತಿನಿಂದ ಅದೇ ನನ್ನ ಜಾಗವಾಗಿ, ಮೆಟ್ಟಿಲುಗಳೇ ನನ್ನ ಕುರ್ಚಿಗಳಾಗಿದ್ದವು. ಕಾದು ಕಾದು ಸಾಕಾಯ್ತು. ‘ನಾಳೆ ಪರೀಕ್ಷೆ ಐತೆ, ಕಮ್ಮಿ ಮಾರ್ಕ್ಸ್‌ ತಗುದ್ರೆ ಟೀಚರ್‌ ಬೈತಾರ’ ಎನ್ನುವುದರ ಜೊತೆಗೆ ‘ನಾನ್ ಇಲ್ಲಿ ನಿಂತಿರಾದುನ್ನ ಯಾರಾನ ನೋಡಿದ್ರೆ? ಯಾರಾನ ಪೊಲೀಸ್ ಅಂಕಲ್‌ ಬಂದ್ಬುಟ್ರೆ?’ ಎಂದು ಭಯವಾಯಿತು, ಎದ್ದೆ. ನಾನು ಯಾರಿಗೆ ಕಾಯುತ್ತಿರುವೆನೋ ಅವರೇನಾದರೂ ಬಂದರೆ ಅವರ ಗಾಡಿಯ ಶಬ್ದ ಕೇಳಿಸುವುದು, ಆಗ ತಕ್ಷಣ ಓಡಿ ಬಂದು ಹೇಳಿದರಾಯಿತು ಎಂಬ ಸಮಾಧಾನದೊಂದಿಗೆ ಮನೆಯ ಕಡೆ ನಡೆದೆ. ನಮ್ಮ ಮನೆ ಅದೇ ಬಿಲ್ಡಿಂಗಿನ ನೆಲ ಮಹಡಿಯಲ್ಲಿತ್ತು, ನಮ್ಮಪ್ಪನೂ ಪೊಲೀಸು.

ನಮ್ಮ ಟ್ಯೂಶನ್ ಕೂಡ ಪೊಲೀಸ್ ಲೈನಿನಲ್ಲೇ ಇತ್ತು. ಪ್ರೈವೇಟ್ ಸ್ಕೂಲ್ ಒಂದರಲ್ಲಿ ಕೆಲಸ ಮಾಡುತ್ತಿದ್ದ ಪ್ರಕಾಶಣ್ಣನ ಹತ್ತಿರ ಲೈನಿನ ಬಹಳಷ್ಟು ಜನ ಟ್ಯೂಶನ್ನಿಗೆ ಹೋಗುತ್ತಿದ್ದೆವು. ಅವರು ಎ.ಎಸ್‌.ಐ ಮಗ. ಅವರವು ಒಂದೊಂದೇ ಇದ್ದ ವಿಶಾಲವಾದ ಮನೆಗಳು. ಅವರ ಮನೆ ನೋಡಿದಾಗಲೆಲ್ಲಾ, ‘ನಮ್ಮಪ್ಪಜ್ಜಿ ಇನ್ನೂ ಕಾನ್ಸ್‌ಟೆಬೆಲ್ಲು, ಅವ್ರು ಹೆಡ್ ಕಾನ್ಸ್‌ಟೆಬಲ್ ಆಗಿ ಆಮೇಲೆ ಎ.ಎಸ್.ಐ ಆಗೋದು ಯಾವಾಗ? ನಾವು ಇಂಥಾ ಮನಿಯಾಗ ಇರೋದು ಯಾವಾಗ?’ ಎಂದೆಲ್ಲಾ ಯೋಚಿಸುತ್ತಿದ್ದೆ. ಮನೆಯ ವಿಶಾಲವಾದ ಹಿತ್ತಲಿನಲ್ಲಿ ಶೆಡ್ ಹಾಕಿಸಿ, ನೆಲಕ್ಕೆ ಸಿಮೆಂಟ್ ಹಾಕಿಸಿ ಟ್ಯೂಶನ್ ಹುಡುಗರಿಗೆಲ್ಲಾ ಕೂರಲು ವ್ಯವಸ್ಥೆ ಮಾಡಿದ್ದರು. ಪ್ರಕಾಶಣ್ಣ ಒಂದರಿಂದ ಏಳನೇ ತರಗತಿಯವರೆಗೆ ಪಾಠ ಮಾಡುತ್ತಿದ್ದರು. ಪ್ರಕಾಶಣ್ಣ ಇಲ್ಲದ ದಿನ, ಪಿಯುಸಿ ಓದುತ್ತಿದ್ದ ಅವರ ತಂಗಿ ಪದ್ಮಕ್ಕ ಟ್ಯೂಶನ್ ನೋಡಿಕೊಳ್ಳುತ್ತಿದ್ದರು.

ADVERTISEMENT

ಪ್ರಕಾಶಣ್ಣ ಚೆನ್ನಾಗಿ ಹೇಳಿಕೊಡದಿದ್ದರೂ ಏನಾದರೂ ತಪ್ಪು ಮಾಡಿದಾಗ ಅವರಷ್ಟು ಹೊಡೆಯುತ್ತಿರಲಿಲ್ಲವಾದ್ದರಿಂದ ಟ್ಯೂಶನ್ ದಿನಚರಿಯ ಕೊನೆಯ ಪಾಠ-ಪ್ರಶ್ನೋತ್ತರಗಳನ್ನು ಪದ್ಮಕ್ಕನೇ ಮಾಡಲಿ ಎಂದು ಎಲ್ಲರೂ ಅಂದುಕೊಳ್ಳುತ್ತಿದ್ದೆವು. ಪ್ರಕಾಶಣ್ಣನನ್ನು ‘ಟೂಶನಣ್ಣ’ ಎಂದು, ಪದ್ಮಕ್ಕಳನ್ನು ‘ಟೂಶನಕ್ಕ’ ಎಂದು ಕರೆಯುತ್ತಿದ್ದೆವು.

ಸಾಯಂಕಾಲ ಟೂಶನಣ್ಣ ಇರಲಿಲ್ಲ. ಎಲ್ಲರೂ ನಮ್ಮ ಪಾಡಿಗೆ ನಾವು ಓದಿಕೊಳ್ಳುತ್ತಿದ್ದೆವು. ನಾನು ಸಮಾಜ ಪುಸ್ತಕ ಹಿಡಿದಿದ್ದೆ, ಪದ್ಮಕ್ಕ ಬಂದು ಮನೆಯೊಳಗೆ ಕರೆದರು, ಹೋದೆ. ನಾನಂದುಕೊಂಡಂತೇ ಸೋಫಾದಲ್ಲಿ ಆಯಣ್ಣ (ಆ ಅಣ್ಣ) ಕೂತಿದ್ದ. ಪದ್ಮಕ್ಕ ನನ್ನನ್ನು ನೋಡುತ್ತಾ, ‘ಅಪ್ಪೀ ಹೇಳಿದ್ಯಾ, ಅಪ್ಪೀ?’ ಎಂದಳು. ನಾನು, ‘ಇಲ್ಲಕಾ, ಭಾಳೊತ್ತು ಕಾದೆ. ಆಯಕ್ಕ (ಆ ಅಕ್ಕ) ಬರ್ಲೇ ಇಲ್ಲ’ ಎಂದು ಆಯಣ್ಣನನ್ನು ನೋಡಿದೆ. ಆಯಣ್ಣ ಎದ್ದು ಬಂದು, ‘ಇನ್ನಾ ಸ್ವಲ್ಪೊತ್ತು ಇದ್ದಿದ್ರೆ ಗ್ಯಾರಂಟಿ ಬರ್ತಿದ್ಳು ಅಪ್ಪೀ’ ಎಂದ.

ಆಯಣ್ಣ ಮತ್ತು ನಮ್ಮ ಟೂಶನಕ್ಕ ಇಬ್ಬರೂ ಒಂದೇ ಕಾಲೇಜಿನವರು. ಆಯಣ್ಣ, ‘ಪ್ಲೀಸ್ ಅಪ್ಪಿ, ಆಕೀಗೆ ಹೇಳ್ತೀಯಾ ನಾಡ್ದ, ಅಂದ್ರೆ ಸೋಮವಾರ ಸಾಯಂಕಾಲ ಐದ್‌ ಗಂಟೀಗೆ, ಮಯೂರ ಹೋಟ್ಲು, ಅಮೃತ್ ಐಸ್‍ಕ್ರೀಮ್ ಪಾರ್ಲರ್‌ನಾಗ ಸಿಗು ಅಂತ?’ ಎಂದ. ನಾನು, ‘ಅಣಾ, ಸ್ಕೂಲಾಗ ಟೆಸ್ಟ್ ಐದಾವ’ ಎಂದೆ. ಆಯಣ್ಣ ಜೇಬಿನಿಂದ ಹತ್ತತ್ತು ರೂಪಾಯಿಯ ಎರಡು ಡೈರಿ ಮಿಲ್ಕ್‌ ಚಾಕ್ಲೇಟ್‍ಗಳನ್ನು ತೆಗೆದು ನನ್ನ ಕೈಯೊಳಗಿಟ್ಟು ಮುಖ ನೋಡಿದ. ಆಯಣ್ಣ ಚಾಕ್ಲೇಟ್‍ಗಳನ್ನು ಕೊಟ್ಟಿರದೇ ಇದ್ದಿದ್ದರೆ, ಏನು ಹೇಳುತ್ತಿದ್ದೆನೋ? ಗೊತ್ತಿಲ್ಲ. ಆದರೆ ಚಾಕ್ಲೇಟುಗಳನ್ನು ನೋಡಿದ ಬಾಯಿ ಬಂದಾಯಿತು. ಆಯಣ್ಣ, ‘ಅಲ್ಲಪೀ ಮಧ್ಯಾಹ್ನ ಮುಗೀತಾವಲ್ಲಾ? ಸಾಯಂಕಾಲ ಹೇಳು. ಪ್ಲೀಸ್ ಅಪ್ಪೀ, ಆಕೀದು ಬರ್ತಡೇ ಐತೆ ಅದಿಕ್ಕೆ’ ಎಂದು ಬೇಡಿಕೆ ಇಟ್ಟ.

ಆಯಣ್ಣನಿಗೆ ಗೊತ್ತಿತ್ತು ನಮ್ ಪರೀಕ್ಷೆಗಳ ಬಗ್ಗೆ, ಯಾಕೆಂದರೆ ಅವರ ತಂಗಿ ನನ್ನ ಕ್ಲಾಸ್‍ಮೇಟು ಮತ್ತು ಕ್ಲೋಸ್ ಫ್ರೆಂಡಾಗಿದ್ದಳು. ನಾನೂ ಅವಳು ಇಬ್ಬರೂ ಕ್ವಾಟ್ರಸ್ಸಿನಲ್ಲೇ ಇದ್ದ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಐದನೇ ತರಗತಿಯಲ್ಲಿ ಓದುತ್ತಿದ್ದೆವು. ಆದರೆ ಅವರಪ್ಪ ಪೊಲೀಸ್ ಆಗಿರಲಿಲ್ಲ, ಅವಳು ಪಕ್ಕದ ನೆಹರೂ ಕಾಲೋನಿ ಏರಿಯಾದಿಂದ ನಮ್ಮ ಶಾಲೆಗೆ ಬರುತ್ತಿದ್ದಳು. ಕೆಲವೊಂದು ಸಲ ಆಯಣ್ಣಾನೇ ಅವಳನ್ನ ಸೈಕಲ್ಲಲ್ಲಿ ಕರೆದುಕೊಂಡು ಬಂದು ಶಾಲೆಗೆ ಬಿಟ್ಟು ಹೋಗುತ್ತಿದ್ದ. ಕ್ಲಾಸಿನ ಲೀಡರ್ ಆಗಿದ್ದ ಅವಳು, ನಾನು ಗಲಾಟೆ ಮಾಡಿದರೆ ಕಣ್ಸನ್ನೆಯಲ್ಲಿ ಗದರುತ್ತಿದ್ದಳೇ ಹೊರತು ಬೋರ್ಡಿನ ಮೇಲೆ ಹೆಸರು ಬರೆಯುತ್ತಿರಲಿಲ್ಲ. ಚೆನ್ನಾಗಿ ನೋಟ್ಸ್ ಬರೆದು ಕೊಳ್ಳುತ್ತಿದ್ದವಳು, ನಾನು ಕೇಳಿದಾಗಲೆಲ್ಲಾ ಕೊಡುತ್ತಿದ್ದಳು. ಮನೆಯಿಂದ ತಂದ ಮಧ್ಯಾಹ್ನದ ಬುತ್ತಿಯಲ್ಲಿ ವಿಶೇಷವಿದ್ದರೆ ನನಗೆ ಮೊದಲೇ ಹೇಳಿ, ಮನೆಗೆ ಹೋಗಿ ಊಟ ಮಾಡದಿರಲು ಸೂಚಿಸುತ್ತಿದ್ದಳು. ಕೆಲಸ ಹೇಳಿರುವ ಆಯಣ್ಣನು ಅಂತಹ ನನ್ನ ಗೆಳತಿಯ ಅಣ್ಣನಲ್ಲವೇ ಎಂದುಕೊಂಡೂ ಆಯಣ್ಣ ಹೇಳಿದ ಕೆಲಸಕ್ಕೆ ಮತ್ತೆ ಒಪ್ಪಿಕೊಂಡೆ. ಆಯಣ್ಣ ಮತ್ತು ಆಯಕ್ಕ ಇಬ್ಬರೂ ಪಿಯುಸಿ ಓದುತ್ತಿದ್ದರು. ಅವರ ಕಾಲೇಜುಗಳು ಒಂದೇ ಏರಿಯಾದಲ್ಲಿದ್ದವು, ಆಯಣ್ಣ ಆಯಕ್ಕನನ್ನು ಲವ್ ಮಾಡುತ್ತಿದ್ದಾನೆ. ಆಯಕ್ಕಾನೂ ಆಯಣ್ಣನನ್ನು ಲವ್ ಮಾಡುತ್ತಿದ್ದಾಳೆ, ಈ ಲವ್ ವಿಷಯವನ್ನು ನನಗೆ ಆಯಣ್ಣಾನೇ ಆವತ್ತು ಇಲ್ಲೇ ಹೇಳಿದ್ದು.

ಆವತ್ತೂ ಹಿಂಗೇ ಟ್ಯೂಶನ್ನಿನಲ್ಲಿ ಓದುತ್ತಾ ಕೂತಿದ್ದ ನನ್ನನ್ನ ಟೂಶನಕ್ಕ ಹಿಂಗೇ ಮನೆಯೊಳಗೆ ಕರೆದಿದ್ದರು. ಆಯಣ್ಣ ಇವತ್ತಿನಂತೆಯೇ ಸೋಫಾದ ಮೇಲೆ ಕೂತು, ನನ್ನನ್ನು ನೋಡುತ್ತಿದ್ದರು. ‘ನೀನು ಮತ್ತೆ ಇವ್ರ್ ತಂಗಿ ಒಂದೇ ಕ್ಲಾಸಾಗ ಓದಾಕತ್ತೀರಂತಲ್ಲಪೀ?’ ಎಂದರು ಟೂಶನಕ್ಕ. ನಾನು, ‘ಹ್ಞೂಂನಕಾ’ ಎಂದೆ. ಒಪ್ಪಿಕೊಳ್ಳುವ ಮೊದಲು ಸ್ವಲ್ಪ ಹೆದರಿಕೆಯಾಯ್ತು. ಏಕೆಂದರೆ ನಮ್ಮ ಕ್ಲಾಸಿನ ಕೆಲವರು ನನ್ನನ್ನು ಅವಳ ಲವ್ವರ್ ಎಂದು ರೇಗಿಸುತ್ತಿದ್ದರು. ಅದು ಆಯಣ್ಣನ ಕಿವಿಗೆ ಬಿದ್ದಿದೆ, ಅದಕ್ಕಾಗಿ ನನ್ನನ್ನು ಹೊಡೆಯಲು ಟ್ಯೂಶನ್ನಿನವರೆಗೂ ಹುಡುಕಿಕೊಂಡು ಬಂದಿದ್ದಾರೆ ಎನಿಸಿತ್ತು. ಆದರೆ ಆಯಣ್ಣ, ‘ಪ್ಲೀಸ್ ಅಪ್ಪೀ ನನೀಗೆ ಒಂದು ಹೆಲ್ಪ್ ಮಾಡು’ ಎಂದು ಹತ್ತು ರೂಪಾಯಿಯ ಎರಡು ಡೈರಿ ಮಿಲ್ಕ್ ಚಾಕ್ಲೇಟ್‍ಗಳನ್ನು ಕೈಗೆ ಇಟ್ಟಿದ್ದ. ಚಾಕ್ಲೇಟ್‌ ನೋಡುತ್ತಿದ್ದವನಿಗೆ, ‘ಅಪ್ಪೀ ನಿಮ್ ಮನೀಮ್ಯಾಲೆ ಒಬ್ಬ್ ಹುಡ್ಗಿ ಪಿಯುಸಿ ಓದಾಕತ್ತಾಳ ನೋಡು, ವುಮೆನ್ಸ್ ಕಾಲೇಜಾಗ. ಗೊತ್ತಾ?’ ಎಂದ. ನಾನು ‘ಹ್ಞೂಂ’ ಅಂದೆ. ‘ಆ ಹುಡ್ಗಿಗೆ ಹೋಗಿ ಹೇಳ್ತೀಯಾ? ಗಾಂಧಿನಗರ ಉಡುಪಿ ಹೋಟ್ಲಿಗೆ ನಾಳೆ ಸಾಯಂಕಾಲ ಏಳು ಗಂಟೀಗೆ ಬರಾಕ, ನಾನು ಕರ್ದೆ ಅಂತ ಹೇಳು’ ಎಂದು ನನ್ನ ಮುಖ ನೋಡಿ, ‘ಆಕೀ ಏನೂ ಅನ್ನಂಗಿಲ್ಲಪೀ, ನಾವಿಬ್ರೂ ಲವ್ ಮಾಡಾಕತ್ತೀವಿ’ ಎಂದ. ಸುಲಭವಾಗಿ ವಿಷಯ ಮುಟ್ಟಿಸಬಹುದೆನಿಸಿತು ನನಗೆ. ಹಿಂದೆಯೇ ಆಯಣ್ಣ, ‘ಯಾರಿಗೂ ಗೊತ್ತಾಗ್ಬಾರ್ದಪೀ’ ಎಂದ, ಅದನ್ನು ಕೇಳಿಸಿಕೊಂಡ ನನಗೆ ಹೆದರಿಕೆಯಾಯಿತು.

ಆಯಕ್ಕನ ಅಪ್ಪನಿಗೆ ಸಿಕ್ಕಾಪಟ್ಟೆ ಸಿಟ್ಟು. ಒಂದು ದಿನ ಗಾಡಿಯಲ್ಲಿ ಡ್ಯೂಟಿಗೆ ಹೋಗುತ್ತಿದ್ದವರ ಮುಖಕ್ಕೆ ಬಾಲ್ ಬಡಿದಿತ್ತು. ಕ್ರಿಕೆಟ್‌ ಆಡುತ್ತಿದ್ದ ಹುಡುಗರ ಮೇಲೆಲ್ಲಾ ಸಿಕ್ಕಾಪಟ್ಟೆ ರೇಗಿದ್ದರು. ಅಂದು ಬ್ಯಾಟಿಂಗ್ ಮಾಡುತ್ತಿದ್ದವನು ನಾನೇ. ಆ ಅಂಕಲ್ ಮತ್ತು ನಮ್ಮಪ್ಪಜ್ಜಿ ಇಬ್ಬರೂ ಒಂದೇ ಸ್ಟೇಶನ್ನು. ನಮ್ಮಪ್ಪಜ್ಜಿಗಿಂತ ಅವರು ಸೀನಿಯರ‍್ರು. ನಮ್ಮಪ್ಪಜ್ಜಿ ಕಾನ್ಸ್‌ಟೆಬಲ್. ಆದರೆ ಅವರು ಹೆಡ್‍ ಕಾನ್ಸ್‌ಟೆಬಲ್ ಆಗಿದ್ದರು. ನಮ್ಮಿಬ್ಬರ ಅಮ್ಮಂದಿರೂ ಚೆನ್ನಾಗಿ ಪರಿಚಯಸ್ಥರು. ಅವರಮ್ಮ ಬೆಳಗಿನ ತರಕಾರಿ ಕೊಳ್ಳಲು ಕೆಳಗೆ ಬಂದಾಗ ನಮ್ಮ ಮನೆಯ ಹತ್ತಿರದ ನಾಗರಕಟ್ಟೆಯ ಬಳಿ ಪೊಲೀಸ್ ಹೆಂಡತಿಯರು ಗುಂಪು ಸೇರಿ ತಾಸೆರಡು ಮಾತಾಡಿಯೇ ಹೋಗುತ್ತಿದ್ದರು. ಅಂದು ಆ ಅಂಕಲ್ ಗಲಾಟೆಯನ್ನು ಕೇಳಿ ನಮ್ಮಪ್ಪಜ್ಜಿ ಹೊರಗಡೆ ಬಂದು ನನ್ನನ್ನು ಹಿಡಿದು ನಾಲ್ಕು ಬಾರಿಸಿದ್ದರು. ನಾನು ಅಳುವುದನ್ನು ಕಂಡ ಮೇಲೆಯೇ ಆ ಅಂಕಲ್ ಸಮಾಧಾನವಾಗಿದ್ದು. ಅಂಥಾ ಆ ಅಂಕಲ್‍ನ ಕಣ್ಣು ತಪ್ಪಿಸಿ ಆಯಕ್ಕನಿಗೆ ಸುದ್ದಿ ಮುಟ್ಟಿಸುವುದು ಕಷ್ಟ ಅನಿಸಿತು. ಆದರೆ ಅಷ್ಟರಲ್ಲಾಗಲೇ ಕೈಗಳು ಚಾಕಲೇಟಿನ ಕವರ್ ಹರಿದಿದ್ದವು. ಬೆಳ್ಳಿ ಮತ್ತು ಬಂಗಾರ ಬಣ್ಣದ ರಕ್ಷಾಕವಚದೊಳಗೆ ಚಾಕ್ಲೇಟು ಕಣ್ಣು ಕುಕ್ಕುತ್ತಿತ್ತು. ಡೈರಿ ಮಿಲ್ಕ್‌ ಚಾಕ್ಲೇಟೆಂದರೆ ನನಗೆ ಪಂಚಪ್ರಾಣ. ಹೆಚ್ಚು ಯೋಚಿಸದೇ ‘ಆಯ್ತಣ’ ಎಂದು ಹೇಳಿ ಬಂದಿದ್ದೆ. ಕಾರಣ, ಚಾಕ್ಲೇಟಿಗೆ ಹತ್ತತ್ತು ರೂಪಾಯಿ ಕೊಡುವಷ್ಟು ದುಡ್ಡನ್ನು ನಮ್ಮ ಮನೆಯಲ್ಲಿ ಕೊಡುತ್ತಿರಲಿಲ್ಲ.

ನಾನು ಆವತ್ತು ರಾತ್ರಿ ಟ್ಯೂಶನ್ ಮುಗಿಸಿಕೊಂಡು ಹೋಗುವಾಗ ನನ್ನ ಪುಣ್ಯಕ್ಕೆ ಆಯಕ್ಕ ತರಕಾರಿ ತೆಗೆದುಕೊಂಡು ಮನೆಗೆ ಹೋಗುತ್ತಿದ್ದಳು. ಅವಳನ್ನು ಕಂಡೊಡನೇ ಓಡಿ ಹೋಗಿ ಎದುರು ನಿಂತೆ. ನನ್ನನ್ನೇ ದಿಟ್ಟಿಸಿದವಳಿಗೆ, ‘ಅಕ್ಕಾ, ಗಾಂಧಿನಗರ ಉಡುಪಿ ಹೋಟ್ಲಿಗೆ ನಾಳೆ ಸಾಯಂಕಾಲ ಏಳ್ ಗಂಟೀಗೆ ಹೋಗ್ಬೇಕಂತೆ, ಆಯಣ್ಣ ಹೇಳಿದ’ ಎಂದು ನಿರಾಳವಾಗಲು ಪ್ರಯತ್ನಿಸಿದೆ. ಮಾತು ಕೇಳಿಸಿಕೊಂಡವಳು ನನ್ನನ್ನು ಇನ್ನೊಮ್ಮೆ ನೋಡಿ ಅಲ್ಲಿಂದ ನಡೆದಳು. ‘ಯಾರು ಹೇಳಿದ್ದು?’ ಎಂದು ಅವಳು ಕೇಳಲಿಲ್ಲ. ‘ಆಕೀ ಏನೂ ಅನ್ನಂಗಿಲ್ಲಪೀ, ನಾವಿಬ್ರೂ ಲವ್ ಮಾಡಾಕತ್ತೀವಿ’ ಎಂದು ಆಯಣ್ಣ ಹೇಳಿದ್ದ ಮಾತು ಸುಳ್ಳು, ಆಯಕ್ಕ ಈಗ ಸೀದಾ ಹೋಗಿ ಅವರಪ್ಪನಿಗೆ ಹೇಳುವಳು ಎಂದು ಭಯವಾಗಲತ್ತಿತು. ಎರಡು ಚಾಕ್ಲೇಟುಗಳಿಂದಾಗಿ ಈಗ ಆ ಅಂಕಲ್ ಬೈಗುಳ ಮತ್ತು ನಮ್ಮಪ್ಪಜ್ಜಿಯ ಹೊಡೆತಗಳ ನೆನಪಾಗಿ ಹೆದರಿ, ಬಂದ ದಾರಿಯಲ್ಲೇ ವಾಪಸ್ಸು ಟ್ಯೂಶನ್ನಿಗೆ ಓಡಿದೆ. ಟ್ಯೂಶನ್ ಮನೆಯ ಮುಂದೆ ನಿಂತು, ‘ಒಳ ಹೋಗಿ ಪದ್ಮಕ್ಕನಿಗೆ ಹೇಳಿಬಿಡಲೇ?' ಎಂದು ಅನಿಸಿದರೂ ಹಿಂದೆಯೇ, ‘ಟೂಶನಣ್ಣ ಬಂದಿದ್ದರೆ?’, ‘ಏನೆಂದು ಕೇಳಿದರೆ?’ ಎಂದೆಲ್ಲಾ ಯೋಚನೆ ಬಂದು ಬೇಡ ಅನಿಸಿ ಅಲ್ಲಿಂದ ಸ್ಕೂಲಿಗೆ ಓಡಿದೆ. ರಾತ್ರಿ ಕತ್ತಲೆಯ ವಿಶಾಲವಾದ ಅಂಗಳದ ಶಾಲೆಯ ಮೆಟ್ಟಿಲುಗಳ ಮೇಲೆ ಕೂತೆ. ದೂರದ ಬಿಲ್ಡಿಂಗಿನ ಆರೇಳು ಮನೆಗಳಿಂದ ಒಮ್ಮೆಲೇ ರಾತ್ರಿ ಎಂಟೂವರೆಯ ಉದಯ ವಾರ್ತೆಗಳು ಶುರುವಾದ ಸದ್ದಾಯಿತು. ಹೆದರಿಕೆಯಲ್ಲೇ ಅತ್ತಿತ್ತ ನೋಡಲತ್ತಿದೆ, ಬೆಳಕೇ ಇಲ್ಲದ ಶಾಲೆ ಭಯ ತಂದಿತು. ಯಾವಾಗ ಮನೆಗೆ ಹೋಗಲಿ ಎಂಬ ಚಿಂತೆ ಹತ್ತಿತು. ಹಿಂದೆಯೇ ಅಪ್ಪಜ್ಜಿಯ ಹೊಡೆತ ನೆನಪಾಗಿ ಇಲ್ಲೇ ಉಳಿದರೆ ಚೆಂದ ಎನ್ನಿಸಿತು. ಎದ್ದೇಳಲು ಆಗುತ್ತಲೇ ಇರಲಿಲ್ಲ. ಅಷ್ಟರಲ್ಲಿ ಡಿ.ಎ.ಆರ್ ಪೊಲೀಸ್ ಸ್ಟೇಶನ್ನಿನಿಂದ ಬರುವ ಪ್ರತಿ ಗಂಟೆಯ ಗುರುತಿನ ದೊಡ್ಡ ಪೀಪಿಯ ಸದ್ದಾಯಿತು, ಗಂಟೆ ಒಂಭತ್ತಾಗಿತ್ತು.

ಇನ್ನೂ ಹೊತ್ತಾದರೆ ಮನೆಯವರೇ ಹುಡುಕಿಕೊಂಡು ಟ್ಯೂಶನ್ನಿಗೆ ಹೋಗಿಬಿಡಬಹುದೆಂದು ಮತ್ತಷ್ಟು ಹೆದರಿಕೆಯಾಗಿ ಮನೆಯ ದಾರಿ ಹಿಡಿದೆ. ದಾರಿಯುದ್ದಕ್ಕೂ ಅಪ್ಪಜ್ಜಿ ನನ್ನನ್ನು ಒದೆಯುವ ದೃಶ್ಯವನ್ನೇ ಕಲ್ಪಿಸಿಕೊಳ್ಳುತ್ತಾ ಬಂದೆ. ಅಪ್ಪಜ್ಜಿ ಇನ್ನೂ ಬಂದಿರಲಿಲ್ಲ. ಅಮ್ಮನಿಂದ ಜಾಸ್ತಿ ಹೇಳಿಸಿಕೊಳ್ಳದೇ ಹೋಗಿ ಕೈ ಕಾಲು ಮುಖ ತೊಳೆದುಕೊಂಡು, ನಾನೇ ಅಡುಗೆ ಮನೆಗೆ ಹೋಗಿ, ನಾನೇ ತಟ್ಟೆಗೆ ಬಡಿಸಿಕೊಂಡು ಊಟ ಮಾಡಿ ದುಪ್ಪಡಿ ಹೊದ್ದು ಮಲಗಿಬಿಟ್ಟೆ. ಅಮ್ಮ ನಾಗರಪಂಚಮಿಯ ಶೇಂಗಾ ಉಂಡೆಗಳ ತಯಾರಿಯಲ್ಲಿ ಇದ್ದಿದ್ದರಿಂದ ನನ್ನತ್ತ ಹೆಚ್ಚು ಗಮನ ಕೊಡಲಿಲ್ಲ. ಅಪ್ಪಜ್ಜಿ ಬಂದು ದುಪ್ಪಡಿ ತೆಗೆದು ಒದ್ದು ಬಿಡುವುದೋ ಎಂಬ ಭಯದಲ್ಲೇ ಯಾವಾಗ ನಿದ್ದೆ ಹತ್ತಿತೋ!

ಬೆಳಿಗ್ಗೆ ಎದ್ದಾಗ ಅಪ್ಪಜ್ಜಿ ಡ್ಯೂಟಿಗೆ ಹೊರಟು ಹೋಗಿತ್ತು. ಕ್ಷಣಕ್ಕೆ ನಿರಾಳನಾದರೂ ಆ ಅಂಕಲ್ ಸ್ಟೇಶನ್ನಿನಲ್ಲಿ ಸಿಕ್ಕು ಅಪ್ಪಜ್ಜಿಗೆ ಹೇಳಬಹುದೆಂಬ ಹೆದರಿಕೆ ಇದ್ದೇ ಇತ್ತು. ಶಾಲೆಯಲ್ಲಿ ಬೆಳಗಿನ ಇಂಟರ್‍ವಲ್ ಬೆಲ್ ಹೊಡೆದ ಮೇಲೆ ನನ್ನ ಹತ್ತಿರ ಬಂದ ಗೆಳತಿ, ‘ಇವತ್ತು ನಾನು ದೋಸೆ ತಂದೀನಿ ಗೊತ್ತಾ?’ ಎಂದು ನಕ್ಕಳು. ಅವಳ ಮನೆಯ ದೋಸೆಗಳೆಂದರೆ ನನಗೆ ತುಂಬಾ ಇಷ್ಟ. ನಮ್ಮಮ್ಮನಿಗೆ ಆ ಥರಾ ದೋಸೆಯನ್ನು ಮಾಡಲು ಬರುತ್ತಿರಲಿಲ್ಲ. ಅವರ ದೋಸೆಗಳು ಮೆತ್ತಗೆ, ಕೆಂಪಗಿದ್ದು ಮಧ್ಯಾಹ್ನಕ್ಕೆ ತಣ್ಣಗಾಗಿದ್ದರೂ ಬಾಯಲ್ಲಿ ಕರಗುವಂತಿರುತ್ತಿದ್ದವು. ಆದರೆ ಆರಿದ ನಮ್ಮ ಮನೆಯ ದೋಸೆಗಳು ಮಧ್ಯಾಹ್ನದ ಹೊತ್ತಿಗೆ ತಣ್ಣಗಾದ ಚಪಾತಿಗಳಂತೆ ಬಿಗಿಯಾಗಿ ಬಿಡುತ್ತಿದ್ದವು. ಅವಳು ದೋಸೆ ಎಂದೊಡನೇ ನಾನು ಎಂದಿನಂತೆ ಟಕ್ಕನೇ, ‘ನನೀಗೆ ನಾಕು ಬೇಕು’ ಎನ್ನದೇ ಸುಮ್ಮನಿರುವುದನ್ನು ಕಂಡು ಅವಳೇ, ‘ನಿನೀಗೆ ನಾಕು, ನನೀಗೆ ಎರಡು’ ಎಂದಳು. ನಾನು ಏನೂ ಮಾತಾಡದೇ ಜೇಬಿನಲ್ಲಿದ್ದ ಚಾಕಲೇಟನ್ನು ಅವಳಿಗೆ ಕೊಟ್ಟೆ. ಚಾಕ್ಲೇಟನ್ನು ಕಂಡವಳು, ‘ಐ.. ಡೈರಿ ಮಿಲ್ಕು’ ಎಂದು ಖುಷಿಯಾಗಿ ಯಾರಾದರೂ ನೋಡುವ ಮೊದಲೇ ಟಕ್ಕನೇ ತನ್ನ ಜೇಬಿಗೆ ಹಾಕಿಕೊಂಡಳು. ‘ಇದುನ್ನ ನಿಮ್ಮಣ್ಣ ಕೊಟ್ಟಿದ್ದು’ ಎಂದು ಅಂದೇ ನಾನು ಅವಳಿಗೆ ಹೇಳಿಬಿಟ್ಟಿದ್ದರೆ ಹೇಗೂ ವಿಷಯವೆಲ್ಲಾ ಅಂದೇ ಹೊರಗಡೆ ಬಂದು ಇವತ್ತಿನ ಈ ಪ್ರಸಂಗ ನಡೆಯುತ್ತಿರಲಿಲ್ಲವೇನೋ. ಆದರೆ ನಾನು ಅವಳಿಗೆ ಹೇಳಲಿಲ್ಲ. ಅದು ನಾನೇ ನನ್ನ ದುಡ್ಡಿಂದಲೇ ತಂದು ಕೊಟ್ಟ ಚಾಕ್ಲೇಟು ಎಂದುಕೊಂಡು ಅವಳು ಇನ್ನಷ್ಟು ಖುಷಿಯಾಗಿದ್ದಳು.

ಸಂಜೆ ಟ್ಯೂಶನ್ನಿನಲ್ಲಿ ಟೂಶನಕ್ಕ ಇರಲಿಲ್ಲ. ಟೂಶನಣ್ಣನೇ ಪಾಠ ಓದಿಸಿ, ಶಾಲೆಯ ಮನೆಗೆಲಸ ಮಾಡಿಸಿ ಕಳಿಸಿದರು. ರಾತ್ರಿ ಮನೆಗೆ ಬಂದಾಗಲೂ ಏನೂ ವಿಶೇಷ ನಡೆಯಲಿಲ್ಲ. ಅಲ್ಲಿಗೆ ಆಯಕ್ಕ ಅವರಪ್ಪನಿಗೆ ಏನೂ ಹೇಳಿಲ್ಲ ಎಂದು ಸಂಪೂರ್ಣ ನಿರಾಳನಾಗಿ ಖುಷಿಯಲ್ಲಿ ಮಲಗಿಬಿಟ್ಟಿದ್ದೆ.

ಎರಡನೇ ದಿನದ ಶಾಲೆಯಲ್ಲೂ ಏನೂ ವಿಶೇಷವಿಲ್ಲ. ಆದರೆ ಟ್ಯೂಶನ್ನಿಗೆ ಬಂದಾಗ ಟೂಶನಕ್ಕ ಮನೆಯೊಳಗೆ ಕರೆದಳು. ನಾನು ಒಳಗೆ ಹೋಗುತ್ತಿದ್ದಂತೇ ಆಯಣ್ಣ ಬಂದು, ‘ಥ್ಯಾಂಕ್ಸ್ ಅಪ್ಪೀ’ ಎಂದು ಈ ಸಲ ನಾಲ್ಕು ಡೈರಿ ಮಿಲ್ಕ್ ಚಾಕ್ಲೇಟುಗಳನ್ನು ಕೈಯೊಳಗಿಟ್ಟ. ಅಲ್ಲಿಗೆ ಆಯಕ್ಕ ಆಯಣ್ಣನನ್ನು ಭೇಟಿ ಮಾಡಿದ್ದಳೆಂಬುದು ಖಾತ್ರಿಯಾಯಿತು.

ರಾತ್ರಿ ನಾನು ಮನೆಗೆ ಬಂದು ಬಿದಿರಿನ ತಡಿಕೆಯ ಕಾಂಪೌಂಡನ್ನು ಕಬ್ಬಿಣದ ಸರಳಿನಿಂದ ಭದ್ರಪಡಿಸುವಾಗ ಯಾಕೋ ಆಯಕ್ಕನ ಮನೆ ಕಡೆ ನೋಡಬೇಕೆನಿಸಿ ಎರಡನೇ ಅಂತಸ್ತಿನಲ್ಲಿದ್ದ ಅವರ ಬಾಲ್ಕನಿ ನೋಡಿದೆ. ಆಯಕ್ಕ ನನ್ನನ್ನೇ ನೋಡುತ್ತಿದ್ದಳು. ನಾನು ನಕ್ಕೆ, ಅವಳೂ ನಕ್ಕಳು.

ನಾನು ಸಣ್ಣಪುಟ್ಟ ದಿನಸಿ ಸಾಮಾನು, ಬುಕ್ ಸ್ಟಾಲ್, ಕಟಿಂಗ್ ಶಾಪು, ಸೈಕಲ್ ಶಾಪು ಎಂದೆಲ್ಲಾ ಲೈನಿನಿಂದ ಹೊರ ಹೋದಾಗ ಸುಮಾರು ಸಲ ಕಾಣಿಸುತ್ತಿದ್ದ ಆಯಣ್ಣ, ನನ್ನನ್ನು ಹತ್ತಿರದ ಬೇಕರಿಗೆ ಕರೆದುಕೊಂಡು ಹೋಗಿ ‘ಬ್ಯಾಡಣಾ, ಬ್ಯಾಡಣಾ’ ಎಂದರೂ ‘ಇರ್ಲಿ ತಗಳಪೀ’ ಎಂದು ಕೇಳಿದ್ದನ್ನು ಕೊಡಿಸುತ್ತಿದ್ದ. ತಿನ್ನಲು ಕೊಡಿಸಿ ಮುಂದಿನ ಸಲ ಆಯಕ್ಕನಿಗೆ ಏನು ಹೇಳಬೇಕೆಂದು ತಿಳಿಸುತ್ತಿದ್ದ. ನಾನು ಟ್ಯೂಶನ್ ಮುಗಿಸಿಕೊಂಡು ಆಯಕ್ಕನ್ನು ಹುಡುಕಿಕೊಂಡು ಹೊರಟಾಗ ಕೈಯಲ್ಲೊಂದು ತರಕಾರಿಯ ಬ್ಯಾಗನ್ನು ಹಿಡಿದು ಬಿಲ್ಡಿಂಗಿನೊಳಗಿನ ಮೆಟ್ಟಿಲ ಬಳಿ ಎದುರಾಗುತ್ತಿದ್ದಳು. ನಾನು ವಿಷಯ ತಿಳಿಸುತ್ತಿದ್ದೆ, ಆಯಕ್ಕ ಬದಲಿಗೆ ಏನೂ ಹೇಳದೇ ನಕ್ಕು ಹೋಗುತ್ತಿದ್ದಳು. ಎರಡು ಮೂರು ತಿಂಗಳಲ್ಲಿ ಸುಮಾರು ಚಾಕ್ಲೇಟುಗಳು ನನ್ನ ಕೈ ಸೇರಿದವು. ಆಯಣ್ಣ ಕೊಡಿಸುವ ಚಾಕ್ಲೇಟುಗಳಲ್ಲಿ ಒಂದು ಚಾಕ್ಲೇಟು ನನ್ನ ಗೆಳತಿಗೆ ಪಕ್ಕಾ ಆಯಿತು. ನಾಲ್ಕು ದಿನಕ್ಕೊಮ್ಮೆಯಾದರೂ ಆಯಣ್ಣ ಏನನ್ನೂ ಹೇಳದಿದ್ದರೆ ನನಗೆ ಚಾಕ್ಲೇಟುಗಳು ಸಿಗದ ಬೇಜಾರು ಕಾಡುತ್ತಿತ್ತು.

ಇವತ್ತು, ‘ಪ್ಲೀಸ್ ಅಪ್ಪೀ ಆಕೀದು ಬರ್ತಡೇ ಐತೆ ಅದಿಕ್ಕೆ’ ಎನ್ನುತ್ತಾ ಅಂಗಲಾಚಿದ ಆಯಣ್ಣನನ್ನು ನೋಡಿ ಅಯ್ಯೋ ಪಾಪ ಎನಿಸಿತು. ನಾನು, ‘ಆಯ್ತಣ’ ಎಂದು ಅಲ್ಲಿಂದ ಹೊರಟೆ.

ಮರುದಿನ ಸಮಾಜ ಪರೀಕ್ಷೆಯನ್ನು ಚೆನ್ನಾಗಿ ಮುಗಿಸಿದ ಖುಷಿಯಲ್ಲಿ ಹೊರಬಂದವನಿಗೆ ಗೆಳತಿ ಸಿಕ್ಕಳು. ಅವಳಿಗೆ ಚಾಕ್ಲೇಟನ್ನು ಕೊಟ್ಟೆ, ಖುಷಿಯಾಗಿ ‘ನಾಳೆ ದೋಸೆ ತರ್ತೀನಿ’ ಎಂದು ಹೇಳಿ ಹೋದಳು. ಸಂಜೆ ನಮ್ಮ ಮನೆಗೆ ಯಾರೋ ನೆಂಟರು ಬಂದಿದ್ದರು. ಅವರ ರಾತ್ರಿಯ ಊಟದ ಚಪಾತಿಗಾಗಿ ನಾನು ಅಂಗಡಿಯಿಂದ ಹಿಟ್ಟನ್ನು ತೆಗೆದುಕೊಂಡು ಮನೆಗೆ ಹೋಗುತ್ತಿದ್ದೆ. ಆಯಕ್ಕ ಕಾಲೇಜಿನಿಂದ ಆಗ ತಾನೇ ವಾಪಸ್ಸು ಬರುತ್ತಿದ್ದಳು. ಕೆಲಸ ಸುಲಭವಾಯಿತು ಎಂಬ ಖುಷಿಯಲ್ಲಿ ಓಡಿದ ನಾನು, ಆಯಣ್ಣ ಹೇಳಿದ್ದ ಸೋಮವಾರದ ಐಸ್‍ಕ್ರೀಮ್ ಪಾರ್ಲರ್ ಭೇಟಿಯ ಬಗ್ಗೆ ಹೇಳಿ, ‘ಹುಟ್ಟುಹಬ್ಬದ ಶುಭಾಶಯಗಳು ಅಕಾ’ ಎಂದಾಗ ಆಯಕ್ಕ, ‘ಥ್ಯಾಂಕ್ಸಪೀ’ ಎಂದು ನಕ್ಕು ಹೋದಳು. ಟ್ಯೂಶನ್ನಿಗೆ ಹೋದಾಗ ಟೂಶನಣ್ಣನ ಕಣ್ತಪ್ಪಿಸಿ ಮೆಲ್ಲಗೆ ಪದ್ಮಕ್ಕನಿಗೂ ಈ ವಿಷಯ ತಿಳಿಸಿದೆ, ಅವರು ‘ಆಯ್ತಪೀ’ ಎಂದರು.

ಮಂಗಳವಾರ, ಬೆಳಿಗ್ಗೆ ಒಂಬತ್ತು ಮುಕ್ಕಾಲಿಗೆ ಇನ್ನೇನು ನಾನು ಶಾಲೆಗೆ ಹೊರಡಬೇಕು ಅಷ್ಟರಲ್ಲಿ ಅಪ್ಪಜ್ಜಿಯ ಗಾಡಿಯ ಸದ್ದಾಯಿತು. ಎಂಟು ಗಂಟೆಗೇ ಡ್ಯೂಟಿಗೆ ಹೋಗಿದ್ದ ಅಪ್ಪಜ್ಜಿ ಈಗ ಮನೆಗೆ ಬಂದಿತ್ತು. ‘ಜಲ್ದಿ ಬಾರ್ಲೇ, ಬಂದೋಬಸ್ತಿಗೆ ಹೋಗ್ಬೇಕು’ ಎಂದು ಅಮ್ಮನನ್ನು ಕರೆಯುತ್ತಾ, ಅವಸರದಲ್ಲಿ ದಡದಡ ನಡೆದು ಬಂದು, ತನ್ನ ಬಂದೋಬಸ್ತ್ ಟ್ರಂಕನ್ನು ಅಟ್ಟದಿಂದ ಇಳಿಸುತ್ತಾ ರೆಡಿಯಾಗಲತ್ತಿತು. ಅಮ್ಮ ಫೈಬರ್ ಲಾಠಿ, ಬೆಲ್ಟು, ಟೋಪಿ, ಯುನಿಫಾರ್ಮಿನ ಸ್ಟೀಲಿನ ಗುಂಡಿಗಳನ್ನು ತಂದು ಅಪ್ಪಜ್ಜಿಯ ಮುಂದಿಟ್ಟಳು. ಟಕಟಕನೇ ತಯಾರಾದ ಅಪ್ಪಜ್ಜಿ ಐದೇ ನಿಮಿಷದಲ್ಲಿ ಹೊರಟು ಹೋಯಿತು.

ಶಾಲೆಗೆ ಹೊತ್ತಾಯಿತೆಂದು ಓಡೋಡಿ ಬಂದು ನೋಡಿದವನಿಗೆ ಅಂಗಳದಲ್ಲಿ ಕಡಿಮೆ ಹುಡುಗರು ಕಂಡರು. ಅರ್ಧಕರ್ಧ ಹುಡುಗರು ಬಂದಿರಲಿಲ್ಲ. ನಾನು ಹೋಗುತ್ತಲೇ ಶಾಲೆಯ ಬೆಲ್ಲು ಹೊಡೆಯಿತು, ಹಿಂದೆಯೇ ಡಿ.ಎ.ಆರ್ ಸ್ಟೇಶನ್ನಿನಿಂದ ಪೀಪಿಯ ಸದ್ದಾಯಿತು. ಹುಡುಗರೆಲ್ಲರೂ ಸಾಲುಗಳನ್ನು ಮಾಡಿ ನಿಂತೆವು. ಬಂದಿದ್ದ ಇಬ್ಬರು ಟೀಚರುಗಳು ಮತ್ತು ಮೂರು ಜನ ಸಾರುಗಳು ಹೆಡ್‍ಮಾಷ್ಟ್ರು ಇಲ್ಲದೆಯೇ ಪ್ರೇಯರ್ ಮಾಡಿಸಿದರು. ಎಲ್ಲರಿಗಿಂತಲೂ ಮೊದಲೇ ಬಂದಿರುತ್ತಿದ್ದ ಹೆಡ್‍ಮಾಷ್ಟ್ರು ಕೂಡ ಇನ್ನೂ ಬರದಿರುವುದು ನಮಗೆಲ್ಲಾ ಸೋಜಿಗವಾಗಿ, ಪ್ರತಿ ಸಂಜೆ ಆಟದ ಸಮಯದಲ್ಲಿ ಅವರು ಮಾಡಿಸುತ್ತಿದ್ದ ಡ್ರಿಲ್‌ ತಪ್ಪಿತು ಎಂದು ಖುಷಿಯಾದೆವು.

‘ಜೈ ಭಾರತ ಜನನಿಯ ತನುಜಾತೆ’ ಮುಗಿಸಿ ತರಗತಿಗಳಿಗೆ ಬಂದು ಕೂತ ಮೇಲೆ, ನಾನು ಎಂದಿನಂತೆ ಹಾಜರಾತಿ ಪುಸ್ತಕ ತರಲು ಹೆಡ್‍ಮಾಷ್ಟ್ರು ರೂಮಿಗೆ ಹೋದೆ, ಅವರು ಇನ್ನೂ ಬಂದಿರಲಿಲ್ಲ. ಗಣಿತ ಮತ್ತು ಸಮಾಜದ ಸಾರುಗಳು, ‘ಯಾಕ ಸಾರು ಇನ್ನಾ ಬಂದಿಲ್ಲ?’ ಎಂದು ಮಾತಾಡುತ್ತಿರುವಾಗಲೇ ಬಂದ ಹೆಡ್‍ಮಾಷ್ಟ್ರನ್ನು ಕಂಡು ಎದ್ದು ನಿಂತರು. ಅವರನ್ನು ನೋಡಿದ ಹೆಡ್‍ಮಾಷ್ಟ್ರು ಕರ್ಚೀಫಿನಿಂದ ತಮ್ಮ ಬೆವರನ್ನು ಒರೆಸಿಕೊಳ್ಳುತ್ತಾ, ‘ಊರೆಲ್ಲಾ ಗಲಾಟೆ ರೀ. ಎಲ್ಲಾ ಕಡೆ ಕಲ್‌ ತೂರಾಟ. ಜನ ಕೈಗೆ ಸಿಕ್ಕಿದ್ದುನ್ನ ಪುಡಿ ಪುಡಿ ಮಾಡಾಕತ್ತಾರ. ಎಲ್ಲಾಕಡೀಗೆ ಬೆಂಕಿ. ಲಾಠಿ ಚಾರ್ಜ್ ಶುರು ಆಗ್ಯಾತೆ. ಇವತ್ತು ಶಾಲೆ ಮುಗಿಯಾವರಿಗೆ ಯಾ ಹುಡ್ರುನ್ನೂ ಲೈನ್ ಹೊರಾಗ ಬಿಡ್ಬ್ಯಾಡ್ರಿ’ ಎಂದು ನನ್ನ ಕಡೆ ನೋಡಿದರು. ನಾನು ಹಾಜರಾತಿ ಪುಸ್ತಕ ಹಿಡಿದುಕೊಂಡು ನಿಂತಿದ್ದೆ. ‘ಮಂಜು, ಸಿಟಿಯಾಗ ಇವತ್ತು ತುಂಬಾ ಗಲಾಟೆಯಾಗಾಕತ್ತಾತಂತೆ. ಊಟುಕ್ಕಾಗ್ಲಿ, ಇನ್ಯಾದುಕ್ಕೇ ಆಗ್ಲಿ ಶಾಲೆ ಮುಗಿಯಾವರಿಗೂ ಯಾರೂ ಲೈನ್ ಬಿಟ್ಟು ಹೋಗ್ಬಾರ್ದಂತೆ ಅಂತ, ಎಲ್ಲಾ ಕ್ಲಾಸೋರಿಗೂ ಹೇಳು ಹೋಗು. ಹೆಡ್‍ಮಾಷ್ಟ್ರು ಹೇಳಿದ್ರು ಇದುನ್ನ ಅನ್ನು’ ಎಂದು ನನ್ನನ್ನು ಕಳುಹಿಸಿದರು. ನಾನು ಹೊರಬಂದೆ. ಹಿಂದೆಯೇ ಸಮಾಜ ಸಾರು, ‘ಯಾಕಂತೆ ಸರ್ ಗಲಾಟೆ?’ ಎಂದಾಗ ಹೆಡ್‍ಮಾಷ್ಟ್ರು, ‘ಅದ್ಯಾದೋ ಹುಡ್ಗಾ ಹುಡ್ಗಿ ಗದ್ಲಾ ರೀ. ಓಡ್ಹೋದ್ ಹುಡ್ಗ ಎದುರಿನ್ ಧರ್ಮುದ್ದೋ ಜಾತಿದೋ ಜನುದ್ ಹುಡುಗ್ರಿಗೆ ಮೆಸೇಜ್ ಮಾಡಿದ್ನಂತೆ, ‘ನಿಮ್ ಜನುದ್ ಹುಡ್ಗೀನ ಹ.. ಕೈ ಬಿಟ್ಟೀನಿ. ನಂದೇನೂ ಹರ್ಕಣಕ ಆಗಲ್ಲ ನಿಮೀಗೆ. ಗಂಡುಸಾಗಿದ್ರೆ ಅದೇನ್‌ ಮಾಡ್ಕಂತೀರೋ ಮಾಡ್ಕಳ್ರಲೇ’ ಅಂತ. ಈಗ ಎಲ್ಲೋ ಓಡೋಗ್ಯಾನಂತೆ, ಹುಡ್ಗೀನೂ ಕಾಣುಸ್ತಿಲ್ಲಂತೆ. ಅದ್ಯಾದೋ ಪೊಲೀಸ್ರು ಹುಡ್ಗೀನೇ ಅಂತಿದ್ರು.’ ಎಂದರು.

ಅವರಿಗೆ ಮರೆಯಾಗಿ ಎರಡು ಹೆಜ್ಜೆ ಮುಂದೆ ಹೊರಟಿದ್ದ ನನಗೆ ಅದು ಕಿವಿಗೆ ಬೀಳುತ್ತಲೇ ಎದೆ ನಿಂತಂತಾಯಿತು. ಯಾಕೋ ಅದು ಆಯಕ್ಕ- ಆಯಣ್ಣನ ವಿಷಯವೇ ಇರಬೇಕೆಂದೆನಿಸಿ ಭಯ ನೆತ್ತಿಗೇರಿತು. ಹೆಡ್‍ಮಾಷ್ಟ್ರು ಹೇಳಿದಂತೆ ಎಲ್ಲಾ ತರಗತಿಗಳಿಗೆ ಹೋಗಿ ಹೇಗೆ ಸುದ್ದಿ ಮುಟ್ಟಿಸಿದೆನೋ ನಂತರ ಸೀದಾ ನನ್ನ ತರಗತಿಗೆ ಹೋಗಿ ಟೇಬಲ್ಲಿನ ಮೇಲೆ ಹಾಜರಾತಿ ಪುಸ್ತಕವನ್ನಿಟ್ಟು ನನ್ನ ಜಾಗದಲ್ಲಿ ಹೋಗಿ ಕುಳಿತುಬಿಟ್ಟೆ. ನನಗೆ ನೆನಪಿರುವಂತೆ ತರಗತಿಯೊಳಗೆ ನಾನು ಅಷ್ಟು ಮೌನಿಯಾಗಿದ್ದು ಅದೇ ಮೊದಲು. ‘ಊರೊಳಗೆ ನಡೆಯುತ್ತಿರುವ ಗಲಾಟೆ ನನ್ನಿಂದಲೇ, ಅಲ್ಲಿ ಉರಿಯುತ್ತಿರುವ ಬೆಂಕಿ ನನ್ನಿಂದಲೇ, ನನ್ನಿಂದಲೇ ಆಯಣ್ಣ ಆಯಕ್ಕರ ಭೇಟಿಗಳಾಗುತ್ತಿದ್ದವು, ನನ್ನಿಂದಲೇ ಇದೆಲ್ಲಾ ಅನಾಹುತ’ ಎಂದು ನೂರು ಸಲ ತಲೆ ತನಗೇ ತಾನೇ ಹೇಳಿಕೊಂಡು ತಿರುಗಲತ್ತಿತು. ಪ್ರತಿಕ್ಷಣ ಹೆದರಿಕೆ, ಬೆವರು. ಗೆಳತಿ ಗಲಾಟೆ ಮಾಡಿದವರ ಹೆಸರನ್ನು ಬರೆಯುತ್ತಿದ್ದಳು. ಅವಳ ಮುಖ ನೋಡುತ್ತಿದ್ದಂತೆ ಅವಳ ಅಣ್ಣನಿಂದ ಪಡೆದು ಅವಳಿಗೆ ಕೊಟ್ಟಿದ್ದ ಚಾಕ್ಲೇಟುಗಳು ನೆನಪಾದವು.

ಸ್ವಲ್ಪ ಹೊತ್ತಿನಲ್ಲಿ ಲೈನಿನ ಹೊರಗಡೆಯಿಂದ ಬರುತ್ತಿದ್ದ ಅನೇಕ ಹುಡುಗರ ಪೋಷಕರು ಒಬ್ಬೊಬ್ಬರಾಗೇ ಶಾಲೆಗೆ ಬಂದು ತಮ್ಮ ಮಕ್ಕಳನ್ನು ಕರೆದುಕೊಂಡು ಹೋದರು. ಸಮಯ ಹೇಗೆ ಹೋಗುತ್ತಿತ್ತೋ ನನಗೆ ಗೊತ್ತಿಲ್ಲ. ಗೆಳತಿಯನ್ನು ಕರೆದುಕೊಂಡು ಹೋಗಲು ಆಯಣ್ಣನೇ ಬಂದು, ನನ್ನ ಊಹೆಯನ್ನು ತಪ್ಪು ಮಾಡಬೇಕು ಎಂದುಕೊಂಡೆ, ಆದರೆ ಅದಾಗಲಿಲ್ಲ. ಮಧ್ಯಾಹ್ನ ಎಲ್ಲೆಲ್ಲೋ ಕೂತು ಊಟ ಮಾಡುತ್ತಿದ್ದ ಶಾಲೆಯ ಹುಡುಗರೆಲ್ಲಾ ಮೊದಲ ಸಲ ಶಾಲೆಯ ಆವರಣದೊಳಗೇ ಊಟ ಮಾಡಿದರು. ನಾನು ಮನೆಯತ್ತ ಹೋದಂತೆ ನಟಿಸಿ ದೂರದ ಕಟ್ಟೆಯ ಮೇಲೆ ಘಂಟೆ ಬಾರಿಸುವವರೆಗೆ ಕುಳಿತು ಬಂದಿದ್ದೆ.

ಶಾಲೆ ಮುಗಿಸಿಕೊಂಡವನಿಗೆ ಮನೆಗೆ ಬರುವಾಗ ಕಿವಿಗೆ ಬಿದ್ದ ಆಯಕ್ಕನ ಮನೆಯಲ್ಲಿನ ಗೋಳಾಟ ವಿಷಯ ಖಾತ್ರಿಯಾಗಿಸಿ ನನ್ನನ್ನು ಇನ್ನಷ್ಟು ಹೆದರಿಸಿತು. ಚಳಿ ಜ್ವರ ಬಂದಂತಾಗಿ ಮಲಗಿದವನು, ಟ್ಯೂಶನ್ನಿಗೂ ಹೋಗಲಿಲ್ಲ. ಅಷ್ಟು ಹೊತ್ತಿಗೆ ಸುದ್ದಿ ಎಲ್ಲೆಡೆ ಹಬ್ಬಿಯಾಗಿತ್ತು. ಹೊದ್ದು ಮಲಗಿದಂತೆ ನಟಿಸಿದವನಿಗೆ ಅಮ್ಮ ಜೋರು ಸೌಂಡಿನೊಂದಿಗೆ ಉದಯ ಟೀವಿಯಲ್ಲಿ ಕೇಳುತ್ತಿದ್ದ ನ್ಯೂಸ್‍ನಲ್ಲಿ ನಮ್ಮೂರ ಗಲಭೆಯ ಸುದ್ದಿ ಕಿವಿಗೆ ಬಿತ್ತು. ಆಯಣ್ಣ ಮತ್ತೆ ಆಯಕ್ಕ ಇಬ್ಬರೂ ನಿನ್ನೆ ರಾತ್ರಿಯಿಂದಲೇ ನಾಪತ್ತೆಯಾಗಿದ್ದರು. ಇಡೀ ಊರಿನಲ್ಲಿ ಅಲ್ಲೋಲಕಲ್ಲೋಲವಾಗಿತ್ತು. ಜನಜೀವನ ಅಸ್ತವ್ಯಸ್ತ. ಊರಲ್ಲಿ ಕರ್ಫ್ಯೂ ವಿಧಿಸಲಾಗಿತ್ತು. ಎರಡು ದಿನ ಸರ್ಕಾರಿ ರಜೆ ಘೋಷಣೆಯಾಗಿತ್ತು. ಆಸ್ತಿಪಾಸ್ತಿ ಹಾನಿಯ ಅಂದಾಜು ವೆಚ್ಚ ಎರಡು ಕೋಟಿ ರೂಪಾಯಿ ದಾಟಿತ್ತು. ಆ ವಾರ್ತೆಗಳಲ್ಲಿ ನನ್ನ ವಿಷಯ ಬಂದು ಬಿಡುವುದೇನೋ ಎಂದು ಕ್ಷಣ ಕ್ಷಣಕ್ಕೂ ಭಯವಾಗುತ್ತಿತ್ತು, ಅದಾಗಲಿಲ್ಲ.

ಗಲಭೆಯಿಂದಾಗಿ ಎರಡು ದಿನವಾದರೂ ಅಪ್ಪಜ್ಜಿ ಮನೆಗೆ ಬರಲೇ ಇಲ್ಲ. ಮೂರನೇ ದಿನ ರಾತ್ರಿ ಮನೆಗೆ ಬಂದಾಗ ಅಪ್ಪಜ್ಜಿಯ ಹಣೆಗೆ ದೊಡ್ಡ ಬ್ಯಾಂಡೇಜ್ ಕಟ್ಟಿದ್ದರು. ‘ಅಪ್ಪಜ್ಜಿ, ಆಯಣ್ಣ ಹೇಳಿದ್ದುನ್ನ ಕೇಳಿ, ಆಯಕ್ಕುಗ ಬಂದು ನಾನೇ ಹೇಳ್ತಿದ್ದೆ’ ಎಂದು ಹೇಳುವಷ್ಟು ಧೈರ್ಯ ಇರಲಿಲ್ಲ. ನನ್ನಿಂದಾಗಿಯೇ ನೋವಿನಲ್ಲಿದ್ದ ಅಪ್ಪಜ್ಜಿಯನ್ನು ನೋಡುತ್ತಾ ಅಳುತ್ತಾ ನಿಂತೆ. ಅಪ್ಪಜ್ಜಿ ನನ್ನನ್ನು ಹತ್ತಿರ ಕರೆದು, ‘ಏನಾಗಿಲ್ಲ, ಅಳ್ಬಾರ್ದು’ ಎಂದು ಕಣ್ಣೀರು ಒರೆಸಿತು. ನಮ್ಮನ್ನು ನೋಡಿದ ಅಮ್ಮನೂ ಅಳಲತ್ತಿದಾಗ ನನ್ನ ಅಳು ಇನ್ನೂ ಜೋರಾಯಿತು.

ಕಾಣೆಯಾಗಿರುವ ‘ಆಯಕ್ಕ ಏನಾದಳು? ಆಯಣ್ಣ ಏನಾದ? ಇಲ್ಲಾ ಇಬ್ಬರೂ ಒಟ್ಟಿಗೇ ಓಡಿ ಹೋದರೇ?’, ‘ಆಯಣ್ಣನಿಂದ ಆಯಕ್ಕ ನೋವುಂಡು ಆತ್ಮಹತ್ಯೆ ಮಾಡಿಕೊಂಡಳೇ?’, ‘ಆಯಣ್ಣ ಹಾಗೆ ಮೆಸೇಜು ಮಾಡಿದ್ದನೇ? ಇಲ್ಲಾ ಯಾರೋ ಕಿಡಿಗೇಡಿಗಳು ಆ ತರಹದ ಸುದ್ದಿ ಹಬ್ಬಿಸಿದರೇ?’ ಯಾರಿಗೂ ನಿಖರವಾಗಿ ಗೊತ್ತೇ ಇರಲಿಲ್ಲ. ಜೋರಾಗಿದ್ದ ಪೊಲೀಸ್ ತನಿಖೆಯಿಂದ ಎಲ್ಲವೂ ಆದಷ್ಟು ಬೇಗ ಬಯಲಾಗುವುದು ಎಂಬ ಗಾಬರಿ ಮನಸ್ಸಲ್ಲಿ ಯಾವಾಗಲೂ ಇತ್ತು. ಎರಡು ದಿನಗಳ ನಂತರ ಶಾಲೆ ಮರು ಪ್ರಾರಂಭವಾಯಿತು. ಅಣ್ಣನ ಕಾಣೆಯಿಂದಾಗಿ ಮಂಕಾಗಿದ್ದ ಗೆಳತಿಯೊಂದಿಗೆ ಮಾತಾಡುವ ಧೈರ್ಯವಾಗಲಿಲ್ಲ ನನಗೆ. ವಿರಾಮದಲ್ಲಿ ಅವಳ ಪಕ್ಕ ಹೋಗಿ ಕೂತು, ಎರಡು ಡೈರಿ ಮಿಲ್ಕ್ ಚಾಕ್ಲೇಟು ಅವಳ ಕೈಗಿಟ್ಟೆ. ಅವಳು ಸುಮ್ಮನೇ ನನ್ನ ಮುಖ ನೋಡಿದಳು. ನಾನೂ ಏನೂ ಹೇಳಲಿಲ್ಲ.

ನನ್ನ ಬದುಕು ಈಗ ಬದಲಾಗಿದೆ. ಓದು, ಕೆಲಸ ಎಂದೆಲ್ಲಾ ಆಗಿ ಊರು ಬಿಟ್ಟ ನಾನು, ಸಾಫ್ಟ್‌ವೇರ್ ಇಂಜಿನಿಯರ್ ಆಗಿ ನನಗೆ ಶಾಶ್ವತವೆಂಬಂತೆ ಬೆಂಗಳೂರನ್ನು ಸೇರಿ, ಪೊಲೀಸ್ ಕ್ವಾಟ್ರಸ್ಸನ್ನೇ ನೆನಪಿಸುವ ಹೊಸ ಗಗನಚುಂಬಿ ಅಪಾರ್ಟ್‍ಮೆಂಟಿನ ಸ್ವಂತ ಥ್ರೀ ಬಿ.ಎಚ್.ಕೆ ಫ್ಲ್ಯಾಟ್‍ನಲ್ಲಿದ್ದೇನೆ. ಅಷ್ಟು ಕ್ಲೋಸ್ ಫ್ರೆಂಡ್ ಆಗಿದ್ದ ಆ ಗೆಳತಿ ಈಗ ಸಂಪರ್ಕದಲ್ಲಿಯೇ ಇಲ್ಲ. ಹತ್ತು ರೂಪಾಯಿಯ ಡೈರಿ ಮಿಲ್ಕ್ ಚಾಕ್ಲೇಟುಗಳೂ ಈಗ ಬೆಳ್ಳಿ-ಬಂಗಾರ ಬಣ್ಣದ ಹಾಳೆಗಳಲ್ಲಿ ಕಾಣುತ್ತಿಲ್ಲ. ಆದರೂ ಬದುಕಲ್ಲಿ ಒಂದು ರೀತಿಯ ವಿಚಿತ್ರವಾದ ಸಮಾಧಾನವಿದೆ ಕಾರಣ, ಆಯಣ್ಣ-ಆಯಕ್ಕ ಇನ್ನೂ ಪತ್ತೆಯಾಗಿಲ್ಲ...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.