ADVERTISEMENT

ಕೊರೊನಾ ಪ್ಯಾರ್‌ ಹೈ..!

​ಪ್ರಜಾವಾಣಿ ವಾರ್ತೆ
Published 14 ಮಾರ್ಚ್ 2020, 19:30 IST
Last Updated 14 ಮಾರ್ಚ್ 2020, 19:30 IST
ಕಲೆ: ಭಾವು ಪತ್ತಾರ್‌
ಕಲೆ: ಭಾವು ಪತ್ತಾರ್‌   

ಹೈ ದರಾಬಾದಿನಿಂದ ಮಾಮಿ ತಂದುಕೊಟ್ಟಿದ್ದ ಮೆಣಸಿನಕಾಯಿ ತೊಕ್ಕನ್ನು ಬಾಯಿಗೆ ಹಾಕಿಕೊಳ್ಳಲು ಹೋದೆ. ‘ಐಸಾ ಮತ್ ಕೊರೋನಾ’ ಎಂದಳು ಮಾಮಿ. ಹೈದರಾಬಾದ್‌ನಲ್ಲಿರುವ ಅವಳು ಕಟ್ಟಿಕೊಂಡದ್ದು ಬಂಗಾಳಿ ಗಂಡನ್ನ. ಅದಕ್ಕೇ ‘ಕ’ ಬದಲಿಗೆ ‘ಕೊ’ ಮಾಮೂಲಿ. ಚಿಕ್ಕಂದಿನಿಂದಲೂ ಮಾಮಿಯ ಮಾತು ಕೇಳುವುದಿಲ್ಲವೆಂಬ ರೆಕಾರ್ಡ್ ಹೊಂದಿದ್ದ ನಾನು ಈಗ ಕೇಳುವುದೇ? ತೊಕ್ಕು ಬಾಯಿ ಸೇರಿತು; ಖಾರ ನೆತ್ತಿಗೇರಿತು. ಕೆಮ್ಮು ನುಗ್ಗಿ ಬಂದಿತು.

‘ಏನಾಯಿತು?’ ಎಂದಿತು ಹಾಲ್‌ನಿಂದ ಒಂದು ದನಿ. ಕೆಮ್ಮುಗಳ ಮಧ್ಯದಲ್ಲೇ ‘ಘಾಟ್ ಸೆಕ್ಷನ್’ ಎನ್ನುತ್ತಾ ಹೊರಬಂದೆ. ಆಂಧ್ರದ ಊಟ ಘಾಟಿನ ವಿಭಾಗಕ್ಕೆ ಸೇರಿದ್ದೇ ಅಲ್ಲವೇ! ಟೆನ್ ಬೈ ಫೋರ‍್ಟೀನ್‌ ಹಾಲ್‌ಗೆ ನಾನು ಕೆಮ್ಮುತ್ತಾ ಪ್ರವೇಶಿಸುತ್ತಿದ್ದಂತೆಯೇ ಅಲ್ಲಿದ್ದ ಎಲ್ಲರೂ ಅಲರ್ಟ್ ಆದರು. ಉಸೇನ್‌ ಬೋಲ್ಟ್‌ನಂತೆ ಓಡಿ ಹಾಲ್‌ನ ಆ ತುದಿ ಸೇರಿದರು. ಕೆಲವರು ಫ್ರೆಂಚ್ ವಿಂಡೊದಿಂದ ಎಮರ್ಜೆನ್ಸಿ ಎಕ್ಸಿಟ್‌ನಲ್ಲಿ ಹೊರ ಜಾರಿದರು. ಹಳೆಯ ಹಿಂದಿ ಚಿತ್ರಗಳಲ್ಲಿ ಖಳನಾಯಕ ಅಟ್ಟಿಸಿಕೊಂಡು ಬಂದು ಮೈಮೇಲೆ ಕೈ ಹಾಕಿದಾಗ ಬಚಾವ್ ಎಂದು ಕಿರುಚುತ್ತಿದ್ದ ನಾಯಕಿಯಂತೆ ಕೆಲವು ನಾರೀಮಣಿಯರು ಹುಯಿಲೆಬ್ಬಿಸಿದರು.

ಘಾಟಿನ ಕೊನೆಯ ಇನ್‌ಸ್ಟಾಲ್‌ಮೆಂಟ್ ಕೆಮ್ಮು ಹೊರಬರಲು ತವಕಿಸಿತು. ನಾಲಿಗೆಯನ್ನು ಇಷ್ಟೇ ಚಾಚಿ ಕ್ಕೊಕ್ಕೊಕ್ಕೊ... ಸದ್ದನ್ನು ಹೊರಡಿಸುವ ಹಂತ ತಲುಪುವಷ್ಟರಲ್ಲಿಯೇ ಹಾಲ್‌ನ ಆ ತುದಿಯ ನಾಲ್ಕೈದು ಗಂಡಸರು ಇತ್ತ ತಿರುಗಿದರು. ಇಡೀ ಹಾಲ್‌ಗೆ ಆಪರೇಷನ್ ಥಿಯೇಟರ್ ಕಳೆ! ಎಲ್ಲರ ಮುಖದಲ್ಲೂ ಡಾಕ್ಟರ್ ಧರಿಸುವ ಮುಖವಾಡ. ಸೀನ್ ಕಂಪ್ಲೀಟ್ ಮಾಡುವ ಸಲುವಾಗಿ ಮಧ್ಯದಲ್ಲೊಂದು ಟೇಬಲ್ ಇರಿಸಿ ಮಲಗಿಬಿಡಲೇ ಎಂದು ಯೋಚಿಸುತ್ತಿರುವಾಗಲೇ ಕೆಮ್ಮು ಒದ್ದುಕೊಂಡು ಬಂತು. ಅವರಲ್ಲಿದ್ದ ಧೀರನೊಬ್ಬ ಥಟ್ಟನೆ ಪಕ್ಕದಲ್ಲಿದ್ದ ಕಿಟಕಿಯ ಪರದೆ ಎಳೆದ; ತನ್ನ ಇಡೀ ದೇಹಕ್ಕೆ ಅದನ್ನು ಸುತ್ತಿಕೊಂಡ. ‘ನಾ ನಿನ್ನ ಬಿಡಲಾರೆ’ ಚಿತ್ರದ ಭೂತದ ಗೆಟಪ್‌ನಲ್ಲಿಯೇ ನೇರವಾಗಿ ನನ್ನತ್ತ ಧಾವಿಸಿ ‘ಕೆಮ್ಮಂಗಿಲ್ಲ...’ ಎಂದು ಕಿರುಚಿದ. ಆಗಲೇ ಯಾರೋ ಆಂಬುಲೆನ್ಸ್‌ಗೆ ಫೋನ್‌ ಮಾಡುತ್ತಿದ್ದರು.

ADVERTISEMENT

‘ಛೋಡೋ ಉಸೇ. ಕುಛ್ ಭೀ ನಹೀ ಹುವಾ ಹೈ..’ ಎಂದು ಮಾಮಿ ಬಾಗಿಲಿಗೆ ಬಂದು ಹೇಳಿದಳು.

‘ಕೆಮ್ತಿದಾನೆ. ಕೆಮ್ಮಿನ ಹಿಂದೆ ಕೆಲವು ಸೀನುಗಳೂ ಬರೋ ಲಕ್ಷಣಗಳಿವೆ. ಮುಟ್ಟಿದಾಗ ಮುಖ ಬಿಸಿ ಇತ್ತು. ಇದು ಕೊರೊನಾ’ ಎಂದಿತು ಭೂತದ ಗೆಟಪ್ಪಿನ ವ್ಯಕ್ತಿ.

‘ಅವನು ಅವನ್ ಹತ್ತಿರ ನಿಂತಿದ್ದ. ಆದ್ದರಿಂದ ಬಿಸಿ ಇದ್ದ...’ – ಮಾಮಿ ಸಮಜಾಯಿಷಿ.

‘ಅವನು ಅವನ ಹತ್ತಿರ ನಿಂತಿದ್ದ ಅಂದ್ರೆ ಏನರ್ಥ? ನಾನೂ ನನ್ನ ಹತ್ತಿರಾನೇ ಇದ್ದೀನಿ. ನೀನೂ ನಿನ್ನ ಹತ್ತಿರಾನೇ ಇದ್ದೀಯಾ’

‘ವೈಸಾ ನಹೀ. ಅವನ್... ಒಲೆಯ ಮೇಲೆ ಇಟ್ಟಿದ್ದ ಖೀರು ಬಿಸಿ ಇದೆಯಾಂತ ಬಗ್ಗಿ ನೋಡ್ತಿದ್ದ...’

‘ಕೆಮ್ಮಿದ್ದು ಯಾಕೆ?’

‘ತೊಕ್ಕು. ಬಹಳ ಘಾಟು’ ಎಂದೆ. ಅದನ್ನು ನೆನೆಸಿಕೊಂಡರೆ ಮತ್ತೆ ಕೆಮ್ಮು ಬರುವಂತಿತ್ತು.

‘ತೊಕ್ಕೇದೇಮಿ ಒದ್ದು. ಕೊರೊನಾ ಕಾಳ್ನಿಂಟೀನೂ ರಾವಚ್ಚು..’ ಎಂದ ಸಿಂಗನಹಳ್ಳಿ ಸೀನಪ್ಪ. ತೊಕ್ಕು ಎಂದರೆ ಖಾರದ ಪೇಸ್ಟೂ ಹೌದು, ತುಳಿ ಎಂದೂ ಅರ್ಥವಿದೆ. ತುಳಿದರೆ ಕಾಲಿನಿಂದ ಕೊರೊನಾ ಮೆಟ್ಟಿಲು ಹತ್ತಿಕೊಂಡು ತಲೆಗೇರುತ್ತದೆ ಎಂದು ಇಂಟರ್‌ನೆಟ್‌ನಲ್ಲಿ ಯಾರೋ ಬರೆದಿದ್ದರಂತೆ.

‘ಆಗಿನಿಂದ ಘಾಟ್‌ ಘಾಟ್‌ ಅಂತಿದಾನೆ. ಆಂಬುಲೆನ್ಸ್ ಬದಲು ಡೆಡ್‌ವ್ಯಾನ್‌ಗೇ ಫೋನ್ ಮಾಡ್ರೋ. ಅವನನ್ನ ಹರಿಶ್ಚಂದ್ರ ಘಾಟ್‌ಗೇ ಕಳಿಸೋಣ’ –ಮತ್ತೊಂದು ಮಫಲ್ಡ್ ವಾಯ್ಸ್. ಯಾರೋ ವಸ್ತ್ರಾಚ್ಛಾದಿತ ಕಿವಿಗೆ ಮೊಬೈಲ್ ತಗುಲಿಸಿಕೊಂಡು ‘ಡೆಡ್ ವ್ಯಾನ್ ಕಾ ಲೈನ್ ಡೆಡ್ ಹೈ. ದೂಸರಾ ಡೆಡ್ ಲೈನ್ ಹೈ ಕ್ಯಾ?’ ಎಂದು ಕೇಳಿದರು. ಹಾಲ್‌ನಲ್ಲಿ ಪೂರಾ ಕೋಲಾಹಲ.

ಮಾಮಿ ಗಾಬರಿಯಾದಳು. ‘ಐಸಾ ಮತ್ ಕೊರೊನಾ’ ಎಂದು ಮತ್ತೆ ಹೇಳಿದಳು. ಸುತ್ತಲಿನ ಗದ್ದಲದಲ್ಲಿ ‘ಐಸಾ ಮತ್’ ಅನ್ನೋದು ಮಹಾಭಾರತದ ಕುಂಜರಃದಂತೆ ಮ್ಯೂಟ್‌ ಆಗಿ, ಕೊರೊನಾ ಎನ್ನುವುದಷ್ಟೇ ಘಂಟಾಘೋಷದಂತೆ ಕೇಳಿಸಿತು.

‘ಕಿಚನ್‌ನಲ್ಲಿದ್ದಾಗಲೂ ಒಮ್ಮೆ ಕೊರೊನಾ ಎಂದಿರಿ. ಈಗಲೂ ಕೊರೊನಾ ಎನ್ನುತ್ತಿದ್ದೀರಿ. ಅವನ ಪಕ್ಕದಲ್ಲೇ ನಿಂತಿದ್ದಿರಿ. ನಿಮಗೂ ಕೊರೊನಾ ಬಂದಿರುತ್ತದೆ. ಪಕಡೋ ಜೀ ಇಸ್‌ಕೋ ಭೀ’ ಎಂದರು. ಸ್ತ್ರೀಸಮಾನತೆಯ ದ್ಯೋತಕವೆಂಬಂತೆ ಒಳ್ಳೆಯ ಸುತ್ತಳತೆಯ ಮುಖವಾಡಿ ಹೆಣ್ಣೊಬ್ಬಳು ಮಾಮಿಯನ್ನು ಕರಡಿ ಹಿಡಿತದಲ್ಲಿ ಬಿಗಿದಪ್ಪಿದಳು. ಮಾಮಿಯ ಮುಖಕ್ಕೆ ದೊಡ್ಡದೊಂದು ಟವಲ್ ಸುತ್ತಿ ಇನ್‌ಫೆಕ್ಷನ್ ಎಮಿಷನ್ ಸೆಂಟರ್ ಅನ್ನು ಬ್ಲಾಕ್ ಮಾಡಿದರು.

ಮಾಮಿ ಆಕೆಯಿಂದ ಬಿಡಿಸಿಕೊಳ್ಳಲು ಕೊಸರಾಡತೊಡಗಿದಳು. ದಢೂತಿಗಳು ಆಯಾಸಗೊಂಡರೆ ಮೊದಲಿಗೆ ದಮ್ಮು, ನಂತರ ಕೆಮ್ಮು ಬರುವುದು ಸಹಜವೇ. ಮಾಮಿ, ಕರಡಿ ಇಬ್ಬರೂ ಕೆಮ್ಮತೊಡಗಿದರು. ‘ಅಯ್ಯೋ! ಇಷ್ಟು ಬೇಗ ಅವನಿಂದ ಮಾಮಿಗೂ, ಮಾಮಿಯಿಂದ ಭಲ್ಲೂಕ ಆಂಟಿಗೂ ಹರಡಿದೆ. ಓಡಿ...’ ಎನ್ನುತ್ತಾ ಮುಖವಾಡಿಗಳೆಲ್ಲ ಗಾಬರಿಯ ಪರಾಕಾಷ್ಠೆ ಮುಟ್ಟಿದರು.

ವಿಷಯ ವಿವರಿಸಿ ಭಯ ನಿವಾರಿಸುವ ಯತ್ನದಲ್ಲಿ ‘ಪೆಹಲೇ ಬೋಲ್ನೇ ದೋ ಹಮ್ಕೋ..’ ಎಂದೆ.

‘ಪೆಹಲೇ ಜಾನೇ ದೋ ಹಮ್ಕೋ.. ಬಾದ್‌ಮೇ ಎಷ್ಟ್ ಬೇಕಾದ್ರೂ ಕೆಮ್ಕೋ..’ ಎನ್ನುತ್ತಾ ಇತ್ತೀಚಿನ ಹೊಸ ಕನ್ನಡ ಸಿನಿಮಾಗಳೆಲ್ಲ ಥಿಯೇಟರಿನಿಂದ ಥಟ್ಟೆಂದು ಮಾಯವಾಗುವಂತೆ ಎಲ್ಲರೂ ಅಂತರ್ಧಾನರಾದರು.

ಕಾಲಿಗೆ ಬುದ್ಧಿ ಹೇಳುವವರಿಗೆ ತಲೆಗೆ ಬುದ್ಧಿ ಹೇಳಲು ಸಾಧ್ಯವೇ? ನಾನು ‘ಕರೊನಾ ಪ್ಯಾರ್‌ ಹೈ..’ ಎಂದು ಸಣ್ಣಗೆ ಹಾಡುತ್ತಾ ಹೊರಬಂದೆ. ‘ಅದು.. ಕಹೋನಾ ಪ್ಯಾರ್‌ ಹೈ..! ರುತಿಕ್‌ ರೋಷನ್ದೂ ’ ಎಂದು ಮಾಮಿ ಅಮೆಂಡ್‌ಮೆಂಟ್‌ ಹಾಕಿ ನಕ್ಕಳು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.