ADVERTISEMENT

ಹೊಸ ಉಡುಪು ಧರಿಸುವ ಮುನ್ನ..

ಮನಸ್ವಿ
Published 4 ಅಕ್ಟೋಬರ್ 2020, 19:30 IST
Last Updated 4 ಅಕ್ಟೋಬರ್ 2020, 19:30 IST
ಸಾಂದರ್ಭಿಕ ಚಿತ್ರ 
ಸಾಂದರ್ಭಿಕ ಚಿತ್ರ    

ಹೊಸ ಉಡುಪು ಶಾಪಿಂಗ್ ಮಾಡುವುದು,ಹೊಸ ವಸ್ತ್ರವನ್ನು ಧರಿಸುವುದು ಯಾರಿಗೆ ಇಷ್ಟವಾಗುವುದಿಲ್ಲ ಹೇಳಿ. ಅದರಲ್ಲೂ ಇಂದಿನ ಮಿಲೇನಿಯಲ್ ಮಂದಿಗೆ ಶಾಪಿಂಗ್ ಮಾಡುವುದು, ಬಟ್ಟೆ ಖರೀದಿಸುವುದು ಎಂದರೆ ಎಲ್ಲಿಲ್ಲದ ಉತ್ಸಾಹ.

ಹೊಸ ಟ್ರೆಂಡ್ ಮಾರುಕಟ್ಟೆಗೆ ಲಗ್ಗೆ ಇಟ್ಟರೆ ಸಾಕು ಖರೀದಿಸಿ, ಧರಿಸಿ ಸಂಭ್ರಮಿಸುವ ಕ್ರೇಜ್‌. ಹಾಗಾಗಿ ಶಾಪಿಂಗ್ ಮಾಲ್‌ಗೋ, ಇಲ್ಲ ಉಡುಪಿನ ಮಳಿಗೆಗೋ ಲಗ್ಗೆ ಇಡುತ್ತಾರೆ.

ಹಲವರಿಗೆ ಹೊಸ ಬಟ್ಟೆ ತಂದ ಕೂಡಲೇ ಧರಿಸಿ ಸಂಭ್ರಮಿಸುವ ಅಭ್ಯಾಸ. ಆದರೆ ಈ ಅಭ್ಯಾಸ ಒಳ್ಳೆಯದಲ್ಲ. ಮಳಿಗೆಯಿಂದ ಖರೀದಿಸಿ ತಂದ ವಸ್ತ್ರವನ್ನು ನೇರವಾಗಿ ಧರಿಸುವುದರಿಂದ ರೋಗಾಣುಗಳು ಹಾಗೂ ಬ್ಯಾಕ್ಟೀರಿಯಾಗಳು ದೇಹವನ್ನು ಸೇರುವ ಸಾಧ್ಯತೆ ಹೆಚ್ಚು. ಅಲ್ಲದೆ ಇದು ಚರ್ಮದ ಸೋಂಕಿನ ಅಪಾಯವನ್ನು ಹೆಚ್ಚಿಸಬಹುದು. ಆ ಕಾರಣಕ್ಕೆ ಹೊಸ ಬಟ್ಟೆ ಖರೀದಿಸಿದ ಮೇಲೆ ಅದನ್ನು ಒಗೆದು ಧರಿಸುವುದು ಉತ್ತಮ.

ADVERTISEMENT

ಪ್ಯಾಕಿಂಗ್ ಹಾಗೂ ಸಾಗಣೆ ವಿಧಾನ

ಗಾರ್ಮೆಂಟ್‌ನಲ್ಲಿ ಉಡುಪು ತಯಾರಾದ ಮೇಲೆ ಅದನ್ನು ಪ್ಯಾಕಿಂಗ್ ಮಾಡುತ್ತಾರೆ. ಪ್ಯಾಕಿಂಗ್ ಆದ ಬಟ್ಟೆ ಮಳಿಗೆಗೆ ಬರುವ ಮೊದಲು ಬೇರೆ ಕಡೆಯಿಂದ ಹಾಗೂ ಬೇರೆ ಸಾರಿಗೆ ವಿಧಾನಗಳಿಂದ ಬಂದಿರುತ್ತದೆ. ಉಡುಪು ಎಲ್ಲಿ ತಯಾರಾಯಿತು, ಮೊದಲು ಎಲ್ಲಿ ಪ್ಯಾಕಿಂಗ್ ಆಯಿತು ಹಾಗೂ ಹೇಗೆ ಸಾಗಣೆ ಆಯಿತು ಎಂದು ಕಂಡುಹಿಡಿಯುವುದು ಕಷ್ಟ. ಈ ಸಂಪೂರ್ಣ ಪ್ರಕ್ರಿಯೆಯಲ್ಲಿ ಹೊಸ ಬಟ್ಟೆಯಲ್ಲಿ ಹೇಗೆ ಸೂಕ್ಮಜೀವಿಗಳು, ರೋಗಾಣುಗಳು ಸೇರಿಕೊಂಡಿರುತ್ತವೆ ತಿಳಿಯುವುದಿಲ್ಲ. ಸೂಕ್ಷ್ಮಜೀವಿಗಳನ್ನು ನೀವು ನೋಡಲು ಸಾಧ್ಯವಿಲ್ಲ. ಆ ಕಾರಣಕ್ಕೆ ಅವು ನಿಮ್ಮ ಬಟ್ಟೆಯಲ್ಲಿ ಸೇರಿಲ್ಲ ಎಂಬ ಅರ್ಥವಲ್ಲ. ಹಾಗಾಗಿ ನಿಮ್ಮ ಸುರಕ್ಷತೆಗೆ ಹೊಸ ಬಟ್ಟೆಯನ್ನು ಒಗೆದ ನಂತರ ಹಾಕಿಕೊಳ್ಳುವುದು ಸೂಕ್ತ.

ರಾಸಾಯನಿಕ ಹಾಗೂ ಬಣ್ಣಗಳ ಬಳಕೆ

ಹೊಸ ಉಡುಪನ್ನು ಒಗೆದು ಧರಿಸಬೇಕು ಎಂಬುದಕ್ಕೆ ಇನ್ನೊಂದು ಮುಖ್ಯ ಕಾರಣ ಅದಕ್ಕೆ ಬಳಸುವ ಬಣ್ಣ ಹಾಗೂ ರಾಸಾಯನಿಕಗಳು. ಒಗೆಯದೇ ಧರಿಸಿದರೆ ಅವು ನೇರವಾಗಿ ನಮ್ಮ ಚರ್ಮವನ್ನು ಸೇರುತ್ತವೆ. ಹೊಸಬಟ್ಟೆಯನ್ನು ತಯಾರಿಸುವ ಮೊದಲು ಬೇರೆ ಬೇರೆ ವಿಧದ ರಾಸಾಯನಿಕಗಳನ್ನು ಬಳಸುತ್ತಾರೆ. ನಂತರ ಬೇಕಾದ ಬಣ್ಣಗಳನ್ನು ಬಳಸುತ್ತಾರೆ. ಈ ರೀತಿಯ ವಸ್ತುಗಳ ಬಳಕೆಯಿಂದ ಒಣ ಚರ್ಮ, ತುರಿಕೆ, ಗುಳ್ಳೆಗಳು ಏಳುವುದು, ಇಸುಬಿನಂತಹ ಚರ್ಮದ ಸಮಸ್ಯೆಗಳಿಗೆ ಕಾರಣವಾಗಬಹುದು. ಅಲ್ಲದೇ ಅಲರ್ಜಿಯಂತಹ ಸಮಸ್ಯೆಗಳು ಹೆಚ್ಚು ಕಾಡಬಹುದು.

ಟ್ರಯಲ್‌ ನೋಡುವುದು

ಮಾಲ್‌ ಅಥವಾ ಶಾಪಿಂಗ್ ಮಾಲ್‌ಗಳಲ್ಲಿ ಹೊಸ ಬಟ್ಟೆಗಳನ್ನು ಖರೀದಿಸುವ ಮೊದಲು ಅಳತೆ ಸರಿಯಾಗಿ ಹೊಂದುತ್ತದೋ ಇಲ್ಲವೋ ಎಂದು ಟ್ರಯಲ್ ನೋಡುವುದು ಸಾಮಾನ್ಯ. ಹಾಗೆ ನಿಮಗೂ ಮೊದಲು ಅದೇ ಡ್ರೆಸ್‌ ಅನ್ನು ಹಲವರು ಧರಿಸಿ ನೋಡಿರುತ್ತಾರೆ.ನೀವು ಮತ್ತೆ ಅದೇ ಬಟ್ಟೆಯನ್ನು ಧರಿಸಿದಾಗ ಅವರಿಗೆ ಇದ್ದಿರಬಹುದಾದ ಚರ್ಮದ ಸಮಸ್ಯೆ ಹಾಗೂ ಸೂಕ್ಮಾಣು ಜೀವಿಗಳು ವಸ್ತ್ರದಿಂದ ನಿಮ್ಮ ದೇಹವನ್ನು ಸೇರಬಹುದು. ಇದು ಚರ್ಮದಲ್ಲಿ ದದ್ದು, ತುರಿಕೆ ಹಾಗೂ ಅಲರ್ಜಿಯಂತಹ ಸಮಸ್ಯೆಗೆ ಕಾರಣವಾಗಬಹುದು. ಆ ಕಾರಣಕ್ಕೆ ಬಟ್ಟೆ ಟ್ರಯಲ್ ಮಾಡಿ ಮನೆಗೆ ಬಂದ ತಕ್ಷಣ ಸ್ನಾನ ಮಾಡಬೇಕು, ಜೊತೆಗೆ ಬಟ್ಟೆಯನ್ನು ಒಗೆದು ಧರಿಸಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.