ADVERTISEMENT

Karnataka Budget 2021 | ಇದು ‘ಆಪರೇಷನ್ ಬರ್ಬಾದ್‌’ ಬಜೆಟ್‌: ಸಿದ್ದರಾಮಯ್ಯ

​ಪ್ರಜಾವಾಣಿ ವಾರ್ತೆ
Published 8 ಮಾರ್ಚ್ 2021, 19:19 IST
Last Updated 8 ಮಾರ್ಚ್ 2021, 19:19 IST
ಸಿದ್ದರಾಮಯ್ಯ
ಸಿದ್ದರಾಮಯ್ಯ   

ಬೆಂಗಳೂರು: ’ಇದು ಅನೈತಿಕ ಸರ್ಕಾರ. ಈ ಸರ್ಕಾರಕ್ಕೆ ಬಜೆಟ್‌ ಮಂಡಿಸುವ ನೈತಿಕತೆ ಇಲ್ಲ’ ಎಂದು ಪ್ರತಿಭಟಿಸಿ, ಬಜೆಟ್‌ ಮಂಡನೆಯಾಗುತ್ತಿದ್ದಂತೆ ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ನೇತೃತ್ವದಲ್ಲಿ ಕಾಂಗ್ರೆಸ್‌ ಶಾಸಕರು ಸಭಾತ್ಯಾಗ ಮಾಡಿದರು.

ಬಳಿಕ ಸುದ್ದಿಗಾರರ ಜೊತೆ ಮಾತನಾಡಿದ ಸಿದ್ದರಾಮಯ್ಯ, ‘ಆಪರೇಷನ್ ಕಮಲ ಎಂಬ ಅನೈತಿಕ ರಾಜಕೀಯದ ಮೂಲಕ ರಾಜ್ಯದಲ್ಲಿ ಅಧಿಕಾರಕ್ಕೆ ಬಂದಿರುವ ಬಿಜೆಪಿ ಸರ್ಕಾರ ರಾಜ್ಯವನ್ನು ದಶಕಗಳ ಹಿಂದಕ್ಕೆ ಒಯ್ಯುವ ‘ಆಪರೇಷನ್ ಬರ್ಬಾದ್‘ ಕಾರ್ಯಕ್ರಮವನ್ನು ಯಶಸ್ವಿಯಾಗಿ ಮಾಡುತ್ತಿದೆ. ಇದಕ್ಕೆ ಕಳೆದ ಮತ್ತು ಈ ವರ್ಷದ ಎರಡು ಬಜೆಟ್‍ಗಳೇ ಸಾಕ್ಷಿ‘ ಎಂದು ಟೀಕಿಸಿದರು.

‘ಆಯವ್ಯಯವನ್ನು ಇಲಾಖಾವಾರು ನೀಡದೆ ಆರು ವಲಯಗಳಾಗಿ ವಿಂಗಡಿಸಿ ಯಾವ ಇಲಾಖೆಗೆ ಎಷ್ಟು ಅನುದಾನ ನೀಡಲಾಗಿದೆ. 33 ಇಲಾಖೆಗಳನ್ನು ಆರು ವಲಯಗಳಾಗಿ ಮಾಡಿ ಗೊಂದಲ ಸೃಷ್ಟಿಸಲಾಗಿದೆ. ಆರೂ ವಲಯಗಳಿಗೆ ಕಳೆದ ಬಜೆಟ್‍ನಲ್ಲಿ ನಿಗದಿಪಡಿಸಲಾಗಿದ್ದ ಅನುದಾನಕ್ಕಿಂತ ಕಡಿಮೆ ಹಣ ನಿಗದಿಪಡಿಸಲಾಗಿದೆ’ ಎಂದರು.

ADVERTISEMENT

‘ಸಂಕಷ್ಟಗಳ ಸರಮಾಲೆಗೆ ಸಿಲುಕಿರುವ ರೈತರು ದೇಶದಾದ್ಯಂತ ಬೀದಿಗಿಳಿದಿದ್ದಾರೆ. ಕೃಷಿ ವಿರೋಧಿ ಕಾಯ್ದೆಗಳ ಮೂಲಕ ರೈತರನ್ನು ದಿವಾಳಿ ಮಾಡಲು ಹೊರಟಿರುವ ಕೇಂದ್ರ ಸರ್ಕಾರದ ಜೊತೆ ಸೇರಿರುವ ರಾಜ್ಯ ಸರ್ಕಾರ ಬಜೆಟ್‍ನಲ್ಲೂ ಕೃಷಿ ಕ್ಷೇತ್ರವನ್ನು ನಿರ್ಲಕ್ಷಿಸಿದೆ. ಅಂಬೇಡ್ಕರ್, ವಾಲ್ಮೀಕಿ, ಆದಿಜಾಂಬವ, ಬೋವಿ, ವಿಶ್ವಕರ್ಮ, ಕಾಡುಗೊಲ್ಲರ, ಅಂಬಿಗರ ಚೌಡಯ್ಯ, ಸವಿತಾ ಸಮಾಜ ಮತ್ತು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮಗಳಿಗೆ ಒಟ್ಟು ಕೇವಲ ₹ 500 ಕೋಟಿ ಅನುದಾನ ನೀಡುವ ಮೂಲಕ ತಳ ಸಮುದಾಯಗಳಿಗೆ ಅನ್ಯಾಯ ಮಾಡಲಾಗಿದೆ. ಈ ಮೂಲಕ ರಾಜ್ಯದ ಬಿಜೆಪಿ ಸರ್ಕಾರ ಸಾಮಾಜಿಕ ನ್ಯಾಯದ ವಿರೋಧಿ ಎನ್ನುವುದನ್ನು ಸಾಬೀತುಪಡಿಸಿದೆ. ಒಟ್ಟಿನಲ್ಲಿ ಕೇಂದ್ರ ಮತ್ತು ರಾಜ್ಯಗಳಲ್ಲಿನ ಎರಡೂ ಬಿ.ಜೆ.ಪಿ. ಸರ್ಕಾರಗಳು ಜನರ ತಲೆಗೆ ಟೋಪಿ ಹಾಕುತ್ತಿವೆ‘ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.