ADVERTISEMENT

ಮೊಬೈಲ್‌ ಡೇಟಾ ದರ ಪ್ರತಿ ಜಿಬಿಗೆ ₹35 ನಿಗದಿ ಪಡಿಸಿ: ವೊಡಾಫೋನ್‌ ಐಡಿಯಾ

ಪಿಟಿಐ
Published 28 ಫೆಬ್ರುವರಿ 2020, 9:03 IST
Last Updated 28 ಫೆಬ್ರುವರಿ 2020, 9:03 IST
ವೊಡಾಫೋನ್‌ ಐಡಿಯಾ
ವೊಡಾಫೋನ್‌ ಐಡಿಯಾ   

ನವದೆಹಲಿ: ತೀವ್ರ ನಷ್ಟದಲ್ಲಿರುವ ವೊಡಾಫೋನ್‌ ಐಡಿಯಾ ಚೇತರಿಕೆ ಕಾಣಲು ಹಾಗೂ ದೂರ ಸಂಪರ್ಕ ಇಲಾಖೆಗೆ ಹೊಂದಾಣಿಕೆ ಮಾಡಿದ ಒಟ್ಟು ವರಮಾನದ (ಎಜಿಆರ್‌) ಬಾಕಿ ಮೊತ್ತಪಾವತಿ ಮಡಲು ಅನುವಾಗಲು ಸೇವಾ ದರ ಹೆಚ್ಚಳ ಮಾಡುವಂತೆ ಕಂಪನಿ ಬೇಡಿಕೆ ಇಟ್ಟಿದೆ.

ಪ್ರತಿ ಜಿಬಿ ಮೊಬೈಲ್‌ ಡೇಟಾಗೆ ₹35, ಪ್ರತಿ ನಿಮಿಷದ ಕರೆಗೆ 6 ಪೈಸೆ ಮತ್ತು ಮಾಸಿಕ ಶುಲ್ಕ ಅನ್ವಯಿಸಬೇಕು. ಮೊಬೈಲ್‌ ಡೇಟಾ ದರ 7–8 ಪಟ್ಟು ಹೆಚ್ಚಳದೊಂದಿಗೆ ಕನಿಷ್ಠ ದರ ನಿಗದಿ ಪಡಿಸಿ ಏಪ್ರಿಲ್‌ 1ರಿಂದ ಅನುಷ್ಠಾನಗೊಳ್ಳುವಂತೆ ಮಾಡಲು ಕೇಳಿದೆ.

ಸುಪ್ರೀಂ ಕೋರ್ಟ್ ಆದೇಶದಂತೆ ವೊಡಾಫೋನ್‌ ಐಡಿಯಾ ಸರ್ಕಾರಕ್ಕೆ ₹50,000 ಕೋಟಿಗೂ ಹೆಚ್ಚು ಪಾವತಿಸಬೇಕಿದೆ. ಮೂಲಗಳ ಪ್ರಕಾರ, ಬಾಕಿ ಪಾವತಿಗೆ ಕಂಪನಿಯು 18 ವರ್ಷ ಕಾಲಾವಕಾಶ ಹಾಗೂ ಮೂರು ವರ್ಷಗಳ ವರೆಗೆ ದಂಡ, ಬಡ್ಡಿ ವಿಧಿಸುವುದಕ್ಕೆ ತಡೆ ನೀಡುವಂತೆ ಸರ್ಕಾರಕ್ಕೆ ಮನವಿ ಮಾಡಿದೆ. ಆದರೆ, ಕಂಪನಿ ಮುಂದಿಟ್ಟಿರುವ ಬೇಡಿಕೆಗಳು ಸರ್ಕಾರಕ್ಕೆ ಕಠಿಣವಾಗಲಿವೆ ಎಂದು ಅಧಿಕಾರಿಯೊಬ್ಬರು ತಿಳಿಸಿರುವುದಾಗಿ ಪಿಟಿಐ ವರದಿ ಮಾಡಿದೆ.

ADVERTISEMENT

ಪ್ರಸ್ತುತ ಪ್ರತಿ ಜಿಬಿ ಡೇಟಾಗೆ ₹4–5 ಇದೆ. ಈ ದರವನ್ನು ಕನಿಷ್ಠ ₹35 ನಿಗದಿ ಪಡಿಸಬೇಕೆಂಬುದು ವೊಡಾಫೋನ್‌ ಐಡಿಯಾ ಬೇಡಿಕೆಯಾಗಿದೆ. ಇದರೊಂದಿಗೆ ಹೊರ ಹೋಗುವ ಕರೆಗಳಿಗೆ ಪ್ರತಿ ನಿಮಿಷಕ್ಕೆ 6 ಪೈಸೆ ನಿಗದಿ ಪಡಿಸಬೇಕು. ಕಂಪನಿ ಕೆಲವು ತಿಂಗಳ ಹಿಂದೆಯಷ್ಟೇ ಶೇ 50ರಷ್ಟು ದರ ಹೆಚ್ಚಳ ಮಾಡಿದೆ.

ದೂರ ಸಂಪರ್ಕ ಕಂಪನಿಗಳು ಗಳಿಸುವ ಆದಾಯದ ಆಧಾರದ ಮೇಲೆ ಸರ್ಕಾರ ಪರವಾನಗಿ ಶುಲ್ಕ ಮತ್ತು ತರಂಗಾಂತರ ಬಳಕೆ ಶುಲ್ಕಕ್ಕೆ ತೆರಿಗೆ ವಿಧಿಸುತ್ತದೆ. ಆದಾಯ ಲೆಕ್ಕಾಚಾರದಲ್ಲಿ ಸರ್ಕಾರ ಮತ್ತು ದೂರ ಸಂಪರ್ಕ ಕಂಪನಿಗಳ ನಡುವೆ ಉಂಟಾಗಿದ್ದ ಗೊಂದಲಕ್ಕೆ ಸುಪ್ರೀಂ ಕೋರ್ಟ್‌ ವಿರಾಮ ಹಾಕಿದೆ. ಸರ್ಕಾರದ ಅನುಸರಿಸುತ್ತಿರುವ ಕ್ರಮಗಳನ್ನು ಕೋರ್ಟ್‌ ಎತ್ತಿ ಹಿಡಿದಿತ್ತು ಹಾಗೂ ಟೆಲಿಕಾಂ ಕಂಪನಿಗಳು 2020ರ ಜನವರಿ 23ರೊಳಗೆ ಬಾಕಿ ಪಾವತಿಸುವಂತೆ ಆದೇಶಿಸಿತ್ತು.

ಟೆಲಿಕಾಂ ಕಂಪನಿಗಳು ಸರ್ಕಾರಕ್ಕೆ ಒಟ್ಟು ₹1.47 ಲಕ್ಷ ಕೋಟಿ ಪಾವತಿ ಬಾಕಿ ಉಳಿಸಿಕೊಂಡಿವೆ. ವೊಡಾಫೋನ್‌ ಐಡಿಯಾ ಪಾವತಿಸಬೇಕಿರುವ ₹53,000 ಕೋಟಿ ಪೈಕಿ ₹3,500 ಕೋಟಿ ಪಾವತಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.