ADVERTISEMENT

ಕಾರ್‌ ಮಾರಾಟಕ್ಕೆ ಬೆಲೆ ಕಡಿತದ ಸುರಿಮಳೆ

ಅನ್ನಪೂರ್ಣ ಸಿಂಗ್
Published 18 ಸೆಪ್ಟೆಂಬರ್ 2019, 20:00 IST
Last Updated 18 ಸೆಪ್ಟೆಂಬರ್ 2019, 20:00 IST
   

ನವದೆಹಲಿ: ಮುಂಬರುವ ಹಬ್ಬದ ದಿನಗಳಲ್ಲಿನ ಬೇಡಿಕೆಯನ್ನು ನಗದಾಗಿ ಪರಿವರ್ತಿಸಿಕೊಂಡು ಕಾರ್‌ಗಳ ಮಾರಾಟ ಹೆಚ್ಚಿಸಲು ಪ್ರಮುಖ ತಯಾರಿಕಾ ಕಂಪನಿಗಳು ಬೆಲೆ ಕಡಿತವೂ ಸೇರಿದಂತೆ ಹಲವಾರು ಆಕರ್ಷಕ ಕೊಡುಗೆಗಳ ಸುರಿಮಳೆ ಸುರಿಸಿವೆ.

ಮಾರಾಟದಲ್ಲಿನ ತೀವ್ರ ಕುಸಿತ, ಮಾಲಿನ್ಯ ನಿಯಂತ್ರಣದ ಹೊಸ ಮಾನದಂಡ (ಬಿಎಸ್‌–6) ಜಾರಿಯ ಅನಿವಾರ್ಯತೆ, ಮಂದಗತಿಯ ಆರ್ಥಿಕ ಪ್ರಗತಿ ಕಾರಣಕ್ಕೆ ಮಾರಾಟವಾಗದೆ ಉಳಿದಿರುವ ಕಾರುಗಳ ದಾಸ್ತಾನು ಕರಗಿಸಲು ಈ ರಿಯಾಯ್ತಿಗಳನ್ನು ಪ್ರಕಟಿಸಲಾಗಿದೆ.

ದರ ಕಡಿತದ ಪ್ರಯೋಜನವು ₹ 42 ಸಾವಿರದಿಂದ ಗರಿಷ್ಠ ₹ 4 ಲಕ್ಷದವರೆಗೆ ಇರಲಿದೆ. ಪ್ರಮುಖ ತಯಾರಿಕಾ ಸಂಸ್ಥೆಗಳ ಆಕರ್ಷಕ ಕೊಡುಗೆಗಳು ಕೆಲ ದಿನಗಳಿಂದ ಈಗಾಗಲೇ ಜಾರಿಯಲ್ಲಿವೆ. ಈ ಕೊಡುಗೆಗಳು ಈ ತಿಂಗಳ ಅಂತ್ಯದವರೆಗೆ ಇರಲಿವೆ.

ADVERTISEMENT

ಟೊಯೋಟದ ಕೊರೊಲ್ಲಾ ಆಲ್ಟಿಸ್‌, ಯಾರಿಸ್‌ ಮತ್ತು ಇನೋವಾ ಖರೀದಿದಾರರು ₹ 1.75 ಲಕ್ಷದವರೆಗೆ ಉಳಿಸಬಹುದಾಗಿದೆ.

ಈ ದರ ಕಡಿತದ ಕೊಡುಗೆಗಳಲ್ಲಿ ಹೋಂಡಾ ಕಾರ್ಸ್‌ ಮುಂಚೂಣಿಯಲ್ಲಿದ್ದು ತನ್ನ ಪ್ರೀಮಿಯಂ ಎಸ್‌ಯುವಿ ಸಿಆರ್‌–ವಿ ಬೆಲೆಯಲ್ಲಿ ₹ 4 ಲಕ್ಷ ರಿಯಾಯ್ತಿ ನೀಡಲಿದೆ.

ಬ್ಯಾಂಕ್‌ ಮತ್ತು ಹಣಕಾಸು ಸಂಸ್ಥೆಗಳ ಸಹಯೋಗದಲ್ಲಿ ವಾಹನ ಖರೀದಿಗೆ ಶೇ 100ರಷ್ಟು ಸಾಲ ಸೌಲಭ್ಯ, ದೀರ್ಘಾವಧಿಯ ಮರುಪಾವತಿ, ಕಡಿಮೆ ಮೊತ್ತದ ತಿಂಗಳ ಸಮಾನ ಕಂತು (ಈಎಂಐ) ಮತ್ತಿತರ ಸೌಲಭ್ಯ ಒದಗಿಸಲೂ ಮುಂದಾಗಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.