ADVERTISEMENT

60 ಸಾವಿರದ ಗಡಿ ದಾಟಿದ ಸೆನ್ಸೆಕ್ಸ್

ಪಿಟಿಐ
Published 24 ಸೆಪ್ಟೆಂಬರ್ 2021, 13:05 IST
Last Updated 24 ಸೆಪ್ಟೆಂಬರ್ 2021, 13:05 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಮುಂಬೈ: ಮುಂಬೈ ಷೇರುಪೇಟೆ (ಬಿಎಸ್‌ಇ) ಸಂವೇದಿ ಸೂಚ್ಯಂಕ ಸೆನ್ಸೆಕ್ಸ್ ಶುಕ್ರವಾರದ ವಹಿವಾಟಿನಲ್ಲಿ ಇತಿಹಾಸ ಸೃಷ್ಟಿಸಿತು. ಬ್ಯಾಂಕಿಂಗ್, ಹಣಕಾಸು ಮತ್ತು ಆಟೊಮೊಬೈಲ್ ವಲಯದ ಷೇರುಗಳ ಖರೀದಿಯಲ್ಲಿ ಹೂಡಿಕೆದಾರರು ಹೆಚ್ಚಿನ ಆಸಕ್ತಿ ತೋರಿಸಿದ ಕಾರಣದಿಂದಾಗಿ ಸೂಚ್ಯಂಕವು 163 ಅಂಶ ಏರಿಕೆ ಕಂಡಿತು. ಇದೇ ಮೊದಲ ಬಾರಿಗೆ 60 ಸಾವಿರ ಅಂಶದ ಗಡಿಯನ್ನು ದಾಟಿ ವಹಿವಾಟು ಕೊನೆಗೊಳಿಸಿತು.

ರಾಷ್ಟ್ರೀಯ ಷೇರುಪೇಟೆ (ಎನ್‌ಎಸ್‌ಇ) ಸಂವೇದಿ ಸೂಚ್ಯಂಕ ನಿಫ್ಟಿ 30 ಅಂಶ ಏರಿಕೆ ಕಂಡು 17,853 ಅಂಶಗಳಲ್ಲಿ ವಹಿವಾಟು ಕೊನೆಗೊಳಿಸಿತು. ಒಂದು ಸಾವಿರ ಅಂಶದಿಂದ 60 ಸಾವಿರದ ಗಡಿ ದಾಟಲು ಸೆನ್ಸೆಕ್ಸ್‌ 31 ವರ್ಷಕ್ಕಿಂತ ತುಸು ಹೆಚ್ಚಿನ ಸಮಯ ತೆಗೆದುಕೊಂಡಿದೆ. 1990ರ ಜುಲೈ 25ರಂದು ಸೆನ್ಸೆಕ್ಸ್ ಒಂದು ಸಾವಿರ ಅಂಶದಲ್ಲಿ ಇತ್ತು. ಅಲ್ಲಿಂದ 30 ಸಾವಿರದ ಗಡಿ ದಾಟಲು ಸೂಚ್ಯಂಕವು ಸರಿಸುಮಾರು 25 ವರ್ಷ ತೆಗೆದುಕೊಂಡಿತ್ತು.

‘ಸೂಚ್ಯಂಕವು 60 ಸಾವಿರ ತಲುಪಿದ್ದರೂ ಹೂಡಿಕೆದಾರರು ಆಯ್ದ ಷೇರುಗಳನ್ನು ಮಾತ್ರ ಖರೀದಿಸಬೇಕು. ಮಧ್ಯಮಾವಧಿ ಹಾಗೂ ದೀರ್ಘಾವಧಿಯ ಗುರಿಯೊಂದಿಗೆ ಈ ಖರೀದಿ ಆಗಬೇಕು. ಖರೀದಿಯನ್ನು ಹಂತ ಹಂತವಾಗಿ ಮಾಡಿ, ಒಂದೇ ಹಂತದಲ್ಲಿ ನಿಮ್ಮ ಅಷ್ಟೂ ಹಣವನ್ನು ಹೂಡಿಕೆ ಮಾಡಬೇಡಿ’ ಎಂದು ಕೋಟಕ್ ಸೆಕ್ಯುರಿಟೀಸ್‌ನ ಈಕ್ವಿಟಿ ಸಂಶೋಧನಾ ವಿಭಾಗದ ಮುಖ್ಯಸ್ಥ ಶ್ರೀಕಾಂತ್ ಚೌಹಾನ್ ಹೇಳಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.