ADVERTISEMENT

ಎಲ್‌ಐಸಿಯಲ್ಲಿ ಚೀನಾ ಹೂಡಿಕೆ ತಡೆಯಲು ಕೇಂದ್ರ ಸರ್ಕಾರ ಯತ್ನ?

ರಾಯಿಟರ್ಸ್
Published 22 ಸೆಪ್ಟೆಂಬರ್ 2021, 18:34 IST
Last Updated 22 ಸೆಪ್ಟೆಂಬರ್ 2021, 18:34 IST
   

ನವದೆಹಲಿ: ಚೀನಾದ ಹೂಡಿಕೆದಾರರು ಭಾರತೀಯ ಜೀವ ವಿಮಾ ನಿಗಮದಲ್ಲಿ (ಎಲ್‌ಐಸಿ) ಹೂಡಿಕೆ ಮಾಡುವುದನ್ನು ಕೇಂದ್ರ ಸರ್ಕಾರವು ತಡೆಯುವ ಸಾಧ್ಯತೆ ಇದೆ. ಎಲ್‌ಐಸಿ ಆರಂಭಿಕ ಸಾರ್ವಜನಿಕ ಕೊಡುಗೆ (ಐಪಿಒ) ಮೂಲಕ ತನ್ನ ಷೇರುಗಳನ್ನು ಶೀಘ್ರದಲ್ಲಿಯೇ ಖರೀದಿಗೆ ಮುಕ್ತವಾಗಿಸಲಿದೆ.

ಕೇಂದ್ರ ಸರ್ಕಾರದ ಒಡೆತನದಲ್ಲಿ ಇರುವ ಎಲ್‌ಐಸಿಯು ದೇಶದ ಮಹತ್ವದ ಆಸ್ತಿಗಳಲ್ಲಿ ಒಂದು ಎಂದು ಪರಿಗಣಿತವಾಗಿದೆ. ದೇಶದ ಜೀವ ವಿಮೆ ಮಾರುಕಟ್ಟೆಯಲ್ಲಿ ಶೇಕಡ 60ಕ್ಕಿಂತ ಹೆಚ್ಚಿನ ಪಾಲನ್ನು ಎಲ್‌ಐಸಿ ಹೊಂದಿದೆ. ಎಲ್‌ಐಸಿ ಹೊಂದಿರುವ ಆಸ್ತಿಯ ಮೌಲ್ಯವು ₹ 36 ಲಕ್ಷ ಕೋಟಿ ಎಂಬ ಅಂದಾಜು ಇದೆ.

ಎಲ್‌ಐಸಿ ಐಪಿಒ ದೇಶದಲ್ಲಿ ಇದುವರೆಗಿನ ಐಪಿಒಗಳ ಪೈಕಿ ಅತಿದೊಡ್ಡದು ಎಂಬ ನಿರೀಕ್ಷೆ ಇದೆ. ಎಲ್ಐಸಿಯ ಷೇರು ಖರೀದಿಸಲು ವಿದೇಶಿ ಹೂಡಿಕೆದಾರರಿಗೆ ಅವಕಾಶ ಕಲ್ಪಿಸುವ ಉದ್ದೇಶ ಕೇಂದ್ರಕ್ಕೆ ಇದೆ. ಆದರೆ, ಚೀನಾದ ಹೂಡಿಕೆದಾರರ ವಿಚಾರದಲ್ಲಿ ಕೇಂದ್ರವು ಎಚ್ಚರಿಕೆಯ ಹೆಜ್ಜೆ ಇರಿಸುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ADVERTISEMENT

ಗಾಲ್ವನ್ ಕಣಿವೆಯಲ್ಲಿ ಭಾರತ ಮತ್ತು ಚೀನಾದ ಸೈನಿಕರ ನಡುವೆ ಘರ್ಷಣೆ ನಡೆದ ಬಳಿಕ, ಕೇಂದ್ರ ಸರ್ಕಾರವು ದೇಶದ ಸೂಕ್ಷ್ಮ ವಲಯದ ಕಂಪನಿಗಳಲ್ಲಿ ಚೀನಾದ ಹೂಡಿಕೆಗೆ ಮಿತಿ ಹೇರಲು ಯತ್ನಿಸಿದೆ. ಚೀನಾ ಮೂಲದ ಹಲವು ಆ್ಯಪ್‌ಗಳನ್ನು ನಿಷೇಧಿಸಿದೆ, ಚೀನಾದಿಂದ ಆಮದು ಆಗುವ ಉತ್ಪನ್ನಗಳನ್ನು ಹೆಚ್ಚಿನ ಪರಿಶೀಲನೆಗೆ ಒಳಪಡಿಸುತ್ತಿದೆ.

‘ಗಡಿಯಲ್ಲಿ ಸಂಘರ್ಷ ನಡೆದ ನಂತರ ಚೀನಾದ ಜೊತೆಗಿನ ವ್ಯವಹಾರಗಳು ಎಂದಿನಂತೆ ಇರಲು ಸಾಧ್ಯವಿಲ್ಲ. ನಂಬಿಕೆಯ ಕೊರತೆಯು ಗಣನೀಯವಾಗಿ ಹೆಚ್ಚಾಗಿದೆ’ ಎಂದು ಕೇಂದ್ರ ಸರ್ಕಾರದ ಅಧಿಕಾರಿಯೊಬ್ಬರು ಹೇಳಿದರು. ಎಲ್‌ಐಸಿಯಂತಹ ಕಂಪನಿಗಳಲ್ಲಿ ಚೀನಾದವರು ಹೂಡಿಕೆ ಮಾಡುವುದು ಅಪಾಯ ತಂದೊಡ್ಡಬಹುದು ಎಂದೂ ಅವರು ವಿವರಿಸಿದರು.

ಚೀನಾದ ಹೂಡಿಕೆದಾರರು ಎಲ್‌ಐಸಿ ಷೇರುಗಳನ್ನು ಖರೀದಿಸದಂತೆ ಮಾಡುವುದು ಹೇಗೆ ಎಂಬ ಚರ್ಚೆಗಳು ಮುಂದುವರಿದಿವೆ, ಅಂತಿಮ ತೀರ್ಮಾನ ಆಗಿಲ್ಲ ಎಂದು ಮೂಲಗಳು ವಿವರಿಸಿವೆ. ಈ ವಿಚಾರವಾಗಿ ಕೇಂದ್ರ ಹಣಕಾಸು ಸಚಿವಾಲಯ ಹಾಗೂ ಎಲ್‌ಐಸಿ ಪ್ರತಿಕ್ರಿಯೆ ನೀಡಿಲ್ಲ. ಚೀನಾದ ವಿದೇಶಾಂಗ ಸಚಿವಾಲಯ ಹಾಗೂ ವಾಣಿಜ್ಯ ಸಚಿವಾಲಯದಿಂದ ಕೂಡ ಪ್ರತಿಕ್ರಿಯೆ ಲಭ್ಯವಾಗಿಲ್ಲ.

ಎಲ್‌ಐಸಿಯಲ್ಲಿ ತಾನು ಹೊಂದಿರುವ ಷೇರುಗಳ ಪೈಕಿ ಶೇಕಡ 5 ಅಥವಾ ಶೇ 10ರಷ್ಟನ್ನು ಮಾರಾಟ ಮಾಡಿ, ₹ 90 ಸಾವಿರ ಕೋಟಿ ಸಂಗ್ರಹಿಸುವ ಗುರಿಯನ್ನು ಕೇಂದ್ರ ಹೊಂದಿದೆ. ಮಾರ್ಚ್‌ಗೂ ಮೊದಲೇ ಎಲ್‌ಐಸಿ ಐಪಿಒ ನಡೆಯುವ ಸಾಧ್ಯತೆ ಇದೆ.

ಈಗಿರುವ ನಿಯಮಗಳ ಅನ್ವಯ ಎಲ್‌ಐಸಿಯಲ್ಲಿ ವಿದೇಶಿ ಹೂಡಿಕೆದಾರರಿಗೆ ಹಣ ಹೂಡಿಕೆ ಮಾಡಲು ಅವಕಾಶ ಇಲ್ಲ. ಆದರೆ, ನಿಯಮಗಳಲ್ಲಿ ಬದಲಾವಣೆ ತಂದು ಎಲ್‌ಐಸಿಯು ಮಾರಾಟ ಮಾಡುವ ಷೇರುಗಳ ಪೈಕಿ ಶೇ 20ರಷ್ಟನ್ನು ಖರೀದಿಸಲು ವಿದೇಶಿ ಸಾಂಸ್ಥಿಕ ಹೂಡಿಕೆದಾರರಿಗೆ ಅವಕಾಶ ಕಲ್ಪಿಸುವ ಉದ್ದೇಶ ಕೇಂದ್ರಕ್ಕೆ ಇದೆ.

ವಿದೇಶಿ ನೇರ ಬಂಡವಾಳ ಹೂಡಿಕೆಗೆ ಸಂಬಂಧಿಸಿದ ನಿಯಮಗಳಲ್ಲಿ ತಿದ್ದುಪಡಿ ತರುವ ಮೂಲಕ ಚೀನಾದ ಹೂಡಿಕೆದಾರರು ಎಲ್‌ಐಸಿ ಷೇರು ಖರೀದಿಸದಂತೆ ಮಾಡುವ ಅವಕಾಶ ಇದೆ ಎಂದು ಅಧಿಕಾರಿಯೊಬ್ಬರು ಹೇಳಿದರು. ಚೀನಾದಿಂದ ಹೂಡಿಕೆಯು ನೇರವಾಗಿ ಬಾರದೆ ಇರಬಹುದು, ಅದು ಪರೋಕ್ಷವಾಗಿಯೂ ಬರಬಹುದು ಎಂಬ ಅರಿವು ಸರ್ಕಾರಕ್ಕೆ ಇದೆ ಎಂದು ಅವರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.