ADVERTISEMENT

ರಿಯಲ್‌ ಎಸ್ಟೇಟ್‌ಗೆ ಉತ್ತೇಜನಾ ಕೊಡುಗೆ ಸಾಲದು: ಕ್ರೆಡಾಯ್‌

ಪಿಟಿಐ
Published 15 ಸೆಪ್ಟೆಂಬರ್ 2019, 20:00 IST
Last Updated 15 ಸೆಪ್ಟೆಂಬರ್ 2019, 20:00 IST
   

ನವದೆಹಲಿ: ರಿಯಲ್‌ ಎಸ್ಟೇಟ್‌ ವಲಯಕ್ಕೆ ಕೇಂದ್ರ ಸರ್ಕಾರ ಘೋಷಿಸಿರುವ ಕೊಡುಗೆ ನಿರಾಶೆ ಮೂಡಿಸಿದೆ ಎಂದು ಭಾರತೀಯ ರಿಯಲ್‌ ಎಸ್ಟೇಟ್ ನಿರ್ಮಾಣಗಾರರ ರಾಷ್ಟ್ರೀಯ ಒಕ್ಕೂಟವು (ಕ್ರೆಡಾಯ್‌) ಪ್ರತಿಕ್ರಿಯಿಸಿದೆ.

‘ಅಗ್ಗದ ಬಡ್ಡಿ ದರ ಮತ್ತು ತೆರಿಗೆ ರಿಯಾಯ್ತಿಯ ಕೊಡುಗೆ ನೀಡಬೇಕೆಂಬ ಗೃಹ ಖರೀದಿದಾರರು ಮತ್ತು ಕಟ್ಟಡ ನಿರ್ಮಾಣಗಾರರ ಬೇಡಿಕೆಗೆ ಸರ್ಕಾರ ಸ್ಪಂದಿಸಿಲ್ಲ. ಸ್ಥಗಿತಗೊಂಡಿರುವ ಗೃಹ ನಿರ್ಮಾಣ ಯೋಜನೆಗಳನ್ನು ಪೂರ್ಣಗೊಳಿಸಲು ನಿಧಿ ಸ್ಥಾಪಿಸಿರುವುದು ಸೀಮಿತ ಪರಿಣಾಮ ಬೀರಲಿದೆ. ದಿವಾಳಿ ಸಂಹಿತೆ ಪ್ರಕ್ರಿಯೆ ಎದುರಿಸುತ್ತಿರುವ ಮತ್ತು ವಸೂಲಾಗದ ಸಾಲ (ಎನ್‌ಪಿಎ) ಎಂದು ಪರಿಗಣಿಸಿರುವ ಯೋಜನೆಗಳನ್ನು ಈ ನಿಧಿಯ ನೆರವಿನಿಂದ ಹೊರಗೆ ಇರಿಸಿರುವುದರಿಂದ ಹೆಚ್ಚಿನ ಪ್ರಯೋಜನ ಆಗುವುದಿಲ್ಲ’ ಎಂದು ‘ಕ್ರೆಡಾಯ್‌’ ರಾಷ್ಟ್ರೀಯ ಅಧ್ಯಕ್ಷ ಜಾಕ್ಸನ್‌ ಶಾ ಹೇಳಿದ್ದಾರೆ.

ಕಳೆದ ತಿಂಗಳು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಅವರನ್ನು ಭೇಟಿಯಾಗಿ, ನಿರ್ಮಾಣ ವಲಯದಲ್ಲಿ ಹಣದ ಲಭ್ಯತೆ ಪರಿಸ್ಥಿತಿ ಸುಧಾರಿಸಿ, ಬೇಡಿಕೆ ಹೆಚ್ಚಿಸುವುದು ಸೇರಿದಂತೆ ಹಲವಾರು ಬೇಡಿಕೆಗಳ ಈಡೇರಿಕೆಗೆ ಮನವಿ ಮಾಡಿಕೊಳ್ಳಲಾಗಿತ್ತು. ನಮ್ಮ ಈ ಎಲ್ಲ ಬೇಡಿಕೆಗಳು ಈಡೇರದಿರುವುದು ದುರದೃಷ್ಟಕರ’ ಎಂದು ಪ್ರತಿಕ್ರಿಯಿಸಿದ್ದಾರೆ.

ADVERTISEMENT

ತಗ್ಗಿರುವ ಬೇಡಿಕೆ ಮತ್ತು ಮಾರಾಟದಲ್ಲಿ ಇಳಿಕೆಯಾಗುತ್ತಿರುವ ಸಮಸ್ಯೆಗಳಿಗೆ ಸರ್ಕಾರ ಸರಿಯಾದ ಪರಿಹಾರ ಕಂಡುಕೊಂಡಿಲ್ಲ.ಪರಿಸ್ಥಿತಿಯ ಗಂಭೀರತೆಯನ್ನು ಸರ್ಕಾರ ಅರ್ಥಮಾಡಿಕೊಂಡಂತೆ ಕಾಣುತ್ತಿಲ್ಲ. ಇತ್ತೀಚಿನ ಘೋಷಣೆಗಳು ಕೇವಲ ಮೇಲ್ಮಟ್ಟದ್ದಾಗಿವೆ. ಜಿಡಿಪಿಗೆ ಹೆಚ್ಚಿನ ಕೊಡುಗೆ ನೀಡುತ್ತಿರುವ ವಲಯಗಳಲ್ಲಿ ರಿಯಲ್‌ ಎಸ್ಟೇಟ್‌ ಎರಡನೇ ಸ್ಥಾನದಲ್ಲಿದೆ. ಲಕ್ಷಗಟ್ಟಲೆ ಉದ್ಯೋಗ ಸೃಷ್ಟಿಗೂ ಕಾರಣವಾಗಿದೆ. ಹೀಗಿರುವಾಗ ಇನ್ನೂ ಹೆಚ್ಚಿನ ಬೆಂಬಲದ ಅಗತ್ಯ ಇದೆ ಎಂದು ರಿಯಲ್‌ ಎಸ್ಟೇಟ್‌ ವಹಿವಾಟುದಾರರು ಅಭಿಪ್ರಾಯಪಟ್ಟಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.