ADVERTISEMENT

ಪ್ರಶ್ನೋತ್ತರ: ಹಣಕಾಸಿಗೆ ಸಂಬಂಧಿಸಿದ ಪ್ರಶ್ನೆಗಳಿಗೆ ಪರಿಹಾರ ಇಲ್ಲಿದೆ

ಯು.ಪಿ.ಪುರಾಣಿಕ್
Published 9 ಮಾರ್ಚ್ 2021, 19:31 IST
Last Updated 9 ಮಾರ್ಚ್ 2021, 19:31 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ರಾಮಚಂದ್ರಪ್ಪ, ಮೈಸೂರು

* ಪ್ರಶ್ನೆ: ನಾನು ಕೆನರಾ ಬ್ಯಾಂಕ್‌ನಲ್ಲಿ ₹ 30 ಲಕ್ಷ ಠೇವಣಿ ಇರಿಸಿದ್ದೇನೆ. ಪತ್ರಿಕೆಗಳಲ್ಲಿ, ₹ 5 ಲಕ್ಷಕ್ಕಿಂತ ಹೆಚ್ಚಿನ ಹಣ ಬ್ಯಾಂಕ್‌ನಲ್ಲಿ ಠೇವಣಿ ಇರಿಸಿದರೆ ಭದ್ರತೆ ಇರುವುದು ₹ 5 ಲಕ್ಷಕ್ಕೆ ಮಾತ್ರ ಎಂಬ ಸುದ್ದಿ ಬಂದಿದೆ. ನಾನು ₹ 5 ಲಕ್ಷ ಮಾತ್ರ ಕೆನರಾ ಬ್ಯಾಂಕ್‌ನಲ್ಲಿ ಇರಿಸಿ, ಉಳಿದ ₹ 25 ಲಕ್ಷವನ್ನು, ಐದು ಭಾಗ ಮಾಡಿ, ಐದು ಬ್ಯಾಂಕ್‌ಗಳಲ್ಲಿ ಠೇವಣಿ ಮಾಡಬೇಕೆಂದಿದ್ದೇನೆ. ಅಂಚೆ ಕಚೇರಿಯಲ್ಲಿಯೂ ಇದೇ ಕಾನೂನು ಇದೆಯೇ? ನನ್ನ ಗೊಂದಲ ಪರಿಹರಿಸಿ.

ಉತ್ತರ: ಇದೇ ಗೊಂದಲ ಹಲವರನ್ನು ಕಾಡುತ್ತಿದೆ. ಬ್ಯಾಂಕ್‌ನಲ್ಲಿ ₹ 5 ಲಕ್ಷಕ್ಕೂ ಹೆಚ್ಚಿನ ಮೊತ್ತಕ್ಕೆ ಭದ್ರತೆ ಇಲ್ಲ ಎನ್ನುವ ಮಾತು ಸತ್ಯಕ್ಕೆ ದೂರವಾದುದು. ಭಾರತೀಯ ರಿಸರ್ವ್ ಬ್ಯಾಂಕ್‌, ಡೆಪಾಸಿಟ್‌ ಗ್ಯಾರಂಟಿ ಇನ್ಶುರೆನ್ಸ್‌ ಕಾರ್ಪೊರೇಷನ್‌ ಮುಖಾಂತರ, ಬ್ಯಾಂಕ್‌ಗಳು ದಿವಾಳಿಯಾದ ಸಂದರ್ಭದಲ್ಲಿ ₹ 5 ಲಕ್ಷ ಅಥವಾ ಅದಕ್ಕಿಂತ ಹೆಚ್ಚಿನ ಮೊತ್ತದ ಠೇವಣಿ ಇರಿಸಿದವರಿಗೆ ಗರಿಷ್ಠ ₹ 5 ಲಕ್ಷ ಹಣಕ್ಕೆ ಖಾತರಿ ನೀಡುತ್ತದೆ. ಠೇವಣಿದಾರರು ಮುಖ್ಯವಾಗಿ ಗಮನಿಸಬೇಕಾದ ವಿಚಾರವೆಂದರೆ ಭದ್ರವಾದ ಹಾಗೂ ರಾಷ್ಟ್ರೀಕೃತ ಬ್ಯಾಂಕ್‌ಗಳು ದಿವಾಳಿ ಆಗುವ ಸಂದರ್ಭ ಬಹುತೇಕ ಇರುವುದಿಲ್ಲ.

ADVERTISEMENT

ನೀವು ಠೇವಣಿ ಇಟ್ಟಿರುವ ಕೆನರಾ ಬ್ಯಾಂಕ್‌ ರಾಷ್ಟ್ರೀಕೃತ ಬ್ಯಾಂಕ್‌ ಹಾಗೂ ತುಂಬಾ ಭದ್ರತೆ ಇರುವ ಬ್ಯಾಂಕ್‌. ₹ 5 ಲಕ್ಷದ ಡೆಪಾಸಿಟ್‌ ಇನ್ಶುರೆನ್ಸ್‌ ಮಿತಿಯನ್ನು ಪರಿಗಣಿಸಿ ಕೆನರಾ ಬ್ಯಾಂಕ್‌ನಲ್ಲಿ ಇರಿಸಿದ ₹ 30 ಲಕ್ಷ ಠೇವಣಿ ವಿಂಗಡಿಸಿ ಇನ್ನೂ 5–6 ಬ್ಯಾಂಕ್‌ಗಳಿಗೆ ಹೋಗುವ ಅವಶ್ಯವಿಲ್ಲ. ಅಂಚೆ ಕಚೇರಿ ಠೇವಣಿಗಳಿಗೆ ಶೇ 100ರಷ್ಟು ಕೇಂದ್ರ ಸರ್ಕಾರದ ಖಾತರಿ ಇದೆ. ಇಲ್ಲಿ ಕೂಡಾ ಬ್ಯಾಂಕ್‌ಗಳಲ್ಲಿ ದೊರೆಯುವ ಎಲ್ಲಾ ವಿಧದ ಠೇವಣಿಗಳಿವೆ. ಬಡ್ಡಿದರದಲ್ಲಿಯೂ ಬಹಳ ವ್ಯತ್ಯಾಸವಿಲ್ಲ. ಅವಧಿ ಠೇವಣಿಗೆ 1ರಿಂದ 3 ವರ್ಷಗಳಿಗೆ ಶೇ 5.5 ಹಾಗೂ 5 ವರ್ಷದ ಠೇವಣಿಗೆ ಶೇ 6.7 ಹಾಲಿ ಇರುವ ಬಡ್ಡಿದರ. ಬ್ಯಾಂಕ್‌ ಠೇವಣಿಯ ಮೇಲೆ ಅದೇ ಬ್ಯಾಂಕ್‌ನಲ್ಲಿ ತಕ್ಷಣ ಸಾಲ ಪಡೆಯಬಹುದು ಹಾಗೂ ಅವಧಿಗೆ ಮುನ್ನ ಅಸಲಿನಲ್ಲಿ ಏನೂ ಕಡಿತ ಇಲ್ಲದೆ ಹಣ ಕೂಡಾ ವಾಪಾಸ್ ಪಡೆಯಬಹುದು. ಈ ಸೌಲಭ್ಯ ಅಂಚೆ ಕಚೇರಿ ಠೇವಣಿಗಳಲ್ಲಿ ಲಭ್ಯವಿಲ್ಲ. ಒಟ್ಟಿನಲ್ಲಿ ಠೇವಣಿದಾರರು ಭದ್ರತೆ ಸಲುವಾಗಿ ಹಲವಾರು ಬ್ಯಾಂಕ್‌ಗಳನ್ನು ಸುತ್ತಾಡುವ ಅಗತ್ಯ ಖಂಡಿತವಾಗಿಯೂ ಇಲ್ಲ.

ಸಂತೋಷ್, ಕೆ.ಆರ್‌.ಪುರ, ಬೆಂಗಳೂರು

* ಪ್ರಶ್ನೆ: ನಾನು ನಿಮ್ಮ ಸಲಹೆಯಂತೆ 10 ವರ್ಷಗಳ ಆರ್.ಡಿ. ಮಾಡಿ ನಿವೇಶನ ಕೊಂಡಿದ್ದೇನೆ. ನನಗೊಂದು ಮಾಹಿತಿ ಬೇಕಾಗಿದೆ. ನನ್ನ ತಾಯಿಯ ವಯಸ್ಸು 65 ವರ್ಷ. ಅವಳ ಬಳಿ ₹ 6 ಲಕ್ಷ ಉಳಿತಾಯ ಖಾತೆಯಲ್ಲಿ ಇದೆ. ಈ ಹಣ ನನ್ನ ತಂಗಿಯ ಮದುವೆಗೆ ಕೊಡಬೇಕೆಂದಿದ್ದಾಳೆ. ತಂಗಿಯ ವಯಸ್ಸು 24 ವರ್ಷ. ತಂಗಿಗೆ ವರ ನೋಡುತ್ತಿದ್ದು, ಒಂದೆರಡು ವರ್ಷಗಳಲ್ಲಿ ಮದುವೆ ಮಾಡಬೇಕಾಗಿದೆ. ನನ್ನ ತಾಯಿ ಹಿರಿಯ ನಾಗರಿಕಳಾಗಿದ್ದರಿಂದ ₹ 6 ಲಕ್ಷವನ್ನು ಅಂಚೆ ಕಚೇರಿ–ಎಲ್‌ಐಸಿ ವಯೋವಂದನಾ ಯೋಜನೆಯಲ್ಲಿ ಇರಿಸಲು ನಿಮ್ಮ ಅಭಿಪ್ರಾಯ ತಿಳಿಸಿ.

ಉತ್ತರ: ಅಂಚೆ ಕಚೇರಿ ಹಾಗೂ ವಯೋವಂದನಾ ಯೋಜನೆ ಇವೆರಡರಲ್ಲಿಯೂ ಹಿರಿಯ ನಾಗರಿಕರಿಗೆ ವಾರ್ಷಿಕ ಶೇ 7.4ರಷ್ಟು ಬಡ್ಡಿ ಬರುತ್ತದೆ. ಆದರೆ ಹಿರಿಯ ನಾಗರಿಕರ ಅಂಚೆ ಕಚೇರಿ ಠೇವಣಿಯ ಅವಧಿ 5 ವರ್ಷ ಹಾಗೂ ವಯೋವಂದನಾ ಯೋಜನೆಯ ಅವಧಿ 10 ವರ್ಷ. ನಿಮ್ಮ ತಂಗಿಗೆ ಒಂದೆರಡು ವರ್ಷಗಳಲ್ಲಿ ಮದುವೆ ಮಾಡುವ ಸಂಭವ ಇರುವುದರಿಂದ ಈ ಯೋಜನೆಗಳಲ್ಲಿ ಹಣ ತೊಡಗಿಸಿದರೆ ಮದುವೆಯ ಸಮಯದಲ್ಲಿ ಠೇವಣಿ ಹಣ ಪಡೆಯಲು ಸಾಧ್ಯವಿಲ್ಲ. ನಿಮ್ಮ ತಾಯಿ ಉಳಿತಾಯ ಖಾತೆಯಲ್ಲಿರುವ ಹಣವನ್ನು ಅದೇ ಬ್ಯಾಂಕ್‌ನಲ್ಲಿ ಒಮ್ಮೆಲೇ ಬಡ್ಡಿ ಬರುವ ಠೇವಣಿಯಲ್ಲಿ ಒಂದು ವರ್ಷದ ಅವಧಿಗೆ ಇರಿಸಲಿ. ಒಂದು ವರ್ಷದಲ್ಲಿ ಮದುವೆ ನಿಶ್ಚಯವಾಗದಿರುವಲ್ಲಿ ಮುಂದೆ ಇನ್ನೊಂದು ವರ್ಷಕ್ಕೆ ಅದೇ ಠೇವಣಿ ನವೀಕರಿಸಲಿ. ಬ್ಯಾಂಕ್‌ಗಳಲ್ಲಿ ಅವಧಿ ಠೇವಣಿ ಎಷ್ಟು ವರ್ಷಗಳ ಅವಧಿಗೆ ಇರಿಸಿದರೂ ಅವಧಿಗೆ ಮುನ್ನ ಪಡೆಯುವ ಹಕ್ಕು ಠೇವಣಿದಾರರಿಗೆ ಇರುತ್ತದೆ. ಈ ಸವಲತ್ತು ಬೇರೆ ಕಡೆ ಇರುವುದಿಲ್ಲ.

ಮೀನಾಕ್ಷಿ, ಚಿತ್ರದುರ್ಗ

* ಪ್ರಶ್ನೆ: 2005ರಲ್ಲಿ ಯುಟಿಐ, ರಿಲಯನ್ಸ್‌ ಮ್ಯೂಚವಲ್ ಫಂಡ್‌ಗಳಲ್ಲಿ ನಾನು ಹಣ ತೊಡಗಿಸಿದ್ದೆ. ಬೇರೆ ಬೇರೆ ತಾಪತ್ರಗಳಿಂದ ಅವುಗಳನ್ನು ಮರೆತುಬಿಟ್ಟೆ. ನಾನು ಹಣ ಪಡೆಯದಿರುವುದರಿಂದ ಈಗ ವಾಪಸ್ ಪಡೆಯಲು ಸಾಧ್ಯವೇ?

ಉತ್ತರ: ನೀವು ಯುಟಿಐ ಹಾಗೂ ರಿಲಯನ್ಸ್‌ ಮ್ಯೂಚುವಲ್ ಫಂಡ್‌ಗಳಲ್ಲಿ ಹಣ ಹೂಡಿಕೆ ಮಾಡಿದ್ದಕ್ಕೆ ಅವರು ನಿಮಗೆ ಸ್ಟೇಟ್‌ಮೆಂಟ್‌ ಕಳಿಸುತ್ತಾರೆ. ಅದರಲ್ಲಿ ನಿಮ್ಮ ಹೆಸರು, ವಿತರಿಸಿದ ಯುನಿಟ್‌ಗಳ ವಿವರ, ಖಾತೆ ಸಂಖ್ಯೆ ಎಲ್ಲವೂ ನಮೂದಾಗಿರುತ್ತದೆ. ಇಂತಹ ಯಾವುದಾದರೂ ಪುರಾವೆ ಇದ್ದಲ್ಲಿ ಹಣ ಹೂಡಿದ ಕಂಪನಿಯಲ್ಲಿ ವಿಚಾರಿಸಬಹುದು. ಯಾವುದೇ ಪುರಾವೆಗಳಿಲ್ಲದೇ ಇದ್ದಲ್ಲಿ 15 ವರ್ಷಗಳ ಹಿಂದಿನ ವ್ಯವಹಾರ ಕಂಪನಿಯವರಿಗೆ ಹುಡುಕಲು ಸಾಧ್ಯವಿಲ್ಲ. ಮ್ಯೂಚುವಲ್ ಫಂಡ್‌, ಜೀವ ವಿಮೆ, ಬ್ಯಾಂಕ್‌ ಠೇವಣಿ ಹಾಗೂ ಸ್ಥಿರ ಆಸ್ತಿ ಈ ಎಲ್ಲಾ ಹೂಡಿಕೆಗಳಲ್ಲಿ ದೊರೆಯುವ ಮೂಲ ಪ್ರತಿಗಳನ್ನು ಪಡೆದ ನಂತರ ಜೆರಾಕ್ಷ್ ಮಾಡಿಸಿ ಪ್ರತ್ಯೇಕವಾಗಿ ಇಟ್ಟುಕೊಂಡರೆ ಮೂಲ ಪ್ರತಿ ಸಿಗದೇ ಇದ್ದಾಗ, ಕಳೆದಾಗ, ಹೂಡಿದ ಹಣ ಪಡೆಯಲು ಅನುಕೂಲವಾಗುತ್ತದೆ. ಪುರಾವೆಗಳಿಲ್ಲದೆ ಯಾವ ಕಚೇರಿಯಲ್ಲಿಯೂ ವಿವರಣೆ ಸಿಗುವುದಿಲ್ಲ.

ಯು.ಪಿ.ಪುರಾಣಿಕ್

ಹಣಕಾಸು, ತೆರಿಗೆ ಸಮಸ್ಯೆಗೆ ಪರಿಹಾರ
ಹಣಕಾಸಿಗೆ ಸಂಬಂಧಿಸಿದ ಪ್ರಶ್ನೆಗಳನ್ನು ಪತ್ರದಲ್ಲಿ (ದೂರವಾಣಿ ಸಂಖ್ಯೆ ಸಹಿತ) ಬರೆದು ಕಳುಹಿಸಿ. ವಿಳಾಸ: ಪ್ರಶ್ನೋತ್ತರ, ವಾಣಿಜ್ಯ ವಿಭಾಗ, ಪ್ರಜಾವಾಣಿ, ನಂ.75, ಮಹಾತ್ಮ ಗಾಂಧಿ ರಸ್ತೆ, ಬೆಂಗಳೂರು–56001.ಇ–ಮೇಲ್‌: businessdesk@prajavani.co.in

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.