ADVERTISEMENT

ಪ್ರಶ್ನೋತ್ತರ: ₹10 ಸಾವಿರ ತಿಂಗಳು ಉಳಿಸಲು ಉತ್ತಮ ಯೋಜನೆ ತಿಳಿಸಿ

ಯು.ಪಿ.ಪುರಾಣಿಕ್
Published 24 ಜೂನ್ 2020, 4:40 IST
Last Updated 24 ಜೂನ್ 2020, 4:40 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   
""

ನಾನು ಪದವಿ ಪೂರ್ವ ಕಾಲೇಜು ಉಪನ್ಯಾಸಕಿ. ನಾನು ತಡವಾಗಿ ಸೇವೆಗೆ ಸೇರಿದ್ದರಿಂದ ಒಟ್ಟಾರೆ 19 ವರ್ಷ ಸೇವಾವಧಿ ಇದೆ. ಪಿಂಚಣಿ ಹಾಗೂ ಗ್ರಾಚ್ಯುಟಿ ವಿಚಾರದಲ್ಲಿ ಮಾಹಿತಿ ಬೇಕಾಗಿದೆ. ಇನ್ನು ನನಗೆ ಕೇವಲ 5 ವರ್ಷ ಸೇವಾವಧಿ ಇದ್ದು, ₹10 ಸಾವಿರ ತಿಂಗಳು ಉಳಿಸಲು ಅನುಕೂಲ ಹಾಗೂ ಉತ್ತಮ ಯೋಜನೆ ತಿಳಿಸಿ.

- ಶ್ರೀಮತಿ ಎಂ.ಎನ್‌, ವಿಜಯಪುರ

ಉತ್ತರ: ಓರ್ವ ನೌಕರ ಸಂಪೂರ್ಣ ಪಿಂಚಣಿ ಹಾಗೂ ಗ್ರಾಚ್ಯುಟಿ ಪಡೆಯಲು ಕನಿಷ್ಠ 33 ವರ್ಷ ಸೇವೆ ಸಲ್ಲಿಸಬೇಕು. ನಿಮಗೆ 19 ವರ್ಷ ಸೇವಾವಧಿ ಇರುವುದರಿಂದ ಇದೇ ಅನುಪಾತದಲ್ಲಿ ಲೆಕ್ಕಾಚಾರ ಹಾಕಬೇಕು. ಇದೇ ವೇಳೆ ನಿಮಗೆ ಅನುಪಾತದಲ್ಲಿ ಪಿಂಚಣಿ ಹಾಗೂ ಗ್ರಾಚ್ಯುಟಿ ದೊರೆಯುವುದರಲ್ಲಿ ಅನುಮಾನ ಇಲ್ಲ. ಇನ್ನು 5 ವರ್ಷಗಳಲ್ಲಿ ಸಂಬಳ ಪರಿಷ್ಕರಣೆ ಆಗುವ ನಿರೀಕ್ಷೆ ಇದ್ದು, ಪಿಂಚಣಿ ಮೊತ್ತ ಈಗ ನಿರ್ಧರಿಸಲಾಗದು. ನೀವು ಉಳಿಸಬಹುದಾದ ₹ 10 ಸಾವಿರ, 5 ವರ್ಷಗಳ ಆರ್‌.ಡಿ ಮಾಡಿ, ನಿಶ್ಚಿಂತೆಯಿಂದ ಇರಿ.

ADVERTISEMENT

***

ನಾನು ಸರ್ಕಾರಿ ಸೇವೆಯಿಂದ ನಿವೃತ್ತನಾಗಿದ್ದೇನೆ. ನನಗೆ ಎರಡು ಮನೆಗಳಿವೆ. ಒಂದರಲ್ಲಿ ವಾಸವಾಗಿದ್ದು, ಇನ್ನೊಂದು ಬಾಡಿಗೆಗೆ ಕೊಟ್ಟಿದ್ದೇನೆ. ತಿಂಗಳಿಗೆ ₹ 10 ಸಾವಿರ ಬಾಡಿಗೆ ಬರುತ್ತಿದೆ. ನಿವೃತ್ತಿಯಿಂದ ₹ 30 ಲಕ್ಷ ಬಂದಿದೆ. ವಾಸವಾಗಿರುವ ಮನೆ ಹಳೆಯದಾಗಿದ್ದು, ಅದನ್ನು ವಿಲೇವಾರಿ ಮಾಡಿ ಬೇರೆ ಕಡೆ ಮನೆ ಖರೀದಿಸಲು ಅಥವಾ ನಿವೇಶನ ಖರೀದಿಸಿ ಮನೆ ಕಟ್ಟಿಸಿಕೊಂಡು ವಾಸವಾಗಿರಲು ಬಯಸಿದ್ದೇನೆ. ನನಗೆ 31 ಹಾಗೂ 28 ವರ್ಷಗಳ ಇಬ್ಬರು ಮಕ್ಕಳಿದ್ದಾರೆ.

- ಹೆಸರು ಬೇಡ, ಬೆಂಗಳೂರು

ಉತ್ತರ: ನಿವೃತ್ತ ಜೀವನದಲ್ಲಿ ಸುಖ ಅನುಭವಿಸಬೇಕಾದರೆ, ವ್ಯಕ್ತಿಯು ಯಾವುದೇ ಕಟ್ಟುಪಾಡಿನಿಂದ ಹೊರಗುಳಿಯಬೇಕು. ನೀವು ವಾಸವಿರುವ ಮನೆ ಹಳೆಯದಾದಲ್ಲಿ ಅದನ್ನು ಕೆಡವಿ ಅಲ್ಲಿಯೇ ಮನೆ ಕಟ್ಟಿಕೊಳ್ಳುವುದೇ ಒಳಿತು. ಇದ್ದದ್ದನ್ನು ಮಾರಾಟ ಮಾಡಿ ಬೇರೊಂದು ಮನೆ ಖರೀದಿಸುವ ಅವಶ್ಯಕತೆ ಇಲ್ಲ. ಇಲ್ಲಿ ಏನಾದರೂ ತೊಂದರೆ ಇದ್ದರೆ ಮಾತ್ರ ಬೇರೆ ಮನೆ ಕೊಳ್ಳಿರಿ. ನಿವೃತ್ತಿಯಿಂದ ಬಂದ ಹಣ ಬ್ಯಾಂಕ್‌ ಅಥವಾ ಅಂಚೆ ಕಚೇರಿಯಲ್ಲಿ ಬಿಟ್ಟು ಬೇರೆಡೆ ಹೆಚ್ಚಿನ ವರಮಾನದ ಆಸೆಯಿಂದ ಕೂಡಿಕೆ ಮಾಡದಿರಿ. ಠೇವಣಿ ಮೇಲೆ ಮಕ್ಕಳಿಗೆ ನಾಮನಿರ್ದೇಶನ ಮಾಡಿ. ಸ್ಥಿರ ಆಸ್ತಿ ವಿಚಾರದಲ್ಲಿ ಉಯಿಲು ಪತ್ರ ಬರೆಯಲು ಮರೆಯದಿರಿ. ಹೀಗೆ ಮಾಡಿದಲ್ಲಿ ನಿಮ್ಮ ನಿವೃತ್ತ ಜೀವನ ಸುಖಮಯವಾಗುವುದರಲ್ಲಿ ಸಂಶಯವಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.