ADVERTISEMENT

‘ಉದ್ಯಮದ ಹಾದಿಯಲ್ಲಿ ತಪ್ಪುಗಳಾಗುತ್ತವೆ...’

ಎಂ.ಶ್ರೀನಿವಾಸ
Published 16 ಜೂನ್ 2021, 21:35 IST
Last Updated 16 ಜೂನ್ 2021, 21:35 IST
ಎಸ್.ಎಸ್. ಸರಿತಾ
ಎಸ್.ಎಸ್. ಸರಿತಾ   

ಸ್ಮಾರ್ಟ್‌ಫೋನ್‌ಗಳು ಬಳಕೆಗೆ ಬಂದಾಗಿನಿಂದ ನಗರ ಪ್ರದೇಶಗಳ ಹಲವರು ಆನ್‌ಲೈನ್‌ ಮೂಲಕವೇ ತರಕಾರಿ, ಹಣ್ಣು ಖರೀದಿಸುತ್ತಿದ್ದಾರೆ. ಲಾಕ್‌ಡೌನ್‌ನಿಂದಾಗಿ ಕಳೆದೊಂದು ವರ್ಷದಲ್ಲಿ ಸಣ್ಣ ನಗರಗಳಲ್ಲಿಯೂ ಜನ ಹೊರಗೆ ಹೋಗಿ ಖರೀದಿಸುವುದನ್ನು ಕಡಿಮೆ ಮಾಡಿದ್ದಿದೆ. ದಿನಸಿ ಮತ್ತು ಅಗತ್ಯ ವಸ್ತುಗಳು ಮನೆ ಬಾಗಿಲಿಗೇ ಬರುತ್ತಿವೆ. ಅಗತ್ಯ ವಸ್ತುಗಳನ್ನು ಮನೆಗೇ ತರಿಸಿಕೊಳ್ಳುವುದರ ಅನುಕೂಲಗಳನ್ನು ನೋಡುತ್ತಿರುವ ಅನೇಕರಿಗೆ ಆ ಸಾಮಗ್ರಿಗಳು ಮಾರುಕಟ್ಟೆಗೆ ಹೇಗೆ ಬರುತ್ತವೆ ಎಂಬುದು ಗೊತ್ತಿಲ್ಲ.

‘ನಾವು ಸೇವಿಸುವ ವಸ್ತುಗಳ ಬಗ್ಗೆ ನನಗೆ ಸದಾ ಕುತೂಹಲ. ಅದು ಕೇವಲ ರುಚಿಗೆ ಸಂಬಂಧಿಸಿದ್ದಲ್ಲ. ಆ ಆಹಾರ ಎಲ್ಲಿಂದ ಬರುತ್ತದೆ, ಅದನ್ನು ಹೇಗೆ ಬೆಳೆಯಲಾಗುತ್ತದೆ, ಹೇಗೆ ಸಂಸ್ಕರಿಸಲಾಗುತ್ತದೆ ಇತ್ಯಾದಿ... ಆ ಕುರಿತು ನಾನೇ ಸ್ವಲ್ಪ ಸಂಶೋಧನೆ ನಡೆಸಿದೆ. ಅದನ್ನು ಜನರೊಂದಿಗೆ ಹಂಚಿಕೊಳ್ಳಲು ಬಯಸಿದೆ. ಆದರೆ ಗೊತ್ತಿದ್ದನ್ನು ಹಂಚಿಕೊಳ್ಳುವುದು ಮಾತ್ರ ಮುಖ್ಯವಲ್ಲ ಎಂದು 2013ರಲ್ಲಿ ಜೀವನ್‌ ಆರ್ಗ್ಯಾನಿಕ್ಸ್‌ ಕಂಪನಿ ಆರಂಭಿಸಿದೆ. ಇಲ್ಲಿ ಗ್ರಾಹಕರಿಗೆ ಆರೋಗ್ಯಕರ ಆಹಾರವನ್ನು ಖರೀದಿಸುವ ಅವಕಾಶ ನೀಡಲಾಗುತ್ತಿದೆ’ ಎಂದು ಹೇಳುತ್ತಾರೆ ಕಂಪನಿಯ ಸ್ಥಾಪಕಿ ಎಸ್.ಎಸ್. ಸರಿತಾ.

‘ಗುಣಮಟ್ಟದ ಆಹಾರ ವಸ್ತು ಪೂರೈಸುವುದು, ಜನರಿಗೆ ಉತ್ತಮ ಆಹಾರ ಸೇವಿಸಲು ನೆರವಾಗುವುದೇ ನನಗೆ ಪ್ರೇರಣೆ’ ಎನ್ನುತ್ತಾರೆ. ಭಾರತದ ಸಾವಯವ ಆಹಾರ ಕ್ಷೇತ್ರದಲ್ಲಿ ಅನೇಕ ಕಂಪನಿಗಳಿವೆ. ಆದರೆ ವಿಭಿನ್ನವಾಗಿ ನಿಂತಿದ್ದೇ ಸ್ಪರ್ಧಾತ್ಮಕ ಕ್ಷೇತ್ರದಲ್ಲಿ ಸರಿತಾ ಅವರು ಅಸ್ತಿತ್ವ ಉಳಿಸಿಕೊಳ್ಳಲು ನೆರವಾಯಿತು. ಅಷ್ಟೇ ಅಲ್ಲ, ಲಾಭವನ್ನೂ ತಂದುಕೊಟ್ಟಿತು. ‘ನಮ್ಮದು ಆಹಾರ ವಸ್ತುಗಳನ್ನು ಮಾರುವ ಸಾವಯವ ಆಹಾರ ಮಳಿಗೆಯಷ್ಟೇ ಅಲ್ಲ. ಆಹಾರ ವಸ್ತುಗಳ ಗುಣಮಟ್ಟವನ್ನು ಖಾತ್ರಿಪಡಿಸಲು ನಾವು ಭೇಟಿ ಕೊಡುವ ಸ್ಥಳಗಳಿಂದಲೇ ತರಕಾರಿ ಮತ್ತು ಇತರ ಆಹಾರ ಉತ್ಪನ್ನಗಳನ್ನು ತರುತ್ತೇವೆ. ಹಾಗಾಗಿ ನಾವು ವಿಭಿನ್ನ’ ಎಂದು ಸರಿತಾ ವಿಶ್ವಾಸದಿಂದ ಹೇಳುತ್ತಾರೆ.

ADVERTISEMENT

ಪ್ರಸ್ತುತ ಜಗತ್ತು ಎದುರಿಸುತ್ತಿರುವ ವಿಷಮ ಪರಿಸ್ಥಿತಿಯಲ್ಲಿ ಉಳಿಯಲು ಹಾಗೂ ಬೆಳೆಯಲು ಉದ್ಯಮಿಗಳು ಕೆಲವೊಂದು ಗುಣಗಳನ್ನು ಹೊಂದಿರಬೇಕಾಗುತ್ತದೆ. ಸರಿತಾ ಅವರ ಪ್ರಕಾರ, ‘ಉದ್ಯಮಿಯಲ್ಲಿ ತಾಳ್ಮೆ, ಭರವಸೆ ಮತ್ತು ಸಕಾರಾತ್ಮಕ ಆಲೋಚನೆಗಳು ಇರಬೇಕು. ಇಂತಹ ಕಠಿಣ ಪರಿಸ್ಥಿತಿಯಲ್ಲಿ ಈ ಮೂರು ಗುಣಗಳು ಉದ್ಯಮಿಯಲ್ಲಿ ಮಾತ್ರವಲ್ಲ ಎಲ್ಲರಲ್ಲಿಯೂ ಇರಬೇಕು. ನೀವೇನು ಮಾಡಿದರೂ ಅದು ಅತ್ಯುತ್ತಮ ಆಗಿರಬೇಕು. ಮಾಡುವ ಕೆಲಸದಲ್ಲಿ ಶೇಕಡ ನೂರರಷ್ಟು ಪರಿಶ್ರಮ ಇರಬೇಕು. ಆಗ ಯಶಸ್ವಿಯಾಗುತ್ತೀರಿ’.

ಕೋವಿಡ್‌–19ರ ರೂಪದಲ್ಲಿ ವಿಪತ್ತು ಎದುರಾದಾಗ ದೇಶದಲ್ಲಿರುವ ಅನೇಕ ಉದ್ಯಮಗಳು ಮುಚ್ಚಿದವು. ಆದರೆ ಕೆಲವು ಉದ್ಯಮಗಳು ಬಿರುಗಾಳಿಗೆ ಎದೆಯೊಡ್ಡಿ ಉಳಿದವು. ಅದೃಷ್ಟವಶಾತ್‌, ಸರಿತಾ ಅವರ ಉದ್ಯಮ ಸಹ ಹಾಗೆ ಉಳಿದುಕೊಂಡಿತು. ‘ಕೋವಿಡ್‌ ಸಾಂಕ್ರಾಮಿಕದಿಂದಾಗಿ ನಮ್ಮ ಉದ್ಯಮವು ಇತರ ಉದ್ಯಮಗಳು ಅನುಭವಿಸಿದಂತಹ ಏಟು ತಿನ್ನಲಿಲ್ಲ. ಆದರೆ ಪರಿಸ್ಥಿತಿಯನ್ನು ನಿಭಾಯಿಸುವ ಕಲೆ ಕಲಿಯಬೇಕಾಯಿತು. ನಾವು ದುರ್ಬಲರಾಗಿದ್ದು ಎಲ್ಲಿ ಎಂಬುದನ್ನು ವಿಶ್ಲೇಷಿಸಿದೆವು. ಕೆಲವು ಆಡಳಿತಾತ್ಮಕ ಬದಲಾವಣೆಗಳನ್ನು ತಂದುಕೊಂಡು ಗ್ರಾಹಕರನ್ನು ತಲುಪಲು, ನಮ್ಮಲ್ಲಿನ ದಾಸ್ತಾನು ಖಾಲಿಯಾಗದಂತೆ ಮುನ್ನೆಚ್ಚರಿಕೆ ವಹಿಸಿದೆವು. ಸಕಾಲದಲ್ಲಿ ಇಂಥ ಕ್ರಮಗಳನ್ನು ಕೈಗೊಂಡ ಕಾರಣ ಕೋವಿಡ್‌ ಪರಿಣಾಮ ತೀವ್ರಗೊಳ್ಳದಂತೆ ಮಾಡಿತು’ ಎಂದು ಸರಿತಾ ಅವರು ನೆಮ್ಮದಿಯಿಂದ ನಿಟ್ಟುಸಿರು ಬಿಡುತ್ತಾರೆ.

ಸರಿತಾ ಅವರು ಉದ್ಯಮಿಗಳಿಗೆ ನೀಡುವ ಮುಖ್ಯ ಸಲಹೆ ಇದು: ‘ಉದ್ಯಮ ಬೆಳೆಸುವ ಹಾದಿಯಲ್ಲಿ ತಪ್ಪುಗಳೇ ಆಗುವುದಿಲ್ಲ ಎಂದೇನಲ್ಲ. ಆದರೆ ಅದನ್ನು ಸರಿಪಡಿಸಬೇಕು. ನಾವು ಹಲವು ಸವಾಲುಗಳನ್ನು ಎದುರಿಸಿದ್ದೇವೆ. ಆದರೆ ನಮ್ಮ ನಂಬಿಕಸ್ಥ ಗ್ರಾಹಕರು ಮತ್ತು ಪಾಲುದಾರರ ಬೆಂಬಲದಿಂದಾಗಿ
ನಾವು ಅದನ್ನು ನಿಭಾಯಿಸಿದೆವು’.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.