ADVERTISEMENT

ಷೇರುಗಳ ವರ್ಗೀಕರಣ ಹೇಗಾಗುತ್ತದೆ ಗೊತ್ತೇ?

ಶರತ್ ಎಂ.ಎಸ್.
Published 26 ಜುಲೈ 2021, 19:30 IST
Last Updated 26 ಜುಲೈ 2021, 19:30 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ದಿನಸಿ ಅಂಗಡಿಗಳ ಪೈಕಿ ಸಣ್ಣ ಕಿರಾಣಿ ಅಂಗಡಿ, ಮಧ್ಯಮ ಪ್ರಮಾಣದ ಡಿಪಾರ್ಟ್‌ಮೆಂಟಲ್ ಸ್ಟೋರ್, ಎಲ್ಲ ವಸ್ತುಗಳು ಒಂದೆಡೆ ಸಿಗುವ ದೊಡ್ಡ ಸೂಪರ್ ಮಾರ್ಕೆಟ್ ಎಂಬ ಮೂರು ವರ್ಗೀಕರಣವನ್ನು ನಾವು ನೋಡಬಹುದು. ಷೇರು ಮಾರುಕಟ್ಟೆಯಲ್ಲೂ ಹೀಗೆ ಸಣ್ಣ, ಮಧ್ಯಮ, ದೊಡ್ಡ ಮಟ್ಟದ ಕಂಪನಿಗಳನ್ನು ಕಾಣಬಹುದು. ಅವುಗಳ ವರ್ಗೀಕರಣ ಹೇಗಾಗುತ್ತದೆ ಎನ್ನುವುದನ್ನು ತಿಳಿಯೋಣ.

ಷೇರು ಮಾರುಕಟ್ಟೆಯಲ್ಲಿ ಲಾರ್ಜ್, ಮಿಡ್ ಮತ್ತು ಸ್ಮಾಲ್ ಕ್ಯಾಪ್ ಷೇರುಗಳ ಬಗ್ಗೆ ಸಾಮಾನ್ಯವಾಗಿ ನೀವು ಕೇಳಿಯೇ ಇರುತ್ತೀರಿ. ಗರಿಷ್ಠ ಮಾರುಕಟ್ಟೆ ಮೌಲ್ಯ ಹೊಂದಿರುವ ಮೊದಲ ನೂರು ಅಗ್ರಮಾನ್ಯ ಕಂಪನಿಗಳು ಲಾರ್ಜ್ ಕ್ಯಾಪ್. ನಂತರದ 150 ಕಂಪನಿಗಳು ಮಿಡ್ ಕ್ಯಾಪ್. ಇನ್ನುಳಿದವು ಸ್ಮಾಲ್ ಕ್ಯಾಪ್ ಕಂಪನಿಗಳು ಎಂದು ಕರೆಸಿಕೊಳ್ಳುತ್ತವೆ. ಸರಳವಾಗಿ ಹೇಳುವುದಾದರೆ ಮಾರುಕಟ್ಟೆಯಲ್ಲಿ ದೊಡ್ಡ ಪ್ರಮಾಣದ ಕಂಪನಿ ಲಾರ್ಜ್ ಕ್ಯಾಪ್, ಮಧ್ಯಮ ಪ್ರಮಾಣದ ಕಂಪನಿ ಮಿಡ್ ಕ್ಯಾಪ್ ಮತ್ತು ಸಣ್ಣ ಪ್ರಮಾಣದ ಕಂಪನಿಯನ್ನು ಸ್ಮಾಲ್ ಕ್ಯಾಪ್ ಎನ್ನಬಹುದು.

ವರ್ಗೀಕರಣ: ಷೇರು ಮಾರುಕಟ್ಟೆಯಲ್ಲಿ ಕಂಪನಿಗಳ ಮೌಲ್ಯ ಒಂದೇ ರೀತಿ ಇರುವುದಿಲ್ಲ. ಇಂದು ಹೆಚ್ಚು ಮೌಲ್ಯ ಹೊಂದಿರುವ ಕಂಪನಿ ನಾಳೆ ಕುಸಿಯಬಹುದು, ಕಡಿಮೆ ಮೌಲ್ಯ ಹೊಂದಿರುವ ಕಂಪನಿ ಏರಿಕೆ ಕಾಣಬಹುದು. ಆದರೆ ಪ್ರತಿ ಬಾರಿ ಕಂಪನಿಯ ಮೌಲ್ಯ ಏರಿಳಿತ ಕಂಡಂತೆಲ್ಲ ಷೇರುಗಳನ್ನು ಲಾರ್ಜ್, ಮಿಡ್ ಮತ್ತು ಸ್ಮಾಲ್ ಕ್ಯಾಪ್ ಎಂದು ವರ್ಗೀಕರಿಸುವುದಿಲ್ಲ. ಪ್ರತಿ ಆರು ತಿಂಗಳಿಗೊಮ್ಮೆ ಮಾತ್ರ ಷೇರುಗಳ ವರ್ಗೀಕರಣ ಪ್ರಕ್ರಿಯೆ ನಡೆಯುತ್ತದೆ. ಭಾರತೀಯ ಷೇರುಪೇಟೆ ನಿಯಂತ್ರಣ ಮಂಡಳಿ (ಸೆಬಿ) ಮುಂಬೈ ಷೇರುಪೇಟೆ (ಬಿಎಸ್‌ಇ), ರಾಷ್ಟ್ರೀಯ ಷೇರುಪೇಟೆ (ಎನ್‌ಎಸ್‌ಇ) ಮತ್ತು ಮೆಟ್ರೊಪಾಲಿಟನ್ ಸ್ಟಾಕ್ ಎಕ್ಸ್ಚೇಂಜ್ ಆಫ್ ಇಂಡಿಯಾ (ಎಂಎಸ್‌ಇಐ) ಸಹಯೋಗದಲ್ಲಿ ಭಾರತೀಯ ಮ್ಯೂಚುವಲ್ ಫಂಡ್‌ಗಳ ಒಕ್ಕೂಟವು (ಎಎಂಎಫ್‌ಐ) ಕಂಪನಿಗಳ ರ್‍ಯಾಂಕಿಂಗ್ ಪಟ್ಟಿ ಪ್ರಕಟಿಸುತ್ತದೆ.

ADVERTISEMENT

ಕಂಪನಿಗಳ ಆರು ತಿಂಗಳ ಸರಾಸರಿ ಮೌಲ್ಯವನ್ನು ಗಣನೆಗೆ ತೆಗೆದುಕೊಂಡು ಈ ವರ್ಗೀಕರಣ ಮಾಡಲಾಗುತ್ತದೆ. ಪ್ರತಿ ವರ್ಷದ ಜೂನ್ 30 ಮತ್ತು ಡಿಸೆಂಬರ್ 31ರಂದು ರ್‍ಯಾಂಕಿಂಗ್ ಪಟ್ಟಿ ಪ್ರಕಟವಾಗುತ್ತದೆ. ಉದಾಹರಣೆಗೆ, ಪಟ್ಟಿಯಲ್ಲಿ ಕಂಪನಿಯೊಂದರ ಷೇರು ಸ್ಮಾಲ್ ಕ್ಯಾಪ್ ಎಂದು ವರ್ಗೀಕರಣಗೊಂಡರೆ ಮಾರುಕಟ್ಟೆ ಮೌಲ್ಯ ಹೆಚ್ಚಳವಾದರೂ ಮುಂದಿನ ಪರಿಶೀಲನೆ ತನಕ ಅದು ಸ್ಮಾಲ್ ಕ್ಯಾಪ್ ಆಗಿಯೇ ಉಳಿದುಕೊಳ್ಳುತ್ತದೆ.

ವರ್ಗೀಕರಣ ಮತ್ತು ಮಾರುಕಟ್ಟೆ ಪರಿಣಾಮ: ಮಿಡ್ ಕ್ಯಾಪ್ ವಲಯದಲ್ಲಿದ್ದ ಷೇರುಗಳು ಲಾರ್ಜ್ ಕ್ಯಾಪ್ ಆದಾಗ ಲಾರ್ಜ್ ಕ್ಯಾಪ್ ಮ್ಯೂಚುವಲ್ ಫಂಡ್‌ಗಳು ಆ ಷೇರುಗಳ ಖರೀದಿಗೆ ಮುಂದಾಗಬಹುದು. ಸ್ಮಾಲ್ ಕ್ಯಾಪ್ ಕಂಪನಿಗಳು ಮಿಡ್ ಕ್ಯಾಪ್ ಕಂಪನಿಗಳಾದಾಗ ಮಿಡ್ ಕ್ಯಾಪ್ ಮತ್ತು ಫ್ಲೆಕ್ಸಿ ಕ್ಯಾಪ್ ಮ್ಯೂಚುವಲ್ ಫಂಡ್‌ಗಳು ಅವುಗಳ ಖರೀದಿಗೆ ಮುಂದಾಗಬಹುದು. ನಿರ್ದಿಷ್ಟ ಕಂಪನಿಯ ಷೇರುಗಳು ಮೌಲ್ಯ ಹೆಚ್ಚಿಸಿಕೊಂಡಿವೆ ಎಂದರೆ, ಸಾಮಾನ್ಯವಾಗಿ, ಆ ಕಂಪನಿ ಉತ್ತಮ ಸಾಧನೆ ತೋರಿದೆ ಎಂದರ್ಥ. ಆದರೆ ನೆನಪಿರಲಿ ಸ್ಮಾಲ್ ಕ್ಯಾಪ್ ಷೇರು ಮಿಡ್ ಕ್ಯಾಪ್ ಆಗಿದೆ ಎಂದಾಕ್ಷಣ ಅದನ್ನು ನೀವು ಕಣ್ಣು ಮುಚ್ಚಿ ಖರೀದಿಸಬಹುದು ಎಂದಲ್ಲ. ಅಳೆದು–ತೂಗಿ, ಕಂಪನಿಯ ಬಗ್ಗೆ ಅಧ್ಯಯನ ಮಾಡಿ ಸರಿ ಅನಿಸಿದರೆ ಮಾತ್ರ ಹೂಡಿಕೆಯ ಚಿಂತನೆ ಮಾಡಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.