
ದಿವಸದಿಂ ದಿವಸಕ್ಕೆ, ನಿಮಿಷದಿಂ ನಿಮಿಷಕ್ಕೆ |
ಭವಿಷಿಯವ ಚಿಂತಿಸದೆ ಬದುಕನೂಕುತಿರು ||
ವಿವರಗಳ ಜೋಡಿಸುವ ಯಜಮಾನ ಬೇರಿಹನು |
ಸವೆಸು ನೀಂ ಜನುಮವನು – ಮಂಕುತಿಮ್ಮ || 682||
ಪದ-ಅರ್ಥ: ಬೇರಿಹನು=ಬೇರೆ+ಇಹನು, ಸವೆಸು=ಕರಗಿಸು, ಕಳೆ, ಜನುಮವನು=ಜನ್ಮವನ್ನು
ವಾಚ್ಯಾರ್ಥ: ಪ್ರತಿಕ್ಷಣ, ಪ್ರತಿದಿನ ಭವಿಷ್ಯವನ್ನು ಚಿಂತಿಸದೆ ಬದುಕನ್ನು ಸಾಗಿಸು. ಬದುಕಿನ ಎಲ್ಲ ವಿವರಗಳನ್ನು ಜೋಡಿಸುವ ಯಜಮಾನ ಬೇರೆ ಇದ್ದಾನೆ. ನೀನು ನಿನ್ನ ಜನ್ಮವನ್ನು ಚಿಂತೆ ಮಾಡದೆ ಸವೆಸು.
ವಿವರಣೆ: ಕುವೆಂಪುರವರ ಅತ್ಯಂತ ಸುಂದರವಾದ ಭಾವಗೀತೆ, “ದೋಣಿ ಸಾಗಲಿ, ಮುಂದೆ ಹೋಗಲಿ, ದೂರ ತೀರವ ಸೇರಲಿ”. ಭಾವಗೀತೆಯ ಮೊದಮೊದಲು ಅದು ದೋಣಿಯಾತ್ರೆಯ ಸುಂದರ ಚಿತ್ರಣ ಎನ್ನಿಸುತ್ತದೆ. ನಿಸರ್ಗದ ಮನಮೋಹಕ ದೃಶ್ಯದ ವರ್ಣನೆ ಮನ ತಟ್ಟುತ್ತದೆ. ಆದರೆ ಭಾವಗೀತೆಯ ಕೊನೆಯ ಎರಡು ಸಾಲುಗಳ ಪದ್ಯವನ್ನು ಥಟ್ಟನೆ ಅಧ್ಯಾತ್ಮಿಕ ಮಟ್ಟಕ್ಕೆ ಎತ್ತಿಬಿಡುತ್ತದೆ.
“ನಾವು ಲೀಲಾಮಾತ್ರಜೀವರು ನಮ್ಮ ಜೀವನ ಲೀಲೆಗೆ |
ನಿನ್ನೆ ನಿನ್ನೆಗೆ, ಇಂದು ಇಂದಿಗೆ, ಇರಲಿ ನಾಳೆಯು ನಾಳೆಗೆ ||”
ಎಂಥ ಮಾರ್ಮಿಕವಾದ ಮಾತು! ನಿನ್ನೆ ಸತ್ತು ಹೋಗಿದೆ. ಅದೆಂದೂ ಮರಳಿ ಬರದು. ನಾಳೆಯನ್ನು ಕಂಡವರಿಲ್ಲ. ಅದು ಅನಿಶ್ಚಿತ. ಅದು ಎಂದಿಗೂ ಬರುವುದಿಲ್ಲ, ಯಾಕೆಂದರೆ ಮರುದಿನದ ‘ನಾಳೆ’ ಮತ್ತೆ ಮುಂದೆಯೇ ಇದೆ. ಸತ್ತ ‘ನಿನ್ನೆ’, ಹುಟ್ಟಿದ ‘ನಾಳೆ’ಗಳಿಗೆ ನಾವು ಚಿಂತೆ ಮಾಡುತ್ತೇವೆ. ಆಗ ನಮ್ಮ ‘ಇಂದು’ ತನ್ನ ಸೊಬಗನ್ನು, ಸಂತೋಷವನ್ನು ಕಳೆದುಕೊಳ್ಳುತ್ತದೆ. ನಮಗೆ ಭವಿಷ್ಯದ ಬಗ್ಗೆ ಅಸಾಧ್ಯ ಭರವಸೆ. ನಾಳೆ ಒಳ್ಳೆಯದಾದೀತು ಎಂದು ಪ್ರಾರ್ಥಿಸುತ್ತೇವೆ. ನಾಳೆಗಾಗಿ ದುಡಿಯುತ್ತೇವೆ, ನಾಳೆಗಾಗಿ ಇಂದನ್ನು ಕಳೆದುಕೊಂಡು ಹಣ ಕೂಡಿಡುತ್ತೇವೆ. ನಮ್ಮ ನಾಳೆಗಳು ತರಬಹುದಾದ ಸಂತೋಷದ ಕಾಮನಬಿಲ್ಲನ್ನು ನಿರೀಕ್ಷಿಸುತ್ತ ಕನಸು ಕಾಣುತ್ತೇವೆ. ನಾಳೆಗಳು ಚೆಂದವಾಗಲಿ ಎಂದು ಇಂದು ಅನೈತಿಕ, ಭ್ರಷ್ಟ ಜೀವನವನ್ನು ನಡೆಸುವುದನ್ನು ಕಂಡಿದ್ದೇವೆ. ಅದಕ್ಕಾಗಿ ಕೊಲೆ, ಸುಲಿಗೆಗಳು ನಡೆದಿವೆ.
ಆದರೆ ನಾಳೆಗಳು ಚೆಂದವಾದಾವೇ? ಆ ವಿವರಗಳು ನಮ್ಮ ಬಳಿ ಇಲ್ಲ. ಅವುಗಳನ್ನು ಜೋಡಿಸುವ ಯಜಮಾನನಾದ ವಿಧಿ ಬೇರೆಯೇ ಇದ್ದಾನೆ. ಅವನಿಗೆ ಮಾತ್ರ ನಾಳೆಯ ಜಾತಕ ಗೊತ್ತು. ಆದ್ದರಿಂದ ನಾವು ತಲೆಬಿಸಿ ಮಾಡಿಕೊಂಡರೆ, ಬಿಸಿಯಾದದ್ದೇ ಬಂತು, ನಾಳೆ ಬದಲಾಗಲಾರದು. ಆದ್ದರಿಂದ, ಕಗ್ಗ ಹೇಳುತ್ತದೆ, ಸುಮ್ಮನೆ ನಿಮಿಷ ನಿಮಿಷಕ್ಕೆ, ದಿನ ದಿನಕ್ಕೆ ಭವಿಷ್ಯವನ್ನು ಚಿಂತಿಸಬೇಡ. ವರ್ತಮಾನವನ್ನು ಸಂತೋಷದಿಂದ ಅನುಭವಿಸುತ್ತ ಬದುಕನ್ನು ಸವೆಯಿಸು. ಕುವೆಂಪುರವರ ಕವನ ಹೇಳುವಂತೆ, ನಾವು ಕೇವಲ “ಲೀಲಾಮಾತ್ರಜೀವರು”. ಲೀಲೆಯನ್ನು ಮಾಡಿಸುವವನು ಯಜಮಾನ. ಎಲ್ಲ ವಿವರಗಳೂ ಅವನ ಬಳಿಯೇ ಇವೆ. ಇಂದಿನ ದಿನವನ್ನು ನಮ್ಮದೆಂದು ತಿಳಿದು, ಬಂದ ಕರ್ತವ್ಯವನ್ನು ನಿರ್ವಹಿಸುತ್ತ ಜೀವನ ಸಾಗಿಸುವುದು ನಮಗೆ ಸರಿಯಾದ ದಾರಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.