ADVERTISEMENT

ಬೆರಗಿನ ಬೆಳಕು: ಪ್ರೇಮದ ಮುಖಗಳು

ಡಾ. ಗುರುರಾಜ ಕರಜಗಿ
Published 14 ಜೂನ್ 2021, 19:31 IST
Last Updated 14 ಜೂನ್ 2021, 19:31 IST
ಗುರುರಾಜ ಕರಜಗಿ
ಗುರುರಾಜ ಕರಜಗಿ   

ಪ್ರೇಮ ಕನಲೆ ಪಿಶಾಚಿ, ತೃಪ್ತಿಯಾಂತಿರೆ ಲಕ್ಷ್ಮಿ |
ಭ್ರಾಮಿಪುದದು ಪ್ರತಿಪ್ರೇಮಯಾಚನೆಯೊಳ್ ||
ಮಾಮಕವಿದೆಂದಾವುದಕೊ ತಾನೆ ಬಲಿವೋಗಿ |
ಶಾಮನವನೊಂದುವುದು – ಮಂಕುತಿಮ್ಮ
|| 428 ||

ಪದ-ಅರ್ಥ: ಕನಲೆ= ಕೋಪಿಸಿಕೊಂಡರೆ, ಕೆರಳಿದರೆ, ತೃಪ್ತಿಯಾಂತಿರೆ= ತೃಪ್ತಿಯಾಂತು (ತೃಪ್ತಿಪಡೆದು)+ ಇರೆ, ಭ್ರಾಮಿಪುದದು= ಭ್ರಮಿಸುವುದು, ಮಾಮಕವಿದೆಂದಾವುದಕೊ= ಮಾಮಕವಿದು (ಇದು ನನ್ನದು)+ ಎಂದು+ ಆವುದಕೊ, ಬಲಿವೋಗಿ= ಬಲಿಯಾಗಿ, ಶಾಮನವನೊಂದುವುದು= ಶಾಮನವನು (ಶಾಂತಿಯನು)+ ಹೊಂದುವುದು

ವಾಚ್ಯಾರ್ಥ: ಪ್ರೇಮ ಕೆರಳಿದರೆ ಪಿಶಾಚಿಯಾಗುತ್ತದೆ, ತೃಪ್ತಿಹೊಂದಿದರೆ ಲಕ್ಷ್ಮಿಯಾಗುತ್ತದೆ. ಹೀಗೆ ಪ್ರತಿಯಾಗಿ ದೊರಕಿದ ಪ್ರೇಮದಲ್ಲಿ ಭ್ರಮಿಸುತ್ತದೆ. ತನ್ನದು ಎನ್ನುವ ವಸ್ತುವಿಗೆ ತನ್ನನ್ನೇ ಬಲಿಕೊಟ್ಟು ಶಾಂತಿಯನ್ನು ಪಡೆಯುತ್ತದೆ.

ADVERTISEMENT

ವಿವರಣೆ: ಪ್ರೇಮ ಒಂದು ಸುಂದರ ಭಾವ. ಅದು ಯಾವಾಗ ಹೇಗೆ ಬದಲಾದೀತು ಎಂಬುದನ್ನು ಹೇಳುವುದು ಕಷ್ಟ. ಅತಿಯಾದ ಪ್ರೀತಿಯೇ ಅತಿಯಾದ ದ್ವೇಷವಾಗುತ್ತದೆ. ಯಾರನ್ನು ನಾವು ಪ್ರೀತಿಸುವುದಿಲ್ಲವೋ ಅವರನ್ನು ದ್ವೇಷಿಸುವುದೂ ಕಷ್ಟ. ವಾಲಿ ತನ್ನ ತಮ್ಮ ಸುಗ್ರೀವನನ್ನು ಅತಿಯಾಗಿ ಪ್ರೀತಿಸಿದ್ದ. ಅದರಂತೆಯೇ ರಾವಣನಿಗೆ ವಿಭೀಷಣನ ಬಗ್ಗೆ ವಿಪರೀತ ಅಕ್ಕರೆ. ಒಂದು ಕಾರಣಕ್ಕೆ ಅವರು ತಿರುಗಿ ನಿಂತರು, ವೈರಿಗಳಾದರು. ಪಾಶುಪತಾಸ್ತ್ರವನ್ನು ಪಡೆದ ಮೇಲೆ ಅರ್ಜುನ. ದೇವಲೋಕಕ್ಕೆ ಹೋದ. ಅಲ್ಲಿ ಇಂದ್ರಸಭೆಯಲ್ಲಿ ಊರ್ವಶಿಯನ್ನು ಕಂಡ. ಅರ್ಜುನ ಆಕೆಯನ್ನು ಅಭಿಮಾನದಿಂದ ಕಂಡದ್ದನ್ನು ಇಂದ್ರ ಕಾಮವೆಂದು ಭಾವಿಸಿ ಊರ್ವಶಿಯನ್ನು ಅರ್ಜುನನ ಅರಮನೆಗೆ ಕಳುಹಿಸುತ್ತಾನೆ. ಮನ್ಮಥನ ವಿಜಯಧ್ವಜದಂತಿದ್ದ ಊರ್ವಶಿ ಅರ್ಜುನನನ್ನು ಮೆಚ್ಚಿಸಲು ಬಂದಾಗ ಆತ ಆಕೆಗೆ ಗೌರವನ್ನು ನೀಡಿ, ಊರ್ವಶಿಯನ್ನು ತಮ್ಮ ವಂಶೋದ್ಭವಕ್ಕೆ ತಾಯಿ ಎಂದು ಕರೆದಾಗ ಕ್ಷಣಾರ್ಧದಲ್ಲಿ ಆಕೆಯ ಪ್ರೇಮ ಕ್ರೋಧವಾಗುತ್ತದೆ. ಅದನ್ನು ಕುಮಾರವ್ಯಾಸ ವರ್ಣಿಸುವ ರೀತಿ ಅನನ್ಯವಾದದ್ದು.

‘ತುಳುಕಿತದ್ಭುತ ರೋಷ ಸುಯ್ಲಿನ ಝಳ ಹೊಡೆದು ಮೂಗುತಿಯ ಮುತ್ತಿನ ಬೆಳಕು ಕುಂದಿತು ಕುಂದಿತಮಳಚ್ಛವಿ ಮುಖಾಂಬುಜದ...’ ಪ್ರೇಮ ಕುದಿದರೆ, ಅದಕ್ಕೆ ಮನ್ನಣೆ ದೊರೆಯದಿದ್ದರೆ ಅದು ಪೈಶಾಚಿಕ ಕೋಪವಾಗುತ್ತದೆ. ಆದರೆ ಪ್ರೇಮಕ್ಕೆ ಸರಿಯಾದ ಪ್ರತಿಸ್ಪಂದನ ದೊರಕಿದರೆ ಅದು ತೃಪ್ತಿಯ ಬಂಧವಾಗುತ್ತದೆ. ರಾಧಾ-ಕೃಷ್ಣರ, ಶಿವ-ಪಾರ್ವತಿಯರ, ರಾಮ-ಸೀತೆಯರ ಪ್ರೇಮಬಂಧದಂತೆ. ಪ್ರೇಮ, ಸರಿಯಾದ ಮರುನುಡಿಗೆ ಕಾತರಿಸುತ್ತದೆ. ಒಂದು ಸಲ ಪ್ರೇಮ ಸ್ಥಿರವಾದರೆ ಅದು ಯಾವ ತ್ಯಾಗಕ್ಕೂ ಸಿದ್ಧವಾಗುತ್ತದೆ. ಆ ತ್ಯಾಗದಲ್ಲೇ ಅದಕ್ಕೆ ಶಾಂತಿ. ಮಕ್ಕಳಿಗೋಸ್ಕರ ತ್ಯಾಗ ಮಾಡಿದ ತಾಯಿ ಸಂಕಟಪಡುವುದಿಲ್ಲ, ಬದಲಾಗಿ ತುಂಬ ಸಂತೋಷಪಡುತ್ತಾಳೆ. ತನಗೆ ಬೇಕಾದವರಿಗಾಗಿ, ಪ್ರೇಮಕ್ಕೆ ಒಲಿದವರಿಗಾಗಿ, ಮಾಡಿದ ತ್ಯಾಗದ ಕಥೆಗಳು ಪುರಾಣಗಳಲ್ಲಿ, ಇತಿಹಾಸದಲ್ಲಿ ಬೇಕಾದಷ್ಟು ಕಂಡು ಬರುತ್ತವೆ. ಪ್ರೇಮದಿಂದಲೆ ಕೋಪ, ಪ್ರೇಮದಿಂದಲೆ ತೃಪ್ತಿ, ಪ್ರೇಮದಿಂದಲೆ ತ್ಯಾಗ. ಕೊನೆಗೆ ಪ್ರೇಮದಿಂದಲೆ ಶಾಂತಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.