ADVERTISEMENT

ಬಂಡವಾಳ ಮಾರುಕಟ್ಟೆ: ಕೋವಿಡ್ ಸಂಕಷ್ಟಕ್ಕೆ ಇಪಿಎಫ್ ಹಣ ಪಡೆಯಬೇಕೇ?

ಅವಿನಾಶ್ ಕೆ.ಟಿ
Published 6 ಜೂನ್ 2021, 20:48 IST
Last Updated 6 ಜೂನ್ 2021, 20:48 IST
ಇಪಿಎಫ್‌ಒ
ಇಪಿಎಫ್‌ಒ   

ಕೋವಿಡ್ ಮೊದಲನೆಯ ಅಲೆಯಿಂದಾಗಿ ಉಂಟಾದ ಆರ್ಥಿಕ ಸಂಕಷ್ಟದಿಂದ ಚೇತರಿಸಿಕೊಳ್ಳಲು ಸಹಾಯ ಆಗಲಿ ಎಂಬ ಉದ್ದೇಶದಿಂದ ಕೇಂದ್ರ ಸರ್ಕಾರವು ಕಾರ್ಮಿಕರ ಭವಿಷ್ಯ ನಿಧಿಯಿಂದ (ಇಪಿಎಫ್) ಹಣ ಹಿಂದಕ್ಕೆ ಪಡೆಯಲು ಅವಕಾಶ ಕಲ್ಪಿಸಿಕೊಟ್ಟಿತ್ತು. ಈ ವರ್ಷದ ಮೇ 31ರವರೆಗೆ ಕಾರ್ಮಿಕರ ಭವಿಷ್ಯ ನಿಧಿ ಸಂಘಟನೆಯು (ಇಪಿಎಫ್ಒ) ಸುಮಾರು 76.31 ಲಕ್ಷ ಕೋವಿಡ್ ಸಂಬಂಧಿತ ಮುಂಗಡ ಕ್ಲೇಮ್‌ಗಳನ್ನು ಇತ್ಯರ್ಥಪಡಿಸಿದೆ.

ಈವರೆಗೆ ಸುಮಾರು ₹ 18,698.15 ಕೋಟಿ ಮೊತ್ತವನ್ನು ಇಪಿಎಫ್ ಖಾತೆದಾರರಿಗೆ ನೀಡಲಾಗಿದೆ. ಎರಡನೆಯ ಅಲೆಯ ವೇಳೆ ಕೂಡ ಜನ ಹಣಕಾಸಿನ ತೊಡಕು ಎದುರಿಸುತ್ತಿರುವ ಕಾರಣ ಇಪಿಎಫ್ ಖಾತೆಯಿಂದ ಮುಂಗಡ ಹಣ ಪಡೆದುಕೊಳ್ಳುವ ಅವಕಾಶ ನೀಡಲಾಗಿದೆ. ಆದರೆ ಸಣ್ಣಪುಟ್ಟ ಕಾರಣಗಳನ್ನು ನೀಡಿ ಇಪಿಎಫ್ ಹಣ ಹಿಂಪಡೆದುಕೊಂಡರೆ ದೀರ್ಘಾವಧಿ ಲಾಭಗಳಿಂದ ನೀವು ವಂಚಿತರಾಗುತ್ತೀರಿ ಎಂಬುದು ಗಮನದಲ್ಲಿ ಇರಬೇಕು.

ಸಾಧ್ಯತೆ ಅರಿತು ಮುನ್ನಡೆಯಿರಿ: ತುರ್ತು ಅಗತ್ಯಗಳಿಗಾಗಿ ಇಪಿಎಫ್ ಹಣ ಪಡೆದುಕೊಂಡರೆ ತೆರಿಗೆಯ ಭಾರ ಇಲ್ಲ ಎನ್ನುವುದು ಸರಿ. ಆದರೆ ಈ ಹಣ ತೆಗೆದುಕೊಳ್ಳುವ ಮುನ್ನ ಅಳೆದು–ತೂಗಿ ನಿರ್ಧಾರಕ್ಕೆ ಬನ್ನಿ. ಇಪಿಎಫ್ ಖಾತೆಯಿಂದ ಹಣ ತೆಗೆದರೆ ದೀರ್ಘಾವಧಿಯಲ್ಲಿ ಚಕ್ರಬಡ್ಡಿಯ (Compounding Interest) ಲಾಭ ಕಳೆದುಕೊಳ್ಳಬೇಕಾಗುತ್ತದೆ. ಹಾಗಾಗಿ ತಾತ್ಕಾಲಿಕ ಹಣಕಾಸಿನ ಅಗತ್ಯಗಳನ್ನು ಸಾಧ್ಯವಾದಷ್ಟೂ ಬೇರೆ ಮೂಲಗಳಿಂದ ಸರಿದೂಗಿಸಬಹುದೇ ಎಂಬುದನ್ನು ಪರಿಶೀಲಿಸಿ. ವಿಮೆ ಬಾಂಡ್‌, ಎಫ್.ಡಿ. ಅಥವಾ ಮನೆಯಲ್ಲಿಟ್ಟಿರುವ ಚಿನ್ನದ ಮಲೆ ಸಾಲ ಪಡೆಯಲು ಸಾಧ್ಯವಿದೆಯೇ ಎಂಬುದನ್ನು ಪರಿಗಣಿಸಿ.

ADVERTISEMENT

ಹೀಗೆ ಮಾಡಿದಾಗ, ನಿವೃತ್ತಿ ಜೀವನಕ್ಕೆ ಅವ ಶ್ಯವಿರುವ ಇಪಿಎಫ್ ಹಣ ಉಳಿಸಿಕೊಳ್ಳುವುದರ ಜತೆಗೆ ದೀರ್ಘಾವಧಿಯ ಗಳಿಕೆ ಲಾಭವೂ ಸಿಗುತ್ತದೆ. ಒಂದೊಮ್ಮೆ ಬೇರೆ ಆಯ್ಕೆ ಇಲ್ಲ ಎಂದಾಗ ಮಾತ್ರ ಇಪಿಎಫ್ ಖಾತೆಯಿಂದ ಹಣ ಪಡೆಯಿರಿ.

ಯಾರೆಲ್ಲಾ ಇಪಿಎಫ್ ಹಣ ಪಡೆಯಬಹುದು?: ಇಪಿಎಫ್ ಖಾತೆ ಹೊಂದಿದ್ದು ಪ್ರತಿ ತಿಂಗಳು ಅದಕ್ಕೆ ಕೊಡುಗೆ ನೀಡುವ ಉದ್ಯೋಗಿಗಳು ಕೋವಿಡ್ ಕಾರಣ ನೀಡಿ ಹಣ ಪಡೆಯಬಹುದು. ಇಪಿಎಫ್‌ನಲ್ಲಿ ನೋಂದಾಯಿಸಿಕೊಂಡಿರುವ ಸುಮಾರು 4.8 ಕೋಟಿ ಮಂದಿಗೆ ಇದರ ಅನುಕೂಲ ಸಿಗಲಿದೆ. ಇಪಿಎಫ್ ವೆಬ್‌ಸೈಟ್‌ ಮೂಲಕ ಉದ್ಯೋಗಿಗಳು ನೇರವಾಗಿ ಅರ್ಜಿ ಸಲ್ಲಿಸಬಹುದು.

ಎಷ್ಟು ಹಣ ಹಿಂಪಡೆದುಕೊಳ್ಳಬಹುದು?: ನಿಮ್ಮ ಇಪಿಎಫ್ ಖಾತೆಯಲ್ಲಿರುವ ಶೇಕಡ 75 ರಷ್ಟು ಹಣ ಅಥವಾ 3 ತಿಂಗಳ ಮೂಲ ವೇತನ ಮತ್ತು ತುಟ್ಟಿ ಭತ್ಯೆಯ ಮೊತ್ತ ಅಥವಾ ನಿಮಗೆ ಅಗತ್ಯವಿರುವಷ್ಟು ಹಣ, ಈ ಮೂರರಲ್ಲಿ ಯಾವುದು ಕಡಿಮೆ ಇದೆಯೋ ಅಷ್ಟನ್ನು ಹಿಂದಕ್ಕೆ ಪಡೆಯಬಹುದು. ಉದಾಹರಣೆಗೆ ಈ ವರ್ಷದ ಮಾರ್ಚ್ 31ಕ್ಕೆ ನಿಮ್ಮ ಇಪಿಎಫ್ ಖಾತೆಯಲ್ಲಿ ₹ 10 ಲಕ್ಷ ಇದ್ದು, ನಿಮ್ಮ ಮೂಲ ವೇತನ ₹ 50,000 ಎಂದುಕೊಳ್ಳೋಣ.

ಈ ಸಂದರ್ಭದಲ್ಲಿ ನೀವು ₹ 1.5 ಲಕ್ಷ ಮಾತ್ರ ಹಿಂದಕ್ಕೆ ಪಡೆದುಕೊಳ್ಳಲು ಸಾಧ್ಯ. ಒಂದೊಮ್ಮೆ ನಿಮ್ಮ ಇಪಿಎಫ್ ಬಾಕಿ ₹ 2 ಲಕ್ಷ ಇದ್ದು ಮಾಸಿಕ ಮೂಲ ವೇತನ ₹ 51 ಸಾವಿರ ಇದ್ದರೆ ಈ ಸಂದರ್ಭದಲ್ಲೂ ನೀವು ರೂ. 1.5 ಲಕ್ಷ ಮಾತ್ರ ಪಡೆದುಕೊಳ್ಳಬಹುದು. (ಗಮನಿಸಿ: ಇಪಿಎಫ್ ಖಾತೆಯಲ್ಲಿರುವ ಒಟ್ಟು ಮೊತ್ತದಲ್ಲಿ ಶೇ 75ರಷ್ಟು ಎಂದರೆ ₹ 1.5 ಲಕ್ಷ. ನಿಮ್ಮ ಮೂರು ತಿಂಗಳ ಮೂಲ ವೇತನಕ್ಕಿಂತ ಇದು ಕಡಿಮೆ ಇರುವ ಕಾರಣ ಇಷ್ಟು ಮೊತ್ತವನ್ನು ಗಣನೆಗೆ ತೆಗೆದುಕೊಳ್ಳಲಾಗುತ್ತದೆ.)

3ನೇ ವಾರ ಜಿಗಿತ: ದಾಖಲೆ ಬರೆದ ಷೇರುಪೇಟೆ

ಭಾರತೀಯ ಷೇರುಪೇಟೆ ಸೂಚ್ಯಂಕಗಳು ಇತಿಹಾಸ ಸೃಷ್ಟಿಸಿವೆ. ಮುಂಬೈ ಷೇರುಪೇಟೆ ಸೂಚ್ಯಂಕ ಸೆನ್ಸೆಕ್ಸ್ಇ ದೇ ಮೊದಲ ಬಾರಿಗೆ 52,516 ಅಂಶಗಳಿಗೆ ತಲುಪಿದೆ, ರಾಷ್ಟ್ರೀಯ ಷೇರುಪೇಟೆ ಸೂಚ್ಯಂಕ ನಿಫ್ಟಿ 15,733 ಅಂಶ ತಲುಪಿದೆ. ಇದರಿಂದಾಗಿ ಸೆನ್ಸೆಕ್ಸ್ ಮತ್ತು ನಿಫ್ಟಿ ಸತತ ಮೂರನೇ ವಾರ ಜಿಗಿತ ದಾಖಲಿಸಿದಂತಾಗಿದೆ. ಜಾಗತಿಕ ಮಾರುಕಟ್ಟೆಗಳಲ್ಲಿ ಕಂಡುಬಂದ ಸಕಾರಾತ್ಮಕ ವಹಿವಾಟು, ಆರ್‌ಬಿಐ ಹಣಕಾಸು ನೀತಿಯಲ್ಲಿ ಯಥಾಸ್ಥಿತಿ, ವಾಹನ ಮಾರಾಟ ಅಂಕಿ-ಅಂಶದಲ್ಲಿ ಸುಧಾರಣೆ, ಕೋವಿಡ್ ಪ್ರಕರಣಗಳಲ್ಲಿ ಇಳಿಕೆ, ಹಲವು ರಾಜ್ಯಗಳಲ್ಲಿ ಲಾಕ್‌ಡೌನ್ ತೆರವುಗೊಳಿಸಲು ತಯಾರಿ ಸೇರಿ ಹಲವು ಅಂಶಗಳು ಮಾರುಕಟ್ಟೆಯ ಜಿಗಿತಕ್ಕೆ ಕಾರಣವಾಗಿವೆ.

ಜೂನ್ 4ಕ್ಕೆ ಕೊನೆಗೊಂಡ ವಾರದ ಅವಧಿಯಲ್ಲಿ ಸೆನ್ಸೆಕ್ಸ್ ಶೇ 1.31ರಷ್ಟು ಹೆಚ್ಚಳ ಕಂಡಿದೆ. 15,670 ಅಂಶಗಳಲ್ಲಿ ವಹಿವಾಟು ಪೂರ್ಣಗೊಳಿಸಿದ ನಿಫ್ಟಿ ಶೇ 1.52ರಷ್ಟು ಏರಿಕೆಯಾಗಿದೆ. ಬಿಎಸ್ಇ ಸ್ಮಾಲ್ ಕ್ಯಾಪ್ ಸೂಚ್ಯಂಕ ಶೇ 12ರಷ್ಟು, ಮಿಡ್ ಕ್ಯಾಪ್ ಶೇ 10ರಷ್ಟು ಮತ್ತು ಲಾರ್ಜ್ ಕ್ಯಾಪ್ ಶೇ 6ರಷ್ಟು ಜಿಗಿತ ಕಂಡಿವೆ.

ವಲಯವಾರು ಪ್ರಗತಿಯಲ್ಲಿ, ನಿಫ್ಟಿ ಸರ್ಕಾರಿ ಸ್ವಾಮ್ಯದ ಬ್ಯಾಂಕ್ ಶೇ 18ರಷ್ಟು, ನಿಫ್ಟಿ ಮಾಧ್ಯಮ ವಲಯ ಶೇ 16.7ರಷ್ಟು, ನಿಫ್ಟಿ ಲೋಹ ಶೇ 15ರಷ್ಟು ಹೆಚ್ಚಳವಾಗಿದೆ. ನಿಫ್ಟಿ ಐ.ಟಿ. ವಲಯ ಶೇ 0.6ರಷ್ಟು ಇಳಿಕೆಯಾಗಿದೆ. ವಿದೇಶಿ ಸಾಂಸ್ಥಿಕ ಹೂಡಿಕೆದಾರರು ₹ 5,462.20 ಕೋಟಿ ಮೌಲ್ಯದ ಷೇರುಗಳನ್ನು ಖರೀದಿಸಿದ್ದಾರೆ. ದೇಶಿಯ ಸಾಂಸ್ಥಿಕ ಹೂಡಿಕೆದಾರರು ₹ 801.95 ಕೋಟಿ ಮೌಲ್ಯದ ಷೇರುಗಳನ್ನು ಖರೀದಿಸಿದ್ದಾರೆ.

ಏರಿಕೆ-ಇಳಿಕೆ: ನಿಫ್ಟಿಯಲ್ಲಿ ಒಎನ್‌ಜಿಸಿ ಶೇ 2.41ರಷ್ಟು, ಅದಾನಿ ಪೋರ್ಟ್ಸ್ ಶೇ 7.43ರಷ್ಟು, ಬಜಾಜ್ ಫೈನಾನ್ಸ್ ಶೇ 6.82ರಷ್ಟು, ಟೈಟಾನ್ ಶೇ 6.50ರಷ್ಟು ಮತ್ತು ಟಾಟಾ ಮೋಟರ್ಸ್ ಶೇ 5.08ರಷ್ಟು ಹೆಚ್ಚಳ ದಾಖಲಿಸಿವೆ. ಮಹೀಂದ್ರ ಆ್ಯಂಡ್ ಮಹೀಂದ್ರ ಶೇ 4.88ರಷ್ಟು, ಐಟಿಸಿ ಶೇ 1.95ರಷ್ಟು, ಇನ್ಫೊಸಿಸ್ ಶೇ 1.38ರಷ್ಟು, ಇಂಡಸ್ ಇಂಡ್ ಬ್ಯಾಂಕ್ ಶೇ 0.99ರಷ್ಟು ಮತ್ತು ಟೆಕ್ ಮಹೀಂದ್ರ ಶೇ 0.69ರಷ್ಟು ಕುಸಿತ ಕಂಡಿವೆ.

ಅವಿನಾಶ್ ಕೆ.ಟಿ.

ಮುನ್ನೋಟ: ಈ ವಾರ ಎಂಆರ್‌ಎಫ್, ಸೆಂಟ್ರಲ್ ಬ್ಯಾಂಕ್, ಯೂನಿಯನ್ ಬ್ಯಾಂಕ್, ಪ್ರೆಸ್ಟೀಜ್, ಗೇಲ್, ಬಿಇಎಂಎಲ್, ಡಿಎಲ್ಎಫ್, ಸೆರಾ, ಸೆಂಚುರಿ ಫ್ಲೈ, ಎಸ್‌ಎಐಎಲ್ ಸೇರಿ ಪ್ರಮುಖ ಕಂಪನಿಗಳು ತ್ರೈಮಾಸಿಕ ಫಲಿತಾಂಶ ಪ್ರಕಟಿಸಲಿವೆ. ಅಮೆರಿಕದ ಉದ್ಯೋಗದ ಸ್ಥಿತಿಗತಿ ಕುರಿತ ದತ್ತಾಂಶ ಬಿಡುಗಡೆಯಾಗಲಿದೆ. ಲೋಹ ಮತ್ತು ರಿಯಲ್ ಎಸ್ಟೇಟ್ ವಲಯದ ಷೇರುಗಳಲ್ಲಿ ಮತ್ತೆ ಏರಿಕೆ ಕಂಡುಬರುತ್ತಿದೆ.

ಒಂದೆರಡು ವಾರಗಳಲ್ಲಿ ಲೌಕ್‌ಡೌನ್ ಕೊನೆಗೊಳ್ಳಬಹುದು, ವಹಿವಾಟು ಮತ್ತೆ ಪುಟಿದೇಳಬಹುದು ಎಂಬ ವಿಶ್ವಾಸ ಕಂಪನಿಗಳಲ್ಲಿ ಇದೆ. ಮುಂದಿನ ವರ್ಷ ಪ್ರಮುಖ ರಾಜ್ಯಗಳಲ್ಲಿ ಚುನಾವಣೆ ಎದುರಾಗುವುದರಿಂದ ಈ ವರ್ಷದ ದ್ವಿತೀಯ ಭಾಗದಲ್ಲಿ ಹೆಚ್ಚು ಖರ್ಚು ಮಾಡುವ ನಿರೀಕ್ಷೆಯಲ್ಲಿ ಮಾರುಕಟ್ಟೆ ಇದೆ. ಸದ್ಯ ಮಾರುಕಟ್ಟೆ ಏರುಗತಿಯಲ್ಲಿದ್ದರೂ ಉತ್ತಮ ಕಂಪನಿಗಳ ಷೇರುಗಳು ಮಾತ್ರ ಒಳ್ಳೆಯ ಬೆಳವಣಿಗೆ ಸಾಧಿಸುತ್ತಿರುವುದನ್ನು ಹೂಡಿಕೆದಾರರು ಗಮನಿಸಬೇಕಿದೆ.

(ಲೇಖಕ ಇಂಡಿಯನ್ ಮನಿ ಡಾಟ್ ಕಾಂನ ಹಣಕಾಸು ಸಲಹಾ ವಿಭಾಗದ ಮುಖ್ಯಸ್ಥ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.