ADVERTISEMENT

ಹಣಕಾಸು ಸಾಕ್ಷರತೆ| ಆರೋಗ್ಯ ವಿಮೆಯಲ್ಲಿ ಟಾಪ್ ಅಪ್ ಯೋಜನೆ ಅಂದರೇನು?

ಪ್ರಮೋದ್
Published 18 ಏಪ್ರಿಲ್ 2021, 19:30 IST
Last Updated 18 ಏಪ್ರಿಲ್ 2021, 19:30 IST
   

ಆರೋಗ್ಯ ವಿಮೆ ನಿಮ್ಮ ವೈದ್ಯಕೀಯ ವೆಚ್ಚಗಳಿಗೆ ನೆರವಾಗುತ್ತದೆ. ಆದರೆ ಒಂದೊಮ್ಮೆ ಆಸ್ಪತ್ರೆ ವೆಚ್ಚ ಆರೋಗ್ಯ ವಿಮೆಯ ಕವರೇಜ್ ಮೊತ್ತದ ಮಿತಿಯನ್ನು ದಾಟಿದಾಗ, ಹೆಚ್ಚುವರಿಯಾಗಿ ಪಾವತಿ ಮಾಡಬೇಕಿರುವ ಹಣವನ್ನು ನಿಮ್ಮ ಕೈಯಿಂದ ಕಟ್ಟಬೇಕಾಗುತ್ತದೆ. ಈ ಸಮಸ್ಯೆಗೆ ಪರಿಹಾರದ ರೂಪದಲ್ಲಿ ಟಾಪ್–ಅಪ್ ಯೋಜನೆಗಳು ಬಂದಿವೆ.

ಪ್ರಮೋದ್ ಬಿ.ಪಿ.

ಟಾಪ್–ಅಪ್ ಯೋಜನೆ ಅಂದರೆ ಏನು? ಅದು ಹೇಗೆ ನಿಮಗೆ ನೆರವಾಗುತ್ತದೆ? ಟಾಪ್–ಅಪ್ ಯೋಜನೆಗೂ ಸೂಪರ್ ಟಾಪ್–ಅಪ್ ಯೋಜನೆಗೂ ಇರುವ ವ್ಯತ್ಯಾಸವೇನು ಎನ್ನುವುದರ ಬಗ್ಗೆ ತಿಳಿದುಕೊಳ್ಳೋಣ.

ಟಾಪ್–ಅಪ್ ಯೋಜನೆ: ಉದಾಹರಣೆಗೆ ‘ಎ’ ಎಂಬ ವ್ಯಕ್ತಿ ₹ 5 ಲಕ್ಷ ನೀಡಿ ಆರೋಗ್ಯ ವಿಮೆ ಮಾಡಿಸಿಕೊಂಡಿದ್ದರು ಎಂದಿಟ್ಟುಕೊಳ್ಳೋಣ. ಅವರು ಅನಾರೋಗ್ಯದ ಕಾರಣದಿಂದಾಗಿ ಆಸ್ಪತ್ರೆಗೆ ದಾಖಲಾದಾಗ ₹ 5 ಲಕ್ಷದವರೆಗಿನ ಆಸ್ಪತ್ರೆ ವೆಚ್ಚಗಳಿಗೆ ಮಾತ್ರ ವಿಮಾ ಕಂಪನಿ ಹಣ ನೀಡುತ್ತದೆ. ಒಂದೊಮ್ಮೆ ₹ 5 ಲಕ್ಷದ ವಿಮಾ ಕವರೇಜ್ ಮೊತ್ತವನ್ನೂ ಚಿಕಿತ್ಸಾ ವೆಚ್ಚ ಮೀರಿದರೆ ಏನು ಮಾಡುವುದು ಎನ್ನುವುದಕ್ಕೆ ಉತ್ತರ ಟಾಪ್–ಅಪ್ ಯೋಜನೆ.

ADVERTISEMENT

ಟಾಪ್–ಅಪ್ ಯೋಜನೆಯಲ್ಲಿ ಕಡಿಮೆ ದರಕ್ಕೆ ವಿಮಾ ಕವರೇಜ್ ಮೊತ್ತ ಹೆಚ್ಚಿಸಿಕೊಳ್ಳಬಹುದು. ಅಂದರೆ, ನೀವು ಈಗ ಹೊಂದಿರುವ ವಿಮಾ ಕವರೇಜ್ ಮೊತ್ತ ಸಾಕಾಗುವುದಿಲ್ಲ ಎಂದರೆ ನೀವು ಟಾಪ್–ಅಪ್ ಯೋಜನೆ ಮೂಲಕ ವಿಮಾ ಕವರೇಜ್ ವಿಸ್ತರಿಸಿಕೊಳ್ಳಬಹುದು.

ಸೂಪರ್ ಟಾಪ್–ಅಪ್ ಅಂದರೆ?: ಟಾಪ್–ಅಪ್ ಯೋಜನೆಯ ಅಡಿಯಲ್ಲಿ ಕ್ಲೇಮ್ ಪಡೆದುಕೊಂಡು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆದ ಬಳಿಕ ಮತ್ತೆ ಅನಾರೋಗ್ಯಕ್ಕೆ ಒಳಗಾಗಿ ಆಸ್ಪತ್ರೆಗೆ ದಾಖಲಾದರೆ ಈಗಾಗಲೇ ನೀವು ಪಡೆದಿದ್ದ ಟಾಪ್–ಅಪ್ ಯೋಜನೆಯ ಅಡಿಯಲ್ಲಿ ಮತ್ತೆ ಕ್ಲೇಮ್ ಸಿಗುವುದಿಲ್ಲ. ಟಾಪ್–ಅಪ್ ಅನ್ನು ನೀವು ಮತ್ತೆ ಪಡೆದುಕೊಳ್ಳಬೇಕಾಗುತ್ತೆ. ಒಂದೊಮ್ಮೆ ನೀವು ಟಾಪ್–ಅಪ್ ಯೋಜನೆಯ ಬದಲು ಸೂಪರ್ ಟಾಪ್–ಅಪ್ ಯೋಜನೆ ಪಡೆದುಕೊಂಡರೆ ಈ ಸಮಸ್ಯೆ ಇರುವುದಿಲ್ಲ. ಗುಣಮುಖರಾಗಿ ಮನೆಗೆ ಬಂದು ಮತ್ತೆ ಕೆಲ ದಿನಗಳ ಬಳಿಕ ಆಸ್ಪತ್ರೆಗೆ ದಾಖಲಾಗುವ ಸಂದರ್ಭ ಬಂದರೂ ಸೂಪರ್ ಟಾಪ್–ಅಪ್ ಯೋಜನೆಯ ಅನ್ವಯಿಸುತ್ತದೆ.

ಟಾಪ್–ಅಪ್ ಯೋಜನೆಗಳ ಬಗ್ಗೆ ನೀವು ತಿಳಿದುಕೊಳ್ಳಬೇಕಾದ ವಿಚಾರಗಳು:

l ನಿಮ್ಮ ವಿಮಾ ಯೋಜನೆಯ ಗರಿಷ್ಠ ಸಮ್ ಅಶೂರ್ಡ್ ಮೊತ್ತ ಖಾಲಿಯಾದಾಗ ಮಾತ್ರ ಟಾಪ್–ಅಪ್ ಯೋಜನೆಯಿಂದ ಆಸ್ಪತ್ರೆ ಖರ್ಚು ವೆಚ್ಚಗಳಿಗೆ ವಿಮಾ ಕವರೇಜ್ ಸಿಗುತ್ತದೆ. ಉದಾಹರಣೆಗೆ ‘ಎ’ ವ್ಯಕ್ತಿ ₹ 5 ಲಕ್ಷ ನೀಡಿ ಆರೋಗ್ಯ ವಿಮೆ ಮಾಡಿಸಿಕೊಂಡಿದ್ದರು ಎಂದಿಟ್ಟುಕೊಳ್ಳೋಣ. ಅವರು ಅನಾರೋಗ್ಯದ ಕಾರಣದಿಂದಾಗಿ ಆಸ್ಪತ್ರೆಗೆ ದಾಖಲಾದಾಗ ₹ 5 ಲಕ್ಷದ ಕವರೇಜ್ ಮಿತಿಯೂ ಬಳಕೆಯಾಯಿತು ಎಂದು ಭಾವಿಸೋಣ. ಇಂತಹ ಸಂದರ್ಭದಲ್ಲಿ ಟಾಪ್–ಅಪ್ ವಿಮಾ ಹಣದಿಂದ ವಿಮಾ ಕಂಪನಿ ವ್ಯಕ್ತಿಯ ಚಿಕಿತ್ಸೆಗೆ ಹಣ ಹೊಂದಿಸುತ್ತದೆ.

l ವೈಯಕ್ತಿಕ ಆರೋಗ್ಯ ವಿಮೆ ಅಥವಾ ಫ್ಯಾಮಿಲಿ ಫ್ಲೋಟರ್ ವಿಮೆಯ ಕವರೇಜ್ ಮೊತ್ತ ಪೂರ್ತಿ ಬಳಕೆಯಾದ ಸಂದರ್ಭದಲ್ಲಿ ಮಾತ್ರ ಟಾಪ್–ಅಪ್ ಯೋಜನೆಗೆ ಅವಕಾಶವಿರುತ್ತದೆ. ಅಂದರೆ, ನಿರ್ದಿಷ್ಟ ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾಗಿ ವಿಮಾ ಮೊತ್ತ ಸಾಲದಿದ್ದಾಗ ಮಾತ್ರ ಟಾಪ್–ಅಪ್ ಯೋಜನೆಯ ಮೊರೆ ಹೋಗಬಹುದು.

l ಟಾಪ್–ಅಪ್ ಯೋಜನೆ ಒಂದು ನಿರ್ದಿಷ್ಟ ಆರೋಗ್ಯ ಸಮಸ್ಯೆಗೆ ಪಡೆದುಕೊಳ್ಳಬಹುದಾದ ವಿಮಾ ಯೋಜನೆ. ನಿಮ್ಮ ಬಳಿ ಇರುವ ಯಾವುದೇ ಮಾದರಿಯ ವಿಮಾ ಯೋಜನೆ ಜೊತೆಗೆ ಇದನ್ನು ತೆಗೆದುಕೊಳ್ಳಬಹುದು. ಇಂಥದ್ದೇ ಕಂಪನಿಯ ಬಳಿ ಟಾಪ್–ಅಪ್ ಪಡೆಯಬೇಕು ಎಂಬ ನಿರ್ಬಂಧವಿಲ್ಲ.

l ಟಾಪ್-ಅಪ್ ಮತ್ತು ಸೂಪರ್ ಟಾಪ್-ಅಪ್ ಯೋಜನೆಗಳನ್ನು ಪಡೆಯುವಾಗ ನಿಬಂಧನೆಗಳನ್ನು ಓದಿ ಸರಿಯಾಗಿ ಅರ್ಥ ಮಾಡಿಕೊಂಡು ಮುನ್ನಡೆಯಿರಿ.

(ಲೇಖಕ: ಸುವಿಷನ್ ಹೋಲ್ಡಿಂಗ್ಸ್ ಪ್ರೈ.ಲಿ.,ನ ಸಂಶೋಧನಾ ವಿಭಾಗದ ಮುಖ್ಯಸ್ಥ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.