ADVERTISEMENT

ಕೇರಳ ವಿದ್ಯಾರ್ಥಿಗಳ ಮೇಲೆ ನಿಗಾ

ಹಲಸಿನ ಹಣ್ಣು ತಿನ್ನದಂತೆ ಕೇರಳದ ನರ್ಸಿಂಗ್ ವಿದ್ಯಾರ್ಥಿಗಳಿಗೆ ಸೂಚನೆ

ಇ.ಎಸ್.ಸುಧೀಂದ್ರ ಪ್ರಸಾದ್
Published 25 ಮೇ 2018, 2:54 IST
Last Updated 25 ಮೇ 2018, 2:54 IST

ಧಾರವಾಡ: ನಿಫಾ ವೈರಾಣು ಸೋಂಕು ತಗುಲಿರುವ ಯಾವುದೇ ಪ್ರಕರಣ ಜಿಲ್ಲೆಯಲ್ಲಿ ಈವರೆಗೂ ವರದಿಯಾಗದಿದ್ದರೂ, ಕೇರಳದಿಂದ ಬರುವ ವಿದ್ಯಾರ್ಥಿಗಳು ಹಾಗೂ ಪ್ರವಾಸಿಗರ ಮೇಲೆ ತೀವ್ರ ನಿಗಾ ವಹಿಸಲು ಜಿಲ್ಲಾ ಆರೋಗ್ಯ ಇಲಾಖೆ ಸಂಬಂಧಪಟ್ಟ ಕಾಲೇಜು ಹಾಗೂ ಇಲಾಖೆಗಳಿಗೆ ಸೂಚಿಸಿದೆ.

ಶಿಕ್ಷಣ ಕಾಶಿ ಎನಿಸಿಕೊಂಡಿರುವ ಧಾರವಾಡದಲ್ಲಿರುವ ವೈದ್ಯಕೀಯ, ಅರೆ ವೈದ್ಯಕೀಯ ಹಾಗೂ ನರ್ಸಿಂಗ್ ಕಾಲೇಜುಗಳಲ್ಲಿ ಕೇರಳದ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ. ಎಸ್‌ಡಿಎಂ, ಶ್ರೀಯಾ ಹಾಗೂ ಕೆಎಂಸಿ ಕಾಲೇಜುಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ನಿಫಾ ವೈರಾಣು ಕೇರಳದಲ್ಲೇ ಕಂಡು ಬಂದಿರುವುದರಿಂದ ಅಲ್ಲಿಂದ ಬರುವ ವಿದ್ಯಾರ್ಥಿಗಳ ಮೇಲೆ ತೀವ್ರ ನಿಗಾ ಇಡಲು ನಿರ್ಧರಿಸಲಾಗಿ. ಕೆಲವರು ಮಾತ್ರ ಇಲ್ಲಿದ್ದು, ಬಹಳಷ್ಟು ವಿದ್ಯಾರ್ಥಿಗಳು ರಜೆಗಾಗಿ ಊರಿಗೆ ಹೋಗಿದ್ದಾರೆ. ಹೀಗಾಗಿ, ಅಲ್ಲಿಂದ ಬರುವವರನ್ನು ತಪಾಸಣೆಗೆ ಒಳಪಡಿಸುವಂತೆ ಜಿಲ್ಲಾಡಳಿತ ಸೂಚಿಸಿದೆ.

‘ತುರ್ತು ಚಿಕಿತ್ಸೆಗೆ ಪ್ರತಿ ಆಸ್ಪತ್ರೆಯಲ್ಲಿ ನಾಲ್ಕು ಹೆಚ್ಚುವರಿ ಹಾಸಿಗೆ ಮೀಸಲಿಡುವಂತೆ, ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆ ಹಾಗೂ ಜಿಲ್ಲಾ ಆಸ್ಪತ್ರೆ ಸೇರಿದಂತೆ ಜಿಲ್ಲೆಯಲ್ಲಿರುವ 16 ವೆಂಟಿಲೇಟರ್‌ಗಳನ್ನು ಸುಸ್ಥಿತಿಯಲ್ಲಿಡುವಂತೆ ಜಿಲ್ಲಾಧಿಕಾರಿ ಅವರು ನಿರ್ದೇಶನ ನೀಡಿದ್ದಾರೆ’ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ.ಆರ್‌.ಎಂ.ದೊಡ್ಡಮನಿ ತಿಳಿಸಿದರು.

ADVERTISEMENT

‘ಬಾವಲಿ ಹೆಚ್ಚಿರುವ ಪ್ರದೇಶಗಳತ್ತ ಹೆಚ್ಚಿನ ಗಮನ ನೀಡಲು ಅರಣ್ಯ ಇಲಾಖೆಗೆ ತಿಳಿಸಲಾಗಿದೆ. ಹಂದಿಗಳ ಸಾಗಾಟಕ್ಕೂ ಕ್ರಮಕೈಗೊಳ್ಳುವಂತೆ ಪಾಲಿಕೆಗೂ ಸೂಚಿಸಲಾಗಿದೆ’ ಎಂದು ತಿಳಿಸಿದರು.

‘ಜನರಲ್ಲಿ ಜಾಗೃತಿ ಮೂಡಿಸಲು ಆಶಾ ಕಾರ್ಯಕರ್ತೆಯರನ್ನು ಬಳಸಿಕೊಳ್ಳಲು ಉದ್ದೇಶಿಸಲಾಗಿದೆ. ಕೇರಳ ಸೇರಿದಂತೆ ವಿವಿಧ ರಾಜ್ಯಗಳಿಂದ ಬಂದವರ ಕುರಿತು ಮಾಹಿತಿ ಇದ್ದಲ್ಲಿ ಕೂಡಲೇ ತಿಳಿಸುವಂತೆ ಸೂಚಿಸಲಾಗಿದೆ. ಪಕ್ಷಿಗಳು ಕಚ್ಚಿದ ಹಣ್ಣುಗಳು ಬಿದ್ದಿದ್ದಲ್ಲಿ, ಅದನ್ನು ತಿನ್ನದಂತೆ ಜನರಲ್ಲಿ ಜಾಗೃತಿ ಮೂಡಿಸಲು ತಿಳಿಸಲಾಗಿದೆ’ ಎಂದು ಡಾ. ದೊಡ್ಡಮನಿ ತಿಳಿಸಿದರು.

ಎಸ್‌ಡಿಎಂ ನರ್ಸಿಂಗ್ ಕಾಲೇಜು ಪ್ರಾಚಾರ್ಯ ಡೇವಿಡ್ ಕೊಲಾ ಪ್ರತಿಕ್ರಿಯಿಸಿ, ‘ಕಾಲೇಜಿನಲ್ಲಿ 70 ವಿದ್ಯಾರ್ಥಿ
ಗಳು ಕೇರಳದವರಾಗಿದ್ದು, ಕಾಲೇಜಿಗೆ ರಜೆ ಇರುವುದರಿಂದ ಬಹುತೇಕರು ಊರಿಗೆ ಹೋಗಿದ್ದಾರೆ. ಮುಂದಿನ ಗುರುವಾರದಿಂದ ಬರಲಿದ್ದು, ಅವರನ್ನು ತಪಾಸಣೆಗೆ ಒಳಪಡಿಸಲಾಗುವುದು’ ಎಂದು ತಿಳಿಸಿದರು.

‘ವಿದ್ಯಾರ್ಥಿಗಳಿಗೆ ಕೈಗಳನ್ನು ಚೆನ್ನಾಗಿ ತೊಳೆದುಕೊಳ್ಳುವಂತೆ ಹಾಗೂ ಸುತ್ತ–ಮುತ್ತಲಿನ ವಾತಾವರಣವನ್ನು ಶುಚಿಯಾಗಿಟ್ಟುಕೊಳ್ಳುವಂತೆ ಸೂಚಿಸಲಾಗಿದೆ. ಕೇರಳದವರು ಹೆಚ್ಚಾಗಿ ಹಲಸಿನ ಹಣ್ಣು ತಿನ್ನುವುದರಿಂದ, ಅದನ್ನು ತಾತ್ಕಾಲಿಕ ತ್ಯಜಿಸುವಂತೆ ತಿಳಿಸಲಾಗಿದೆ’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.