ADVERTISEMENT

ದಿನದ ಸೂಕ್ತಿ: ಹೆತ್ತವರನ್ನು ಪ್ರೀತಿಸಿ

ಎಸ್.ಸೂರ್ಯಪ್ರಕಾಶ ಪಂಡಿತ್
Published 26 ಮಾರ್ಚ್ 2021, 19:31 IST
Last Updated 26 ಮಾರ್ಚ್ 2021, 19:31 IST
ಕುಟುಂಬ
ಕುಟುಂಬ   

ಉಪಾಧ್ಯಾಯಂ ಪಿತರಂ ಮಾತರಂ ಚ

ಯೇsಭಿದ್ರುಹ್ಯಂತೇ ಮನಸಾ ಕರ್ಮಣಾ ವಾ ।

ತೇಷಾಂ ಪಾಪಂ ಭ್ರೂಣಹತ್ಯಾವಿಶಿಷ್ಟಂ

ADVERTISEMENT

ತಸ್ಮನ್ನಾನ್ಯಃ ಪಾಪಕೃದಸ್ತಿ ಲೋಕೇ ।।

ಇದರ ತಾತ್ಪರ್ಯ ಹೀಗೆ:

‘ಉಪಾಧ್ಯಾಯ, ತಂದೆ, ತಾಯಿ – ಇವರಿಗೆ ಯಾರು ಮನಸ್ಸಿನಿಂದಲೂ ನಡತೆಯಿಂದಲೂ ದ್ರೋಹಮಾಡುತ್ತಾರೋ ಅವರ ಪಾಪವು ಭ್ರೂಣಹತ್ಯೆಗಿಂತಲೂ ಹೆಚ್ಚಿನದು. ಅಂಥವನಿಗಿಂತ ಹೆಚ್ಚಿನ ಪಾಪಿ ಈ ಲೋಕದಲ್ಲಿ ಯಾರೂ ಇರಲಾರರು.’

ನಮ್ಮ ಕಾಲದಲ್ಲಿ ವ್ಯಾಪಕವಾಗಿ ನಡೆಯುವ ಅನಾಚಾರಗಳನ್ನು ಮೊದಲೇ ಊಹಿಸಿ ಮಹಾಭಾರತ ಈ ಮಾತುಗಳನ್ನು ಆಡಿದೆ ಎಂದು ಧಾರಾಳವಾಗಿ ಹೇಳಬಹುದು.

ನಮ್ಮ ಹುಟ್ಟು ಎರಡು ಸಲ ಆಗುತ್ತದೆ ಎನ್ನಬಹುದು; ತಾಯಿಯ ಗರ್ಭದಿಂದ ಜಗತ್ತಿಗೆ ಪ್ರವೇಶಿಸುವಾಗ ಒಮ್ಮೆ, ವಿದ್ಯೆಯನ್ನು ಪಡೆದು ಸಮಾಜಕ್ಕೆ ಪ್ರವೇಶಿಸುವಾಗ ಇನ್ನೊಮ್ಮೆ. ಹೀಗಾಗಿ ನಾವು ನಮಗೆ ಜನ್ಮಕೊಟ್ಟವರಿಗೆ, ಎಂದರೆ ತಂದೆ–ತಾಯಿಗಳಿಗೆ, ಮತ್ತು ವಿದ್ಯೆ ಕೊಟ್ಟ ಶಿಕ್ಷಕರಿಗೆಜೀವನದುದ್ದಕ್ಕೂ ಋಣಿಗಳಾಗಿರಬೇಕು. ಆದರೆ ದುರಂತವೆಂದರೆ ಈ ಇಬ್ಬರನ್ನೂ ನೋಯಿಸುವಂಥ ಕೆಲಸಗಳೇ ಇಂದಿನ ಸಮಾಜದಲ್ಲಿ ನಡೆಯುತ್ತಿರುವುದು.

ಹೆತ್ತವರನ್ನು ಗೌರವದಿಂದ ಪೋಷಿಸಬೇಕಾದ್ದು ಮತ್ತು ಉಪಾಧ್ಯಾಯರನ್ನು ಗೌರವದಿಂದ ಪೂಜಿಸಬೇಕಾದ್ದು ಸಜ್ಜನರ ಕರ್ತವ್ಯ. ಏಕೆಂದರೆ ಇವರು ನಮ್ಮನ್ನು ರೂಪಿಸಿರುವವರು. ಒಬ್ಬರು ದೈಹಿಕವಾಗಿ ನಮಗೆ ಆಕಾರ ಕೊಟ್ಟರೆ, ಇನ್ನೊಬ್ಬರು ಬೌದ್ಧಿಕವಾಗಿ ರೂಪ ಕೊಟ್ಟವರು. ನಮ್ಮ ಜೀವನದ ಅಸ್ತಿತ್ವವೇ ಈ ಇಬ್ಬರನ್ನು ಆಶ್ರಯಿಸಿರುತ್ತದೆ. ಇಂಥವರನ್ನು ಅವಮಾನಿಸುವಂಥ, ತೊಂದರೆಗೆ ತಳ್ಳುವಂಥ ಕೆಲಸವನ್ನು ನಾವು ಮಾಡಿದರೆ ಅದು ಪಾಪವಲ್ಲದೆ ಮತ್ತೇನು?

ಇಂದು ನಾವು ಎಷ್ಟು ಸ್ವಾರ್ಥಿಗಳಾಗುತ್ತಿದ್ದೇವೆ ಎಂದರೆ ನಮ್ಮನ್ನು ಹೆತ್ತವರನ್ನು ನಮ್ಮ ಜೊತೆಯಲ್ಲಿಟ್ಟುಕೊಂಡು ಪೋಷಿಸಬೇಕೆಂಬ ಕರ್ತವ್ಯಬುದ್ಧಿಯನ್ನೇ ಮರೆತಿದ್ದೇವೆ. ಅವರು ವಯಸ್ಸಾಗುತ್ತಿದ್ದಂತೆ ಅವರನ್ನು ನಾವು ವೃದ್ಧಾಶ್ರಮದ ಪಾಲು ಮಾಡುತ್ತಿದ್ದೇವೆ. ಅಪರೂಪಕ್ಕೆ ಕೆಲವರು ಮನೆಗಳಲ್ಲಿ ಅವರನ್ನು ಉಳಿಸಿಕೊಂಡವರೂ ಅವರನ್ನು ಹೊರೆಯನ್ನಾಗಿ ಪರಿಗಣಿಸುತ್ತಿದ್ದಾರೆ. ನಮ್ಮನ್ನು ಹೆತ್ತು–ಹೊತ್ತು ಪೋಷಿಸಿದವರನ್ನೇ ಬೀದಿಪಾಲು ಮಾಡುವಂಥ ಅತಿ ನಾಗರಿಕರು ನಾವಾಗಿದ್ದೇವೆ. ನಾಳೆ ನಮಗೂ ವಯಸ್ಸಾಗುತ್ತದೆ, ನಮ್ಮ ಮಕ್ಕಳು ಕೂಡ ನಮ್ಮನ್ನು ಅನುಸರಿಸುತ್ತಾರೆ ಎಂಬುದನ್ನು ಇಂಥವರು ಮರೆಯಬಾರದು.

ಇನ್ನು ನಮ್ಮ ಶಿಕ್ಷಣಪದ್ಧತಿ; ಅದು ವಿದ್ಯೆಯ ಬೆಲೆಯನ್ನೇ ಅಗ್ಗಮಾಡಿಬಿಟ್ಟಿದೆ. ನಮ್ಮ ಜೀವನವನ್ನು ಸತ್ಯವನ್ನಾಗಿಯೂ ಸುಂದರವನ್ನಾಗಿಯೂ ರೂಪಿಸಿಕೊಳ್ಳಲು ಏನು ಬೇಕೋ ಅದನ್ನು ಬಿಟ್ಟು ಉಳಿದೆಲ್ಲವನ್ನೂ ಅದು ನಮಗೆ ಕಲಿಸುತ್ತಿದೆ. ಸಂಪತ್ತನ್ನು ಗಳಿಸುವುದೇ ಶಿಕ್ಷಣದ ಗುರಿ ಎಂಬ ವಾತಾವರಣವನ್ನು ನಾವೇ ನಿರ್ಮಿಸಿಕೊಂಡಿರುವಾಗ ಹೆತ್ತವರನ್ನು, ಗುರು–ಹಿರಿಯರನ್ನು ಗೌರವಿಸುವ, ಕಾಪಾಡುವ, ಪ್ರೀತಿಸುವ ವಿದ್ಯಾ–ಬದ್ಧಿಗಳನ್ನು ನಮ್ಮ ಶಿಕ್ಷಣವ್ಯವಸ್ಥೆ ನೀಡುತ್ತದೆ ಎಂದು ಆಲೋಚಿಸುವುದೇ ಮೂರ್ಖತನವಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.