ADVERTISEMENT

ಲಕ್ಷ್ಮೀ: ಸಮೃದ್ಧಿಯ ದೇವತೆ

ನವೀನ ಗಂಗೋತ್ರಿ
Published 5 ಆಗಸ್ಟ್ 2021, 20:06 IST
Last Updated 5 ಆಗಸ್ಟ್ 2021, 20:06 IST
ಲಕ್ಷ್ಮೀ
ಲಕ್ಷ್ಮೀ   

ಭಾರತೀಯ ಜೀವನವಿಧಾನದಲ್ಲಿ ಬೆಳೆದುಬಂದ ದೇವತಾಕಲ್ಪನೆಯು ನಮ್ಮ ದೈನಂದಿನ ಜೀವನದ ಬಹುತೇಕ ಎಲ್ಲ ಸಂಗತಿಗಳನ್ನು ಒಳಗೊಂಡಿದೆಯಲ್ಲದೆ ಅವನ್ನು ಬಹುವಾಗಿ ಪ್ರಭಾವಿಸಿದೆ. ನಮ್ಮಲ್ಲಿ ಮಾನವ ಬದುಕಿನ ವಿಭಿನ್ನ ಆಯಾಮಗಳಿಗೆ ಅಧಿಷ್ಟಾತೃವಾದ ಒಂದಲ್ಲ ಒಂದು ದೇವತೆ ಇದ್ದೇ ಇದೆಯೆನ್ನಬಹುದು. ಮಣ್ಣು. ನೀರು, ಮಿಂಚುಗಳಂಥ ಮೂರ್ತಸಂಗತಿಗಳಲ್ಲದೆ ವಿದ್ಯೆ, ತೇಜಸ್ಸು, ಕಾಂತಿಗಳಂಥ ಅಮೂರ್ತ ಸಂಗತಿಗಳಿಗೆ ಸಂಬಂಧಿಸಿಯೂ ದೇವತೆಗಳಿದ್ದಾರೆ. ಆಯಾ ದೇವತೆಗಳಿಗೆ ಪ್ರಶಸ್ತವಾದ ಕಾಲ, ಮಂತ್ರಗಳು, ಅಲಂಕಾರ, ನೈವೇದ್ಯ ಭಕ್ಷ್ಯಗಳು ಮತ್ತು ಪೂಜಾವಿಧಾನ ಎಲ್ಲವೂ ಭಿನ್ನ ಭಿನ್ನ. ಕೆಲವೊಮ್ಮೆ ಕೆಲವು ದೇವತೆಗಳು ನಿರ್ದಿಷ್ಟಪ್ರದೇಶದಲ್ಲಿ ಮಾತ್ರವೇ ಚಾಲ್ತಿಯಲ್ಲಿದ್ದರೆ ಕೆಲವೊಂದು ದೇವತೆಗಳು ಆಭಾರತವ್ಯಾಪಿಯಾದವುಗಳು. ಲಕ್ಷ್ಮೀದೇವಿ ಹಾಗೊಬ್ಬಳು ಭಾರತದಾದ್ಯಂತ ಪ್ರಸಿದ್ಧಳಾದ ದೇವತೆ.

ವೇದಸಾಹಿತ್ಯದಲ್ಲಿಯೂ ಸಾಕಷ್ಟು ಸ್ತುತಿಗೆ ಒಳಪಟ್ಟ ದೇವತೆಯಿವಳು. ವೈದಿಕ ಸಾಹಿತ್ಯದಲ್ಲಿ ಹೆಚ್ಚಾಗಿ ‘ಶ್ರೀಃ’ ಎಂದು ಕರೆಸಿಕೊಳ್ಳುವ ಇವಳು ಲೋಕದಲ್ಲಿ ಶ್ರೀಮನ್ನಾರಾಯಣನ ಮಡದಿಯಾಗಿ ‘ಲಕ್ಷ್ಮೀ’ ಎಂಬ ಹೆಸರಿನಿಂದ ಪ್ರಸಿದ್ಧಳು. ಋಗ್ವೇದದ ಖಿಲಭಾಗದಲ್ಲಿ ಈ ದೇವತೆಯ ಹೆಸರಿನಲ್ಲಿ ‘ಶ್ರೀಸೂಕ್ತ’ವೆಂಬ ಋಕ್ಕುಗಳ ಸಮೂಹವೂ ಇದೆ. ಲಕ್ಷ್ಮೀ ಎನ್ನುವ ದೇವತಾಪರಿಕಲ್ಪನೆಯ ಹಿಂದೆ ಬರಿಯ ಹಣ ಮತ್ತು ಧನಸಂಬಂಧಿಯಾದ ಸಂಪತ್ತು ಮಾತ್ರವಲ್ಲದೆ ಉಳಿದ ಯಾವೆಲ್ಲ ಸಂಗತಿಗಳು ಮಿಳಿತವಾಗಿವೆ ಎಂಬುದನ್ನು ಶ್ರೀಸೂಕ್ತದಲ್ಲಿ ಕಾಣ ಬಹುದು. ಬದುಕಿನ ಸೌಖ್ಯವೆಲ್ಲವೂ ಹಣದಲ್ಲಿಯೇ ಇದೆ ಎನ್ನುವ ಈ ಕಾಲದ ಬಹುಜನರ ಮನೋವ್ಯಾಧಿಗೆ ಇದೊಂದು ಔಷಧವೂ ಆಗಬಲ್ಲದು. ಮಾನವ ಜೀವನವೆನ್ನುವುದು ಹಣವೂ ಸೇರಿದಂತೆ ಹತ್ತಾರು ಸೌಖ್ಯಗಳನ್ನು ಬಯಸುತ್ತದೆ. ಹಣವಿದ್ದಮಾತ್ರಕ್ಕೆ ಸೌಖ್ಯವೊದಗುತ್ತದೆ ಎನ್ನುವುದು ಸುಳ್ಳಷ್ಟೆ. ಹಾಗಾಗಿ ಲಕ್ಷ್ಮೀಯ ಆರಾಧನೆಯು ಬರಿಯ ಧನಕನಕಗಳ ಸುತ್ತಲೇ ಹೆಣೆದುಕೊಳ್ಳದೆ ಬಹುಮುಖಿಯಾದ ‘ಸಮೃದ್ಧಿ’ ಎನ್ನುವುದನ್ನು ಒಳಗೊಂಡಿದೆ.

ಋಗ್ವೇದದ ಶ್ರೀಸೂಕ್ತವಾಗಲೀ ಅಥವಾ ಯಜುರಾದಿ ವೇದಗಳಲ್ಲಿ ಆಗಾಗ್ಗೆ ತೋರುವ ಶ್ರೀಸಂಬಂಧಿಯಾದ ಮಂತ್ರಗಳಾಗಲಿ ಈ ಸಮೃದ್ಧಿಯ ಕುರಿತಾಗಿಯೇ ಇರುವಂಥವು. ಸಮೃದ್ಧಿಯೆನ್ನುವುದು ಬಹುಮುಖಿಯಾದ್ದು. ಸರಳವಾಗಿ ಹೇಳಬೇಕೆಂದರೆ ಸಮೃದ್ಧಿಯು ನಮ್ಮ ದೈನಂದಿನ ಬದುಕಿನ ಬಹುಮುಖ್ಯ ಅಗತ್ಯಗಳಾದ ನೀರು, ಗಾಳಿ, ಆಹಾರ, ಆರೋಗ್ಯ, ನಿದ್ರೆ ಮತ್ತು ದುಡಿಮೆಯ ಕುರಿತಾಗಿ ಇರುವಂಥದು. ‘ಒದಗು’ ಎನ್ನುವುದು ‘ಸಮೃದ್ಧಿ’ ಎಂಬ ಸಂಸ್ಕೃತಪದಕ್ಕೆ ಸಂವಾದಿಯಾಗಬಲ್ಲ ಕನ್ನಡದ ಪದ. ಇವತ್ತಿಗೂ ಕರ್ನಾಟಕದ ಹಳ್ಳಿಗರ ಕನ್ನಡದಲ್ಲಿ ಈ ಒದಗುವಿಕೆಯ ಕಲ್ಪನೆ ಜೀವಂತವಾಗಿದೆ. ಹಣ ಎನ್ನುವುದು ಮೌಲ್ಯದ ವಿನಿಮಯಕ್ಕಾಗಿ ಚಾಲ್ತಿಗೆ ಬಂದ ಎರಡನೆಯ ಸ್ತರದ ಸಮೃದ್ಧಿಯ ಮಾನಕವಷ್ಟೆ; ಹಣವು ತಾನೇ ಸ್ವತಃ ಮೌಲ್ಯವಲ್ಲ – ಅದು ಮೌಲ್ಯದ ಪ್ರತಿನಿಧಿ. ಆದರೆ ಲಕ್ಷ್ಮೀ ಆರಾಧನೆಯು ಸಾಕ್ಷಾತ್ತಾಗಿ ಮೌಲ್ಯದ್ದೇ ಆರಾಧನೆ. ಲಕ್ಷ್ಮೀಪೂಜೆಯೆಂದರೆ ಸಮೃದ್ಧಿಯನ್ನು ಮನಸಾ ಕರೆಯುವ ಮತ್ತು ಉಂಟಾಗುವಂತೆ ಪ್ರಾರ್ಥಿಸುವ ಮಾರ್ಗ.

ADVERTISEMENT

ಉಣ್ಣಲು ಕಲಬೆರಕೆಯಿಲ್ಲದ ರುಚಿ–ಶುಚಿಯಾದ ಆರೋಗ್ಯ ಪೂರ್ಣ ಆಹಾರ, ಕುಡಿಯಲು ಕಲುಷಿತವಲ್ಲದ ಶುದ್ಧ ಸಹಜವಾದ ನೀರು, ಎದೆತುಂಬ ಎಳೆದುಕೊಂಡು ತೃಪ್ತಗೊಳ್ಳಬೇಕೆನಿಸುವಷ್ಟು ನಿರ್ಮಲವಾದ ಗಾಳಿ, ತಾಜಾ ತಾಜಾ ಆಗಿರುವ ಹಣ್ಣು–ತರಕಾರಿ ಮತ್ತು ಹಯನು - ಇವೇ ಮೊದಲಾದ ಯಾವಜ್ಜೀವ ಸಂತೃಪ್ತಿಯ ಮಾನಕಗಳನ್ನು ಮರೆತು ಬದುಕಿನ ಅಂತಸ್ಸತ್ವವನ್ನೇ ಕಡಿಮೆಮಾಡಿಕೊಂಡಿದ್ದೇವೆ. ಹೈಯಂಗವೀನ (ನಿನ್ನೆ ಕರೆದ ಹಾಲಿನಿಂದ ಇವತ್ತು ತಯಾರಿಸಿದ ತುಪ್ಪ) ಎನ್ನುವುದು ನಮ್ಮ ಪೂರ್ವಿಕರ ಒಂದು ಸಮೃದ್ಧಿಯ ಕಲ್ಪನೆ. ಇವತ್ತಿನ ಕಾಲದಲ್ಲಿ ನಿಜಕ್ಕೂ ಶುದ್ಧವಾದ ಸಹಜವಾದ ತುಪ್ಪವನ್ನು ತಿನ್ನುವ ಭಾಗ್ಯ ಎಷ್ಟು ಜನರಿಗೆ ತಾನೇ ಇದ್ದೀತು? ಹಣವಿದ್ದ ಮಾತ್ರಕ್ಕೆ ಇವೆಲ್ಲ ಒದಗಿಬರುವುದಿಲ್ಲ. ಹಾಗಾಗಿ ಲಕ್ಷ್ಮೀ ಎಂಬ ದೇವತೆಯೂ, ಅವಳ ಆರಾಧನೆಯೂ ಹಣಕ್ಕಿಂತ ಹೆಚ್ಚಾಗಿ ಬದುಕನ್ನು ಇನ್ನಷ್ಟು ಸತ್ತ್ವಯುತಗೊಳಿಸುವ ಸಮೃದ್ಧಿಯ ಕುರಿತಾಗಿ ಇರುವುದೆನ್ನಬಹುದು.

ಈ ಆಷಾಢ ಶುಕ್ರವಾರದ ಲಕ್ಷ್ಮೀಪೂಜೆಯು ಹೆಚ್ಚು ಅರ್ಥಪೂರ್ಣವಾದ ಸಮೃದ್ಧಿಯ ಪರಿಕಲ್ಪನೆಯನ್ನು ನಮಗೆಲ್ಲ ಕರುಣಿಸಲಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.