ADVERTISEMENT

ಸಚ್ಚಿದಾನಂದ ಸತ್ಯ ಸಂದೇಶ: ವಿನಾಶಕ್ಕೆ ಹಾದಿ ಶತ್ರುತ್ವ

ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿ
Published 13 ಆಗಸ್ಟ್ 2021, 19:31 IST
Last Updated 13 ಆಗಸ್ಟ್ 2021, 19:31 IST
ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿ
ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿ   

ಮನುಷ್ಯನ ಬದುಕೇ ಸಂಘರ್ಷದ ಬದುಕು ಅಂದುಕೊಳ್ಳುತ್ತೇವೆ. ಹಾಗೇ ನೋಡಿದರೆ, ಇಡೀ ಬ್ರಹ್ಮಾಂಡದಲ್ಲಿರುವ ಜೀವಿಗಳೆಲ್ಲ ಒಂದಕ್ಕೊಂದು ಸಂಘರ್ಷಿಸಿಕೊಂಡೇ ಬದುಕುತ್ತಿವೆ. ಜೀವಕಾಯಗಳಷ್ಟೇ ಅಲ್ಲ, ಆಕಾಶಕಾಯಗಳು ಸಹ ಪರಸ್ಪರ ಘರ್ಷಣೆಯಲ್ಲೆ ಚಲಿಸುತ್ತಿವೆ. ಒಂದರ ಉಳಿವು, ಇನ್ನೊಂದರ ಅಳಿವು ಈ ಜಗದ ನಿಯಮ. ಈ ಸಂಘರ್ಷ ಸಹ ಭಗವಂತನ ಮಾಯಾಜಾಲ. ಇಲ್ಲಿ ಅಳಿದಿದೆ ಎನ್ನುವುದು ಅಳಿದಿರುವುದಿಲ್ಲ. ಉಳಿದಿದೆ ಅನ್ನುವುದು ಉಳಿದಿರುವುದಿಲ್ಲ. ಉದಾಹರಣೆಗೆ, ಬಿಸಿಲಿನ ಸಂಘರ್ಷಕ್ಕೆ ನೀರು ಆವಿಯಾಗುವಾಗ ಅಳಿಯಿತು ಅನಿಸುತ್ತೆ. ಅದು ಮಳೆಯಾಗಿ ಸುರಿದಾಗ ಉಳಿದಂತೆ ಕಾಣುತ್ತೆ. ಇದೇ ಸೃಷ್ಟಿಯ ಚಮತ್ಕಾರ.

ನಾವು ಬದುಕಿನಲ್ಲಿ ಯಾವುದನ್ನು ಕಳೆದುಕೊಂಡೆವು ಮತ್ತು ಯಾವುದನ್ನು ಉಳಿಸಿಕೊಂಡೆವು ಅನ್ನುವುದು ಬಹಳ ಮುಖ್ಯ. ಒಳ್ಳೆಯದನ್ನು ಗಳಿಸಿ, ಕೆಟ್ಟದ್ದನ್ನು ಕಳೆದುಕೊಂಡೆವು ಅಂದಾಗ ನಮ್ಮ ಬದುಕು ಸಾರ್ಥಕ. ಅದೇ ಒಳ್ಳೆಯದನ್ನು ಕಳೆದುಕೊಂಡು, ಕೆಟ್ಟದ್ದನ್ನು ಪಡೆದೆವೆಂದರೆ ನಾವು ನೆಮ್ಮದಿಯನ್ನು ಕಳೆದುಕೊಂಡು, ಕಷ್ಟಗಳನ್ನು ಮೈಮೇಲೆ ಎಳೆದುಕೊಂಡೆವೆಂದೇ ಅರ್ಥ. ಮನುಷ್ಯ ಮೂರು ವಿಭಾಗಗಳಲ್ಲಿ ಸಂಘರ್ಷಿಸಬೇಕು. ಆ ನಿತ್ಯಕದನದಲ್ಲಿ ಗೆಲುವು ಮೂಡಿಸುತ್ತಾ ಹೋದಾಗಲೇ ನಮ್ಮ ಜೀವ-ಜೀವನ-ನೆಮ್ಮದಿ ಉಳಿದುಕೊಂಡಿರುತ್ತದೆ. ಆ ಮೂರು ಸಂಘರ್ಷದ ಭೂಮಿಕೆ ಯಾವುದೆಂದರೆ ದೇಹ-ಮನಸ್ಸು-ಬಾಹ್ಯಜಗತ್ತು.

ದೇಹದೊಳಗಿನ ಜೀವಾಣುಗಳೊಂದಿಗೆ ನಾನಾ ರೋಗಾಣುಗಳು ಸಂಘರ್ಷಿಸುತ್ತಿರುತ್ತವೆ. ಮನಸ್ಸಿನ ನಿಷ್ಕಲ್ಮಶ ತಿಳಿಗೊಳದಲ್ಲೂ ನಾನಾ ಭಾವಗಳು ಅಪ್ಪಳಿಸುತ್ತಿರುತ್ತವೆ. ಬಾಹ್ಯದ ಬದುಕಲ್ಲೂ ನಾನಾ ಜನ, ನಾನಾ ರೀತಿಯಲ್ಲಿ ಬರುತ್ತಿರುತ್ತಾರೆ. ಈ ಮೂರು ಲೋಕದಲ್ಲೂ ಮನುಷ್ಯ ಸಂಘರ್ಷಿಸುತ್ತಾ ತನ್ನ ಒಳ್ಳೆಯತನ ಉಳಿಸಿಕೊಂಡರೆ, ಜೀವ-ಜೀವನ-ನೆಮ್ಮದಿ ದೀರ್ಘಕಾಲ ಕಾಯ್ದುಕೊಳ್ಳುತ್ತದೆ. ರೋಗಾಣು-ದುರ್ಭಾವಗಳು-ಜನಗಳೊಂದಿಗೆ ನಿತ್ಯ ಕಾದುತ್ತಿದ್ದರೆ ನಮ್ಮ ಜೀವ-ಜೀವನ-ನೆಮ್ಮದಿ ಅಲ್ಪಕಾಲದಲ್ಲೇ ಅಳಿದು ಹೋಗುತ್ತದೆ. ದೇಹದೊಳಗೆ ಆಕಸ್ಮಿಕವಾಗಿ ನುಗ್ಗುವ ರೋಗಾಣುವನ್ನೂ ನಮ್ಮ ಜೀವಾಣುಗಳು ಸ್ನೇಹಭಾವದಿಂದ ನೋಡಿಕೊಂಡರೆ, ಅವು ಒಂದಷ್ಟು ದಿನ ಇದ್ದು ದೇಹದಿಂದ ಹೊರ ಹೋಗುತ್ತವೆ. ಹಾಗಾಗದೆ, ನಮ್ಮ ಜೀವಾಣುಗಳು ರೋಗಾಣುಗಳನ್ನೆ ಅನುಕರಿಸಿದರೆ ಅಪಾಯಕಾರಿ. ಹಾಗೇ, ನಮ್ಮ ಬದುಕಿನಲ್ಲೂ ಕೆಟ್ಟವರು ಬಂದು ಹೋಗುತ್ತಾರೆ. ನಾವು ಕೆಟ್ಟವರನ್ನು ಅನುಕರಿಸಬಾರದಷ್ಟೆ. ನಮ್ಮ ದೇಹದೊಳಗಿರುವ ಜೀವಾಣುಗಳಿಗೆ ಮತ್ತು ನಮ್ಮ ಮನಸ್ಸಿನ ಭಾವಗಳಿಗೆ ಕೆಟ್ಟದ್ಯಾವುದು ಒಳ್ಳೆಯದ್ಯಾವುದು ಅನ್ನೋ ಜಾಗೃತಪ್ರಜ್ಞೆ ಮೂಡಿಸುವುದು ಬಾಹ್ಯಜಗತ್ತು.

ADVERTISEMENT

ದೇಹದೊಳಗಿರುವ ಜೀವಾಣುಗಳಿಗೆ ರೋಗಾಣುವಿನೊಂದಿಗೆ ಹೇಗೆ ವರ್ತಿಸಬೇಕು ಅನ್ನೋ ವಿವೇಕ ಹೇಳಿಕೊಡುವ ಗುರುವೇ ಮನಸ್ಸು. ಈ ಮನಸ್ಸಿಗೆ ಬುದ್ಧಿಕೌಶಲವನ್ನು ಕಲಿಸಿಕೊಡುವುದೇ ಬಾಹ್ಯಜಗತ್ತು. ದೇಹ-ಮನಸ್ಸು-ಬಾಹ್ಯ – ಈ ಮೂರು ಒಂದಕ್ಕೊಂದು ಸಂಬಂಧ ಬೆಸೆದುಕೊಂಡಿವೆ. ಒಂದಕ್ಕೊಂದು ಕೊಟ್ಟು-ತೆಗೆದುಕೊಳ್ಳುವ ಅನುಬಂಧಗಳಿವೆ. ಹೇಗೆಂದರೆ, ಮಗು ಹುಟ್ಟುವಾಗ ಅದು ಒಂದು ಜೀವಾಣುವಾಗಿರುತ್ತದೆ. ಮನಸ್ಸು ಬೆಳೆದಿರುವುದಿಲ್ಲ. ಆ ಮಗು ಬೆಳೆಯುತ್ತಾ ಹೋದಂತೆ ಬಾಹ್ಯ ಪರಿಸರದಿಂದ ಮನಸ್ಸು ಬೆಳೆಸಿಕೊಳ್ಳುತ್ತದೆ. ಆ ಮನಸ್ಸಿಗೆ ಒಳ್ಳೆಯ ಅಥವಾ ಕೆಟ್ಟ ಬುದ್ಧಿ ಬರುವುದು ಬಾಹ್ಯ ಪರಿಸರದಿಂದಲೇ. ಆದ್ದರಿಂದ ನಮ್ಮ ಸುತ್ತಲ ಪರಿಸರಕ್ಕೆ ಕೆಟ್ಟ ಮನುಷ್ಯರು ಬರದಂತೆ ನೋಡಿಕೊಂಡರೆ ಮಕ್ಕಳು ಒಳ್ಳೆಯ ಬುದ್ಧಿಯನ್ನೇ ಕಲಿಯುತ್ತಾರೆ.

ಕೆಟ್ಟ ದೇಹದಷ್ಟೇ, ಕೆಟ್ಟ ಮನಸ್ಸು ಅಪಾಯಕಾರಿ. ಇದಕ್ಕಾಗಿ ನಮ್ಮ ಮಕ್ಕಳಿಗೆ ಒಳ್ಳೆಯ ಮನಸ್ಸಿನ ಗುರುವಿನಿಂದ ಪಾಠ ಕಲಿಸಿ ಸ್ವಸ್ಥ ಮನಸ್ಸನ್ನು ಬೆಳೆಸಬೇಕು. ಇಲ್ಲವಾದರೆ, ಮಗುವಿನ ಮನಸ್ಸು ಗುರುವಿನಂತೆ ದ್ವೇಷಾಸೂಯೆ ಬೆಳೆಸಿಕೊಳ್ಳುತ್ತಾ, ಬದುಕಿನುದ್ದಕ್ಕೂ ಶತ್ರುತ್ವ ಸೃಷ್ಟಿಸುತ್ತಾ ವಿನಾಶದತ್ತ ಸಾಗುತ್ತದೆ. ‘ಮಿತ್ರುತ್ವವೆಅಮೃತ, ಶತ್ರುತ್ವವೆ ವಿಷ’ ಅನ್ನೋ ವಿವೇಕ ಕಲಿಸೋ ಗುರು ಸಮಾಜಕ್ಕೆ ಬೇಕು. ಇಂಥ ‘ಸಚ್ಚಿದಾನಂದ’ಗುರುವೇ ಜಗತ್ತಿಗೆ ಮಾದರಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.