ADVERTISEMENT

ಕೃಷಿಕರ ಜಮೀನಿನಲ್ಲಿ ಹೊಸ ಪ್ರಯೋಗ: ಬಸವರಾಜ ಬೊಮ್ಮಾಯಿ

‘ಕೃಷಿ ಮೇಳ’ದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೂಚನೆ

​ಪ್ರಜಾವಾಣಿ ವಾರ್ತೆ
Published 5 ನವೆಂಬರ್ 2022, 20:16 IST
Last Updated 5 ನವೆಂಬರ್ 2022, 20:16 IST
ಬೆಂಗಳೂರಿನ ಜೆಕೆವಿಕೆಯಲ್ಲಿ ಶನಿವಾರ ನಡೆದ ಕೃಷಿ ಮೇಳದಲ್ಲಿ ಹಾಸನ ಜಿಲ್ಲೆಯ (ಕುಳಿತವರು ಎಡದಿಂದ) ಎಂ.ಕವಿತಾ, ಲಕ್ಷ್ಮಿ ಮತ್ತು ಆರ್. ಅರುಣ, ಮಂಜೇಗೌಡ, ತಿಮ್ಮೇಗೌಡ ಮತ್ತು ಶಿವಕುಮಾರ ಸ್ವಾಮಿ ಅವರಿಗೆ ಅತ್ಯುತ್ತಮ ರೈತ ಮಹಿಳೆ ಮತ್ತು ರೈತ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು. ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ, ಸಂಸದ ಸದಾನಂದಗೌಡ, ಶಾಸಕ ಕೃಷ್ಣ ಬೈರೇಗೌಡ, ಕೃಷಿ ಸಚಿವ ಬಿ.ಸಿ.ಪಾಟೀಲ್, ಕೃಷಿ ವಿಶ್ವವಿದ್ಯಾಲಯ ಕುಲಪತಿ ಎಸ್.ವಿ.ಸುರೇಶ್ ಇದ್ದಾರೆ –ಪ್ರಜಾವಾಣಿ ಚಿತ್ರ: ಎಂ.ಎಸ್‌.ಮಂಜುನಾಥ್‌
ಬೆಂಗಳೂರಿನ ಜೆಕೆವಿಕೆಯಲ್ಲಿ ಶನಿವಾರ ನಡೆದ ಕೃಷಿ ಮೇಳದಲ್ಲಿ ಹಾಸನ ಜಿಲ್ಲೆಯ (ಕುಳಿತವರು ಎಡದಿಂದ) ಎಂ.ಕವಿತಾ, ಲಕ್ಷ್ಮಿ ಮತ್ತು ಆರ್. ಅರುಣ, ಮಂಜೇಗೌಡ, ತಿಮ್ಮೇಗೌಡ ಮತ್ತು ಶಿವಕುಮಾರ ಸ್ವಾಮಿ ಅವರಿಗೆ ಅತ್ಯುತ್ತಮ ರೈತ ಮಹಿಳೆ ಮತ್ತು ರೈತ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು. ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ, ಸಂಸದ ಸದಾನಂದಗೌಡ, ಶಾಸಕ ಕೃಷ್ಣ ಬೈರೇಗೌಡ, ಕೃಷಿ ಸಚಿವ ಬಿ.ಸಿ.ಪಾಟೀಲ್, ಕೃಷಿ ವಿಶ್ವವಿದ್ಯಾಲಯ ಕುಲಪತಿ ಎಸ್.ವಿ.ಸುರೇಶ್ ಇದ್ದಾರೆ –ಪ್ರಜಾವಾಣಿ ಚಿತ್ರ: ಎಂ.ಎಸ್‌.ಮಂಜುನಾಥ್‌   

ಬೆಂಗಳೂರು: ‘ಕೃಷಿ ವಿಶ್ವವಿದ್ಯಾಲಯಗಳ ತಜ್ಞರು, ಪ್ರಾಧ್ಯಾಪಕರು ಹಾಗೂ ವಿಸ್ತರಣಾ ನಿರ್ದೇಶಕರು ಕ್ಯಾಂಪಸ್ ಬಿಟ್ಟು ಕೃಷಿಕರ ಜಮೀನುಗಳಲ್ಲಿಯೇ ಪ್ರಯೋಗ ನಡೆಸಬೇಕು’ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.

ಬೆಂಗಳೂರು ಕೃಷಿ ವಿಶ್ವವಿದ್ಯಾಲಯದ ಜಿಕೆವಿಕೆ ಆವರಣದಲ್ಲಿ ನಡೆಯುತ್ತಿರುವ ಕೃಷಿ ಮೇಳದಲ್ಲಿ ಶನಿವಾರ ಪ್ರಗತಿಪರ ಕೃಷಿಕರಿಗೆ ಪ್ರಶಸ್ತಿ ಪ್ರದಾನ ಮಾಡಿ ಅವರು ಮಾತನಾಡಿದರು.

ಕ್ಯಾಂಪಸ್‌ನಲ್ಲಿ ಎಲ್ಲ ವ್ಯವಸ್ಥೆ ಇರುತ್ತದೆ. ಅಲ್ಲಿ ಹೊಸ ತಳಿ ಪ್ರಯೋಗ ನಡೆಸುವುದು ಹೆಚ್ಚುಗಾರಿಕೆ ಅಲ್ಲ. ಆಯಾ ಭಾಗದ ಭೂಮಿಯ ಫಲವತ್ತತೆ ಅರಿತು ಅಲ್ಲಿಯೇ ಪ್ರಯೋಗಗಳು ನಡೆಯಬೇಕು. 10 ಕೃಷಿ ವಲಯದ ವ್ಯಾಪ್ತಿಯಲ್ಲಿ ಇದು ಅನುಷ್ಠಾನಕ್ಕೆ ತರಬೇಕು ಎಂದು ಸೂಚನೆ ನೀಡಿದರು.

ADVERTISEMENT

ಕೃಷಿ ಕ್ಷೇತ್ರದಲ್ಲಿ ಬದಲಾವಣೆಗಳು ನಡೆದರೆ ಆದಾಯ ವೃದ್ಧಿ ಆಗಲಿದೆ. 130 ಕೋಟಿ ಜನರಿಗೆ ಆಹಾರ ಉತ್ಪಾದನೆ ಮಾಡಬೇಕಿದೆ. ಭಾರತ ಆಹಾರದಲ್ಲಿ ಸ್ವಾವಲಂಬನೆ ಸಾಧಿಸಿದ್ದು ಅದಕ್ಕೆ ರೈತರ ಪರಿಶ್ರಮವೇ ಕಾರಣ. ಪ್ರಸ್ತುತ ಕೃಷಿ ಕ್ಷೇತ್ರವು ಬೆಳೆದಿದೆ. ಆದರೆ, ರೈತರು ಬೆಳೆದಿಲ್ಲ ಎಂದು ಆತಂಕ ವ್ಯಕ್ತಪಡಿಸಿದರು.

‘ಹವಾಮಾನ ವೈಪರೀತ್ಯವು ಕೃಷಿ ಕ್ಷೇತ್ರದ ಮೇಲೆ ಗಂಭೀರ ಪರಿಣಾಮ ಬೀರಿದೆ. ಉತ್ತಮ ಮಳೆಯಾದರೆ ಮಾತ್ರ ಆಹಾರದ ಉತ್ಪಾದನೆ ಹೆಚ್ಚಲಿದೆ. ಕೃಷಿ ಹಾಗೂ ರೈತರ ವಿಚಾರದಲ್ಲಿ ಯಾರೂ ರಾಜಕೀಯ ಬೆರೆಸಬಾರದು’ ಎಂದು ನುಡಿದರು.

‘ಅಭಿವೃದ್ಧಿ ಸೇರಿದಂತೆ ನಾನಾ ಕಾರಣಕ್ಕೆ ಕೃಷಿ ಜಮೀನು ಕಡಿಮೆ ಆಗುತ್ತಿದೆ’ ಎಂದು ಆತಂಕ ವ್ಯಕ್ತಪಡಿಸಿದರು.

ಕಂದಾಯ ಸಚಿವ ಆರ್‌.ಅಶೋಕ ಮಾತನಾಡಿ, ರಾಜ್ಯದಲ್ಲಿ 11 ಲಕ್ಷ ಹೆಕ್ಟೇರ್ ಜಮೀನು ಪಾಳು ಬಿದ್ದಿದೆ. ಅದು ಕೃಷಿಗೆ ಬಳಕೆ ಆಗಬೇಕು. ಚಿಕ್ಕಮಗಳೂರು, ಕೊಡಗು ಹಾಗೂ ಹಾಸನದಲ್ಲಿ ಸರ್ಕಾರಿ ಜಮೀನಿನಲ್ಲಿ ಕೃಷಿ ಮಾಡಿದವರಿಗೆ ಅದೇ ಜಮೀನು ಗುತ್ತಿಗೆ ನೀಡುವ ಪ್ರಕ್ರಿಯೆ ಆರಂಭಿಸಲಾಗಿದೆ’ ಎಂದರು.

ಕೃಷಿ ಸಚಿವ ಬಿ.ಸಿ.ಪಾಟೀಲ ಮಾತನಾಡಿ, ‘ರಾಜ್ಯದಲ್ಲಿ ಶೇ 10 ಹಾಗೂ ದೇಶದಲ್ಲಿ ಶೇ 3ರಷ್ಟು ಆಹಾರೋತ್ಪಾದನೆ ಹೆಚ್ಚಳವಾಗಿದೆ. ರೈತಶಕ್ತಿ ಯೋಜನೆ ಅಡಿ 10 ಲೀಟರ್‌ ತನಕ ಡೀಸೆಲ್‌ ಮೇಲೆ ಸಿಬ್ಸಿಡಿ ನೀಡಲಾಗುತ್ತಿದೆ. ಸಮಗ್ರ ಕೃಷಿಯಿಂದ ಅಧಿಕ ಲಾಭ ಗಳಿಸಬಹುದು’ ಎಂದು ಹೇಳಿದರು.

ಸಂಸದ ಡಿ.ವಿ.ಸದಾನಂದಗೌಡ ಅವರು, ‘ಕೃಷಿ ಮೇಳವು ಮೈಸೂರು ದಸರಾದಂತೆ ಭಾಸವಾಗುತ್ತಿದೆ. ಕೋವಿಡ್‌ ಸಂಕಷ್ಟದಲ್ಲಿ ಎಲ್ಲ ಕ್ಷೇತ್ರದ ಜಿಡಿಪಿ ಕುಸಿದಿದ್ದರೂ ಕೃಷಿ ಕ್ಷೇತ್ರ ಜಿಡಿಪಿ ಶೇ 3.5ರಷ್ಟು ಹೆಚ್ಚಳವಾಗಿತ್ತು. ಅದಕ್ಕೆ ರೈತರ ಪರಿಶ್ರಮವೇ ಕಾರಣ’
ಎಂದರು.

ಕೃಷಿ ವಿವಿಯ ಕುಲಪತಿ ಡಾ.ಎಸ್‌.ವಿ.ಸುರೇಶ್ ಹಾಜರಿದ್ದರು.

ಅಗತ್ಯಕ್ಕೆ ತಕ್ಕಂತೆ ಸಂಶೋಧನೆ

ರೈತರ ಅನುಕೂಲಕ್ಕೆ ತಕ್ಕಂತೆ ಸಂಶೋಧನೆಗಳು ನಡೆಯಬೇಕು ಎಂದು ಶಾಸಕ ಕೃಷ್ಣ ಬೈರೇಗೌಡ ಅವರು ಸಲಹೆ ನೀಡಿದರು.

ಕೃಷಿಕರ ಆದಾಯ ಕುಸಿಯುತ್ತಿದೆ ಎಂದು ಸಮೀಕ್ಷೆಗಳು ಹೇಳುತ್ತಿವೆ. ಇದರಿಂದ ರೈತರು ಖರ್ಚು ಕಡಿಮೆ ಮಾಡುವ ಸ್ಥಿತಿಯಿದೆ. ಹೀಗಾಗಿ, ರೈತರ ಅನುಕೂಲಕ್ಕೆ ಬರುವ ಪ್ರಯೋಗಗಳು ನಡೆಯಬೇಕು. ಅವುಗಳು ಕೃಷಿಕರ ಜಮೀನಿಗೂ ತಲುಪಬೇಕು ಎಂದು ಸಲಹೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.