ADVERTISEMENT

ಹೊರಗುತ್ತಿಗೆ ನೌಕರರನ್ನು ಕೈಬಿಟ್ಟ ಬಿಡಿಎ?

ಕೋವಿಡ್‌ ಸಂದರ್ಭದಲ್ಲಿ ಹೊಸ ಕೆಲಸ ಸಿಗದು: ಕೆಲಸ ಕಳೆದುಕೊಂಡವರ ಅಳಲು

​ಪ್ರಜಾವಾಣಿ ವಾರ್ತೆ
Published 16 ಜೂನ್ 2021, 20:32 IST
Last Updated 16 ಜೂನ್ 2021, 20:32 IST
   

ಬೆಂಗಳೂರು: ಕೋವಿಡ್‌ ಸಂದರ್ಭದಲ್ಲಿ ಯಾವುದೇ ಸಿಬ್ಬಂದಿಯನ್ನು ಕೆಲಸದಿಂದ ಕಿತ್ತುಹಾಕಬಾರದು ಎಂದು ಕಾರ್ಮಿಕ ಇಲಾಖೆ ಅಧಿಸೂಚನೆ ಹೊರಡಿಸಿದೆ. ಆದರೆ, ಸರ್ಕಾರದ ಅಂಗವೇ ಆಗಿರುವ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರವು (ಬಿಡಿಎ) ಕೋವಿಡ್‌ ಸಂದರ್ಭದಲ್ಲೇ ಹೊರಗುತ್ತಿಗೆ ಕಾರ್ಮಿಕರನ್ನು ಕೆಲಸದಿಂದ ಏಕಾಏಕಿ ಕೈಬಿಟ್ಟಿದೆ.

ಕೆಲಸ ಕಳೆದುಕೊಂಡ ಕೆಲವು ಸಿಬ್ಬಂದಿ ಈ ಬಗ್ಗೆ ‘ಪ್ರಜಾವಾಣಿ’ ಬಳಿ ಅಳಲು ತೋಡಿಕೊಂಡಿದ್ದಾರೆ. ದಿಢೀರ್‌ ಆಗಿಕೆಲಸ ಕಳೆದುಕೊಂಡವರಲ್ಲಿ 10 ವರ್ಷಕ್ಕೂ ಅಧಿಕ ಕಾಲ ಪ್ರಾಧಿಕಾರಕ್ಕಾಗಿ ದುಡಿದವರೂ ಇದ್ದಾರೆ.

‘ಬಿಡಿಎ ಕೇಂದ್ರ ಕಚೇರಿಯಲ್ಲಿ 13 ವರ್ಷಗಳಿಂದ ದತ್ತಾಂಶ ನಮೂದಿಸುವ ಸಿಬ್ಬಂದಿಯಾಗಿ (ಡಿಇಒ) ಕಾರ್ಯ ನಿರ್ವಹಿಸುತ್ತಿದ್ದೆ.ಸ್ಟ್ರಾಟೆಜಿಕ್‌ ಸರ್ವೀಸಸ್‌ ಕಂಪನಿಯ ಮೂಲಕ ನಾನು ಈ ಕೆಲಸ ಪಡೆದಿದ್ದೆ. ಇದೇ 25ರಿಂದ ಕರ್ತವ್ಯಕ್ಕೆ ಹಾಜರಾಗಬೇಕಿಲ್ಲ ಎಂದು ಕಂಪನಿ ಮೇಲ್‌ ಮಾಡಿದೆ. ಮುಂದೇನು ಎಂದೇ ತೋಚದ ಸ್ಥಿತಿ ಎದುರಾಗಿದೆ’ ಎಂದು ಡಿಇಒ ಒಬ್ಬರು ‘ಪ್ರಜಾವಾಣಿ’ ಬಳಿ ನೋವು ಹೇಳಿಕೊಂಡರು.

ADVERTISEMENT

‘ನನಗೆ 13 ವರ್ಷದ ಮಗನಿದ್ದಾನೆ. ವಯಸ್ಸಾದ ತಂದೆ ತಾಯಿಯನ್ನೂ ನೋಡಿಕೊಳ್ಳಬೇಕು. ಬಿಡಿಎಯಲ್ಲಿ ತಿಂಗಳಿಗೆ ಕೇವಲ ₹ 16,500 ಸಂಬಳ ಸಿಗುತ್ತಿತ್ತು. ನಗರದಲ್ಲಿ ಮನೆ ಬಾಡಿಗೆ ಕಟ್ಟಲು ಹಣ ಸಾಲದು ಎಂಬ ಕಾರಣಕ್ಕೆ 40 ಕಿ.ಮೀ ದೂರದ ಊರಿನಿಂದ ರೈಲಿನಲ್ಲಿ ನಗರಕ್ಕೆ ಬಂದು ಕೆಲಸ ಮಾಡುತ್ತಿದ್ದೆ. ಕೋವಿಡ್‌ ಸಂದರ್ಭದಲ್ಲಿ ಎಲ್ಲೂ ಹೊಸ ಕೆಲಸ ಸಿಗುತ್ತಿಲ್ಲ’ ಎಂದು ಅವರು ತಮ್ಮ ಪರಿಸ್ಥಿತಿ ವಿವರಿಸಿದರು.

‘ನನ್ನ ಮಗುವಿಗೆ ಹುಷಾರಿಲ್ಲ ಎಂಬ ಕಾರಣಕ್ಕೆ ವಾರದಿಂದ ನಾನು ಕೆಲಸಕ್ಕೆ ರಜೆ ಹಾಕಿದ್ದೆ. ಕೆಲವರನ್ನು ಕೆಲಸದಿಂದ ತೆಗೆದಿದ್ದಾರೆ ಎಂದು ಗೊತ್ತಾಗಿದೆ. ನನಗೆ ಇನ್ನೂ ಈ ಬಗ್ಗೆ ಯಾವುದೇ ಸಂದೇಶ ಬಂದಿಲ್ಲ. ಕೆಲಸ ಕಳೆದುಕೊಂಡರೆ ಜೀವನ ನಿರ್ವಹಣೆ ತುಂಬಾ ಕಷ್ವಾವಾಗಲಿದೆ’ ಎಂದು ಮಹಿಳಾ ಸಿಬ್ಬಂದಿಯೊಬ್ಬರು ತಿಳಿಸಿದರು.

ಈ ಕುರಿತು ಪ್ರತಿಕ್ರಿಯಿಸಿದ ಸ್ಟ್ರಾಟೆಜಿಕ್‌ ಸರ್ವಿಸಸ್‌ ಕಂಪನಿಯ ಅಧಿಕಾರಿಯೊಬ್ಬರು, ‘ಕೆಲವು ಸಿಬ್ಬಂದಿಯನ್ನು ಬಿಡಿಎ ಕಚೇರಿಯ ಕೆಲಸದಿಂದ ಕೈಬಿಟ್ಟಿದ್ದು ನಿಜ. ಬಿಡಿಎ ಸೂಚನೆ ಮೇರೆಗೆ ಈ ಕ್ರಮ ಕೈಗೊಂಡಿದ್ದೇವೆ. ಕೆಲವರು ಕಚೇರಿ ಕಾರ್ಯಗಳಿಗೆ ಅವಶ್ಯಕವಾದ ಕೌಶಲ ಹೊಂದಿಲ್ಲ ಎಂದು ಬಿಡಿಎ ತಿಳಿಸಿದೆ. ಕೆಲಸ ಕಳೆದುಕೊಂಡವರು ಹೊಂದಿರುವ ಕೌಶಲಕ್ಕೆ ಸರಿಹೊಂದುವ ಬೇರೆ ಕೆಲಸಗಳು ಲಭ್ಯ ಇದ್ದರೆ, ಅಲ್ಲಿಗೆ ಅವರನ್ನು ನಿಯೋಜಿಸಲು ಪ್ರಯತ್ನಿಸುತ್ತೇವೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.