ADVERTISEMENT

ಬಿಪಿಎಲ್‌ ಕುಟುಂಬಗಳಿಗೆ ₹10 ಸಾವಿರ ಪರಿಹಾರಕ್ಕೆ ಆಗ್ರಹ

ಬಡ ಕುಟುಂಬಗಳಿಗೆ ಆಹಾರ ಕಿಟ್‌ ವಿತರಿಸಿದ ಬೈರತಿ ಸುರೇಶ್‌

​ಪ್ರಜಾವಾಣಿ ವಾರ್ತೆ
Published 30 ಜೂನ್ 2021, 21:34 IST
Last Updated 30 ಜೂನ್ 2021, 21:34 IST
ಹೆಬ್ಬಾಳದಲ್ಲಿ ಬುಧವಾರ ಶಾಸಕ ಬೈರತಿ ಸುರೇಶ್‌ ಅವರು ಬಡವರಿಗೆ ಆಹಾರದ ಧಾನ್ಯದ ಕಿಟ್‌ಗಳನ್ನು ವಿತರಿಸಿದರು.
ಹೆಬ್ಬಾಳದಲ್ಲಿ ಬುಧವಾರ ಶಾಸಕ ಬೈರತಿ ಸುರೇಶ್‌ ಅವರು ಬಡವರಿಗೆ ಆಹಾರದ ಧಾನ್ಯದ ಕಿಟ್‌ಗಳನ್ನು ವಿತರಿಸಿದರು.   

ಬೆಂಗಳೂರು: ’ಕೋವಿಡ್‌ನಿಂದ ಸಂಕಷ್ಟಕ್ಕೆ ಸಿಲುಕಿದ ಬಿಪಿಎಲ್‌ ಕುಟುಂಬಗಳಿಗೆ ತಲಾ ₹10 ಸಾವಿರ ಪರಿಹಾರ ನೀಡಬೇಕು‘ ಎಂದು ಹೆಬ್ಬಾಳ ಶಾಸಕ ಬೈರತಿ ಸುರೇಶ್‌ ಆಗ್ರಹಿಸಿದರು.

ಕೋವಿಡ್‌ ಹಾಗೂ ಲಾಕ್‌ಡೌನ್‌ನಿಂದ ಸಂಕಷ್ಟಕ್ಕೆ ಸಿಲುಕಿದ ವರಿಗೆ ಹೆಬ್ಬಾಳದಲ್ಲಿ ಬುಧವಾರ ಆಹಾರದ ಕಿಟ್‌ಗಳನ್ನು ವಿತರಿಸಿ ಮಾತ ನಾಡಿದ ಅವರು, ’ರಾಜ್ಯ ಸರ್ಕಾರ ಘೋಷಿಸಿರುವ ಪರಿಹಾರದ ಪ್ಯಾಕೇಜ್‌ ಏನೇನೂ ಸಾಲದು. ₹2 ಸಾವಿರ ನೆರವು ಪಡೆಯಲು ಅದಕ್ಕಿಂತ ಹೆಚ್ಚು ಖರ್ಚು ಮಾಡಬೇಕಾದ ಸ್ಥಿತಿ ಇದೆ. ಕಾಟಾಚಾರಕ್ಕೆ ಸರ್ಕಾರ ಪ್ಯಾಕೇಜ್‌ ಘೋಷಿಸಿದೆ’ ಎಂದು ಟೀಕಿಸಿದರು.

‘ಕೋವಿಡ್‌ನಿಂದ ಮೃತಪಟ್ಟ ಬಿ‍ಪಿಎಲ್‌ ಕುಟುಂಬಗಳಿಗೆ ತಲಾ ₹1 ಲಕ್ಷ ಪರಿಹಾರ ನೀಡುವುದಾಗಿ ಸರ್ಕಾರ ಪ್ರಕಟಿಸಿದೆ. ಪರಿಹಾರ ಮೊತ್ತವನ್ನು ಕನಿಷ್ಠ ₹5 ಲಕ್ಷಕ್ಕೆ ಏರಿಸಬೇಕು ಹಾಗೂ ಎಲ್ಲ ಕುಟುಂಬಗಳಿಗೆ ಪರಿಹಾರ ನೀಡಬೇಕು‘ ಎಂದೂ ಅವರು ಒತ್ತಾಯಿಸಿದರು.

ADVERTISEMENT

50 ಸಾವಿರ ಕುಟುಂಬಗಳಿಗೆ ಕಿಟ್‌: ’ನನ್ನ ಕ್ಷೇತ್ರದಲ್ಲಿ ಬಡವರು ಹಾಗೂ ಮಧ್ಯಮವರ್ಗದವರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಲಾಕ್‌ಡೌನ್‌ನಿಂದಾಗಿ ಅವರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಕೊರೊನಾ ಎರಡನೇ ಅಲೆ ವ್ಯಾಪಿಸಿದ ಕೂಡಲೇ 50 ಸಾವಿರ ಕುಟುಂಬಗಳಿಗೆ ಆಹಾರದ ಕಿಟ್‌ ವಿತರಿಸಲಾಯಿತು‘ ಎಂದು ಬೈರತಿ ಸುರೇಶ್‌ ಹೇಳಿದರು.

’ಅದೇ ಕುಟುಂಬಗಳಿಗೆ ಕಳೆದ ವಾರ ದಿಂದ ಎರಡನೇ ಬಾರಿಗೆ ಆಹಾರದ ಕಿಟ್‌ ನೀಡಲಾಗುತ್ತಿದೆ. ದಿನಕ್ಕೆ 5000 ಕುಟುಂಬಗಳಿಗೆ ಕಿಟ್‌ ನೀಡಲಾಗುತ್ತಿದ್ದು, ಇನ್ನೂ ಕೆಲವು ದಿನ ವಿತರಿಸಲಾಗುವುದು. ಜತೆಗೆ, ಕಳೆದ 43 ದಿನಗಳಿಂದ ಪ್ರತಿನಿತ್ಯ 4,000 ಬಡವರಿಗೆ ಊಟ ವಿತರಿಸಲಾಗುತ್ತಿದೆ‘ ಎಂದು ಅವರು ಹೇಳಿದರು.

’ಕೋವಿಡ್‌ ಸೇನಾನಿಗಳಿಗೆ ಎರಡು ತಿಂಗಳಿಗೆ ಆಗುವಷ್ಟು ಆಹಾರ ಧಾನ್ಯಗಳನ್ನು ನೀಡಲಾಗಿದೆ. ಕ್ಷೇತ್ರದ ದೇವಸ್ಥಾನಗಳ ಅರ್ಚಕರು, ಮಸೀದಿಗಳ ಮೌಲ್ವಿಗಳು ಹಾಗೂ ಚರ್ಚ್‌ಗಳ ಪ್ಯಾಸ್ಟರ್‌ಗಳಿಗೆ ಸಹ ದಿನಸಿ ಕಿಟ್‌ ವಿತರಣೆ ಮಾಡಲಾಗಿದೆ. ಈ ಎಲ್ಲ ಕಾರ್ಯಗಳಿಗೆ ₹2 ಕೋಟಿಗೂ ಅಧಿಕ ಖರ್ಚು ಮಾಡಲಾಗಿದೆ‘ ಎಂದೂ ಅವರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.