ADVERTISEMENT

ಜಿಕೆವಿಕೆ: ನಾಳೆಯಿಂದ ಕೃಷಿ ಮೇಳ; ಮಾಹಿತಿಗೆ ಮೊಬೈಲ್‌ ಆ್ಯಪ್

ಬೆಂಗಳೂರು

​ಪ್ರಜಾವಾಣಿ ವಾರ್ತೆ
Published 23 ಅಕ್ಟೋಬರ್ 2019, 7:31 IST
Last Updated 23 ಅಕ್ಟೋಬರ್ 2019, 7:31 IST
ಕೃಷಿಮೇಳ 2019 ಮೊಬೈಲ್‌ ಆ್ಯಪ್‌
ಕೃಷಿಮೇಳ 2019 ಮೊಬೈಲ್‌ ಆ್ಯಪ್‌   

ಬೆಂಗಳೂರು: ಈ ಬಾರಿಯ ಕೃಷಿ ಮೇಳ ಗಾಂಧಿ ಕೃಷಿ ವಿಜ್ಞಾನ ಕೇಂದ್ರದಲ್ಲಿ (ಜಿಕೆವಿಕೆ) ಇದೇ 24ರಿಂದ 27ರವರೆಗೆ ನಡೆಯಲಿದೆ. ಕೃಷಿ ಮೇಳದ ಸಂಪೂರ್ಣ ಮಾಹಿತಿ ಪಡೆಯಲು ಜಿಪಿಎಸ್‌ ಆಧರಿತ ‘krishimela 2019’ ಮೊಬೈಲ್‌ ಆ್ಯಪ್‌ ಸಿದ್ಧಪಡಿಸಲಾಗಿದೆ.

ರೈತರು ಹಾಗೂ ಮೇಳಕ್ಕೆ ಭೇಟಿ ನೀಡುವವರು ತಮ್ಮ ಮೊಬೈಲ್‌ ಮೂಲಕವೇ ಕೃಷಿ ಮೇಳದಲ್ಲಿ ಎಲ್ಲೆಲ್ಲಿ ಏನೇನಿದೆ? ಎಂಬುದರ ಮಾಹಿತಿ ಪಡೆದುಕೊಳ್ಳಬಹುದು. ಕನ್ನಡ ಹಾಗೂ ಇಂಗ್ಲಿಷ್ ಭಾಷೆಯಲ್ಲಿ ಮಾಹಿತಿ ಲಭ್ಯ ಎಂದು ಕೃಷಿ ವಿಶ್ವವಿದ್ಯಾಲಯದ ಕುಲಪತಿ ಡಾ. ಎಸ್‌.ರಾಜೇಂದ್ರ ಪ್ರಸಾದ್‌ ತಿಳಿಸಿದರು.

ಗೂಗಲ್‌ ಪ್ಲೇ ಸ್ಟೋರ್‌ (Play store)ನಲ್ಲಿ 'Krishimela 2019 Bengaluru' ಎಂದು ಟೈಪಿಸಿ ಅಧಿಕೃತ ಆ್ಯಪ್‌ ಪುಟಕ್ಕೆ ತೆರಳಿ ಅಪ್ಲಿಕೇಷನ್‌ ಇನ್‌ಸ್ಟಾಲ್‌ ಮಾಡಿಕೊಳ್ಳಬಹುದು.

ADVERTISEMENT

ಕೃಷಿ ಮೇಳಕ್ಕೆ ತಲುಪುವುದು ಹೇಗೆ, ಕೃಷಿ ಮೇಳದಲ್ಲಿನ ವಿಶೇಷ ಆಕರ್ಷಣೆಗಳು ಏನು, ಬೆಳೆ ಪ್ರಾತ್ಯಕ್ಷಿಕೆ, ಪ್ರಶಸ್ತಿ ಪುರಸ್ಕಾರ, ಕೃಷಿ ಮೇಳದ ವಿನ್ಯಾಸ,...ಹೀಗೆ ಈ ಬಾರಿಯ ಕೃಷಿ ಮೇಳದ ಬಗೆಗಿನ ಎಲ್ಲ ಮಾಹಿತಿಯೂ ಈ ಮೊಬೈಲ್‌ ಆ್ಯಪ್‌ನಲ್ಲಿ ಲಭ್ಯವಿದೆ. ಆ್ಯಪ್‌ನಲ್ಲಿ ಕನ್ನಡ ಮತ್ತು ಇಂಗ್ಲಿಷ್‌ ಎರಡೂ ಭಾಷೆಗಳಲ್ಲಿ ಮಾಹಿತಿ ಪಡೆಯಬಹುದು.

ಮಕ್ಕಳು ಸಹ ಇಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸೇರುವುದರಿಂದ ಮೇಳದಲ್ಲಿ ಹಬ್ಬದಂತಹ ಮಾತಾವರಣವೂ ನಿರ್ಮಾಣವಾಗುತ್ತದೆ. ಮನೆಮಂದಿಯೆಲ್ಲ ಜತೆಗೂಡಿ ಬರುವುದೂ ಇದೆ. ಹಾಗಾಗಿ, ಇಲ್ಲಿ ವಾಹನಗಳ ಪಾರ್ಕಿಂಗ್‌ ಕುರಿತಾಗಿಯೂ ಆ್ಯಪ್‌ನಲ್ಲಿ ಮಾಹಿತಿ ನೀಡಲಾಗಿದೆ. ಬಸ್‌, ಕಾರು, ದ್ವಿಚಕ್ರ ವಾಹನಗಳ ಪಾರ್ಕಿಂಗ್‌ ಸ್ಥಳ, ಆಹಾರ ದೊರೆಯುವ ಸ್ಥಳ, ವೈದ್ಯಕೀಯ ಕೇಂದ್ರ, ಶೌಚಾಲಯ ಇರುವ ಸ್ಥಳದ ಮಾಹಿತಿಯನ್ನೂ ಇಲ್ಲಿ ಪಡೆಯಬಹುದು.

ವಿಶೇಷ ಸೌಲಭ್ಯಗಳು: ಜಿಕೆವಿಕೆ ಪ್ರವೇಶದ್ವಾರದಿಂದ ಉಚಿತ ಬಸ್‌ ಸೇವೆ, ರೈತರ ಸಂಚಾರಕ್ಕೆ ‘ಬಗ್ಗೀಸ್‌’ ಸೇವೆ, ತುರ್ತು ಸೇವೆಗೆ ಎರಡು ಆಂಬುಲೆನ್ಸ್‌, ರೈತರಿಗೆ ಉಚಿತ ಆರೋಗ್ಯ ತಪಾಸಣೆ ವ್ಯವಸ್ಥೆ ಇದೆ.

ನಿಖರ ಕೃಷಿ– ಸುಸ್ಥಿರ ಅಭಿವೃದ್ಧಿ

‘ನಿಖರ ಕೃಷಿ– ಸುಸ್ಥಿರ ಅಭಿವೃದ್ಧಿ’ ಧ್ಯೇಯದೊಂದಿಗೆ ನಡೆಯಲಿರುವ ಮೇಳದಲ್ಲಿ ಪ್ರಾತ್ಯಕ್ಷಿಕೆಗಳ ಮೂಲಕವೇ ಕೃಷಿಯ ನೂತನ ವಿಧಾನಗಳು ಹಾಗೂ ತಂತ್ರಜ್ಞಾನಗಳ ಬಗ್ಗೆ ನಿಖರ ಮಾಹಿತಿ ನೀಡಲಿದ್ದೇವೆ’ ಡಾ. ಎಸ್‌.ರಾಜೇಂದ್ರ ಪ್ರಸಾದ್‌ ತಿಳಿಸಿದರು.

‘ಮೇಳದಲ್ಲಿ ಕೃಷಿ ವಸ್ತು ಪ್ರದರ್ಶನಕ್ಕಾಗಿ 700ಕ್ಕೂ ಅಧಿಕ ಮಳಿಗೆಗಳುಇರಲಿವೆ. ಕೃಷಿ ವಿಶ್ವವಿದ್ಯಾನಿಲಯಗಳು, ಕೃಷಿ, ಜಲಾನಯನ ಅಭಿವೃದ್ಧಿ, ತೋಟಗಾರಿಕೆ, ರೇಷ್ಮೆ, ಅರಣ್ಯ, ಪಶುಸಂಗೋಪನೆ, ಮೀನುಗಾರಿಕೆ, ಕೃಷಿ ಮಾರುಕಟ್ಟೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಕರ್ನಾಟಕ ಹಾಲು ಮಹಾಮಂಡಳಿ, ಸ್ವ-ಸಹಾಯ ಸಂಘಗಳು ಭಾಗವಹಿಸಲಿವೆ. 12 ಲಕ್ಷ ಮಂದಿ ಭೇಟಿ ನೀಡುವ ನಿರೀಕ್ಷೆ ಇದೆ’ ಎಂದು ವಿವರಿಸಿದರು.

‘‌24ರಂದು ಬೆಳಿಗ್ಗೆ 11.30ಕ್ಕೆ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಮೇಳ ಉದ್ಘಾಟಿಸಿ‌, ಎಂ.ಎಚ್‌.ಮರಿಗೌಡ ರಾಜ್ಯಮಟ್ಟದ ಅತ್ಯುತ್ತಮ ತೋಟಗಾರಿಕಾ ರೈತ ಪ್ರಶಸ್ತಿ, ಆರ್‌.ದ್ವಾರಕೀನಾಥ್‌ ಅತ್ಯುತ್ತಮ ರೈತ ಹಾಗೂ ವಿಸ್ತರಣಾ ಕಾರ್ಯಕರ್ತ ಪ್ರಶಸ್ತಿಗಳನ್ನು ಪ್ರದಾನ ಮಾಡಲಿದ್ದಾರೆ’ ಎಂದರು.

‘ಅತಿಥಿಗಳಾಗಿ ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ, ಶಾಸಕ ಕೃಷ್ಣಬೈರೇಗೌಡ, ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಟಿ.ಎಂ.ವಿಜಯಭಾಸ್ಕರ್‌, ಅಭಿವೃದ್ಧಿ ಆಯುಕ್ತೆ ವಂದಿತಾ ಶರ್ಮ, ಕೃಷಿ ಇಲಾಖೆಯ ಕಾರ್ಯದರ್ಶಿ ರಾಜೇಂದರ್‌ ಕುಮಾರ್‌ ಕಟಾರಿಯಾ ಭಾಗವಹಿಸಲಿದ್ದಾರೆ’ ಎಂದರು.

ನೇಗಿಲ ಯೋಗಿಗೆ ಪ್ರಶಸ್ತಿ: ಎಚ್.ಡಿ.ದೇವೇಗೌಡ ಅತ್ಯುತ್ತಮ ರೈತ ಪ್ರಶಸ್ತಿಗೆ ಎಸ್‌.ಹೊಯ್ಸಳ (ಹಾಸನ), ಅತ್ಯುತ್ತಮ ರೈತ ಮಹಿಳಾ ಪ್ರಶಸ್ತಿಗೆ ಕಮಲಮ್ಮ (ರಾಮನಗರ) ಆಯ್ಕೆಯಾಗಿದ್ದಾರೆ. ಸಿ.ಬೈರೇಗೌಡ ರಾಜ್ಯ ಮಟ್ಟದ ಅತ್ಯುತ್ತಮ ಪ್ರಶಸ್ತಿಗೆ ರವೀಶ್‌ (ತುಮಕೂರು), ಎಂ.ಎಚ್‌.ಮರೀಗೌಡ ರಾಜ್ಯಮಟ್ಟದ ಅತ್ಯುತ್ತಮ ತೋಟಗಾರಿಕಾ ರೈತ ಪ್ರಶಸ್ತಿಗೆ ಜಿ.ರಮೇಶ್‌ (ರಾಮನಗರ), ಕ್ಯಾನ್‌ ಬ್ಯಾಂಕ್‌ ಅತ್ಯುತ್ತಮ ರೈತ ಪ್ರಶಸ್ತಿಗೆ ಶಿವಣ್ಣ ಗೌಡ (ಮಂಡ್ಯ), ರೈತ ಮಹಿಳೆ ಪ್ರಶಸ್ತಿಗೆ ಪಿ.ಮಂಜುಳಾ (ಬೆಂಗಳೂರು ಗ್ರಾಮಾಂತರ), ಆರ್‌.ದ್ವಾರಕೀನಾಥ್‌ ಅತ್ಯುತ್ತಮ ರೈತ ಪ್ರಶಸ್ತಿಗೆ ಎಚ್.ಕೆ.ಕುಮಾರಸ್ವಾಮಿ (ರಾಮನಗರ), ಆರ್‌.ದ್ವಾರಕೀನಾಥ್‌ ಅತ್ಯುತ್ತಮ ವಿಸ್ತರಣಾ ಕಾರ್ಯಕರ್ತ ಪ್ರಶಸ್ತಿಗೆ ಎಸ್‌.ಸವಿತಾ (ರಾಮನಗರ) ಆಯ್ಕೆಯಾಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.