ADVERTISEMENT

ವೈವಾಹಿಕ ಜಾಲತಾಣದಲ್ಲಿ ಪರಿಚಯ: ₹1.34 ಲಕ್ಷ ವಂಚನೆ

​ಪ್ರಜಾವಾಣಿ ವಾರ್ತೆ
Published 28 ಫೆಬ್ರುವರಿ 2020, 5:51 IST
Last Updated 28 ಫೆಬ್ರುವರಿ 2020, 5:51 IST
   

ಬೆಂಗಳೂರು: ವೈವಾಹಿಕ ಜಾಲತಾಣದಲ್ಲಿ ಪರಿಚಯವಾಗಿದ್ದ ಯುವಕನೊಬ್ಬ ನಗರದ ಮಹಿಳೆಯೊಬ್ಬರಿಂದ ₹1.34 ಲಕ್ಷ ಪಡೆದು ವಂಚಿಸಿದ್ದಾನೆ.

ಈ ಸಂಬಂಧ ಅಶೋಕನಗರ ಠಾಣೆಗೆ ಮಹಿಳೆ ದೂರು ನೀಡಿದ್ದಾರೆ. ಆರೋಪಿಗಳಾದ ಅಬ್ದುಲ್ ಇದ್ರೀಸ್ ಹಾಗೂ ದೀಪಾ ಶರ್ಮಾ ಎಂಬುವರ ವಿರುದ್ಧ ಎಫ್‌ಐಆರ್ ದಾಖಲಾಗಿದೆ.

‘ಜೀವನ್ ಸಾಥಿ ಡಾಟ್ ಕಾಮ್ ಜಾಲತಾಣದ ಮೂಲಕ ಅಬ್ದುಲ್ ಇದ್ರಿಸ್ ಎಂಬಾತ ಪರಿಚಯವಾಗಿದ್ದ. ಇಂಗ್ಲೆಂಡ್‌ನಲ್ಲಿ ಇರುವುದಾಗಿ ಹೇಳಿ, ಅಲ್ಲಿಯ ಜನನ ಪ್ರಮಾಣಪತ್ರ ಹಾಗೂ ಗುರುತಿನ ಚೀಟಿಯನ್ನು ವಾಟ್ಸ್‌ಆ್ಯಪ್‌ನಲ್ಲಿ ಕಳುಹಿಸಿದ್ದ. ಅದನ್ನು ನಂಬಿ ಆತನ ಜೊತೆ ಮಾತನಾಡಲಾರಂಭಿಸಿದ್ದೆ. ನನ್ನನ್ನು ಮದುವೆ ಆಗುವುದಾಗಿ ಹೇಳಿದ್ದ’ ಎಂದು ಮಹಿಳೆ ದೂರಿನಲ್ಲಿ ಹೇಳಿದ್ದಾರೆ.

ADVERTISEMENT

‘ಭಾರತಕ್ಕೆ ಬರುತ್ತಿರುವುದಾಗಿ ಫೆ.23ರಂದು ಆತ ತಿಳಿಸಿದ್ದ. ಅದೇ ದಿನ ವಿದೇಶಿ ನೋಂದಣಿ ವಿಭಾಗದ ಅಧಿಕಾರಿ ಸೋಗಿನಲ್ಲಿ ಕರೆ ಮಾಡಿದ್ದ ದೀಪಾ ಶರ್ಮಾ ಎಂಬಾಕೆ, ‘ಇಂಗ್ಲೆಂಡ್‌ನಿಂದ ಬಂದಿರುವ ಅಬ್ದುಲ್ ಇದ್ರಿಸ್ ವಿಮಾನ ನಿಲ್ದಾಣದಲ್ಲಿದ್ದಾರೆ. ಅವರ ಕ್ರೆಡಿಟ್ ಕಾರ್ಡ್ ಕೆಲಸ ಮಾಡುತ್ತಿಲ್ಲ. ಕೆಲ ಶುಲ್ಕಗಳನ್ನು ಪಾವತಿಸಬೇಕಿದೆ. ನಿಮ್ಮ ಬಳಿ ಹಣ ಕೇಳುವಂತೆ ಹೇಳಿದ್ದಾರೆ’ ಎಂದಿದ್ದಳು. ಅದನ್ನು ನಂಬಿ ಆಕೆ ಹೇಳಿದ್ದ ಬ್ಯಾಂಕ್‌ ಖಾತೆಗೆ ₹ 1.34 ಲಕ್ಷ ಜಮೆ ಮಾಡಿದ್ದೆ. ಅದಾದ ಬಳಿಕ ಇಬ್ಬರೂ ನಾಪತ್ತೆ ಆಗಿದ್ದಾರೆ’ ಎಂದು ಮಹಿಳೆ ಹೇಳಿದ್ದಾರೆ.

ಪೊಲೀಸರು, ‘ಜಾಲತಾಣದಲ್ಲಿ ನಕಲಿ ಖಾತೆ ತೆರೆದು ಆರೋಪಿ ವಂಚಿಸಿದ್ದಾನೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.