ADVERTISEMENT

ಜಂಟಿ ಅಧಿವೇಶನದಲ್ಲಿ ಓಂ ಬಿರ್ಲಾ ಭಾಷಣ: ಕರವೇ ಆಕ್ಷೇಪ

​ಪ್ರಜಾವಾಣಿ ವಾರ್ತೆ
Published 24 ಸೆಪ್ಟೆಂಬರ್ 2021, 5:49 IST
Last Updated 24 ಸೆಪ್ಟೆಂಬರ್ 2021, 5:49 IST

ಬೆಂಗಳೂರು: ‘ವಿಧಾನ ಮಂಡಲದ ಅಧಿವೇಶನಕ್ಕೆ ಲೋಕಸಭೆಯ ಸ್ಪೀಕರ್ ಕರೆ‌ಸುವ ರಾಜ್ಯ ಸರ್ಕಾರದ ತೀರ್ಮಾನ ಸಂಸದೀಯ ಪ್ರಜಾಸತ್ತೆಯ ಮೌಲ್ಯಗಳಿಗೆ ವಿರುದ್ಧವಾದ ನಡೆ’ ಎಂದು ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷ ಟಿ.ಎ.ನಾರಾಯಣಗೌಡ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

‘ಈ ರೀತಿಯ ಉದಾಹರಣೆ ಕರ್ನಾಟಕದ ಇತಿಹಾಸದಲ್ಲಿ ನಡೆದಿರಲಿಲ್ಲ. ಈ ನಡೆಯ ಮೂಲಕ ಕೆಟ್ಟ ಪರಂಪರೆಯೊಂದನ್ನು ಆರಂಭಿಸಲಾಗುತ್ತಿದೆ. ವಿಧಾನ‌ಮಂಡಲದ ಉಭಯ ಸದನಗಳನ್ನು ಉದ್ದೇಶಿಸಿ ಮಾತನಾಡುವ‌ ಅವಕಾಶ ಇರುವುದು ರಾಷ್ಟ್ರಪತಿ ಮತ್ತು ರಾಜ್ಯಪಾಲರಿಗೆ ಮಾತ್ರ. ಲೋಕಸಭೆ ಸ್ಪೀಕರ್ ಕರೆಯಿಸುವ ಮೂಲಕ ಈ ನಿಯಮವನ್ನು ಗಾಳಿಗೆ ತೂರಲಾಗಿದೆ. ಇದು ಒಕ್ಕೂಟ ಪ್ರಜಾತಂತ್ರ ವ್ಯವಸ್ಥೆಯ ಅಣಕ’ ಎಂದು ತಿಳಿಸಿದ್ದಾರೆ.

‘ಲೋಕಸಭೆ ಮತ್ತು ವಿಧಾನಸಭೆ ಎರಡೂ ಕೂಡ ಜನಪ್ರತಿನಿಧಿಗಳ ಸಭೆ. ಒಂದು ಹೆಚ್ಚು, ಒಂದು ಕಡಿಮೆಯಲ್ಲ. ಎರಡು ಕೂಡ ಭಾರತ ಸಂವಿಧಾನದ ಪ್ರಕಾರವೇ ನಡೆಯುತ್ತವೆ. ವಿಧಾನ ಮಂಡಲದಲ್ಲಿ ಲೋಕಸಭೆ ಸ್ಪೀಕರ್ ಕರೆಯಿಸುವ ಔಚಿತ್ಯವಾದರೂ ಏನು. ಈ ಸಂಪ್ರದಾಯ ಹುಟ್ಟುಹಾಕುವ ಅಗತ್ಯವಾದರೂ ಏನಿತ್ತು’ ಎಂದು ಪ್ರಶ್ನಿಸಿದ್ದಾರೆ.

ADVERTISEMENT

‘ಜಂಟಿ ಅಧಿವೇಶವನ್ನು ಕೂಡಲೇ ರದ್ದುಗೊಳಿಸಬೇಕು. ಲೋಕಸಭೆ ಸ್ಪೀಕರ್ ಜತೆ ಬೇರೆ ಸ್ಥಳದಲ್ಲಿ ಕಾರ್ಯಕ್ರಮ ನಡೆಸಿಕೊಳ್ಳಲಿ. ಕರ್ನಾಟಕ ವಿಧಾನಮಂಡಲದ ಪಾವಿತ್ರ್ಯವನ್ನು ಹಾಳುಗೆಡಹುವುದು ಬೇಡ’ ಎಂದು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.