ADVERTISEMENT

ಪ್ಯಾಕ್ಸ್‌ಗಳು ಬಹು ಸೇವಾ ಕೇಂದ್ರಗಳಾಗಲಿ: ಸಿದ್ದನಗೌಡ

ಸಿಇಒಗಳ ತರಬೇತಿ ಕಾರ್ಯಕ್ರಮ

​ಪ್ರಜಾವಾಣಿ ವಾರ್ತೆ
Published 22 ಸೆಪ್ಟೆಂಬರ್ 2021, 14:51 IST
Last Updated 22 ಸೆಪ್ಟೆಂಬರ್ 2021, 14:51 IST
ಬೀದರ್‌ನಲ್ಲಿ ನಾಲ್ಕು ಜಿಲ್ಲೆಗಳ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ಮುಖ್ಯ ಕಾರ್ಯನಿರ್ವಾಹಕರಿಗೆ ಆಯೋಜಿಸಿದ ತರಬೇತಿ ಕಾರ್ಯಕ್ರಮದ ಉದ್ಘಾಟನೆ ಕಾರ್ಯಕ್ರಮದಲ್ಲಿ ಸಹಕಾರ ಇಲಾಖೆಯ ಉಪ ನಿಬಂಧಕ ಸಿದ್ದನಗೌಡ ನೀಲಪ್ಪನವರ ಮಾತನಾಡಿದರು. ಸುಬ್ರಹ್ಮಣ್ಯ ಪ್ರಭು, ಮಂಜುನಾಥ ಭಾಗವತ್, ರೋಜಾ ಶರಣಪ್ಪ ಇದ್ದಾರೆ
ಬೀದರ್‌ನಲ್ಲಿ ನಾಲ್ಕು ಜಿಲ್ಲೆಗಳ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ಮುಖ್ಯ ಕಾರ್ಯನಿರ್ವಾಹಕರಿಗೆ ಆಯೋಜಿಸಿದ ತರಬೇತಿ ಕಾರ್ಯಕ್ರಮದ ಉದ್ಘಾಟನೆ ಕಾರ್ಯಕ್ರಮದಲ್ಲಿ ಸಹಕಾರ ಇಲಾಖೆಯ ಉಪ ನಿಬಂಧಕ ಸಿದ್ದನಗೌಡ ನೀಲಪ್ಪನವರ ಮಾತನಾಡಿದರು. ಸುಬ್ರಹ್ಮಣ್ಯ ಪ್ರಭು, ಮಂಜುನಾಥ ಭಾಗವತ್, ರೋಜಾ ಶರಣಪ್ಪ ಇದ್ದಾರೆ   

ಬೀದರ್‌: ‘ಇಂದಿನ ಸ್ಪರ್ಧಾತ್ಮಕ ಬ್ಯಾಂಕಿಂಗ್ ವ್ಯವಸ್ಥೆಯಲ್ಲಿ ಒಂದೇ ಸೇವೆಯನ್ನು ನೆಚ್ಚಿಕೊಂಡರೆ ಪತ್ತಿನ ಸಂಘವನ್ನು
ಲಾಭದಾಯಕವಾಗಿ ನಡೆಸಲು ಸಾಧ್ಯವಾಗದು. ಇತರ ಸೇವೆಗಳಲ್ಲೂ ತೊಡಗಿಸಿಕೊಳ್ಳುವ ಮೂಲಕ ಸಂಘಗಳನ್ನು ಆರ್ಥಿಕವಾಗಿ ಬಲಗೊಳಿಸಬೇಕು’ ಎಂದು ಸಹಕಾರ ಇಲಾಖೆಯ ಉಪ ನಿಬಂಧಕ ಸಿದ್ದನಗೌಡ ನೀಲಪ್ಪನವರ ಹೇಳಿದರು.

ಇಲ್ಲಿಯ ಡಾ.ಗುರುಪಾದಪ್ಪ ನಾಗಮಾರಪಳ್ಳಿ ಸಹಾರ್ದ ತರಬೇತಿ ಕೇಂದ್ರದಲ್ಲಿ ವಿಜಯಪುರ, ಬೆಳಗಾವಿ, ಬಾಗಲಕೋಟೆ ಹಾಗೂ ಚಿತ್ರದುರ್ಗ ಜಿಲ್ಲೆಗಳ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ಮುಖ್ಯ ಕಾರ್ಯನಿರ್ವಾಹಕರಿಗೆ ಏರ್ಪಡಿಸಿದ ಮೂರು ದಿನಗಳ ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

‘ಬ್ಯಾಂಕಿಂಗ್ ರೆಗ್ಯುಲೇಷನ್ ಕಾಯ್ದೆಯಲ್ಲಿ ಪ್ಯಾಕ್ಸ್‌ಗಳ ಸದಸ್ಯರಿಗೆ ವಿವಿಧ ರೀತಿಯ ಸೇವೆಗಳನ್ನು ಒದಗಿಸುವ ಅವಕಾಶ ಕಲ್ಪಿಸಿಕೊಡಲಾಗಿದೆ. ನಿರ್ಧಾರ ತೆಗೆದುಕೊಳ್ಳುವ ಅಧಿಕಾರವನ್ನು ಆಡಳಿತ ಮಂಡಳಿಗಳಿಗೆ ನೀಡಲಾಗಿದೆ. ಇಂತಹ ಅವಕಾಶ ಬಳಸಿಕೊಂಡು ಸಂಘಗಳನ್ನು ಬಲಪಡಿಸಬೇಕು’ ಎಂದು ಸಲಹೆ ನೀಡಿದರು.

‘ಬೀದರ್‌ ಜಿಲ್ಲೆಯಲ್ಲಿ 28 ಸಹಕಾರ ಸಂಘಗಳಲ್ಲಿ ಇತರೆ ಬಗೆಯ ಸೇವೆಗಳನ್ನು ವಿಸ್ತರಿಸಲಾಗಿದೆ. ಬರುವ ದಿನಗಳಲ್ಲಿ ಎಲ್ಲ ಸಹಕಾರ ಸಂಘಗಳನ್ನು ಹೊಸ ಯೋಜನೆ ವ್ಯಾಪ್ತಿಗೆ ತರಲಾಗುವುದು. ಈಗಾಗಲೇ ರೈತ ಉತ್ಪಾದಕ ಕೇಂದ್ರಗಳ ನೋಂದಣಿ ಸಹ ಆರಂಭವಾಗಿದೆ’ ಎಂದು ತಿಳಿಸಿದರು.

‘ರೈತರ ಹಣಕಾಸಿನ ಮೂಲಗಳನ್ನು ಬಲಪಡಿಸುವುದು ಹಾಗೂ ಕೃಷಿ ಉತ್ಪನ್ನಗಳಿಗೆ ಯೋಗ್ಯ ಬೆಲೆ ದೊರಕಿಸಿಕೊಡುವುದು. ಸಹಕಾರ ಸಂಘಗಳ ಧ್ಯೇಯವಾಗಬೇಕು. ಆಗ ಸಂಘಗಳು ಉಳಿಯುತ್ತವೆ’ ಎಂದು ಹೇಳಿದರು.

‘ಕೃಷಿ ಉತ್ಪನ್ನಗಳ ಸಂಸ್ಕರಣೆ ಮತ್ತು ಮಾರುಕಟ್ಟೆ ವ್ಯವಸ್ಥೆಯನ್ನು ರೈತರೇ ಹೊಂದುವುದರಿಂದ ಉತ್ಪಾದಕರೇ ಮಾರುಕಟ್ಟೆಯನ್ನು ನಿಯಂತ್ರಿಸಲು ಸಾಧ್ಯವಾಗಲಿದೆ. ಇದರಿಂದ ರೈತರ ಆದಾಯವೂ ದ್ವಿಗುಣಗೊಳ್ಳಲಿದೆ. ಉತ್ಪಾದಕ ಕೇಂದ್ರೀತ ಮಾರುಕಟ್ಟೆ ವ್ಯವಸ್ಥೆ ಸೃಷ್ಟಿಸಲು ಅನುಕೂಲವಾಗಲಿದೆ’ ಎಂದು ತಿಳಿಸಿದರು.

ADVERTISEMENT

ರೈತ ಉತ್ಪಾದನಾ ಕೇಂದ್ರಗಳ ಆರಂಭ ಹಾಗೂ ರೈತರೊಂದಿಗೆ ನಿಕಟ ಸಂಪರ್ಕ ಹೊಂದಿರುವ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳನ್ನು ಬಹು ಸೇವಾ ಕೇಂದ್ರಗಳಾಗಿ ಮಾರ್ಪಡಿಸುವ ಯೋಜನೆಗೆ ಕೇಂದ್ರ ಮತ್ತು ರಾಜ್ಯ ಸರ್ಕಾರ ಹಣಕಾಸಿನ ನೆರವು ನೀಡುತ್ತಿವೆ. ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳಿಗೆ ₹ 2 ಕೋಟಿ ವರೆಗೆ ಯೋಜನಾ ವೆಚ್ಚ ನೀಡಲಾಗುತ್ತಿದೆ. ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳು ಕೇವಲ ಕೃಷಿ ಸಾಲ ವಿತರಣೆ ವ್ಯವಹಾರ ಮಾಡುವುದರ ಮೂಲಕ ಪ್ರಗತಿ ಸಾಧಿಸುವುದು ಕಷ್ಟವಾಗಿದೆ. ಹೀಗಾಗಿ ಬಹು ಸೇವಾ ಕೇಂದ್ರಗಳಾಗಿ ಅಭಿವೃದ್ಧಿ ಪಡಿಸುವ ಮೂಲಕ ಯಾವುದೇ ರೀತಿಯ ನಷ್ಟ ಉಂಟಾಗದಂತೆ ಎಚ್ಚರ ವಹಿಸಬಹುದಾಗಿದೆ’ ಎಂದು ಹೇಳಿದರು.

ಸಹಕಾರ ಇಲಾಖೆಯ ಸಹಾಯಕ ನಿಬಂಧಕ ಸಂಗಮ ಭೀಮರಾವ್ ಮಾತನಾಡಿ, ‘ಸಹಕಾರ ಬ್ಯಾಂಕ್‌ಗಳು ಸಮಾಜದ ಎಲ್ಲ ವರ್ಗಗಳನ್ನು ತಲುಪುವ ಬ್ಯಾಂಕ್‌ಗಳಾಗಿವೆ, ಊರಿನ ಜನರಿಗೆ ಅಗತ್ಯ ಹಾಗೂ ಎಲ್ಲ ರೀತಿಯ ಸೇವೆಗಳನ್ನು ಒದಗಿಸುವ ಈ ಅವಕಾಶವನ್ನು ಸಮರ್ಥವಾಗಿ ಬಳಸಿಕೊಳ್ಳಬೇಕು’ ಎಂದು ಸಲಹೆ ನೀಡಿದರು.

ಸಂಪನ್ಮೂಲ ವ್ಯಕ್ತಿ ಮಂಜುನಾಥ ಭಾಗವತ್ ಮತ್ತು ಕಲಬುರ್ಗಿಯ ನಿವೃತ್ತ ಅಧಿಕಾರಿ ರೋಜಾ ಶರಣಪ್ಪ ಮಾತನಾಡಿದರು.
ಸಹಾರ್ದ ನಿರ್ದೇಶಕರು ಸುಬ್ರಹ್ಮಣ್ಯ ಪ್ರಭು ಸ್ವಾಗತಿಸಿದರು. ಅನಿಲ ಪಸಾರ್ಗೆ ನಿರೂಪಿಸಿದರು. ಎಸ್. ಜಿ. ಪಾಟೀಲ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.