ADVERTISEMENT

ಸ್ವಾಮಿ ಪೊನ್ನಾಚಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಯುವ ಪುರಸ್ಕಾರ

​ಪ್ರಜಾವಾಣಿ ವಾರ್ತೆ
Published 13 ಮಾರ್ಚ್ 2021, 16:40 IST
Last Updated 13 ಮಾರ್ಚ್ 2021, 16:40 IST
ಸ್ವಾಮಿ ಪೊನ್ನಾಚಿ
ಸ್ವಾಮಿ ಪೊನ್ನಾಚಿ   

ಚಾಮರಾಜನಗರ: ‌ಸ್ವಾಮಿ ಪೊನ್ನಾಚಿ ಎಂಬ ಕಾವ್ಯನಾಮದಿಂದ ಪ್ರಸಿದ್ಧರಾಗಿರುವ ಹನೂರು ತಾಲ್ಲೂಕಿನ ಪೊನ್ನಾಚಿಯವರಾದ ಯುವ ಸಾಹಿತಿ ಕೆ.ಎಸ್‌.ಮಹದೇವಸ್ವಾಮಿ ಅವರ ‘ಧೂಪದ ಮಕ್ಕಳು’ ಕಥಾ ಸಂಕಲನಕ್ಕೆ 2020ನೇ ಸಾಲಿನ ಕೇಂದ್ರ ಸಾಹಿತ್ಯ ಅಕಾಡೆಮಿಯ ಯುವ ಪುರಸ್ಕಾರ ಲಭಿಸಿದೆ.

‘ಧೂಪದ ಮಕ್ಕಳು’ ಕಥಾ ಸಂಕಲನಕ್ಕೆ 2018ರಲ್ಲಿ ಹಾನಗಲ್ಲಿನ ಕನ್ನಡ ಯುವಜನ ಕ್ರಿಯಾ ಸಮಿತಿಯ ಪಾಪು ಪುರಸ್ಕಾರ ಹಾಗೂ ಛಂದ ಪುಸ್ತಕ ಪ್ರಕಾಶನ ಸಂಸ್ಥೆಯ ಛಂದ ಪುಸ್ತಕ ಬಹುಮಾನ ಬಂದಿದೆ. ಬೆಳಗಾವಿಯ ಕಟ್ಟೇ ಬಸವರಾಜ ಕಟ್ಟೇಮನಿ ಪ್ರತಿಷ್ಠಾನ ನೀಡುವ ಯುವ ಸಾಹಿತ್ಯ ಪ್ರಶಸ್ತಿಗೂ ಈ ಕೃತಿ ಆಯ್ಕೆಯಾಗಿತ್ತು. ಸುಚಿತ್ರಾ ಗ್ಯಾಲರಿಯಲ್ಲಿ ಈ ಕೃತಿಯ ಬಗ್ಗೆ ಸಂವಾದವೂ ನಡೆದಿದೆ.

ಬೆಂಗಳೂರಿನ ಬೇಂದ್ರ ಪ್ರತಿಷ್ಠಾನ ನೀಡುವ ಶಾ.ಬಾಲುರಾವ್‌ ಯುವ ಪ್ರಶಸ್ತಿಗೂ ಇವರು ಭಾಜನರಾಗಿದ್ದಾರೆ.

ADVERTISEMENT

ಸೃಜನಶೀಲ ಸಾಹಿತ್ಯ ಹಾಗೂ ಕವನಗಳ ಮೂಲಕ ಸಾಹಿತ್ಯ ವಲಯದಲ್ಲಿ ಗುರುತಿಸಿಕೊಂಡಿರುವ ಸ್ವಾಮಿ ಪೊನ್ನಾಚಿ ಅವರು ಯಳಂದೂರಿನಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆಯ ಸಂಪನ್ಮೂಲ ವ್ಯಕ್ತಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.

1986ರಲ್ಲಿ ಪೊನ್ನಾಚಿಯಲ್ಲಿ ಜನಿಸಿದ ಅವರು ಪ್ರಾಥಮಿಕ ಶಿಕ್ಷಣವನ್ನು ಊರಿನಲ್ಲೇ ಪಡೆದರು. ಉನ್ನತ ಶಿಕ್ಷಣವನ್ನು ಕೊಳ್ಳೇಗಾಲ ಹಾಗೂ ಮೈಸೂರಿನಲ್ಲಿ ಪೂರ್ಣಗೊಳಿಸಿದರು. ಜಾನಪದ ಸಾಹಿತ್ಯಕ್ಕೆ ಹೆಚ್ಚು ಆಸಕ್ತಿ ಹೊಂದಿರುವ ಅವರು ಮಂಟೇಸ್ವಾಮಿ ಹಾಗೂ ಮಹದೇಶ್ವರ ಕಾವ್ಯಗಳಲ್ಲಿ ವಿಶೇಷ ಆಸಕ್ತಿ ಹೊಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.