ADVERTISEMENT

ಕಂದಾಯ ವಸೂಲಿಯಲ್ಲಿ ವೈಫಲ್ಯ: ಅಧಿಕಾರಿಗಳು ತರಾಟೆಗೆ

ಹಿರಿಯೂರು ನಗರಸಭೆ ವಿಶೇಷ ಸಾಮಾನ್ಯ ಸಭೆ

​ಪ್ರಜಾವಾಣಿ ವಾರ್ತೆ
Published 22 ಮಾರ್ಚ್ 2023, 6:17 IST
Last Updated 22 ಮಾರ್ಚ್ 2023, 6:17 IST
ಹಿರಿಯೂರಿನ ನಗರಸಭೆ ಸಭಾಂಗಣದಲ್ಲಿ ಮಂಗಳವಾರ ನಗರಸಭಾಧ್ಯಕ್ಷೆ ಗೀತಾಗಂಗಾಧರ್ ಅಧ್ಯಕ್ಷತೆಯಲ್ಲಿ ವಿಶೇಷ ಸಾಮಾನ್ಯ ಸಭೆ ನಡೆಯಿತು.
ಹಿರಿಯೂರಿನ ನಗರಸಭೆ ಸಭಾಂಗಣದಲ್ಲಿ ಮಂಗಳವಾರ ನಗರಸಭಾಧ್ಯಕ್ಷೆ ಗೀತಾಗಂಗಾಧರ್ ಅಧ್ಯಕ್ಷತೆಯಲ್ಲಿ ವಿಶೇಷ ಸಾಮಾನ್ಯ ಸಭೆ ನಡೆಯಿತು.   

ಹಿರಿಯೂರು: ಕಂದಾಯ ವಸೂಲಾತಿಯಲ್ಲಿ ಸಂಬಂಧಿಸಿದ ಶಾಖೆಯ ಅಧಿಕಾರಿಗಳು ವಿಫಲರಾಗಿದ್ದು, ವಸೂಲಾತಿಗೆ ಸಂಬಂಧಿಸಿ ವಾರ್ಷಿಕ ಬಜೆಟ್ ನೀಡುತ್ತೇವೆ ಎಂದು ನೀಡಿದ್ದ ವಾಗ್ದಾನವನ್ನು ಕೂಡ ಈಡೇರಿಸಿಲ್ಲ ಎಂದು ನಗರಸಭೆ ಸದಸ್ಯ ಜಿ.ಎಸ್. ತಿಪ್ಪೇಸ್ವಾಮಿ ಆರೋಪಿಸಿದರು.

ನಗರದ ನಗರಸಭೆ ಸಭಾಂಗಣದಲ್ಲಿ ಮಂಗಳವಾರ ಅಧ್ಯಕ್ಷೆ ಗೀತಾ ಗಂಗಾಧರ್ ಅಧ್ಯಕ್ಷತೆಯಲ್ಲಿ ನಡೆದ ವಿಶೇಷ ಸಾಮಾನ್ಯ ಸಭೆಯಲ್ಲಿ ಅವರು ಮಾತನಾಡಿದರು.

‘ನಗರದ ಜನಸಂಖ್ಯೆ 70,000 ದಾಟಿದೆ. ನಗರದ ಯಾವುದೇ ಪ್ರಮುಖ ಸಮಸ್ಯೆಗಳನ್ನು ಪರಿಹರಿಸಲು ನಮ್ಮಿಂದ ಸಾಧ್ಯವಾಗಿಲ್ಲ. ವಿಧಾನಸಭೆ ಚುನಾವಣೆಯಲ್ಲಿ ಮತ ಯಾಚನೆಗೆ ವಾರ್ಡ್‌ಗಳಿಗೆ ಹೋದರೆ ಮತದಾರರ ಪ್ರಶ್ನೆಗಳಿಗೆ ಉತ್ತರ ಹೇಳಲು ಸಾಧ್ಯವಿಲ್ಲ. ಬೀದಿನಾಯಿ, ಹಂದಿ, ಕೋತಿಗಳ ಹಾವಳಿ, ಕುಡಿಯುವ ನೀರಿನ ಸಮಸ್ಯೆ, ಸ್ವಚ್ಛತೆ, ಬೀದಿದೀಪಗಳ ನಿರ್ವಹಣೆ ಒಳಗೊಂಡಂತೆ ಯಾವುದೂ ನೆಟ್ಟಗೆ ನಡೆಯುತ್ತಿಲ್ಲ. ಅಧಿಕಾರಿಗಳ ಬೇಜವಾಬ್ದಾರಿಯಿಂದ ಸದಸ್ಯರು ಮುಖ ತೋರಿಸದಂತಾಗಿದೆ’ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.

ADVERTISEMENT

ಕ್ರಮದ ಭರವಸೆ: ನಗರದಲ್ಲಿ ಸ್ವಚ್ಛತೆ ನಿರ್ವಹಣೆ, ಕುಡಿಯುವ ನೀರು ಪೂರೈಕೆ ವಿಚಾರದಲ್ಲಿ ಲೋಪದೋಷ ಕಂಡುಬಂದಲ್ಲಿ ಅದಕ್ಕೆ ಸಂಬಂಧಿಸಿದ ಅಧಿಕಾರಿಗಳು ಹಾಗೂ ಸಿಬ್ಬಂದಿ ವಿರುದ್ಧ ಶಿಸ್ತು ಕ್ರಮ ಜರುಗಿಸಲಾಗುವುದು ಎಂದು ಪೌರಾಯುಕ್ತ ಬಸವರಾಜ್ ಭರವಸೆ ನೀಡಿ ಸದಸ್ಯರನ್ನು ಸಮಾಧಾನ ಪಡಿಸಿದರು.

ನಗರಸಭೆಯಿಂದ ಇ–ಸ್ವತ್ತು ಪಡೆಯಲು ಸಾರ್ವಜನಿಕರು ಮಧ್ಯವರ್ತಿಗಳಿಗೆ ಕೇಳಿದಷ್ಟು ಹಣ ಕೊಟ್ಟು ನೆರವು ಪಡೆಯುತ್ತಿದ್ದಾರೆ. ಭ್ರಷ್ಟಾಚಾರದ ಕೂಪವಾಗಿರುವ ನಗರಸಭೆ ಆಡಳಿತಕ್ಕೆ ಚುರುಕು ಮುಟ್ಟಿಸುವ ಅನಿವಾರ್ಯತೆ ಇದೆ ಎಂದು ಸದಸ್ಯ ಬಿ.ಎನ್. ಪ್ರಕಾಶ್ ಹೇಳಿದರು.

ಸರ್ವರ್ ಸಮಸ್ಯೆಯ ನೆಪ ಹೇಳಿ ಸಾರ್ವಜನಿಕರಿಗೆ ಇ–ಸ್ವತ್ತು ಮಾಡಿಕೊಡಲು ಅಲೆದಾಡಿಸಬಾರದು. ಇ–ಸ್ವತ್ತು ನೀಡುವ ವಿಚಾರದಲ್ಲಿ ವಿಳಂಬ ಧೋರಣೆ ತಾಳಿದಲ್ಲಿ ಜಿಲ್ಲಾಧಿಕಾರಿಗೆ ಪತ್ರ ಬರೆದು ಕ್ರಮಕ್ಕೆ ಶಿಫಾರಸು ಮಾಡಬೇಕಾಗುತ್ತದೆ ಎಂದು ಪೌರಾಯುಕ್ತ ಬಸವರಾಜ್ ಎಚ್ಚರಿಸಿದರು.

ಸಭೆಯಲ್ಲಿ ಉಪಾಧ್ಯಕ್ಷ ಗುಂಡೇಶ್ ಕುಮಾರ್, ಸದಸ್ಯರು, ಅಧಿಕಾರಿಗಳು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.