ADVERTISEMENT

ವೇತನ ಆಯೋಗ ಜಾರಿ ನಂತರ ಹೋರಾಟ: ಸಿ.ಎಸ್.ಷಡಾಕ್ಷರಿ

​ಪ್ರಜಾವಾಣಿ ವಾರ್ತೆ
Published 21 ನವೆಂಬರ್ 2022, 12:20 IST
Last Updated 21 ನವೆಂಬರ್ 2022, 12:20 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಗದಗ: ‘ರಾಜ್ಯದಲ್ಲಿನ ಎನ್‌ಪಿಎಸ್‌ ನೌಕರರ ಬಗ್ಗೆ ರಾಜ್ಯ ಸರ್ಕಾರಿ ನೌಕರರ ಸಂಘಕ್ಕೆ ಕಳಕಳಿ ಇದ್ದು, ಏಳನೇ ವೇತನ ಆಯೋಗ ಪಡೆದುಕೊಂಡ ಬಳಿಕ ನಿರ್ಣಾಯಕ ಹೋರಾಟ ಕೈಗೆತ್ತಿಕೊಳ್ಳಲಾಗುವುದು’ ಎಂದು ಸಂಘದ ಅಧ್ಯಕ್ಷ ಸಿ.ಎಸ್.ಷಡಾಕ್ಷರಿ ಹೇಳಿದರು.

ಸೋಮವಾರ ನಗರದಲ್ಲಿ ನಡೆದ ಜಿಲ್ಲಾ ಘಟಕದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘ಎನ್‌ಪಿಎಸ್‌ ಬಗ್ಗೆ ಸರಿಯಾಗಿ ತಿಳಿದುಕೊಳ್ಳದೇ ಹೋರಾಟ ಮಾಡುವುದರಿಂದ ಏನೂ ಪ್ರಯೋಜನ ಆಗುವುದಿಲ್ಲ. ಹೋರಾಟ ಪ್ರಾರಂಭಿಸುವ ಮುನ್ನ ಈ ರೀತಿಯ ಸಮಸ್ಯೆ ಇದೆ, ಸಹಕರಿಸಿ ಎಂದು ಯಾರೊಬ್ಬರೂ ಸೌಜನ್ಯಕ್ಕೂ ನಮ್ಮನ್ನು ಕೇಳಲಿಲ್ಲ. ಹಾಗಂತ, ನಾವು ಅವರನ್ನು ಬಿಟ್ಟುಕೊಡುವುದಿಲ್ಲ. ಚುನಾವಣೆ ಸಂದರ್ಭದಲ್ಲಿ ನೀಡಿದ ಭರವಸೆಯಂತೆ ಈಗಾಗಲೇ 21 ಬೇಡಿಕೆಗಳನ್ನು ಈಡೇರಿಸಿದ್ದು, 22ನೇ ಬೇಡಿಕೆ ಎನ್‌ಪಿಎಸ್‌ ನಿರ್ಮೂಲನೆ ಮಾಡುವ ಹೋರಾಟಕ್ಕೆ ಸಂಘ ಬದ್ಧವಾಗಿರಲಿದೆ’ ಎಂದು ಹೇಳಿದರು.

‘ನಾವು ಪ್ರತಿಭಟನೆಗೆ ಕರೆ ನೀಡಿದರೆ, ಶಾಸಕರು ಸಚಿವರು ಕಾರಿನ ಚಾಲಕರಿಲ್ಲದೇ ಪರದಾಡಬೇಕು. ಆಟೊ ಹಿಡಿದು ಹೋಗಬೇಕು. ತೆರಿಗೆ ಸಂಗ್ರಹ ಆಗಲ್ಲ. ಆಸ್ಪತ್ರೆಯಲ್ಲಿ ರೋಗಿಗಳ ಚಿಕಿತ್ಸೆಗೆ ವೈದ್ಯರು ಸಿಗಲ್ಲ. ಆಗ ಸರ್ಕಾರ ಹೆದರುತ್ತೆ. ಮಾತುಕತೆಗೆ ಕರೆಯುತ್ತದೆ. ನಮ್ಮ ಬೇಡಿಕೆಯೂ ಈಡೇರುತ್ತದೆ. ಅದನ್ನು ಬಿಟ್ಟು ಫ್ರೀಡಂ ಪಾರ್ಕ್‌ನಲ್ಲಿ ಕುಳಿತು ಪ್ರತಿಭಟನೆ ನಡೆಸಿದರೆ ಏನೂ ಪ್ರಯೋಜನ ಆಗಲ್ಲ’ ಎಂದು ಜರಿದರು.

ADVERTISEMENT

‘ರಾಜ್ಯ ಸರ್ಕಾರಿ ನೌಕರರ ಸಂಘ ಅತ್ಯಂತ ಸಮರ್ಥ ಸಂಘಟನೆಯಾಗಿದ್ದು ಎಲ್ಲಿ, ಹೇಗೆ, ಯಾವಾಗ, ಯಾವ ರೀತಿ ಹೋರಾಟ ಮಾಡಬೇಕು ಎಂಬ ಅರಿವಿದೆ. ಎನ್‌ಪಿಎಸ್‌ ನಿರ್ಮೂಲನೆ ಹೋರಾಟ ನಮ್ಮ ಸಂಘದ ನೇತೃತ್ವದಲ್ಲೇ ನಡೆಯಬೇಕಿದೆ. ಇದು ಸಂಘದ ಪದಾಧಿಕಾರಿಗಳೆಲ್ಲರೂ ಸೇರಿ ತೆಗೆದುಕೊಂಡಿರುವ ನಿರ್ಣಯ’ ಎಂದು ಹೇಳಿದರು.

‘ವೇತನ ಆಯೋಗ ಜಾರಿ ನಂತರ ಎಲ್ಲ ಜಿಲ್ಲಾಧಿಕಾರಿ ಕಚೇರಿ ಮುಂದೆ ಧರಣಿ ಕೂರಲಾಗುವುದು. ರಾಜ್ಯವ್ಯಾಪಿ ಪ್ರತಿಭಟನೆಗೆ ಕರೆ ಕೊಡಲಾಗುವುದು. ವಿಧಾನಸೌಧ, ವಿಕಾಸಸೌಧ ಬಂದ್‌ ಮಾಡುತ್ತೇವೆ. ಇಡೀ ಕರ್ನಾಟಕವನ್ನು ಬಂದ್‌ ಮಾಡುವ ಶಕ್ತಿ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘಕ್ಕೆ ಇದೆ’ ಎಂದು ಹೇಳಿದರು.

‘ಯಾರ‍್ಯಾರೋ ಕರೆಯುತ್ತಾರೆ ಎಂದು ಹೋರಾಟಕ್ಕೆ ಹೋಗಬೇಡಿ. ಎಲ್ಲ ಕಚೇರಿಗಳಲ್ಲಿ ಶೇ 80 ಮಂದಿ ಒಪಿಎಸ್‌ ನೌಕರರು ಇದ್ದಾರೆ. ಶೇ 20 ಮಂದಿ ಮಾತ್ರ ಎನ್‌ಪಿಎಸ್‌ ನೌಕರರು ಇದ್ದಾರೆ. ಇದು ನೀವು ನಾವು ಸೇರಿ ಹೋರಾಟ ಮಾಡಬೇಕು. ಒಟ್ಟಾಗಿ ಸೇರಿದರೆ ಮಾತ್ರ ಒಪಿಎಸ್‌ ನಿರ್ಮೂಲನೆ ಆಗುತ್ತದೆ’ ಎಂದು ಹೇಳಿದರು.

‘ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ಮಾತೃ ಸಂಸ್ಥೆ ಇದ್ದಂತೆ. ಇದಕ್ಕೆ ಮಾನ್ಯತೆ ಇದೆ. ಶಾಸಕರು, ಸಚಿವರಿಗೆ ಷಡಕ್ಷರಿ ಯಾರು ಅಂತ ಗೊತ್ತಿದೆ. ಆದರೆ, ಶಿಕ್ಷಕರ ಸಂಘಕ್ಕೆ ನಾನು ಯಾರೂ ಅಂತ ಗೊತ್ತಿಲ್ಲ. ಪರಿಚಯವೇ ಇಲ್ಲದಿದ್ದರೆ ಕೆಲಸ ಹೇಗೆ ಆಗುತ್ತದೆಯೇ’ ಎಂದು ಪ್ರಶ್ನಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.