ADVERTISEMENT

ಪ್ರೋತ್ಸಾಹಿಸುವ ಗುಣವಿಲ್ಲದೆ ಕಮ‌ರುತ್ತಿರುವ ಪ್ರತಿಭೆಗಳು

ದಾವಣಗೆರೆ ವಿಶ್ವವಿದ್ಯಾಲಯದ 8ನೇ ಘಟಿಕೋತ್ಸವದಲ್ಲಿ ಡಾ. ಗುರುರಾಜ ಕರ್ಜಗಿ

​ಪ್ರಜಾವಾಣಿ ವಾರ್ತೆ
Published 9 ಏಪ್ರಿಲ್ 2021, 2:20 IST
Last Updated 9 ಏಪ್ರಿಲ್ 2021, 2:20 IST
 ನಾಲ್ಕು ಸ್ವರ್ಣ ಪದಕ ಪಡೆದ ಮೇಘಾ ಎಸ್ ಎನ್. ಅವರಿಗೆ ದಾವಣಗೆರೆ ವಿಶ್ವವಿದ್ಯಾಲಯದ ಆವರಣದಲ್ಲಿ ನಡೆದ 8ನೇ ಘಟಿಕೋತ್ಸವದಲ್ಲಿ ಪದಕ ಮತ್ತು ಪದವಿ ಪ್ರದಾನ ಮಾಡಲಾಯಿತು. ದಾವಣಗೆರೆ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಎಸ್.ವಿ ಹಲಸೆ, ದಾವಣಗೆರೆ ವಿಶ್ವವಿದ್ಯಾಲಯದ ಕುಲಸಚಿವರಾದ ಅನಿತಾ ಎಚ್‌.ಎಸ್‌., ಗಾಯತ್ರಿ ದೇವರಾಜ್, ಶಿಕ್ಷಣ ತಜ್ಞ ಗುರುರಾಜ ಕರ್ಜಗಿ ಇದ್ದಾರೆ–ಪ್ರಜಾವಾಣಿ ಚಿತ್ರ/ ಸತೀಶ ಬಡಿಗೇರ್
 ನಾಲ್ಕು ಸ್ವರ್ಣ ಪದಕ ಪಡೆದ ಮೇಘಾ ಎಸ್ ಎನ್. ಅವರಿಗೆ ದಾವಣಗೆರೆ ವಿಶ್ವವಿದ್ಯಾಲಯದ ಆವರಣದಲ್ಲಿ ನಡೆದ 8ನೇ ಘಟಿಕೋತ್ಸವದಲ್ಲಿ ಪದಕ ಮತ್ತು ಪದವಿ ಪ್ರದಾನ ಮಾಡಲಾಯಿತು. ದಾವಣಗೆರೆ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಎಸ್.ವಿ ಹಲಸೆ, ದಾವಣಗೆರೆ ವಿಶ್ವವಿದ್ಯಾಲಯದ ಕುಲಸಚಿವರಾದ ಅನಿತಾ ಎಚ್‌.ಎಸ್‌., ಗಾಯತ್ರಿ ದೇವರಾಜ್, ಶಿಕ್ಷಣ ತಜ್ಞ ಗುರುರಾಜ ಕರ್ಜಗಿ ಇದ್ದಾರೆ–ಪ್ರಜಾವಾಣಿ ಚಿತ್ರ/ ಸತೀಶ ಬಡಿಗೇರ್   

ದಾವಣಗೆರೆ: ಪ್ರತಿಭೆಗಳನ್ನು ಗುರುತಿಸಿ, ಪ್ರೋತ್ಸಾಹಿಸದೇ ಇರುವುದೇ ಬಹಳಷ್ಟು ಪ್ರತಿಭೆಗಳು ಕಮರಿ ಹೋಗಲು ಕಾರಣ ಎಂದು ಬೆಂಗಳೂರು ಅಕಾಡೆಮಿ ಫಾರ್‌ ಕ್ರಿಯೇಟಿವ್‌ ಟೀಚಿಂಗ್‌ ಸಂಸ್ಥಾಪಕ ಡಾ. ಗುರುರಾಜ ಕರಜಗಿ ಹೇಳಿದರು.

ಗುರುವಾರ ನಡೆದ ದಾವಣಗೆರೆ ವಿಶ್ವವಿದ್ಯಾಲಯದ 7ನೇ ಘಟಿಕೋತ್ಸವದಲ್ಲಿ ಅವರು ಉಪನ್ಯಾಸ ನೀಡಿದರು.

ಇಂದು ಪದವಿ ಪಡೆದವರು ಮುಂದೊಂದು ದಿನ ಉತ್ತಮ ಸ್ಥಾನಕ್ಕೆ ಹೋದಾಗ ಕೆಲಸ ಮಾಡುವವರನ್ನು ಬೆನ್ನು ತಟ್ಟಿ ಉತ್ತೇಜನ ನೀಡುವ ಕೆಲಸ ಮಾಡಿ. ಪ್ರತಿಭಾವಂತರನ್ನು ಗುರುತಿಸಿ ಪ್ರೋತ್ಸಾಹಿಸಿ ಎಂದು ಸಲಹೆ ನೀಡಿದರು.

ADVERTISEMENT

ಯಶಸ್ಸು ಅಂದರೆ ಹಣ, ಅಧಿಕಾರ, ಶಕ್ತಿ, ಖ್ಯಾತಿ ಅಲ್ಲ. ಯಾರು ತಮಗೋಸ್ಕರ ಬದುಕುತ್ತಾರೋ ಅವರನ್ನು ಈ ಜಗತ್ತು ನಿರ್ದಾಕ್ಷೀಣ್ಯವಾಗಿ ಮರೆಯುತ್ತದೆ. ಬೇರೆಯವರಿಗಾಗಿ ಬದುಕಿದವರನ್ನು ಮೆರೆಸುತ್ತದೆ. ಅದೇ ಯಶಸ್ಸು ಎಂದು ವಿವರಿಸಿದರು.

‘ಪಡೆದುಕೊಳ್ಳುವುದುಕ್ಕಿಂತ ಕೊಡುವುದರಲ್ಲಿ ಆನಂದ ಹೆಚ್ಚು. ನೀವು ಇನ್ನೊಬ್ಬರಿಗೆ ಹಣ ಕೊಡಬೇಕಾಗಿಲ್ಲ. ಆದರೆ ಒಂದು ಮುಗುಳುನಗೆ ಕೊಡಬಹುದು. ದುಃಖದಲ್ಲಿ ಇರುವವರಿಗೆ ಸಾಂತ್ವನದ ನಾಲ್ಕು ಮಾತು ಹೇಳಬಹುದು. ಜಗತ್ತು ವಿಶಾಲವಾದುದು. ನಾವು ನಮ್ಮ ಮನಸ್ಸನ್ನು ಸಣ್ಣದು ಮಾಡಿಕೊಂಡು ಜಗತ್ತನ್ನೂ ಸಣ್ಣದಾಗಿ ಮಾಡುತ್ತೇವೆ’ ಎಂದು ತಿಳಿಸಿದರು.

ಇಂದು ಚಿನ್ನದ ಪದಕ ಪಡೆದವರು, ವಿವಿಧ ಪದವಿ ಪಡೆದವರು ಈ ಸ್ಥಾನಕ್ಕೆ, ಈ ಸಾಧನೆಗೆ ಯಾರು ಕಾರಣ ಎಂಬುದನ್ನು ನೆನಪಿಸಿಕೊಳ್ಳಬೇಕು. ತಾಯಿ, ತಂದೆ, ಪರಿವಾರ, ಸಮಾಜದ ಕೊಡುಗೆಯೇನು ಎಂಬುದನ್ನು ಕಂಡುಕೊಳ್ಳಬೇಕು. ಸಮಾಜದಿಂದ ಪಡೆದಿರುವುದನ್ನು ಸಮಾಜಕ್ಕೆ ಮತ್ತೆ ನೀಡಬೇಕು ಎಂದರು.

ಕುಲಪತಿ ಪ್ರೊ. ಶರಣಪ್ಪ ವಿ. ಹಲಸೆ, ‘ಮಕ್ಕಳಿಗೆ ನೈತಿಕ ಮತ್ತು ಸಾಮಾಜಿಕ ಮೌಲ್ಯಗಳನ್ನು ಪ್ರಾಯೋಗಿಕವಾಗಿ ತಿಳಿಸಲು ವಿಶ್ವವಿದ್ಯಾಲಯವು ಗಮನ ನೀಡಿದೆ. ಅದಕ್ಕಾಗಿ ಗ್ರಾಮದಲ್ಲಿಯೇ ಇದ್ದು ಅಧ್ಯಯನ ಮಾಡಲು, ಸಮುದಾಯದ ಪಾಲ್ಗೊಳ್ಳುವಿಕೆಯನ್ನು ಒಳಗೊಂಡ ಕಾರ್ಯಕ್ರಮ ರೂಪಿಸಲಾಗುತ್ತಿದೆ’ ಎಂದು ತಿಳಿಸಿದರು.

ಸ್ನಾತಕ ವಿಭಾಗದ 12 ಮಂದಿಗೆ 19 ಚಿನ್ನದ ಪದಕ, ಸ್ನಾತಕೋತ್ತರ ವಿಭಾಗದ 32 ವಿದ್ಯಾರ್ಥಿಗಳಿಗೆ 55 ಚಿನ್ನದ ಪದಕಗಳನ್ನು ಪ್ರದಾನ ಮಾಡಲಾಯಿತು. 11,193 ಸ್ನಾತಕ ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಲಾಯಿತು. 2014 ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ಪದವಿ ನೀಡಲಾಯಿತು. 7 ಪಿಎಚ್‍ಡಿ ಹಾಗೂ ಇಬ್ಬರು ಎಂ.ಫಿಲ್ ಪದವಿಗಳನ್ನು ಪಡೆದರು.

ಸಂಸದ ಜಿ.ಎಂ. ಸಿದ್ದೇಶ್ವರ ಮತ್ತು ರಾಷ್ಟ್ರೀಯ ವೈದ್ಯಕೀಯ ಆಯೋಗದ ಸ್ನಾತಕೋತ್ತರ ವೈದ್ಯಕೀಯ ವಿಜ್ಞಾನ ಮಂಡಳಿಯ ಅಧ್ಯಕ್ಷ ಡಾ.ಎಂ.ಕೆ ರಮೇಶ್‌ ಅವರಿಗೆ ದಾವಣಗೆರೆ ವಿಶ್ವವಿದ್ಯಾಲಯದ ಗೌರವ ಡಾಕ್ಟರೇಟ್‌ ನೀಡಿ ಗೌರವಿಸಲಾಯಿತು.

ಕಾರ್ಯಕ್ರಮಕ್ಕೂ ಮುನ್ನ ಆಡಳಿತ ಕಚೇರಿಯಿಂದ ವೇದಿಕೆ ವರೆಗೆ ಪಥಸಂಚಲನ ನಡೆಯಿತು. ಪರೀಕ್ಷಾಂಗ ಕುಲಸಚಿವೆ ಪ್ರೊ. ಅನಿತಾ ಎಚ್.ಎಸ್. ಪ್ರಾಸ್ತಾವಿಕವಾಗಿ ಮಾತನಾಡಿದರು. ವಿವಿಧ ನಿಕಾಯಗಳ ಡೀನ್‍ರು ಚಿನ್ನದ ಪದಕ ವಿಜೇತರು ಮತ್ತು ಪದವೀಧರರ ಹೆಸರನ್ನು ಪ್ರಕಟಿಸಿದರು. ಕುಲಸಚಿವೆ ಪ್ರೊ. ಗಾಯತ್ರಿ ದೇವರಾಜ ಉಪಸ್ಥಿತರಿದ್ದರು. ಸಹಾಯಕ ಪ್ರಾಧ್ಯಾಪಕರಾದ ಸ್ವಾಮಿ ಮತ್ತು ಅಶ್ವಿನಿ ಕಾರ್ಯಕ್ರಮ ನಿರೂಪಿಸಿದರು.

‘ಗೌರವ ಡಾಕ್ಟರೇಟ್‌ ಸಂತಸ ತಂದಿದೆ’

ದಾವಣಗೆರೆ ವಿಶ್ವವಿದ್ಯಾಲಯವು ಗೌರವ ಡಾಕ್ಟರೇಟ್‌ ನೀಡಿ ಗೌರವಿಸಿರುವುದು ಸಂತಸ ತಂದಿದೆ ಎಂದು ಸಂಸದ ಜಿ.ಎಂ. ಸಿದ್ದೇಶ್ವರ ಮತ್ತು ರಾಷ್ಟ್ರೀಯ ವೈದ್ಯಕೀಯ ಆಯೋಗದ ಸ್ನಾತಕೋತ್ತರ ವೈದ್ಯಕೀಯ ವಿಜ್ಞಾನ ಮಂಡಳಿಯ ಅಧ್ಯಕ್ಷ ಡಾ.ಎಂ.ಕೆ ರಮೇಶ್‌ ತಿಳಿಸಿದರು.

‘ಗೌರವ ಡಾಕ್ಟರೇಟ್‌ ನೀಡಲಾಗುವುದು ಎಂದು ಕುಲಸಚಿವೆ ಅನಿತಾ ಅವರು ತಿಳಿಸಿದಾಗ ಅಚ್ಚರಿಯಾಯಿತು. ಸಂಕೋಚವೂ ಉಂಟಾಯಿತು. ಬಳಿಕ ಜಿಲ್ಲಾಧಿಕಾರಿ, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ, ಇತರರೊಂದಿಗೆ ಈ ಬಗ್ಗೆ ಚರ್ಚಿಸಿದೆ. ಖಾಸಗಿಯವರು ನೀಡುವ ಗೌರವ ಡಾಕ್ಟರೇಟ್‌ ಅಲ್ಲ. ಇದು ಬಹಳ ದೊಡ್ಡ ಗೌರವ ಎಂದು ಅವರು ತಿಳಿಸಿದರು’ ಎಂದು ಜಿ.ಎಂ. ಸಿದ್ದೇಶ್ವರ ವಿವರಿಸಿದರು.

‘ತಮ್ಮ ಲಾಭಕ್ಕಾಗಿ ಖಾಸಗಿ ವಿಶ್ವವಿದ್ಯಾಲಯಗಳು, ಡೀಮ್‌ಡ್‌ ವಿಶ್ವವಿದ್ಯಾಲಯಗಳು ಗೌರವ ಡಾಕ್ಟರೇಟ್‌ ಕೊಡುತ್ತವೆ. ಇದೊಂದು ಸ್ಯಾಂಕ್ಷನ್‌ ಮಾಡಿ, ಅದೊಂದು ಸ್ಯಾಂಕ್ಷನ್‌ ಮಾಡಿ ಎಂದು ಆಮೇಲೆ ಹೇಳುತ್ತಾರೆ. ಅಂಥ ಯಾವ ಲಾಭದ ನಿರೀಕ್ಷೆ ಇಲ್ಲದೇ ನನ್ನ ಊರಿನ ವಿಶ್ವವಿದ್ಯಾಲಯ ನನಗೆ ಗೌರವ ನೀಡಿದೆ’ ಎಂದು ಡಾ.ಎಂ.ಕೆ. ರಮೇಶ್‌ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.